New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಕನ್ನಡ ಪ್ರಜ್ಞೆಯ ಸುತ್ತಮುತ್ತ
ಸಂಪಾದಕರು : ಡಾ. ಡಿ. ಸಿ. ಗೀತಾ, ರೇಖಾ ಗಾಂವಕರ
ಪುಟ : 344
ಬೆಲೆ : ರೂ. 400
ಮುಖಪುಟ ವಿನ್ಯಾಸ : ರಾಮು ಎಂ.
ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಬೆಂಗಳೂರು
*
ಈ ಕೃತಿಯು ಇಂದು ಸಂಜೆ 6ಕ್ಕೆ ಆನ್ಲೈನ್ ಮೂಲಕ ಬಿಡುಗಡೆಗೊಳ್ಳಲಿದೆ. ಶಿಕ್ಷಣತಜ್ಞ ಡಾ. ವೂಡೆ ಪಿ. ಕೃಷ್ಣ, ಲೇಖಕಿ ಡಾ. ವಿನಯಾ ವಕ್ಕುಂದ ಪಾಲ್ಗೊಳ್ಳಲಿದ್ದಾರೆ. ತನ್ನಿಮಿತ್ತ ಈ ಕೃತಿಯಲ್ಲಿ ಅಡಕವಾಗಿರುವ ಹಿರಿಯ ಕಥೆಗಾರ್ತಿ, ಕವಿ ವೈದೇಹಿ ಅವರ ವಿಚಾರಪೂರ್ಣ ಬರಹ ನಿಮ್ಮ ಓದಿಗೆ.
*
ನಮ್ಮ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮದ್ರಾಸ್ ಸರಕಾರದ ಅಧೀನದಲ್ಲಿತ್ತಲ್ಲ, ಅಂದು ಮ್ಯಾಕ್ಮಿಲನ್ ಕಂಪೆನಿ ಪ್ರಕಟಿಸುತ್ತಿದ್ದ ‘ಕನ್ನಡ ನೂತನ ಪಾಠಮಾಲೆ’ ಪಠ್ಯಪುಸ್ತಕ ಸರಣಿಗಳು ನಮ್ಮ ಪಠ್ಯವಾಗಿದ್ದವು. ಅದರ ಪ್ರಾಥಮಿಕ ಪಠ್ಯದಲ್ಲಿ ‘ಮೈನಾಹಕ್ಕಿ ಹಾಡಿತು ಹಾಡು. . .’ ಎಂದು ಆರಂಭವಾಗುವ ಒಂದು ಹಾಡು. ಮೈನಾಹಕ್ಕಿಯೊಂದು ಮರದ ಮೇಲೆ ಗೂಡು ಕಟ್ಟಿಕೊಂಡು ಮೊಟ್ಟೆಯಿಟ್ಟು ಮರಿ ಮಾಡಿ ಸುಖದಿಂದಿರುವಾಗ,
“ತುಂಟಾ ಬಂದ ಕಣ್ಣನ್ನಿಕ್ಕಿ
ಹೊಡೆಯುವೆನೆಂದಾ ಕಲ್ಲು ಹೆಕ್ಕಿ
ಮರಿಗಳು ಚಿಲಿಪಿಲಿ ಎಂದವು ಬಿಕ್ಕಿ
ಬೇಡಾ ಎಂದಿತು ಮೈನಾ ಹಕ್ಕಿ”
ಆದರೆ ಆ ಹುಡುಗ ಕೇಳಿದನೆ? ಊಹೂಂ.
“ನೋಡೀ ನೋಡೀ ಗುರಿಯನ್ನಿಟ್ಟ
ತುಂಟಾ ಹುಡುಗಾ ಹೊಡೆದೇ ಬಿಟ್ಟ
ಹಾರಿತು ಹಕ್ಕಿ ಒಮ್ಮೆಲೆ ಚೀರಿ
ಹಿಂದೆಯೆ ಹೋದವು ಮರಿಗಳು ಹಾರಿ”
ಇದು ಮಚ್ಚೇರಿ ಶಂಕರನಾರಾಯಣ ರಾವ್ ಎಂಬ ಮಕ್ಕಳ ಕವಿ ಬರೆದ ಕವನ. ನಮ್ಮ ಗೋವಿಂದ ಮಾಸ್ಟರು ಪಾಠ ಮಾಡುವಾಗ ಈ ಕವನ ನಾಟಕವಾಗಿ ಬಿಡುತ್ತಿತ್ತು. ಅವರು ಸ್ವತಃ ಮೈನಾಹಕ್ಕಿಯಾಗಿ ಕೈಯೆತ್ತಿ ‘ಬೇಡಾ. . .’ ಎಂದು ರಾಗವತ್ತಾಗಿ ಎಳೆದು ಹಾಡುವಾಗ ನಮಗೆ ತಳಮಳವಾಗುತಿತ್ತು. ಇಡೀ ಪದ್ಯವನ್ನು ಅವರು ಅಭಿನಯಪೂರ್ವಕ ಹಾಡುವ ಹೊತ್ತಿಗೆ ನಮಗೆ ಅಯ್ಯೊ, ಆ ತುಂಟ ಹುಡುಗ ಹಾಗೆ ಏಕೆ ಮಾಡಿದನಪ್ಪ, ಮಾಡಬಾರದಿತ್ತು ಅಂತೆಲ್ಲ ಅನಿಸಿ ಬೇಸರವಾಗುತ್ತಿತ್ತು. ಹೀಗೆ ಒಂದು ಹಾಡು ಅದು ನಾಟಕವೂ ಆಗಿ ಹಾಡೂ ಆಗಿ ಪಾಣಿ ಪಕ್ಷಿ ಪರಿಸರ ಎಲ್ಲದರ ಬಗ್ಗೆ ಪ್ರೀತಿಯನ್ನು ನಮ್ಮ ಆ ಬಾಲಮನಸ್ಸಿಗೆ ತಾಯಿಹಾಲಿನ ಹರಿವಿನಷ್ಟು ಸುಲಲಿತವಾಗಿ ಉಣಿಸುತ್ತಿತ್ತು. ಅಂದು ಅದು ಒಂದು ಪದ್ಯವಾಗಿ ತಲೆಯಲ್ಲಿ ಹೊಕ್ಕಿದ್ದು ಇಂದು ಹೊಸಹೊಸ ಅರ್ಥ ಬಿಟ್ಟುಕೊಳ್ಳುತ್ತಿದೆ. ಗುಳೆ ಎಬ್ಬಿಸುವುದು, ತಲಾಂತರದಿಂದ ಬಾಳಿ ಬಂದ ಜಾಗವನ್ನು ಬಿಟ್ಟು ಓಡಿಸುವುದು, ವಲಸೆ ಹೋಗುವುದು ಇತ್ಯಾದಿ ಇವೆಲ್ಲದರ ಸಂಕೇತ ಎನಿಸುತ್ತಿದೆ. ಒಂದು ಹಕ್ಕಿಸಂಸಾರದ ಸರಳ ವಿಷಯವಾಗಿ ಮಗು ಹೆಕ್ಕಿಕೊಳ್ಳುವ ಪ್ರಾದೇಶಿಕ ಭಾಷೆಯ ಪದ್ಯವೊಂದು ಅದೇ ಮಗು ಬೆಳೆದ ಮೇಲೆ ಬಿಟ್ಟುಕೊಡುವ ಆಯಾಮಗಳು ಹಲವು. ಅಂದಿನ ಹಾಡುಗಳೆಲ್ಲ ಇವತ್ತಿಗೂ ಹೇಗೆ ಪ್ರಸ್ತುತವಾಗಿದೆ! ‘ಜೇಡ ಮತ್ತು ನೊಳ’ ಎಂಬೊಂದು ಕವನ.
‘ಬಾ ನೊಳವೆ ಬಾ ನೊಳವೆ ಬಾ ನಮ್ಮ ಮನೆಗೆ
ಬಾನೊಳಗೆ ಹಾರಿ ಬಲು ದಣಿವಾಯ್ತು ನಿನಗೆ
ನೀನೊಮ್ಮೆ ಬಾ ನಮ್ಮ ಹೊಸಮನೆಯ ನೋಡು. . .’
ಅಂತೆಲ್ಲ ಜೇಡವೊಂದು ನೊಳವನ್ನು ಕರೆಯುತ್ತಿದೆ. ನೊಳವೋ, ಮೊದಮೊದಲು ‘ಎಲೆ ಜೇಡ ಜೇಡ, ಈ ಮನೆಯೊಳುಪಚಾರ ಹಾ ಬೇಡಬೇಡ’ ಅಂತ ನಿರಾಕರಿಸುತ್ತದೆ. ಕೊನೆಗೆ ಜೇಡ ತೋರಿದ ಅಮಿಷಗಳಿಗೆ ಬಲಿಯಾಗಿ ಬಲೆಯನ್ನು ಹೊಗುತ್ತದೆ. ಸರಿ, ಅದಕ್ಕಾಗಿಯೇ ಕಾಯುತಿದ್ದ ಜೇಡ ಅದರ ಮೇಲೆ ಹಾರಿ ‘ಚಿಳ್ಳೆಂದು ವಿಷ ಕಾರಿ ರಕ್ತವನು ಹೀರಿ’ ತನ್ನ ಭೋಜನ ನಡೆಸುತ್ತದೆ. ಆವಾಗಲೋ ಇದೊಂದು ಬರಿಯ ಪದ್ಯ. ಆದರೆ ಈಗ ನೋಡಿದರೆ ಗ್ರಾಹಕ ಸಂಸ್ಕೃತಿ, ಕೂಗಿಕೂಗಿ ಕರೆಯುವ ಜಾಹೀರಾತು ಸಂಸ್ಕೃತಿ ಎಲ್ಲವಕ್ಕೆ ರೂಪಕದಂತಿಲ್ಲವೆ ಇದು?
ಇಂಥ ಹಾಡುಗಳೇ ಪುಟ್ಟಮಕ್ಕಳಿಗೆ ವೇದಸಮಾನ ರಚನೆಗಳು. ವೇದ ನಮಗೆ ಅರ್ಥವಾಗದಿರಬಹುದು, ಆದರೆ ಇಂಥ ಪ್ರಾದೇಶಿಕ ಮಣ್ಣಿನಿಂದ ಎದ್ದ ಪದ್ಯಗಳು ತಿಳಿಪಥ್ಯದಂತೆ ಮಗುವಿನ ಮನಸ್ಸಿಗೆ ಇಳಿಯುತ್ತವೆ. ಮುಂದೆ ಎಂದೋ ಒಂದು ದಿನ ತಮ್ಮ ನಿಜದರ್ಶನ ಬಿಟ್ಟುಕೊಡುತ್ತವೆ. ಆ ಅಗತ್ಯ ಮನಗಂಡದ್ದರಿಂದಲೇ ಅಂದು ಪಂಜೆ ಮಂಗೇಶರಾಯರು, ಉಗ್ರಾಣ ಮಂಗೇಶರಾಯರು, ಉಳ್ಳಾಲ ಮಂಗೇಶರಾಯರು ಹೊಯ್ಸಳ, ನಂತರದ ಅನೇಕಾನೇಕ ಮಕ್ಕಳ ಸಾಹಿತ್ಯ ರಚನಕಾರರು ಇವತ್ತು ಮಹಾನ್ ಲೇಖಕರಾಗಿ ಕಾಣುತ್ತಾರೆ. ನಮ್ಮ ಬಾಳುವೆಯ ಒಳಗಿರುವ ಶಬ್ದಗಳನ್ನೇ ಬಳಸಿ ಇಲ್ಲಿನ ಹಕ್ಕಿ ಪ್ರಾಣಿ ಗಿಡಮರಗಳ ಹೆಸರುಗಳನ್ನೇ ಬಳಸಿ ಅವೆಲ್ಲಕ್ಕೂ ಜೀವಕೊಟ್ಟು ಹಾಡುಕಟ್ಟಿ ನಮ್ಮ ಭಾವಸ್ತರಗಳನ್ನು ಉದ್ದೀಪಿಸಿದವರು ಅವರು.
ಆದರೆ ಇವತ್ತು?
ನಮ್ಮದೇ ಹಕ್ಕಿ ಗಿಡ ಮರ ಬಳ್ಳಿಗಳನ್ನು ನೋಡುತ್ತ, ಹೆಸರೇ ತಿಳಿಯದೆ ಮಗು, ‘ಇದು ಯಾವ ಹಕ್ಕಿ? ಇದು ಯಾವ ಪ್ರಾಣಿ, ಇದು ಯಾವ ಎಲೆ, ಗಿಡ, ಮರ?’ ಇತ್ಯಾದಿ ಪ್ರಶ್ನೆಗಳನ್ನು ಕೇಳುವ ಪರಿಸ್ಥಿತಿ! ಚರಾಚರಗಳೆಲ್ಲ ಇಂಗ್ಲಿಷ್ ಹೆಸರಿನೊಂದಿಗೆ ಪರಿಚಯವಾಗುತ್ತಿವೆ. ತಾತ ಅಜ್ಜಿ ಮೊಮ್ಮಕ್ಕಳು ಪರಸ್ಪರ ಮೂಕವಾಗಿ ನೋಡುತ್ತ ಕುಳಿತುಕೊಳ್ಳುವ ಪ್ರಸಂಗ ಎದುರಾಗುತ್ತಿವೆ. ಸಂಬಂಧಗಳು ಶಿಥಿಲವಾಗುತ್ತಿವೆ. ಸಂಬಂಧಗಳ ಅಂಟಿಗೆ ಭಾಷೆ ಮೊದಲ ಮೆಟ್ಟಿಲು ಎಂಬುದನ್ನು ತಿಳಿದೂ ತಿಳಿವನ್ನು ತಳ್ಳಿಕೊಂಡಿದ್ದೇವೆ. ಈ ಕಾಯಿಲೆ ನಮ್ಮಲ್ಲಿ ಇನ್ನೂ ಉಲ್ಬಣಿಸುವಂತೆ ನಮ್ಮ ಕನ್ನಡ ಸರಕಾರವೇ ಪ್ರೇರೇಪಿಸುತ್ತಿದೆ! ದುರಂತವಿರುವುದು ಇಲ್ಲಿ!
ವಿಷಾದವೆಂದರೆ ಇವತ್ತು ಹೆತ್ತ ತಂದೆತಾಯಿಯರಿಗೇ ಕನ್ನಡ ಬೇಡವಾಗಿರುವುದು! ಎಂದರೆ ಭಾಷೆಯ ಮೂಲಸ್ಥಾನಕ್ಕೇ ಧಕ್ಕೆ ಬಂದಿದೆ. ಹೆಚ್ಚು ಅವಕಾಶದ ಇನ್ನೊಂದರ ಅತಿಮೋಹದಲ್ಲಿ ನಮ್ಮದೇ ಭಾಷೆ ನಮಗೆ ಬೇಡ ಎಂದರೆ ಒಟ್ಟಾರೆ ಇಲ್ಲಿನ ಬಾಳಿಬದುಕಿದ ಮಂದಿ ಸಾವಧಾನದಲ್ಲಿ ಕಟ್ಟಿಕೊಂಡು ಬಂದ ಒಂದು ಮಹಾನ್ ಪರಂಪರೆಯೇ ಬೇಡ, ಸ್ವಂತ ನೆಲದ ಗಂಧವೇ ಬೇಡ, ನಮ್ಮ ರಂಗಭೂಮಿ, ಸಿನೆಮಾ, ಸಾಹಿತ್ಯ ಸಂಗೀತ ಕಾವ್ಯ, ಜನಪದ, ಯಾವುದೂ ಬೇಡ ನಮ್ಮ ಮಕ್ಕಳಿಗೆ -ಎಂದು ನಾವೇ ದೂರ ದೂಡಿದ ಹಾಗೆ. ಆ ಹಕ್ಕು ನಮಗೆ ಕೊಟ್ಟವರು ಯಾರು? ಅದು ನಮ್ಮ ಮಕ್ಕಳ ಆಸ್ತಿ. ಅದರ ಆಯ್ಕೆಯೋ ನಿರಾಕರಣೆಯೋ ಮಕ್ಕಳ ಹಕ್ಕು. ಏನೂ ತಿಳಿಯದ ಅವರ ಶೈಶವದಲ್ಲಿ ನಾವು ಹೆತ್ತವರು ಕಲಿಕಾ ಮಾಧ್ಯಮವನ್ನು ನಿರ್ಧರಿಸುವುದು ಮಕ್ಕಳಿಗೆ ಮಾಡುವ ಮಹಾ ದ್ರೋಹ. ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಸಮಾಜ ವಿಜ್ಞಾನದ, ಭಾವಕೋಶದ, ಸಂಸ್ಕೃತಿ ಪರಂಪರೆಯ ಸಮ್ಯಕ್ ಬೀಗದ ಕೈ. ಒಂದು ಹಂತದ ವರೆಗೆ ಮಕ್ಕಳು ಅವರವರ ಪ್ರದೇಶ ಭಾಷೆಯಲ್ಲೇ ಕಲಿಯುತ್ತ ಮುಂದಿನದನ್ನು ಬೇಕಾದರೆ ಅವರಿಗೆ ಬಿಡೋಣ. ಹೆತ್ತವರೆಂದ ಮಾತ್ರಕ್ಕೆ ಮಕ್ಕಳ ಕುರಿತ ಎಲ್ಲ ಹಕ್ಕೂ ನಮಗಿದೆ ಅಂತ ತಿಳಿಯುವುದೇ ಅಸಂಬದ್ಧವಷ್ಟೆ?
ಇಷ್ಟಕ್ಕೂ ಸ್ವಂತಭಾಷೆಯನ್ನು ಒತ್ತೆಯಿಟ್ಟು ಪರಭಾಷೆಯ ಮೊರೆಹೊಗುವ ಜಾಯಮಾನ ಯಾಕೆ ಉದ್ಭವವಾಗಿದೆ? ಆ ಪರಭಾಷೆ ಜಾಗತಿಕವಾಗಿ ಹೆಚ್ಚಿಗೆ ಶಕ್ತಿಯುತವಾಗಿರುವುದರಿಂದ. ಇಂಗ್ಲಿಷ್ ಬದಲು, ಜರ್ಮನ್ ಅಥವಾ ಇನ್ಯಾವುದೇ ಭಾಷೆ ಹೆಚ್ಚು ಶಕ್ತಿಯುತವಾದರೆ ಆ ಭಾಷೆಗೆ ಅತ್ತ ಹಾರುವ ಜಾಯಮಾನ ಇದು. ಎಂದರೆ ನಮಗಿರುವುದು ಸಂಪೂರ್ಣವಾಗಿ ಇಂಗ್ಲಿಷ್ ಮೇಲಿನ ಪ್ರೀತಿಯೂ ಅಲ್ಲ, ಮಾತೃಭಾಷೆಯ ಮೇಲಿನ ಅನಾದರವೂ ಅಲ್ಲ. ಎಂದ ಮೇಲೆ ನಮ್ಮನ್ನು ಕವಿದ ಮಂಕನ್ನು ನಾವೇ ಕಳಚಿ ಬಿಸಾಡಬೇಕಾಗಿದೆ. ಮಾತೃಭಾಷೆಯಿಂದ ಮಗುವನ್ನು ಅಗಲಿಸುವುದು ತಾಯಿಯಿಂದ ಮಗುವನ್ನು ಅಗಲಿಸಿದಷ್ಟೇ ಪಾಪ ಕೃತ್ಯ.
ಈಗ ಆಗಬೇಕಾಗಿದ್ದು ಇಷ್ಟೆ
ಮೊತ್ತಮೊದಲು ಹೆತ್ತವರ ಕಣ್ರೆರೆಯುವಂತೆ ಮಾಡಬೇಕು. ಇವತ್ತಿಗೆ ಸರಿಯಾಗಿ ಕನ್ನಡಶಾಲೆಗಳನ್ನು ಅವಶ್ಯವಾಗಿ ಮೇಲ್ದರ್ಜೆಗೆ ಏರಿಸಬೇಕು. ಕನ್ನಡಶಾಲೆಗೆ ಕಳಿಸಲು ಹೆತ್ತವರು ತಾವಾಗಿ ಮುಂಬರುವಂತೆ ಕನ್ನಡಶಾಲೆಗಳು ಆಧುನಿಕವಾಗಿ ಸಜ್ಜಾಗಬೇಕು. ಇಂಗ್ಲಿಷ್ ಒಂದು ಮಾಧ್ಯಮವಾಗಿ ಅಲ್ಲ, ಒಂದು ಭಾಷೆಯಾಗಿ ಪ್ರಾಥಮಿಕದಿಂದಲೇ ಪಠ್ಯದಲ್ಲಿರಬೇಕು. ಪ್ರಾಥಮಿಕ ಶಾಲೆಗಳನ್ನು ಪುಸ್ತಕದ ಭಾರದಿಂದ ದೂರ ಮಾಡಿ ಮಾತೃಭಾಷೆಯ ಮೂಲಕ ಸರಳವಾಗಿ ಕಲಿಸುವ ಕಾಲ ಮತ್ತೆ ಬರಬೇಕು. ಮಕ್ಕಳ ಮನಸ್ಸನ್ನು ಹಸನುಗೊಳಿಸುವ ಕೆಲಸಕ್ಕೆ ಮಾತೃಭಾಷೆಗೇ ಮೊದಲ ಆದ್ಯತೆ ನೀಡಬೇಕು. ಅಂಕದ ಬೇಟೆಯಿಂದ ಶಿಕ್ಷಣವನ್ನು ಮುಕ್ತಗೊಳಿಸ ಬೇಕು. ತಾನು ಬೆಳೆಯುವ ಪ್ರದೇಶದ ಸಕಲವೂ, ಸಕಲಜ್ಞಾನವೂ ಮೊದಲಾದಿಯಲ್ಲಿ ಮಗುವಿನ ಭಾವಮಜ್ಜೆಯೊಳಗೆ ಇಳಿಯುವುದು ನೆಲದಭಾಷೆಯಲ್ಲಿ ಮಾತ್ರ ಸಾಧ್ಯ. ಆ ಮೇಲೆ ನೀವು ವಿಜ್ಞಾನ ತಂತ್ರಜ್ಞಾನ ಸಾಹಿತ್ಯ ಸಂಗೀತ ಯಾವುದೇ ಶಿಕ್ಷಣ ನೀಡಿ, ಯಾವುದೇ ಭಾಷೆಯಲ್ಲಿ ನೀಡಿ, ಮಗು ಸುತ್ತಮುತ್ತಣ ಅನೇಕ ವಿಚಾರಗಳ ಸಮೇತ ಅವನ್ನು ಗ್ರಹಿಸಲು ಸಿದ್ದವಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯತೆಯ ಭದ್ರ ಬುನಾದಿ ಸಿಕ್ಕಿತೆಂದರೆ ಮುಂದೆ ಪ್ರಪಂಚದಲ್ಲಿ ಎಲ್ಲಿದ್ದರೂ ಆ ಮಗು ಬದುಕಿನ ಸವಾಲುಗಳನ್ನು ಎದುರಿಸಲು ಸಮರ್ಥವಾಗುತ್ತದೆ.
ಆದರೆ ಹೆತ್ತವರ ಕಣ್ತೆಯುವುದು ಇರಲಿ, ಸರಕಾರಗಳೂ ತಮ್ಮ ನಾಡಭಾಷೆಯ ಕುರಿತು ಕುರುಡಾಗಿವೆ. ನಮ್ಮ ಕನ್ನಡನಾಡಿನ ಸರಕಾರವೇ ಕನ್ನಡವನ್ನು ಕಡೆಗಣಿಸ ಹೊರಟಿದೆ. ಇಂಗ್ಲಿಷ್ ಮಾಧ್ಯಮದ ಕುರಿತು ಎದೆ ಒಡೆಯುಂಥ ಫರ್ಮಾನನ್ನು (ಅಚ್ಚಗನ್ನಡದಲ್ಲಿಯೇ) ಹೊರಡಿಸಿದ ನಮ್ಮ ಸರಕಾರದ ತನ್ನ ಐಲುಪೈಲು ಶಿಕ್ಷಣ ನೀತಿಗೆ ಏನು ಹೇಳೋಣ. ಇಂಥ ನಿರಭಿಮಾನಿ ಸರಕಾರಗಳು ಇದ್ದರೇನು ಇಲ್ಲದಿದ್ದರೇನು? ಭಾವನೆಗಳನ್ನು ಹಸಿಗೊಳಿಸಲಾರದ ಶಿಕ್ಷಣನೀತಿ ಸೃಷ್ಟಿ ಮಾಡುವುದು ನಿರ್ಭಾವ ವಿದ್ಯಾವಂತ ವರ್ಗವನ್ನು. ಅಂತಿಮವಾಗಿ ಇದು ಪರಿಣಮಿಸುವುದು ಪರಿಸರ ನಾಶ, ಮಾನವತೆಯ ನಾಶ. ಭ್ರಷ್ಟತೆ, ಹೆಣ್ಣೂ ಸೇರಿ ಈ ಭೂಮಿ ಮೇಲಿನ ಎಲ್ಲವೂ ಇರುವುದು ತಮ್ಮ ಭೋಗಕ್ಕೆ ಎಂಬ ಅವಿವೇಕದಲ್ಲಿ.
ಒಮ್ಮೆ ಕರ್ನಾಟಕ ಸರಕಾರದ ಸುತ್ತೋಲೆಯನ್ನು ಗಮನಿಸಿ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಶಿಕ್ಷಕರನ್ನು ತರಬೇತಿಗೊಳಿಸಿ, ಆ ಮೇಲೆ ಮಕ್ಕಳಿಗೆ ಆ ಮಾಧ್ಯಮದಲ್ಲಿ ಕಲಿಸಲು ಹೊರಡಿಸುವ ತಲೆಕೆಳಗೆ ವಿಚಾರ ಅದಕ್ಕೆ ಬಂದಿತಾದರೂ ಹೇಗೆ? ಮಕ್ಕಳಮನಸ್ಸು ಶಿಕ್ಷಣ ಇತ್ಯಾದಿಗಳ ಬಗ್ಗೆ ಯಾವ ಅರಿವೂ ಇಲ್ಲದವರೆಲ್ಲ ಕಾನೂನು ಮಾಡುವಂತಾಯಿತೆ! ಬೆಳಿಗ್ಗೆ ನಾಡಗೀತೆಯೊಂದಿಗೆ ಶಾಲೆಯನ್ನು ಆರಂಭಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಮುಂದರಿಸುವ ದೌರ್ಭಾಗ್ಯ ನಮ್ಮದಾಗುತ್ತಲಿದೆ!
ವಿಕಾಸಗೊಳ್ಳುತ್ತಲೇ ಹೋಗುತ್ತಿರುವ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ತಕ್ಕ ಶಬ್ದಗಳು ಕನ್ನಡದಲಿಲ್ಲ ಎಂಬೊಂದು ಸಾರ್ವತ್ರಿಕ ಪುಕಾರಿದೆ. ಕನ್ನಡಕ್ಕೆ ಮಾತ್ರವಲ್ಲ ಈ ದೇಶದ ಪ್ರಾದೇಶಿಕ ಭಾಷೆಗಳ ಬಗೆಗೇ ಇರುವ ಪುಕಾರು ಇದು. ಆದರೆ ಇದು ಶಬ್ದಗಳನ್ನು ನಾವು ಸೃಷ್ಟಿ ಮಾಡುವ ಶ್ರಮಕ್ಕೇ ಹೋಗದೆ ಮಾಡುವ ಆಪಾದನೆ. ನಮ್ಮ ಕೋ. ಲ. ಕಾರಂತರಂಥವರು (ಕುಂದಾಪುರದಲ್ಲಿದ್ದ ಅಸಾಮಾನ್ಯ ಶಿಕ್ಷಕ. ತೋಟಗಾರಿಕಾ ತಜ್ಞ. ಮತ್ತು ಡಾ. ಶಿವರಾಮ ಕಾರಂತರ ಅಣ್ಣ) ‘ಲಘುವಿಜ್ಞಾನ’ ಎಂಬ ಅಂದಿನ ವಿಜ್ಞಾನಪಠ್ಯವನ್ನು ಸಿದ್ಧಗೊಳಿಸುವ ವೇಳೆ ಅಗತ್ಯಕ್ಕೆ ತಕ್ಕ ವಿಜ್ಞಾನ ಶಬ್ದಗಳನ್ನು ಹುಟ್ಟುಹಾಕಿ ಭಾಷೆಯೊಳಗೆ ಸೇರಿಸಿಬಿಟ್ಟಿದ್ದರು. ಹೇಗೆಂದರೆ ಅವು ಕಬ್ಬಿಣದ ಕಡಲೆಯಂತಿರದೆ ಸುಲಭದಲ್ಲಿ ಅರ್ಥವಾಗುವಂತೆ. ಊರಮಂದಿಯೊಡನೆ ಒಡನಾಡುತಿದ್ದರೆ ಭಾಷೆಯ ಒಡನಾಟವೂ ಆಗುತ್ತ, ಸ್ವತಃ ಆ ಒಡನಾಟವೇ ಹೊಸಶಬ್ದಗಳನ್ನು ಹೊಳೆಸುತ್ತದೆ ಎನ್ನುತಿದ್ದರು ಅವರು. ದೇಹದ ವಿವಿಧಾಂಗಗಳಿಗೆ, ಸೂಕ್ಷಾಂಗಗಳಿಗೂ ಹಳ್ಳಿಹಳ್ಳಿಗಳಲ್ಲಿ ಕನ್ನಡದ್ದೇ ಆದ ಹೆಸರುಗಳಿವೆ. ಆದರೆ ಬಳಕೆಯೇ ಇಲ್ಲದೆ ಅವುಗಳಲ್ಲಿ ಅನೇಕವು ಬಿದ್ದುಹೋಗಿವೆ ಎನ್ನುತಿದ್ದರು. ಇದು ಶಬ್ದಮೋಹವಲ್ಲ. ಶಬ್ದಗಳೊಂದಿಗೆ ನಮ್ಮ ಭಾವನೆಗಳೂ ಕೂಡಿ ಮನಸ್ಸನ್ನು ನಮ್ಮದೇ ಪರಿಸರದೊಂದಿಗೆ ಸಹಜವಾಗಿ ಹೊಂದಿಸುವ ಮಾರ್ಗ. ನಾವು ಆ ಮಾರ್ಗವನ್ನೇ ಮುಚ್ಚುತಿದ್ದೇವೆ. ಮಕ್ಕಳನ್ನು ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ, ಒಟ್ಟಾರೆಯಾಗಿ ಧನ ಸಂಪಾದನೆಯೊಂದೇ ಆದ್ಯಂತವಾಗುವ ಕೆಡುಗಾಲಕ್ಕೆ ತಳ್ಳುತಿದ್ದೇವೆ.
ಸಂಪೂರ್ಣ ಕನ್ನಡಮಾಧ್ಯಮದಲ್ಲಿಯೇ ಕಲಿತು ಬಂದ ಪೀಳಿಗೆಯವಳು ನಾನು. ಮುಂದೆ ನಮ್ಮನಮ್ಮ ಕ್ಷೇತ್ರದಲ್ಲಿ ಅಭಿರುಚಿಯನ್ನು ಬೆಳೆಸಿಕೊಳ್ಳುವಲ್ಲಿ ಕನ್ನಡಮಾಧ್ಯಮ ಎಂದೂ ನಮ್ಮಲ್ಲಿ ಕೀಳರಿಮೆ ಮೂಡಿಸಿಲ್ಲ. ಬದಲಾಗಿ ಪೂರಕವಾಗಿಯೇ ಒದಗಿ ಬಂದಿದೆ ಎನ್ನಲು ಹೆಮ್ಮೆಪಡುತ್ತೇನೆ. ನಾನು ಕಲಿತ ಕುಂದಾಪುರದ ‘ಬಂಟ್ವಾಳ ರಘುನಾಥರಾಯರ ಹಿಂದೂ ಪ್ರಾಥಮಿಕ ಶಾಲೆ’- ಯ ಮಧುರನೆನಪು ಅಮೃತಕಲಶದಂತೆ ನನ್ನನ್ನು ಕಾಪಾಡುತ್ತಿದೆ.
ನಾನು ಮೂರನೆಯೋ ನಾಲ್ಕನೆಯೋ ತರಗತಿಯಲ್ಲಿದ್ದಾಗೊಮ್ಮೆ, ಸಂಜೆ ಸುಮಾರು ನಾಲ್ಕು ಗಂಟೆಯಿರಬಹದು. ಮಾಸ್ಟರು ನಮ್ಮನೆಲ್ಲ ಶಾಲೆಯ ಹಿಂದಿನಂಗಳದಲ್ಲಿ ಕೂಡಿಸಿದರು. ‘ಈಗ ಇಂಥವರೆಂಬವರು (ಹೆಸರು ಮರೆತಿದೆ) ಬರುತ್ತಾರೆ. ಅವರು ಕಾವ್ಯ ಹಾಡುತ್ತಾರೆ. ಮಾತಾಡದೆ ಕೈಕಟ್ಟಿ ಕುಳಿತುಕೊಳ್ಳಿ’ ಅಂತಂದರು. ತುಸು ಹೊತ್ತಿನಲ್ಲಿಯೇ ಕಚ್ಚೆಪಂಚೆ ಕಿತ್ತಳೆವರ್ಣದ ಮೇಲಂಗಿ ಧರಿಸಿದವರೊಬ್ಬರು ಬಂದರು. ಮೊದಲು ಸಂಕ್ಷಿಪ್ತವಾಗಿ ಹರಿಶ್ಚಂದ್ರನ ಕಥೆ ಹೇಳಿ, ಚಂದ್ರಮತೀ ವಿಲಾಪವೆಂಬ ಕಾವ್ಯಭಾಗವನ್ನು ರಾಗವಾಗಿ ಹೇಳುತ್ತ ಅಭಿನಯಿಸ ತೊಡಗಿದರು. ಅವರು ಬಾಡುತ್ತ ಬಳುಕುತ್ತ ‘ಏನೆಲೇ ಎನಲೇ ಮಗನೇ…’ ಅಂತ, ಶೋಕಾರ್ತರಾಗಿ ಮಾಡಿದ ಅಭಿನಯ ನೋಡುತ್ತ ನಮಗೆ ಗಂಟಲು ಕಟ್ಟಿಕಟ್ಟಿ ಬಂದ ನೆನಪು ಮರೆಯುವುದೇ ಇಲ್ಲ. ಹೇಳಿಕೇಳಿ ಪ್ರಾಥಮಿಕಶಾಲೆಯ ಮಕ್ಕಳು ನಾವು. ನಮ್ಮ ಮುಂದೆ (ದೊಡ್ಡವರಾದ ಮೇಲೆ ತಿಳಿದು ಬಂದಂತೆ) ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯಭಾಗ! ಆ ಶೋಕ ಆ ದುಃಖಾರ್ತತೆ ನಮ್ಮನ್ನು ಹೇಗೆ ತಟ್ಟಿತ್ತು! ಸಣ್ಣಮಕ್ಕಳೆದುರು ಅವಕ್ಕೆ ಅರ್ಥವಾಗುವಂಥ ಸಣ್ಣಸಣ್ಣ ಸರಳ ಪದ್ಯಗಳು ಇರಬೇಕು ಎನ್ನುತ್ತಾರಲ್ಲ? ನಮಗಂತೂ ಅತಿಚಿಕ್ಕ ಕ್ಲಾಸಿನಲ್ಲಿಯೇ ದೊಡ್ಡದೊಡ್ಡ ಕಾವ್ಯದ ಭಾಗಗಳೆಲ್ಲ ಇದ್ದುವು. ಅಂದು ಅರ್ಥವೇ ಆಗದೆ ಉರುಹೊಡೆದ ಎಷ್ಟೋ ಭಾಗಗಳು ಬದುಕಿನ ದಾರಿಯಲ್ಲಿ ನಮ್ಮನಮ್ಮ ಸಂದರ್ಭಕ್ಕೆ ಅನುಗುಣವಾಗಿ ಮೆಲ್ಲ ನೆನಪಿನ ಕೋಶದಿಂದ ಹೊರಬರುತ್ತ, ಅರ್ಥ ಹೊಳೆಸುತ್ತ ಮಾತಾಡುವ ಪರಿ, ಹೇಗೆಂದು ಹೇಳುವುದು? ಈ ಕ್ಷಣ ಅರ್ಥವಾಗುವವು ಬೇರೆ, ಇನ್ಯಾವಾಗಲೋ ಅರ್ಥವಾಗುವ ಸಂವಾದಿಸುವ ವಿಚಾರಗಳು ಬೇರೆ. ಎರಡಕ್ಕೂ ನಮ್ಮ ಕಾಲದ ಪಠ್ಯದಲ್ಲಿ ಸ್ಥಾನವಿತ್ತು. ಮಕ್ಕಳಿಗೆ ಎಲ್ಲಿ ಕಷ್ಟ, ಏನು ಕಷ್ಟ, ಅವು ಮುಂದೆ ಲಾಭಕರವಾಗುತ್ತಂವೆಯೆ ಎಂಬ ಕಲ್ಪನೆ ನಮ್ಮ ಶಾಲೆಯ ಅಧ್ಯಾಪಕರಿಗೆ ಅಂದು ಇದ್ದಿರಬೇಕು. ಇಲ್ಲವಾದರೆ ಚಂದ್ರಮತಿಯ ದುಃಖವನ್ನು ಕಾವ್ಯಾಭಿನಯದಲ್ಲಿ ಕೇಳುವ ಅವಕಾಶ ನಮಗೆಲ್ಲಿ ದೊರಕುತಿತ್ತು?
*
ಇವತ್ತು ನಾವು ಮಕ್ಕಳಲ್ಲಿನ ಆಪ್ಯಾಯಮಾನ ಮುಗ್ಧತೆಯನ್ನು ಕದಡದಂತಹ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದೆ. ನಮ್ಮಲ್ಲೆ ಕಳೆದು ಹೋಗಿರಬಹುದಾದ ಮುಗ್ಧತೆಯನ್ನು ಪುನಶ್ಚೇತನಗೊಳಿಸಿಕೊಳ್ಳುವ ಪ್ರಕ್ರಿಯೆಯೂ ಜತೆಜತೆಯಾಗಿ ಸಾಗಬೇಕಿದೆ. ಆದರೆ ನಾವು ಮಾಡುತ್ತಿರುವದು, ನಮ್ಮ ಆಕಾಂಕ್ಷೆಗಳನ್ನು ಮಕ್ಕಳ ಹೆಗಲಮೇಲೆ ಹೇರುವ, ಅವರ ಸಹಜವಾದ ಉಡ್ಡಯನವನ್ನು ಕೃತಕಕ್ಕೆ ನೂಕುವ ಅರ್ಥಹೀನ ಕ್ರಿಯೆ. ‘ಬಾನೊಳಗೆ ಹಾರಿ ಬಲು ದಣಿವಾಯ್ತು ನಿನಗೆ’ ಎಂಬ ಜೇಡ ನೊಳವನ್ನು ಕರೆಯುವ ಹಾಡು ನೆನಪಾಗುತ್ತಿಲ್ಲವೆ?
ನಮ್ಮ ಅಪ್ರತಿಮ ನಾಟಕಕಾರ ಚಿಂತಕ, ಗಿರೀಶ್ ಕಾರ್ನಾಡ್ ಅವರು ಇಂಗ್ಲಿಷ್‌ನಲ್ಲಿ ಬರೆಯುವುದನ್ನು ಬಿಟ್ಟು ತನಗೇ ಅರಿವಾಗದೆ ಕನ್ನಡಕ್ಕೆ ಬಂದ ಅಗೋಚರ ಕಾರಣವಾದರೂ ಏನಿರಬಹುದು?
ಚಿಂತಿಸೋಣ.
ಕನ್ನಡಮ್ಮನ ಪತ್ರ
ನನ್ನಷ್ಟಕ್ಕೆ ನಾನು ಬದುಕಿಕೊಂಡಿರುವವಳು
ನನ್ನ ಮನೆಯಲಿ ದೊಡ್ಡ ಸಂಸಾರದಲ್ಲಿ
ಹುಟ್ಟುನೆಲ ಸೃಷ್ಟಿಸಿದ ಭಾಷೆಯಲಿ ನೆಲೆಸಿ
ಸರಸ ರಸ ವಿರಸ ಕಸ ಸಮರಸ ಸಮನ್ವಯದ
ಸಮ-ಆಚಾರ ವಿಚಾರ ತರ್ಕಸುಖದಲ್ಲಿ
ಕವಿಕಾವ್ಯ ಕೋವಿದ ದಾರ್ಶನಿಕ ನಾಗರಿಕ
ಸಮಸ್ತರನು ಆಲಿಸುತ ಹಿರಿ ಹೆಮ್ಮೆಯಲ್ಲಿ
ಕುಳಿತಿದ್ದೆ ಮೈ ಮರೆತು ಕುತ್ತು ಬರುವುದರಿಯದೇ
ಹಚ್ಚಿಟ್ಟ ದೀಪಕ್ಕೆ ಊದಿದಿರಿ ಗಾಳಿ
ಹೊತ್ತು ನೋಡಿ ಮೆಲ್ಲ ಹುನ್ನಾರ ಮಾಡಿ
ನನ್ನ ಆಸನವ ಜಾರಿಸಲು ಹೊರಟಿರಿ
ಅಮ್ಮನಾಗಿದ್ದೆ ಮಮ್ಮಿಯನು ತಂದಿರಿ
ಅಪ್ಪನನು ಹೊರಕಳಿಸಿ ಡ್ಯಾಡಿಯನು ತಂದಿರಿ
ಗಂಡ ಹೆಂಡತಿಯನ್ನು ಹೆಂಡತಿಯು ಗಂಡನನು
ಹೆಸರ ಪಲ್ಲಟಿಸಿ ಕರೆಯತೊಡಗಿದಿರಿ
ಅಣ್ಣ ಅಕ್ಕ ತಮ್ಮ ತಂಗಿಯರ ದೂಡಿ
ಸಿಸ್ಟರ್ಸ್ ಆ್ಯಂಡ್ ಬ್ರದರ್ಸ್ನ ಒಳಕರೆದಿರಿ
ಮನೆಯನ್ನು ಮನೆಯೆನ್ನೆ ಹಿಂಜರಿದಿರಿ
ಅಡುಗೆ ಮನೆ, ಉಗ್ರಾಣ, ಊಟದ ಕೋಣೆ, ಜಗಲಿ
ಮಾಡು ಚಾವಡಿ ಮಹಡಿ ನಾಮವನೆ ಅಳಿಸಿ
ಪಾತ್ರೆ ಪರಡಿ ಚಮಚ ಸೌಟುಗಳಿಗೂ
ಊಟ ತಿಂಡಿ ತಿನಿಸು ತ್ರಿಕಾಲಗಳಿಗೂ
ದವಸ ಧಾನ್ಯ ಸಿರಿ ದಿನಸಿಗಳಿಗೂ
ಮಳೆಗೂ ಚಳಿಗೂ ಉರಿ ಬಿಸಿಲು ಸೆಕೆಗೂ
ನೆಲಕೂ ಬಾನಿಗೂ ಬ್ರಹ್ಮಾಂಡಕೂ
ಜೀವಕ್ಕೆ ಜೀವನಕೆ, ನಡುವೆ ಸುಳಿವಾತ್ಮಕ್ಕೂ
ಸಕಲಾತಿ ಸಕಲದ ನಖಶಿಖಾಂತಕೂ
ದೂರ ದೇಶದ ಭಾಷೆ ಅಂಗಿ ತೊಡಿಸಿದಿರಿ
ಮಿದುಳಿನಲಿ ಅದರದೇ ಗಿಡ ನೆಟ್ಟಿರಿ
ಭಾವ ಜೀರ್ಣಾಂಗಕ್ಕೂ ಅದರ ಫಲ ಉಣಿಸಿದಿರಿ
ವಿಶ್ವದಾಕೃತಿಯಲ್ಲಿ ಒಂದಾಗಿಯೂ ನಾವು
ನಮ್ಮದೇ ವಿಶಿಷ್ಟಾಕೃತಿಯುಳ್ಳ ಅದರ ಒಂದಂಗ
ಎಂಬ ವಿವೇಕ ಶಿಖೆಯ ಕತ್ತರಿಸಿ ಎಸೆದು
ವಿಸ್ಮೃತಿಗೆ ವಿಕೃತಿಗೆ ಒಳಗಾದಿರಿ
ಒಂದು ನುಡಿಯನ್ನೂ ನನ್ನೊಡನೆ ಕೇಳದೆಯೆ
ನಿಮ್ಮ ಯಜಮಾನಿಕೆ ಯಾರು ನೀಡದೆಯೂ ನಡೆಸಿದಿರಿ
ಆಚೆಮನೆಯಮ್ಮನನೇ ನೆಚ್ಚಿಕೊಂಡಿರಿ ನೀವು
ನನಗೆ ನಾನೇ ಕಾಣದ ಹಾಗೆ ಕಣ್ಕಟ್ಟಿ,
ಸಾರಾಸಗಟಾಗಿ ನನ್ನ ಬಿಟ್ಟುಹಾಕಿದಿರಿ
ಹೇಳಿದಷ್ಟೂ ಉಳಿವ ಕಂಡಷ್ಟೂ ಮಿಗುವ
ಆಟ ನೋಡುತ್ತ ಸುಮ್ಮನಿದ್ದೆನು ನಾನು,
ಇವರಲ್ಲಿ ನಾನೆಲ್ಲಿ ಎಂಬ ಹಾಡಲಿ ನೆಲೆಸಿ
ಆಲಾಪನೆಯಲ್ಲಿಯೇ ಕಾಲಯಾಪನೆಯ ಮಾಡುತ್ತ
ನಿತ್ಯೋತ್ಸವದ ಕನಸ ನಿತ್ಯ ಕಾಣುತ್ತ
ಯುಗ ಯುಗಾದಿಗಳೆಷ್ಟು ಕಳೆದವೋ!
ಕಾದೆ ಮತ್ತೂ ಕಾದೆ- ಇಷ್ಟೆ, ಇನ್ನು ಬರುವರು ಎಂದು
ಇಂದು ನಿಲ್ಲುವರು ನಿಂತು ನಾಳೆಯಾದರೂ ಅರಿತು
ಮರೆತ ದಾರಿಗೆ ಮರಳಿ ಬಂದೇ ಬರುವರು ಎಂದು
ಮಕ್ಕಳವರು ನನ್ನ, ತಪ್ಪಿದರೂ ದಾರಿ, ಸರಿಗೆ ತಿರುಗುವರು
ನಮ್ಮದೇ ತೋಟದ ಹೂವ ಬುಟ್ಟಿ ತುಂಬಾ ತಂದು
ಅಮ್ಮ ಕ್ಷಮಿಸೆನ್ನುತ ಮುಡಿಗೆ ಮುಡಿಸುವರೆಂದು
ಆದರಕಟಾ! ಬರಲಿಲ್ಲ ನೀವು- ಬದಲು ಮುಂದರಿದಿರಿ
ಮಾತು ಮಾತಾಗದೆ ಶಬ್ದ ಗದ್ದಲ ಧಾರೆ
ಸನ್ನಿಪಾತವು ನಿಮ್ಮ ತಲೆ ತೊಳೆಯುತಿಹುದು
*
ಕಣ್ಣರಚನೆಯ ಒಳಗೆ ದೃಷ್ಟಿ ಬೆಳಕಿಲ್ಲದ
ತೆಳುತಿಳಿವು ಜೀವಿಗಳ ತವರು ನಾನಾದೆನೇ?
ತನ್ನ ಭಾಷೆಗೆ ತಾನೆ ವೈರಸವಾಪ ಹೀನಕುಡಿಗಳಿಗೆ
ಜನ್ಮವಿತ್ತೆನೇ ಮೋಸಗೊಂಡೆನೇ ನಾನು
ಹೆತ್ತ ಮಕ್ಕಳೆ ಕೊಲುವ ತಾಯಿಯಾದೆನೇಂ?
ತುತ್ತಿಟ್ಟು ಮುದ್ದಾಡಿ ನಗಿಸಿ ಹಾಲೂಡಿ
ತಟ್ಟಿ ತೇಗಿಸಿ ಜೋಲಿಯಲಿಟ್ಟು ಜೋಗುಳದಿ
ತೂಗಿ ನಾ ಸಲಹಿರುವ ನಾಡವರೆ, ಕನ್ನಡರೆ,
“ಪರಿತಾಪದಲಿ ಬೆಂದು ಅರೆಜೀವವಾಗಿಹೆನು
ತೀರಿಕೊಳ್ಳಲುಬಹುದು ಯಾವ ಕ್ಷಣಕೂ
ಏಳಿ, ತೊದಲಿದರೂ ಸರಿ ಒಮ್ಮೆ ‘ಅಮ್ಮ’ ಎನ್ನಿ, ಬನ್ನಿ
ಅಂತಿಮ ಋಣ ಮುಗಿಸಿ ಗಂಗಾಜಲ ಕುಡಿಸಿ”
– ಎನುವೆನೆಂದಿರ ಮೊದ್ದು ಶಿಖಾಮಣಿಗಳಿರೆ
ಮನೆ ಮೂಲೆಮೂಲೆಯಲಿ ಕಟ್ಟಿ ನುಡಿ ಮಂಟಪವ
ಒಂದಾದ ಮೇಲೊಂದು ಪದಮುತ್ತು ಪೋಣಿಸುವ
ಲಕ್ಷಲಕ್ಷರು ಇಹರು, ಲಕ್ಷ್ಯದ ಮಾತಾಡದೆಯೇ
ಲಕ್ಷಿಪ ನನ್ನ ಸಂತತಿ;
ನೀವಷ್ಟೇ ಅಲ್ಲ ನನ್ನ ಮಕ್ಕಳು
ಸ್ವಂತ ಮನೆಯಿರುವ ಮನೆಯೊಡತಿ ನಾನು,
ಮೊನ್ನೆ ನಿನ್ನೆ ಇಂದು, ಸಾಸಿರದ ನಾಳೆಗಳ
ಕಾಲಾನುಗೋಚರಾಗೋಚರ ಸವಾಲುಗಳ
ಮೀಟಿ ಮೀರಿ ಬಂದ ತಿಳಿವಿನೀಶ್ವರಿ ನಾನು, ಕನ್ನಡಿತಿ,
ನೀವು ಮರೆತರೂ ನಿಮ್ಮ ಮರೆಯದವಳು, ತಾಯಿ.
ನಿಮ್ಮ ಕರ್ಮಕ್ಕೆ ಕನಿಕರಿಪ ನಗೆಯವಳು,
ನಿತ್ಯ ಆನಂದದವಳು
-ವೈದೇಹಿ
(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9036082005)
ಇದನ್ನೂ ಓದಿ : Kannada Rajyotsava : ‘ನಾನು ಮಹಾರಾಷ್ಟ್ರದ ಹೆಣ್ಣನ್ನೇ ಮದುವೆಯಾಗಿರುವುದಕ್ಕೆ ಕಾರಣವಿದೆ’
Published On - 10:51 am, Mon, 1 November 21