New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಕಲ್ಲು ಹೂವಿನ ನೆರಳು (ಕಥಾ ಸಂಕಲನ)
ಲೇಖಕರು : ಅನಿಲ್ ಗುನ್ನಾಪುರ
ಪುಟ : 96
ಬೆಲೆ : ರೂ. 120
ಮುಖಪುಟ ವಿನ್ಯಾಸ : ಎಂ. ಎಸ್. ಪ್ರಕಾಶ ಬಾಬು
ಪ್ರಕಾಶನ : ವೈಷ್ಣವಿ ಪ್ರಕಾಶನ, ಕೆ. ಗುಡದಿನ್ನಿ, ರಾಯಚೂರು
ಈ ಕಥಾ ಸಂಕಲನವು ಇದೇ ಬುಧವಾರ (ಅ.13) ಸಂಜೆ 6ಕ್ಕೆ ‘ಗಲಾಟೆ ಗಂಧರ್ವರು’ ಫೇಸ್ಬುಕ್ ಪುಟದಲ್ಲಿ ಹಿರಿಯ ಕವಿ ಮಮತಾ ಸಾಗರ ಅವರಿಂದ ಬಿಡುಗಡೆಗೊಳ್ಳಲಿದೆ. ಹಿರಿಯ ವಿಮರ್ಶಕ ಕೇಶವ ಮಳಗಿ ಅವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
*
ಅವ್ವ ಹೇಳುತ್ತಿದ್ದ ಕತೆಗಳು, ನಮ್ಮೂರಿನ ಗ್ರಂಥಾಲಯ ಮತ್ತು ರೇಡಿಯೋ ಜೊತೆಗಿನ ಒಡನಾಟ ನನ್ನ ಬಾಲ್ಯದ ದಿನಗಳನ್ನು ಸಿರಿವಂತಗೊಳಿಸಿ ನನ್ನಲ್ಲಿ ಸಾಹಿತ್ಯಾಸಕ್ತಿ ಬೆಳೆಯಲು ಪ್ರೇರಣೆಯಾಯಿತು. ಆಗ ನಾನು ಮತ್ತು ತಮ್ಮಂದಿರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆವು. ನಮ್ಮ ಸೋದರಮಾವನವರು ದೆಹಲಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುವ ಕನ್ನಡ ವಾರ್ತೆ ಓದುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ನಮಗೆಲ್ಲ ಮಾವ ಏನು ಓದುತ್ತಾರೆ? ಹೇಗೆ ಓದುತ್ತಾರೆ? ಎಂಬ ಕುತೂಹಲ. ಆದರೆ ವಾರ್ತೆ ಕೇಳಲು ನಮ್ಮ ಮನೆಯಲ್ಲಿ ರೇಡಿಯೋ ಇರಲಿಲ್ಲ. ನಾವೆಲ್ಲ ಸೇರಿ ರೇಡಿಯೋ ಇದ್ದವರ ಮನೆಗೆ ಹೋಗಿ ವಾರ್ತೆಗಳನ್ನು ಕೇಳಿ ಬರುತ್ತಿದ್ದೆವು. ಚಿಕ್ಕವರಾದ ನಮಗೆ ಮಾವ ಓದುತ್ತಿದ್ದ ವಾರ್ತೆಯಲ್ಲಿಯ ಎಲ್ಲ ಸಂಗತಿಗಳು ಕತೆಗಳಂತೆ ಅನ್ನಿಸುತ್ತಿದ್ದವು. ನಂತರದಲ್ಲಿ ನಮ್ಮ ಮನೆಗೆ ಅಜ್ಜನಿಂದ ಉಡುಗೊರೆಯಾಗಿ ರೇಡಿಯೋ ಬಂತು. ಅದು ಬಂದ ಬಳಿಕ ನನ್ನ ದಿನಚರಿಯಲ್ಲಿ ಮಹತ್ತರ ಬದಲಾವಣೆಯಾಯಿತು. ಆದರೆ ಕಥೆಗಳನ್ನು ಬರೆಯಲು ಶುರು ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ.
ಅನಿಲ್ ಗುನ್ನಾಪುರ, ಲೇಖಕ
ಅನಿಲ್ ಗುನ್ನಾಪೂರ ಅವರು ತಮ್ಮ ಸ್ವಾನುಭವವನ್ನು ಓದುಗನೊಂದಿಗೆ ಎದುರಾಬದರು ಕುಳಿತು ಹೇಳಿಕೊಂಡಷ್ಟು ಆಪ್ತತೆ ಇಲ್ಲಿನ ಕತೆಗಳಲ್ಲಿದೆ. ಅನಿಲ್ ಅವರ ಸಂಪರ್ಕದಲ್ಲಿ ಬಂದ ಯಾರಾದರೂ ಅವರ ಕೂಸಿನಂತಹ ಮುಗ್ಧಸ್ವಭಾವವನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಗ್ಧತೆಯ ನೆಲೆಯಿಂದಲೇ ತಮ್ಮ ಸುತ್ತಲಿನ ಬದುಕನ್ನು ಗ್ರಹಿಸಲು ಹಾಗೂ ಅಭಿವ್ಯಕ್ತಿಸಲು ಅವರು ಹವಣಿಸುತ್ತಾರೆ ಎನ್ನುವುದು ಸುಸ್ಪಷ್ಟ. ಅಷ್ಟೇ ಆಗಿದ್ದರೆ ಅದೊಂದು ಮಿತಿಯಾಗಿ ಉಳಿದುಬಿಡುತ್ತಿತ್ತು. ಆದರೆ ಬಾಹ್ಯದಲ್ಲಿ ಗೋಚರಿಸುವ ಮುಗ್ಧತೆಯ ಹಿಂದೆ ಬದುಕಿನ ಆಳಕ್ಕೆ ಇಳಿದು ತಳದಲ್ಲಿ ತೋಳಿಗೆ ತೋಳು ಬೆಸೆದುಕೊಂಡು ಅಡಗಿಕುಳಿತಿರುವ ಬೆಂಕಿ ಬಿರುಗಾಳಿ, ಬೆಳದಿಂಗಳು ತಂಗಾಳಿ- ಎಲ್ಲವನ್ನೂ ಪಾತಾಳ ಗರಡಿಯ ಮೂಲಕ ಹೆಕ್ಕಿ ತೆಗೆಯಬಲ್ಲರು. ವಾಸ್ತವವನ್ನು ಮುಗ್ಧತೆಯ ಕಣ್ಣುಗಳಿಂದ ಗ್ರಹಿಸುವ ಅವರು ವಾಸ್ತವ ಲೋಕದ ಕೆಂಡದ ಎದುರಿಗೆ ತಲ್ಲಣಿಸುವ, ಹುರುಪಳಿಸಿ ಹೋಗುವ, ದಿಗಿಲುಗೊಳ್ಳುವ, ಎಚ್ಚರಗೊಳ್ಳುವ, ಹೆಚ್ಚು ಹೆಚ್ಚು ಪ್ರಬುದ್ಧರಾಗುವ- ಹೀಗೆ ವಿವಿಧ ಆಯಾಮಗಳಿಗೆ ಅವರು ತೆರೆದುಕೊಳ್ಳುತ್ತಾರೆ. ಹೀಗಾಗಿ, ತೆರೆದ ತೋಳಿನಿಂದ ಅಪ್ಪಿಕೊಳ್ಳಲು ಹಂಬಲಿಸುವ ಮುಗ್ಧಲೋಕದ ಕೋಮಲತೆಯನ್ನು ಬಾಲಕರ ನೆಲೆಯಿಂದ ಕಾಣಿಸುವ ಕತೆಗಳು ಇಲ್ಲಿವೆ. ಅವುಗಳ ಜೊತೆಗೆ ಹಿರಿದ ಕತ್ತಿಯ ಅಲಗನ್ನು ಝಳಪಿಸುತ್ತ ದಾಳಿಯಿಡುವ ವಾಸ್ತವದ ರೂಕ್ಷತೆಯನ್ನು ಬಿಂಬಿಸುವ ಕತೆಗಳೂ ಇಲ್ಲಿವೆ. ಮೊದಲ ಸಂಕಲನದ ಮೂಲಕವೇ ಕೇಡು ಹಾಗೂ ಕರುಣೆ ಎರಡನ್ನೂ ಸಮಚಿತ್ತದಿಂದ ಗ್ರಹಿಸಿ ಬರೆಯಲು ಹೊರಟಿರುವ ಇವರು ಪಳಗಿದ ಕತೆಗಾರನಂತೆ ಗೋಚರಿಸುತ್ತಾರೆ.
ಚನ್ನಪ್ಪ ಕಟ್ಟಿ, ಹಿರಿಯ ಸಾಹಿತಿ
*
‘ಪರಿಮಳ’ ಕಥೆಯ ಆಯ್ದ ಭಾಗ
ಮರುದಿನ ಮುಂಜಾನೆ ಪಮ್ಮಿ ತಡವಾಗಿ ಎದ್ದಳು. ಅವ್ವ ಅವಳಿಗೆ ಜಳಕ ಮಾಡಿಸಿ, ತಲೆ ಹಿಕ್ಕಿ ಎರಡು ಜಡಿ ಹಾಕಿ ‘ನಂದೇ ನೆದರ ಆಗುವಂಗ ಅದ’ ಎಂದು ಲಟಕೆ ಮುರಿದಳು. ಪಮ್ಮಿ ತುಟಿಯಂಚಿನಲ್ಲಿ ಮುಗುಳ್ನಗೆ ಇಣುಕಿ ಹೋಯಿತು. ಪುಟ್ಯಾ ಕೈಯಲ್ಲಿ ಏನೋ ಹಿಡಿದು ನಿಂತಿದ್ದ. ಪಮ್ಮಿ ಕುತೂಹಲದಿಂದ ಅವನೆಡೆಗೆ ಹೆಜ್ಜೆ ಹಾಕಿದಳು. ಪುಟ್ಯಾ ಬಾಂಬೆ ಮಿಠಾಯಿ ತಿನ್ನುತ್ತಿದ್ದ. ಪಮ್ಮಿ ಆಸೆಗಣ್ಣಿಂದ ನೋಡಿದಳು. ಪುಟ್ಯಾ ‘ನಿನಗ್ ಬೇಕು?’ ಎಂದ. ಪಮ್ಮಿ ಮನಸಲ್ಲಿ ಕಸಿದುಕೊಂಡು ತಿನ್ನುವಷ್ಟು ಹಂಬಲವಿದ್ದರೂ ಗೋಣು ಅಲ್ಲಾಡಿಸಿ ‘ಬ್ಯಾಡ್’ ಅಂದಳು.
ಪಮ್ಮಿ ಬೇಕು ಎಂದಿದ್ದರೆ ಎಷ್ಟು ಕೊಡುತ್ತಿದ್ದನೋ ಗೊತ್ತಿಲ್ಲ. ಈಗ ಪುಟ್ಯಾ ತನ್ನ ಕೈಯಲ್ಲಿದ್ದ ಬೊಂಬಾಯಿ ಮಿಠಾಯಿ ಅರ್ಧಕ್ಕಿಂತ ಹೆಚ್ಚು ಪಮ್ಮಿಗೆ ಒತ್ತಾಯಪೂರ್ವಕವಾಗಿ ಕೊಟ್ಟಾಗ ಅವಳ ಮುಖ ಹಿಗ್ಗಿ ಹೀರೇಕಾಯಿ ಆಯಿತು. ಪಕ್ಕದಲ್ಲಿದ್ದ ಹುಣಸೆ ಗಿಡದ ಕಟ್ಟೆಯ ಮೇಲೆ ಕೂತು ದೊಡ್ಡವರಂತೆ ಮಾತಲ್ಲಿ ತೊಡಗಿದರು.
‘ಪಮ್ಮಿ.. ನಿಮ್ಮಪ್ಪ ಎಲ್ಲಿ ಅದಾನ?’
‘ಊರಿಗೆ ಹೋಗ್ಯಾನ್ ನಾಳೀಗ ಬರ್ತಾನ’
‘ಬರಲ್ಲ ನೀ ಸುಳ್ಳು ಹೇಳ್ತಿ’
‘ಖರೇ… ಬರ್ತಿನಿ ಅಂದಾನ’
‘ನಿಮ್ಮಪ್ಪ ಬ್ಯಾರೇ ಮದುವೆ ಆಗ್ಯಾನಂತ’
‘ಹಂಗಂದ್ರ?’
‘ನಿನಿಗ್ ಸಣ್ಣವ್ವ ಅದಾಳಂತ?’
‘ನಿನಗ್ ಹ್ಯಾಂಗ್ ಗೊತ್ತ?’
‘ನಮ್ಮವ್ವ ಅಪ್ಪ ಮನ್ಯಾಗ ಮಾತಾಡತ್ತಿರು’
‘ನನಗಾ ಗೊತ್ತಿಲ್ಲಪಾ ಅವ್ವಾಗ ಕೇಳಿ ಹೇಳ್ತಿನಿ ನಿನಗ್’ ಎಂದು ಪಮ್ಮಿ ಬೊಂಬಾಯಿ ಮಿಠಾಯಿ ತಿನ್ನುವುದನ್ನು ಮುಂದುವರೆಸಿದಳು. ಮತ್ತೇನೋ ನೆನಪಾದಂತೆ ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ಪಮ್ಮಿ ‘ನನಗ್ ನೀ ಒಟ್ಟ ಪಿ ಬಿಡಬ್ಯಾಡ್…’ ಎಂದಳು.
‘ಹೂ ಆಯ್ತು ಬಿಡಲ್ಲ’ ಎಂದ ಪುಟ್ಯಾ.
ಅಷ್ಟೊತ್ತಿಗೆ ಅವ್ವ ಮನೆಯ ಕೆಲಸ ಮುಗಿಸಿ ದಗದಕ್ಕ ಹೋಗುವ ಅವಸರದಲ್ಲಿದ್ದಳು. ತಲೆ ಮೇಲೆ ಬುತ್ತಿಗಂಟು ಇರಿಸಿಕೊಂಡು ‘ಪಮ್ಮಿ.. ಹೋಗಿ ಬರ್ತಿನಿ ಮನೀ ಕಡಿ ಹುಷಾರು. ಆಯಿ ಹಂತ್ಯಾಕ ಹೋಗಿ ಕುಂದ್ರು. ಪಿರಿ ಪಿರಿ ತಿರಗಬ್ಯಾಡ’ ಎಂದಳು. ಜೋಲು ಮೋರೆ ಮಾಡಿಕೊಂಡು ಅಲ್ಲಿಂದ ಒಂದೆರಡು ಹೆಜ್ಜೆ ಮುಂದೆ ಬಂದ ಪಮ್ಮಿ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಅವ್ವ ‘ಯಾಕ್ ಏನೈತು?’ ಎಂದು ಜಂಪರಿನಲ್ಲಿದ್ದ ಪರ್ಸು ತೆಗೆದು ಅದರಲ್ಲಿನ ಎರಡು ರೂಪಾಯಿ ಕಾಯಿನ್ ಕೊಡಲು ಮುಂದಾದಳು. ಪಮ್ಮಿ ಒಲ್ಲೇ ಎನ್ನುತ್ತ ಹಿಂದಕ್ಕೆ ಸರಿದು ನಿಂತಳು. ‘ಬರ್ತಿ?’ ಎಂದಾಗ ಪಮ್ಮಿಗೂ ಅಷ್ಟೇ ಬೇಕಾಗಿತ್ತು. ಕೋಲೆ ಬಸವನಂತೆ ಗೋಣು ಅಲ್ಲಾಡಿಸಿ ‘ಹೂಂ’ ಎಂದು ಅವ್ವನನ್ನು ಹಿಂಬಾಲಿಸಿದಳು.ಪುಟ್ಯಾನ ಅಪ್ಪ ಸಂಡಾಸ್ಕ ಹೋಗಿ ಮನೆ ಹಿಂದಿನ ಸಂಧಿಯಲ್ಲಿ ಹಾದು ಎದುರಿಗೆ ಬರುತ್ತಿದ್ದ. ಅವ್ವನನ್ನು ನೋಡಿ ದಾರಿ ಬಿಡದೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಅಡ್ಡಲಾಗುತ್ತಿದ್ದ. ಅವ್ವ ಸಿಟ್ಟಲ್ಲಿ ‘ಛಲೊ ಅಲ್ಲ ಹಿಂಗ್ ಮಾಡೋದು.. ಸರಿರಿ’ ಎಂದು ಪಮ್ಮಿ ಕೈ ಹಿಡಿದುಕೊಂಡು ಅವಸರವಾಗಿ ನಡೆದಳು. ಮುಖ್ಯ ರಸ್ತೆಗೆ ಬರುವ ಹೊತ್ತಿಗೆ ಏಳೆಂಟು ಹೆಣ್ಣುಮಕ್ಕಳು ಬರಬರ ಕೈ ಬೀಸಿಕೊಂಡು ದಗದಕ್ಕೆ ಹೊರಟಿದ್ದರು. ಎಲ್ಲರ ತಲೆಯ ಮೇಲೆಯೂ ಬುತ್ತಿ ಗಂಟು ಇದ್ದು ಅದನ್ನವರು ಕೈಯಿಂದ ಮುಟ್ಟುತ್ತಲೂ ಇರಲಿಲ್ಲ. ತನ್ನ ಪಾಡಿಗಿ ತಾನು ಆರಾಮಾಗಿ ಬುತ್ತಿ ಗಂಟು ರಾಜರ ತಲೆಯ ಮೇಲಿನ ಕಿರೀಟದಂತೆ ಆಸೀನವಾಗಿತ್ತು. ಪಮ್ಮಿ ಎಲ್ಲರ ತಲೆಮೇಲಿನ ಬುತ್ತಿ ಗಂಟನ್ನು ತದೇಕಚಿತ್ತವಾಗಿ ನೋಡುತ್ತಿದ್ದಳು. ಇದೊಂತರ ಅವಳಿಗೆ ಸೋಜಿಗವೆನ್ನಿಸಿತು.
ಆ ಗುಂಪಿನ ಹೆಣ್ಣುಮಗಳೊಬ್ಬಳು ‘ಪಮ್ಮಿ ಕೈಯಾಗೊಂದು ಕುರ್ಪಿ ಕೊಡಬೇಕಿಲ್ಲ.. ಯಕ್ಕಾ.. ಅಕಿಗೂ ಪಗಾರ ಬರ್ತಿತ್ತು…’ ಎಂದಳು. ಅವ್ವ ನಗುತ್ತ ಮುಖ ಹೊರಳಿಸಿ ಪಮ್ಮಿ ಕಡೆಗೆ ನೋಡಿದಳು. ಮತ್ತೊಬ್ಬಳು ‘ಅಯ್ಯ! ಪಮ್ಮಿ ಕಸ ತಗಿಯಾಕ ನಿಂತ್ರ ಒಂದ ನುಂಬ ನಮಗಿಂತ್ ಮುಂದ ಇರ್ತಾಳ.. ಭಾಳ ಚಾಪ್ಟರಿ ಅದಾಳ ಅಕೀ’ ಎಂದಳು. ‘ಹೂಂ ಎಲ್ಲಾ ಅವರಪ್ಪನಂಗ್’ ಎಂದಳು ಮತ್ತೊಬ್ಬಳು. ಕಾಲು ಎಳೆದುಕೊಂಡು ಒಂದೊಂದೇ ಭಾರವಾದ ಹೆಜ್ಜೆ ಹಾಕುತ್ತಿದ್ದ ದಪ್ಪನೆಯ ಹೆಣ್ಣುಮಗಳು ಪಮ್ಮಿಯ ತಲೆಸವರಿ ‘ಕೂಸ ಭಾರಿ ಶ್ಯಾಣೆ ಆದವ’ ಎಂದು ಹೊಗಳಿದಾಗ ಪಮ್ಮಿ ಖುಷಿಯಾದಳು. ಆಗಲೇ ಹೊಲ ತಲುಪಿಯಾಗಿತ್ತು. ಎಲ್ಲರೂ ಬುತ್ತಿಗಂಟು ಕರಿಜಾಲಿ ಮರದ ಕೆಳಗಿರಿಸಿ ಸೀರೆಯ ಸೆರಗು ತಲೆಗೆ ಸುತ್ತಿಕೊಂಡು ಕೈಯಲ್ಲಿ ಕುರ್ಪಿ ಹಿಡಿದು ಕಸ ತೆಗೆಯಲು ಸಾಲಾಗಿ ಕುಳಿತರು. ಪಮ್ಮಿ ಅವರನ್ನೆಲ್ಲ ನೋಡಿ ಅಂಗನವಾಡಿ ಅಕ್ಕೋರು ಚುಕ್ಕೊಳಿಗೆಲ್ಲ ಆಡಿಸುತ್ತಿದ್ದ ಕಪ್ಪೆ ಆಟ ನೆನಪು ಮಾಡಿಕೊಂಡಳು.
ಹ್ಞಾಂ ಅನ್ನುವುದರೊಳಗೆ ಕಸ ತೆಗೆಯುತ್ತಿದ್ದ ಹೆಣ್ಣು ಮಕ್ಕಳೆಲ್ಲ ನಡು ಹೊಲಕ್ಕೆ ಹೋಗಿದ್ದರು. ಬಿಸಿಲುಗುದುರೆ ಸಮುದ್ರದ ಅಲೆಗಳಂತೆ ಹೊಲದಲ್ಲಿ ಹೊಸ ವಾತಾವರಣ ಸೃಷ್ಟಿಸಿತ್ತು. ಜಾಲಿ ಮರದ ನೆರಳಲ್ಲಿ ಕುಳಿತಿದ್ದ ಪಮ್ಮಿ ಒಮ್ಮಿಂದೊಮ್ಮೆಗೆ ಬಿಸಿಲು ನೆರಳು ಆವರಿಸುವುದನ್ನು ಕುತೂಹಲದಿಂದ ನೋಡುತ್ತಿದ್ದಳು. ಅಕ್ಕಪಕ್ಕದಲ್ಲಿ ಯಾರೊಬ್ಬರೂ ಕಾಣಲಿಲ್ಲ. ಅವಳಿಗೆ ತಾನೀಗ ಒಂಟಿ ಎನ್ನಿಸಿ ಸಣ್ಣಗೆ ಭಯ ಶುರುವಾಯಿತು. ಆಜುಬಾಜು ಗಿಡಗಂಟಿ ಮತ್ತು ದಟ್ಟವಾಗಿ ಬೆಳೆದ ಹುಲ್ಲು ಇತ್ತು. ಹಿಂದೊಮ್ಮೆ ಅವ್ವನೊಡನೆ ಹೊಲಕ್ಕೆ ಬಂದಿದ್ದಾಗ ಹಾವು ನೋಡಿ ಅತ್ತು ದೊಡ್ಡ ರಂಪ ಮಾಡಿದ್ದಳು. ಅದೆಲ್ಲ ಈಗ ನೆನಪಾಗಿ ಮತ್ತಷ್ಟು ಭಯವಾಯಿತು. ಕಸ ತೆಗೆಯುತ್ತಿದ್ದ ಹೆಣ್ಣುಮಕ್ಕಳ ಕಡೆಗೆ ಹೋಗಬೇಕೆಂದಳು. ‘ನೆರಳಾಗ ಒಂದ ಕಡೆ ಗೋಪಿಯಂಗ ಸುಮ್ ಕುಂದ್ರು.. ಓಡ್ಯಾಡ್ದಿ ಅಂದ್ರ.. ನನ್ನ ಕೈಯಿಂದ ಏಟ ತಿತ್ತಿ ನೋಡು’ ಎಂದು ಅವ್ವ ತಾಕೀತು ಮಾಡಿದ್ದು ನೆನಪಿಸಿಕೊಂಡು ಸುಮ್ಮನಾದಳು.
ಪಮ್ಮಿಯ ತಲೆಯ ಮೇಲೆ ಏನೋ ಚಟಪಟ ಸದ್ದು ಆದಂತಾಯಿತು. ತಲೆಯೆತ್ತಿ ನೋಡಿದಳು. ಮೈಮೇಲೆ ಹತ್ತಾರು ಬಣ್ಣ ಹೊತ್ತ ಪಾತರಗಿತ್ತಿ ತನಗಾರು ಸಾಟಿ ಎಂಬ ಬಿಂಕದಲ್ಲಿ ಪಟಪಟನೆ ರೆಕ್ಕೆ ಬಡೆಯುತ್ತ ಹಾರಾಡುತ್ತಿತ್ತು. ಅದನ್ನು ನೋಡಿ ಪಮ್ಮಿಯ ಕಣ್ಣಲ್ಲಿ ಮಿಂಚು ಪ್ರಕಾಶಿಸಿ ಮುಖ ತಾವರೆ ಹೂವಂತೆ ಅರಳಿತು.
ಅವತ್ತು ಪುಟ್ಯಾ ಅಂಗನವಾಡಿಯಲ್ಲಿ ಚುಕ್ಕೊಳೊಂದಿಗೆ ಕೂತಾಗ ಪಾಟಿಯಲ್ಲಿ ಪಮ್ಮಿ ಬರೆದ ಅಕ್ಷರಗಳನ್ನು ನೋಡಿ ‘ಕತ್ತಿಕಾಲ ನಾಯಿಬಾಲ ಆಗ್ಯಾವ’ ಎಂದು ರೇಗಿಸಿ ಕೊನೆಗೆ ಪಾತರಗಿತ್ತಿ ರೆಕ್ಕೆ ಹಿಡಿ ಅಕ್ಷರ ದುಂಡಾಗುತ್ತವೆ ನಾನು ಹಾಗೇ ಮಾಡ್ತಿನಿ ನೀನು ಮಾಡೆಂದು ಸಲಹೆ ನೀಡಿದ್ದ. ಅವನ ಮಾತೀಗ ಪಮ್ಮಿಗೆ ತರಕ್ ಆಯ್ತು. ಹೇಗಾದರೂ ಮಾಡಿ ಪಾತರಗಿತ್ತಿಯನ್ನು ಹಿಡಿದು ಅಕ್ಷರ ದುಂಡಾಗಿ ಬರೆಯಬೇಕೆಂದು ಸಾವಕಾಶವಾಗಿ ಎದ್ದು ಪಾತರಗಿತ್ತಿ ಹಿಡಿಯಲು ಮುಂದಾದಳು. ಇನ್ನೇನು ಕೈಗೆ ಸಿಕ್ಕೇ ಬಿಟ್ಟಿತು ಎನ್ನುವಾಗ ಮತ್ತೆ ಹಾರಿ ಬೇರೊಂದು ಗಿಡದ ಹೂವಿನ ಮೇಲೆ ಕೂತು ತಪ್ಪಿಸಿಕೊಳ್ಳುತ್ತಿತ್ತು. ಪಮ್ಮಿ ಪಾತರಗಿತ್ತಿ ಹೋದ ದಿಕ್ಕಿಗೆಲ್ಲ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಓಡಾಡುತ್ತಿದ್ದಳು. ಆಗಲೇ ಅವಳಿಗಿಂತಲೂ ಎತ್ತರವಾಗಿ ಬೆಳೆದಿದ್ದ ಸೂರ್ಪಾನ ಹೊಲದಲ್ಲಿ ತೆನೆಯಿಂದ ತೆನೆಗೆ ಹಾರುತ್ತ ಪಾತರಗಿತ್ತಿ ತನ್ನ ಚೆಲ್ಲಾಟ ಮುಂದುವರೆಸಿತ್ತು. ಅದರ ಬೆನ್ನಟ್ಟಿ ಹೋಗಿದ್ದ ಪಮ್ಮಿ ಈಗ ನಡು ಹೊಲದಲ್ಲಿದ್ದಳು. ಅಪರಿಚಿತ ಲೋಕವೊಂದರ ಭಾಗವಾಗಿದ್ದ ಅವಳಿಗೆ ಈಗ ತಾನೇ ಕಣ್ಮುಂದೆ ಹಾರಾಡುತ್ತಿದ್ದ ಪಾತರಗಿತ್ತಿ ಕಾಣದೇ ಇರುವುದು ನಿರಾಶೆ ಮೂಡಿಸಿತು. ಚಕಿತಳಾಗಿ ಸುತ್ತಲೂ ನೋಡಿದಳು. ಈಗ ತಾನೆಲ್ಲಿರುವೆ ಎಂಬುದೇ ಅವಳಿಗೆ ಗೊತ್ತಾಗಲಿಲ್ಲ. ಗೀಂವ್ ಎನ್ನುವ ಶಬ್ದದೊಂದಿಗೆ ಜೇನು ಹುಳುಗಳು ಎಲ್ಲ ಕಡೆಯೂ ಹಾರಾಡುತ್ತಿದ್ದವು. ಆಗಲೇ ಪಾತರಗಿತ್ತಿಯ ಜೊತೆಗಿನ ಪಡಿಪಾಟಲಿನಲ್ಲಿ ಸಿಕ್ಕು ಅರ್ಧ ಗಂಟೆಯ ಮೇಲಾಗಿತ್ತು. ಪಮ್ಮಿ ಗಾಬರಿಗೊಂಡಿರುವುದು ಅವಳ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು. ಜೋರಾಗಿ ಅವ್ವಾ ಎಂದು ಕೂಗಬೇಕು ಎಂದವಳಿಗೆ ಧ್ವನಿ ಹೊರಡಲಿಲ್ಲ. ಅನುಕೂಲ ಆದ ದಿಕ್ಕಿಗೆ ದಾರಿಮಾಡಿಕೊಂಡು ಮುನ್ನುಗ್ಗುತ್ತಿದ್ದಳು.
*
ಪರಿಚಯ : ಅನಿಲ್ ಗುನ್ನಾಪೂರ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿಯವರು. ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಗುಬ್ಬಚ್ಚಿ ಗೂಡಿನಲ್ಲಿ’ ಇವರ ಚೊಚ್ಚಲ ಕವನಸಂಕಲನ. ಈ ಕೃತಿ 2016ರಲ್ಲಿ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡಿದೆ. 2018 ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆಯಲ್ಲಿ ಇವರ ಕವಿತೆಗೆ ಮೂರನೇ ಬಹುಮಾನ ಲಭಿಸಿದೆ. ‘ಕಲ್ಲು ಹೂವಿನ ನೆರಳು’ ಇವರ ಚೊಚ್ಚಲ ಕಥಾಸಂಕಲನ.
(ಕಥಾಸಂಕಲನದ ಖರೀದಿಗೆ ಸಂಪರ್ಕಿಸಿ : 9620170027)
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘1232 ಕಿ.ಮೀ, ಏಳು ಮಂದಿ ವಲಸೆ ಕಾರ್ಮಿಕರು, ಏಳು ದಿನಗಳು ಏಳು ರಾತ್ರಿಗಳು’ ಸದ್ಯದಲ್ಲೇ ನಿಮ್ಮ ಓದಿಗೆ
Published On - 10:07 am, Tue, 12 October 21