Short Story Writing : ಅಭಿಜ್ಞಾನ ; ‘ಗಿಣಿಯೋ ಮಾರಾಯ, ನಮ್ಮ ಬಳ್ಳಾರಿ ಗಣಿಮಣ್ಣು ಮೆತ್ತಿಗೊಂಡು ಹಂಗೆ ಕೆಂಪಾಗ್ಯದೆ’
Train Journey : ‘ನಾನು ಗೆಳೆಯ ಶ್ರೀಕಾಂತ್ (ಸೃಜನ್), ಅಪಾರ ಒಮ್ಮೆ ತೋರಣಗಲ್ಲಿನಿಂದ ಹೊಸಪೇಟೆಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಸಾಕಷ್ಟು ಹುರಿದ ಶೇಂಗಾವನ್ನು ಕೊಂಡು ತಿನ್ನುತ್ತಾ, ಹರಟೆ ಹೊಡೆಯುತ್ತಿದ್ದೆವು. ನಮ್ಮ ಪ್ರಯಾಣ ನಿಧಾನಕ್ಕೆ ಸಾಗಿತ್ತು. ಆಗ ರೈಲು ಒಂದು ಕಡೆ ಸಿಗ್ನಲ್ ಸಿಗದೆ ನಿಂತಿತು.’ ವಸುಧೇಂದ್ರ
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಕಥೆಗಾರ ಅಮರೇಶ ನುಗಡೋಣಿ ಸಂಪಾದಿಸಿದ ‘ಕಥೆ ಹುಟ್ಟುವ ಪರಿ’ ಕೃತಿಯಲ್ಲಿ ಲೇಖಕ ವಸುಧೇಂದ್ರ ಹಂಚಿಕೊಂಡ ‘ಕೆಂಪುಗಿಣಿ’ ಕಥೆಯ ಪ್ರೇರಕ ಪ್ರಸಂಗ.
* ನಾನು ಗೆಳೆಯ ಶ್ರೀಕಾಂತ್ (ಸೃಜನ್) ಮತ್ತು ಅಪಾರ ಒಮ್ಮೆ ತೋರಣಗಲ್ಲಿನಿಂದ ಹೊಸಪೇಟೆಗೆ ಪ್ಯಾಸೆಂಜರ್ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆವು. ಸಾಕಷ್ಟು ಹುರಿದ ಶೇಂಗಾವನ್ನು ಕೊಂಡು ತಿನ್ನುತ್ತಾ, ಹರಟೆ ಹೊಡೆಯುತ್ತಿದ್ದೆವು. ನಮ್ಮ ಪ್ರಯಾಣ ನಿಧಾನಕ್ಕೆ ಸಾಗಿತ್ತು. ಆಗ ರೈಲು ಒಂದು ಕಡೆ ಸಿಗ್ನಲ್ ಸಿಗದೆ ನಿಂತಿತು. ಅಲ್ಲಿ ಸಾಕಷ್ಟು ಮೈನ್ಸ್‌ನ ಮಣ್ಣನ್ನು ಹಳಿಯ ಅಕ್ಕ-ಪಕ್ಕಗಳಲ್ಲಿ ಗುಡ್ಡದಂತೆ ಸುರಿದು ಶೇಖರಿಸಲಾಗಿತ್ತು. ಅಂತಹ ಒಂದು ಕೆಂಪು ಮಣ್ಣಿನ ಗುಡ್ಡದ ಮೇಲೆ ಒಂದು ಪಕ್ಷಿಯೊಂದು ಕುಳಿತಿತ್ತು. ಅದು ಯಾವ ಪಕ್ಷಿಯೆಂದು ತಿಳಿಯದೆ ನಾನು ಶ್ರೀಕಾಂತನಿಗೆ ಅದನ್ನು ತೋರಿಸಿ ಕೇಳಿದೆ. ಅವನು ನನ್ನ ಅಜ್ಞಾನಕ್ಕೆ ನಕ್ಕು, ‘ಗಿಣಿಯೋ ಮಾರಾಯ. ನಮ್ಮೂರಿನ ಕೆಂಪು ಮಣ್ಣು ಮೆತ್ತಿಗೊಂಡು ಹಂಗೆ ಆಗ್ಯದೆ’ ಎಂದು ಹೇಳಿದ. ಅವನ ಮಾತಿಗೆ ನಾನೂ ನಕ್ಕೆ. ಆದರೆ ನಕ್ಕು ಮರೆಯುವ ಸಂಗತಿ ಅದಾಗಿರಲಿಲ್ಲ. ಆಕರ್ಷಕ ಹಸುರು ಬಣ್ಣದ ಗಿಣಿ ಕೆಂಪಾಗಿ ಬಿಟ್ಟಿರುವ ಸಂಗತಿ ನನ್ನನ್ನು ಕಾಡಲಾರಂಭಿಸಿತು. ನನ್ನ ಮೈಗೂ ಕೆಂಪು ಧೂಳು ಮೆತ್ತಿಕೊಂಡು ತೊಳೆಯಲಾರದಂತಹ ಸ್ಥಿತಿ ಬಂದರೇನು ಗತಿ? ಎಂದು ಅನ್ನಿಸಿ ಮೈ ಜುಮ್ಮೆಂದಿತು. ನಮ್ಮೂರಿನ ಆ ಸುಂದರ ಗಿಣಿಗೆ ಒದಗಿದ ಅವಸ್ಥೆಯನ್ನು ಕಂಡು ನನ್ನ ಮನಸ್ಸು ಮರುಗಲಾರಂಭಿಸಿತು.
ಇದೇ ಸಮಯದಲ್ಲಿ ಮತ್ತೊಂದು ಘಟನೆ ನಡೆಯಿತು. ಹಿರಿಯ ಕತೆಗಾರರಾದ ಕೆ. ಸತ್ಯನಾರಾಯಣರವರು ವಾರಾಂತ್ಯಕ್ಕಾಗಿ ಕೊಲ್ಲಾಪುರದಿಂದ ಬೆಂಗಳೂರಿಗೆ ಬಂದಿದ್ದರು. ಒಂದು ದಿನ ಸಂಜೆ ಅಭ್ಯಾಗತನಾಗಿ ಅವರ ಮನೆಗೆ ಹೋದೆ. ಅವರ ಮನೆಯಲ್ಲಿ ನನಗೆ ವಿಶೇಷವಾಗಿ ಒಂದು ಸೊಗಸಾದ ಗಿಣಿ ಕಂಡು ಬಂತು. ಅವರ ಪತ್ನಿ ಸುಮಿತ್ರಾ ಅತ್ಯಂತ ಪ್ರೀತಿಯಿಂದ ಅದನ್ನು ಸಾಕಿದ್ದರು. ಆ ಗಿಣಿ ತುಂಬಾ ಗಲಾಟೆ ಮಾಡುತ್ತಿತ್ತಲ್ಲದೆ ಮನೆಯ ತುಂಬಾ ಸ್ವಚ್ಛಂದವಾಗಿ ಹಾರಾಡಿಕೊಂಡಿತ್ತು, ಸುಮಿತ್ರಾ ಅವರ ಮಾತನ್ನು ಕೇಳುತ್ತಿತ್ತು, ಇದು ಅಡಿಗೆ ಮನೆಗೆ ಹಾರಿ ಹೋಗಿ, ಚಹ ತಯಾರಿಸುತ್ತಿದ್ದ ಅವರ ಹೆಗಲ ಮೇಲೆ ಕುಳಿತು ಈ ಹಿಟ್ಟಿನಿಂದ ಅವರ ಕತ್ತು ಕೆನ್ನೆಯನ್ನು ತಿಕ್ಕುತ್ತಾ, ಗಲಾಟೆ ಮಾಡುತ್ತಾ ಅವರಿಂದ ಜೈಸಿಕೊಳ್ಳುತ್ತಿತ್ತು. ನಾನು ಆ ಗಿಣಿಯನ್ನು ಮುಟ್ಟಲು ಇಷ್ಟಪಟ್ಟಾಗ ಸತ್ಯನಾರಾಯಣ ಇದನ್ನು ಕರೆದು ನನ್ನ ಮುಂದೆ ಹಿಡಿದರು.
ನಾನು ಅದರ ಯಾವ ಭಾಗವನ್ನು ಮುಟ್ಟಿದರೂ ಅದು, ತನ್ನ ಕೊಕ್ಕಿನಿಂದ ಆ ಭಾಗವನ್ನು ತಿಕ್ಕಿಕೊಳ್ಳುತ್ತಿತ್ತು. ಆಗ ಸತ್ಯನಾರಾಯಣರವರು ತುಂಬಾ ಸ್ವಚ್ಛ ಪಕ್ಷಿಯೆಂದೂ, ಮತ್ತೆ ಮತ್ತೆ ತನ್ನ ಕೊಕ್ಕಿನಿಂದ ಮಾನವ ಸ್ಪರ್ಶವಾದ ಭಾಗವನ್ನು ತಿಕ್ಕಿ ಅದನ್ನು ಸ್ವಚ್ಛಗೊಳಿಸಿಕೊಳ್ಳುತ್ತದೆಂದೂ ಹೇಳಿದರು. ಅದಕ್ಕೆ ಹಸಿಮೆಣಸಿನಕಾಯಿ ಅತ್ಯಂತ ಇಷ್ಟದ ಆಹಾರವೆಂದು ತಿಳಿಸಿ, ನನ್ನ ಕೈಯಿಂದ ಒಂದು ಹಸಿಮೆಣಸಿನಕಾಯಿಯನ್ನು ಅದಕ್ಕೆ ತಿನ್ನಿಸಿದ್ದರು. ನಾನು ಆ ಗಿಣಿ, ಸಹವಾಸದಿಂದ ತುಂಬಾ ಖುಷಿಯಾಗಿದ್ದೆ. ಪಂಜರದಲ್ಲಿರದೆ ಸ್ವಚ್ಛಂದವಾಗಿ ಮನೆಯಲ್ಲಿ ಹಾರಾಡಿಕೊಂಡಿರುವ ಆ ಗಿಣಿ, ಅದರ ಸ್ವಭಾವ ಎಲ್ಲವೂ ನನಗೆ ಬೆರಗು ಹುಟ್ಟಿಸಿದ್ದವು. ಆದರೆ ಈ ಹೊತ್ತಿನಲ್ಲಿ ನನಗೆ ನಮ್ಮೂರಿನ ಗಿಣಿ ನೆನಪಾಗಿರಲಿಲ್ಲ.
ಸೌಜನ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
Published On - 9:58 am, Thu, 23 December 21