ಮತ್ತೆ ಪ್ರದರ್ಶನ ಆಗಲಿದೆ ‘ಮುಖ್ಯಮಂತ್ರಿ’ ನಾಟಕ; ಕಲಾ ಗಂಗೋತ್ರಿಗೆ 50 ವರ್ಷದ ಸಂಭ್ರಮ
Mukhyamantri KannadaPlay: ಕಲಾ ಗಂಗೋತ್ರಿ ನಾಟಕ ತಂಡ 50 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ‘ಮುಖ್ಯಮಂತ್ರಿ’ ನಾಟಕ ಮತ್ತೆ ಹೊಸ ರೂಪದಲ್ಲಿ ಪ್ರದರ್ಶನ ಆಗುತ್ತಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು (Mukhyamantri Chandru) ಅವರು ಕಿರುತೆರೆಯಲ್ಲೂ ಫೇಮಸ್. ಅಷ್ಟೇ ಅಲ್ಲ, ಅವರು ಮೂಲತಃ ರಂಗಭೂಮಿಯ ಪ್ರತಿಭೆ. ನೂರಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ಮುಖ್ಯಮಂತ್ರಿ’ ನಾಟಕದ (Mukhyamantri Play) ಬಳಿಕ ಅವರ ಹೆಸರಿನ ಜೊತೆ ಮುಖ್ಯಮಂತ್ರಿ ಎಂಬ ಟ್ಯಾಗ್ ಕೂಡ ಸೇರಿಕೊಂಡಿತು. ಆ ನಾಟಕ ಈಗಾಗಲೇ ಹಲವು ಬಾರಿ ಪ್ರದರ್ಶನಗೊಂಡಿದೆ. ಈಗ ಮತ್ತೊಮ್ಮೆ ಅದನ್ನು ಹೊಸ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ. 2022ರ ಜ.16ರಂದು ಮತ್ತೊಂದು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಜನಪ್ರಿಯ ರಂಗಭೂಮಿ ತಂಡ ‘ಕಲಾ ಗಂಗೋತ್ರಿ’ (Kalagangotri Theatre Group) 50 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅನೇಕ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ವಿಷಯದ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಕಲಾ ಗಂಗೋತ್ರಿ ತಂಡದಿಂದ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಚಂದ್ರು ಅವರು ಅನೇಕ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ‘ನನಗೆ ಹೆಸರು, ಅನ್ನ ಕೊಟ್ಟ ಮೂಲ ಕ್ಷೇತ್ರ ರಂಗಭೂಮಿ. ಅದನ್ನು ನಾನು ಇಂದಿಗೂ ಬಿಟ್ಟಿಲ್ಲ. ಈ 50 ವರ್ಷದಲ್ಲಿ ಪ್ರತಿ ವರ್ಷವೂ ಕಲಾ ಗಂಗೋತ್ರಿ ರಂಗತಂಡದಿಂದ ನಾಟಕ ಮಾಡಿದ್ದೇನೆ. ಕೊರೊನಾದಲ್ಲಿ ಒಂದೂವರೆ ವರ್ಷ ಸಾಧ್ಯವಾಗಲಿಲ್ಲ. ಒಟ್ಟು 120ಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದೇನೆ. ನನಗೆ ಈಗ 69 ವರ್ಷ. ನಾವು ನಿಂತರೂ ಕಲಾ ಗಂಗೋತ್ರಿ ನಿಲ್ಲಬಾರದು. ಹಾಗಾಗಿ ಹೊಸ ತಲೆಮಾರಿನವರನ್ನೂ ಕರೆದುಕೊಂಡು ಬಂದಿದ್ದೇವೆ’ ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.
‘ಕೆ.ವೈ. ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ನಾಟಕವನ್ನು ಇವತ್ತಿನ ರಾಜಕಾರಣದ ಪರಿಸ್ಥಿತಿಗೆ ತಕ್ಕಂತೆ ಬರೆದಿದ್ದಾರೆ. ಇಂದಿನ ವ್ಯವಸ್ಥೆ ಎಷ್ಟು ಕೆಟ್ಟಿದೆ ಎಂದರೆ, ಒಂದು ವೇಳೆ ಮುಖ್ಯಮಂತ್ರಿ ಆದವನು ಒಳ್ಳೆಯವನೇ ಆಗಿದ್ದರೂ ಬದುಕುತ್ತಾನಾ? ಆತ ಅಂದುಕೊಂಡಿದ್ದು ಈಡೇರುತ್ತಾ ಎಂಬುದನ್ನು ಎಲ್ಲರಿಗೂ ನಾಟುವಂತೆ ಬರೆದಿದ್ದಾರೆ. ಈ ಹಿಂದಿನ ‘ಮುಖ್ಯಮಂತ್ರಿ’ ನಾಟಕದಲ್ಲಿ ಪಾತ್ರದ ಹೆಸರುಗಳು ಉತ್ತರ ಭಾರತದ ಹೆಸರುಗಳಾಗಿದ್ದವು. ಹಾಗಾಗಿ ಹೋಲಿಕೆ ಆಗುತ್ತಿರಲಿಲ್ಲ. ಈಗ ನಮ್ಮವರ ಹೆಸರುಗಳನ್ನೇ ಇಟ್ಟುಕೊಂಡು ಬರೆದಿರುವುದರಿಂದ ಅದು ಯಾರಿಗೆ ಬೇಕಾದರೂ ತಲುಪಬಹುದು. ಹಾಗಾಗಿ ಜ.16ರಂದು ನಾಟಕ ನೋಡಲು ರಾಜಕಾರಣಿಗಳನ್ನೂ ಕರೆಸುತ್ತಿದ್ದೇವೆ. ಸಾಧ್ಯವಾದ್ರೆ ಮುಖ್ಯಮಂತ್ರಿಗಳನ್ನೂ ಕರೆಸುತ್ತೇವೆ. ಈ ನಾಟಕ ಅವರಿಗೂ, ಅವರ ಸಹೋದ್ಯೋಗಿಗಳಿಗೂ ತಟ್ಟಬಹುದು’ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಕಲಾವಿದರು, ಸಾಹಿತಿಗಳು ಮತ್ತು ರಾಜಕಾರಣಿಗಳ ಜತೆ ಸಂವಾದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲು ‘ಕಲಾ ಗಂಗೋತ್ರಿ’ ತಯಾರಿ ಮಾಡಿಕೊಳ್ಳುತ್ತಿದೆ. 69ರ ಪ್ರಾಯದಲ್ಲೂ ಕೂಡ ಅನೇಕ ನಾಟಕಗಳಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಬಣ್ಣ ಹಚ್ಚುತ್ತಿದ್ದಾರೆ. ಎಲ್ಲರೂ ಬಂದು ‘ಮುಖ್ಯಮಂತ್ರಿ’ ನಾಟಕವನ್ನು ನೋಡಬೇಕು ಎಂದು ಅವರು ಆಹ್ವಾನಿಸಿದ್ದಾರೆ.
ಇದನ್ನೂ ಓದಿ:
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್ ಸಿಂಗ್ಗೆ ಕನ್ನಡ ಡೈಲಾಗ್ ಹೇಳಿಕೊಟ್ಟ ಕಿಚ್ಚ ಸುದೀಪ್
‘100 ಕೋಟಿ ರೂ. ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡ್ತಿರಲಿಲ್ಲ’; ಚೇತನ್ ಸಿನಿಮಾ ಬಗ್ಗೆ ರಮ್ಯಾ ಮಾತು