Kannada Rajyotsava : ‘ನಾನು ಮಹಾರಾಷ್ಟ್ರದ ಹೆಣ್ಣನ್ನೇ ಮದುವೆಯಾಗಿರುವುದಕ್ಕೆ ಕಾರಣವಿದೆ’
Kannada Flag : ‘ನಾವು ಓದಿಲ್ಲ, ಸಾಹಿತಿಗಳೂ ಅಲ್ಲ. ಆದರೆ 20 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲೇ ನಡೆದರೂ ತಪ್ಪದೇ ಹೋಗುತ್ತೇವೆ. ನವೆಂಬರ್ ಬರುತ್ತಿದ್ದಂತೆ ಶೆಡ್ಡು ಕಟ್ಟಿ, ಬಾವುಟ ಮಾರಲು ಒಂದೂವರೆ ಲಕ್ಷ ಬಂಡವಾಳ ಬೇಕು. ಫಾದರ್ ಜಾರ್ಜ್ ಸಹಾಯ ಮತ್ತು ಹೆಂಡತಿಯ ತಾಳಿ ಕಿವಿಯೋಲೆ ಬಂಡವಾಳ ಹೂಡಲು ಅನುಕೂಲವಾಗಿದೆ. ಈ ಕೆಲಸ ಲಾಭಕ್ಕಾಗಿಯಲ್ಲ, ಕನ್ನಡಕ್ಕಾಗಿ.’ ಶಂಕರ್
Kannada Rajyotsava : ಕನ್ನಡ ರಾಜ್ಯೋತ್ಸವಕ್ಕೆ ನಾಲ್ಕೇ ದಿನ ಬಾಕಿ. ಬೆಂಗಳೂರಿನ ಹೆಬ್ಬಾಳದ ಕೆರೆಯ ಸಮೀಪ ಬಾನಿಗೆ ಮುಖಮಾಡಿ ಹಾರಾಡುತ್ತ ಕನ್ನಡದ ಕಂಪನ್ನು ಸೂಸುತ್ತಿವೆ ಕನ್ನಡದ ಬಾವುಟಗಳು. ಕರ್ನಾಟಕಕ್ಕೆ, ನಮ್ಮ ನಾಡು, ನುಡಿ, ಸಂಸ್ಕೃತಿಗೆ ನಮ್ಮದೇನಾದರೂ ಅಳಿಲು ಸೇವೆ ಮಾಡಬೇಕೆಂದು ನಿರ್ಧರಿಸಿ ಈ ಕಾಯಕವನ್ನು ಮಾಡುತ್ತಾ ಬಂದಿದ್ದೇವೆ ಎನ್ನುತ್ತಾರೆ ಗೀತಾ-ಶಂಕರ್ ದಂಪತಿ. ರಾಜ್ಯೋತ್ಸವಕ್ಕೆ ಹದಿನೈದು ದಿನಗಳಿರುವಾಗ ಇವರು ಮಗಳ ಸಮೇತ ದೇವನಹಳ್ಳಿಗೆ ಹೋಗುವ ರಸ್ತೆ ಕಡೆ, ಹೆಬ್ಬಾಳದ ಬಳಿ ಪಾತ್ರೆ ಪಗಡೆ ಸಮೇತ ಶೆಡ್ಡು ಹಾಕಿಬಿಡುತ್ತಾರೆ. ಬದುಕುವುದಕ್ಕಾಗಿ ಹತ್ತಾರು ಕೆಲಸಗಳನ್ನೂ ಮಾಡಿಕೊಂಡಿರುವ ಅವರಿಗೆ ಈ ಕೆಲಸವೇ ಯಾಕೆ ಅಷ್ಟು ಅಚ್ಚುಮೆಚ್ಚು ಎನ್ನುವುದಕ್ಕೆ ಅವರದೇ ಭಾವನಾತ್ಮಕ ಮತ್ತು ವಾಸ್ತವಾಂಶಗಳಿಂದ ಕೂಡಿದ ಕಾರಣಗಳೂ ಇವೆ. ಜ್ಯೋತಿ ಎಸ್.
ನಾವು ಓದಿಲ್ಲ, ಸಾಹಿತಿಗಳಲ್ಲ. ಆದರೆ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ಎಲ್ಲೇ ನಡೆದರೂ ತಪ್ಪದೇ ಹೋಗುತ್ತೇವೆ. ರಾಯಚೂರು, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ಗದಗ, ಮೈಸೂರು, ಗುಲ್ಬರ್ಗ, ಮಡಿಕೇರಿ, ಮಂಗಳೂರು ಹೀಗೆ ಎಲ್ಲಾ ಕಡೆ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡದ ಬಾವುಟಗಳನ್ನು ಮಾರುತ್ತೇವೆ ಎನ್ನುತ್ತಾರೆ ಶಂಕರ್. ‘ಲಾಭಕ್ಕಾಗಿ ಕೆಲಸ ಮಾಡುತ್ತಿಲ್ಲ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ’ ಆದರೂ ನಮ್ಮ ಕುಟುಂಬಕ್ಕೆ ಕಳೆದ 20 ವರ್ಷಗಳಿಂದಲೂ ಈ ಕಾಯಕ ಅನ್ನ ಕೊಡುತ್ತ ಬಂದಿದೆ ಎಂಬ ಸಂತಸವನ್ನೂ ವ್ಯಕ್ತಪಡಿಸುತ್ತಾರೆ.
‘ಕನ್ನಡವನ್ನು ಪ್ರೋತ್ಸಾಹಿಸುವಂಥ, ಕನ್ನಡ ನಾಡನ್ನು ಗೌರವಿಸಲು ಪೂರಕವಾಗಿರುವ ಸಾಮಗ್ರಿಗಳನ್ನು ಕನ್ನಡಾಭಿಮಾನಿಗಳಿಗೆ ತಲುಪಿಸುತ್ತಿದ್ದೇವೆ. ಈ ಕೆಲಸ ನಮಗೆ ತುಂಬಾ ಖುಷಿ ಕೊಡುತ್ತದೆ. ನವೆಂಬರ್ ಒಂದಕ್ಕೆ 15 ದಿನ ಇರುವಾಗಲೇ ನಾನು, ಹೆಂಡತಿ, ಮಗಳು ಮತ್ತು ಪಾತ್ರೆ ಪಗಡೆ ಸ್ಟವ್ ಸಮೇತ ಬಂದು ಶೆಡ್ ಕಟ್ಟಿಕೊಂಡು ಇರಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಯಾವುದೇ ಸಂಚಾರಕ್ಕೆ ತೊಂದರೆಯಾಗದಂತೆ ಶೆಡ್ ಹಾಕುತ್ತೇವೆ. ಯಾರಿಗೂ ತೊಂದರೆ ಮಾಡುವುದಿಲ್ಲ’ ಎನ್ನುತ್ತಾರೆ ಗೀತಾ ಶಂಕರ್ ದಂಪತಿ.
ಬ್ಯಾಡ್ಜ್, ಟೋಪಿ, ಆಟೋ, ಸ್ಕೂಟರ್ ಕನ್ನಡಿಗೆ ಕಟ್ಟಬಹುದಾದ ಕುಚ್ಚುಗಳು, ಕೈಗೆ ಹಾಕಿಕೊಳ್ಳುವ ಬ್ಯಾಂಡ್, ಹ್ಯಾಂಡ್ ರಬ್ಬರ್, ಕತ್ತಿಗೆ ಹಾಕಿ ಕೊಳ್ಳುವ ಶಾಲ್, ಕರ್ನಾಟಕ ಬಾವುಟ, ಇಂಡಿಯಾ ಬಾವುಟ, ಹೀಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಉಪಯೋಗಿಸಬಹುದಾದ ಪ್ರತಿಯೊಂದು ಕನ್ನಡ ಹಬ್ಬಕ್ಕೆ ಸಂಬಂಧಿಸಿದ ಸಾಮಗ್ರಿಗಳು ಇವರಲ್ಲಿ ಸಿಗುತ್ತವೆ. 1 ನೇ ನಂಬರ್ ನಿಂದ 6 ನೇ ನಂಬರ್ ಅಷ್ಟು ಅಳತೆಯ ಬಾವುಟಗಳು ಸಿಗುತ್ತವೆ. ಒಂದೊಂದು ಪೀಸ್ ಮಾರಿದರೆ 5, 10 ರೂಪಾಯಿ ಸಿಗುತ್ತದೆ. ಚೌಕಾಸಿ ಮಾಡದೆ ಯಾರೂ ವ್ಯಾಪಾರ ಮಾಡುವುದಿಲ್ಲ. ‘ಕೆಲವರು ತುಂಬ ಆಸೆಯಿಂದ ಬಂದಿರುತ್ತಾರೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಅಂತ ಅವರಲ್ಲಿ ಹಣ ಇರೋದಿಲ್ಲ. ಕೇಳಿ ಹಾಗೆ ಹೋಗುತ್ತಾರೆ. ಆಗ ನಾವು ಹಣ ಇದ್ದಾಗ ತಂದುಕೊಡಿ ಅಂತ ಬಾವುಟ ಕೊಟ್ಟು ಕಳಿಸಿರುತ್ತೇವೆ. ಕೆಲವರು ಹುಡುಕಿಕೊಂಡು ಬಂದು ಹಣ ಕೊಟ್ಟು ಹೋಗುತ್ತಾರೆ’ ಎನ್ನುತ್ತಾರೆ ಗೀತಾ.
ಎಲ್ಲ ಸರಿ. ಇಷ್ಟು ದಿನ ಮೊದಲೇ ಯಾಕೆ ಬಾವುಟ ಇಟ್ಟುಕೊಂಡು ಕೂತಿದ್ದೀರಿ? ಈಗಲೇ ವ್ಯಾಪಾರ ಆಗುತ್ತದೆಯ? ಎಂದು ಕೇಳಿದ್ದಕ್ಕೆ ಗೀತಾ, ‘ವ್ಯಾಪಾರ ಒಮ್ಮೆಲೇ ಆಗುತ್ತಾ, ಜಾಹೀರಾತು ಬೇಡವಾ? ಹೊಸ ಹೊಸ ಜನರಿಗೆ ಗೊತ್ತಿರಲ್ಲ. ನೋಡಿಕೊಂಡು ಹೋಗುತ್ತಿರುತ್ತಾರೆ. ಇಲ್ಲಿಂದ ಬೇರೆ ಕಡೆಗೆ ಹೋಗುವವರು ಇರುತ್ತಾರೆ. ಬೇರೆ ಕಡೆಯಿಂದ ಈ ರಸ್ತೆ ಮಾರ್ಗವಾಗಿ ಬರುವವರು ಇರುತ್ತಾರೆ. ಮೊದಲು ಜನರು ನೋಡಬೇಕು. ನೋಡಿಕೊಂಡು ಹೋಗಿ ಇಂತಹ ಕಡೆ ಸಿಗುತ್ತದೆ ಎಂದು ಬೇರೆಯವರಿಗೆ ಹೇಳುತ್ತಾರೆ. ವ್ಯಾಪಾರ ಆಗುವುದು 31, 1 ನೇ ತಾರೀಖು ಮಾತ್ರ. ಉಳಿದ ದಿನಗಳಲ್ಲಿ ಹೀಗೇ ಕೆಲಸಗಳನ್ನು ಹುಡುಕಿಕೊಂಡು ಮಾಡುತ್ತೇವೆ. ಕೆಲವರು ದೇವಸ್ಥಾನಕ್ಕೆ ಎಂದು ಆಂಜನೇಯ ಬಾವುಟಗಳನ್ನು ಮಾಡಿಸಿಕೊಂಡು ಹೋಗುತ್ತಾರೆ.
‘ಇನ್ನು ನನಗೆ ಮ್ಯಾಟ್ ಹೆಣೆಯುವುದು ಗೊತ್ತು. ಅದಕ್ಕಾಗಿ ಹಳೆ ಸೀರೆಗಳನ್ನು ಸಂಗ್ರಹಿಸುತ್ತೇನೆ. ಹತ್ತಿರದ ಚರ್ಚಿನಲ್ಲಿರುವ ಫಾದರ್ ಜಾರ್ಜ್ ಕೂಡ ಹಳೆಯ ಸೀರೆಗಳನ್ನು ಸಂಗ್ರಹಿಸಿಡುವಲ್ಲಿ ಸಹಾಯ ಮಾಡುತ್ತಾರೆ. ಕೈಯಿಂದ ಹೊಲೆದ ಮ್ಯಾಟ್ ಸುಮಾರು ಮೂರು ನಾಲ್ಕು ವರ್ಷಗಳ ತನಕ ಬಾಳಿಕೆ ಬರುತ್ತದೆ. 250 ರಿಂದ 300 ರೂಪಾಯಿಗೆ ಮಾರಾಟ ಮಾಡುತ್ತೇನೆ. ಕೊರಳಿಗೆ ಹಾಕಿಕೊಳ್ಳುವ ವುಲನ್ ಶಾಲ್ ಅನ್ನೂ ಹೆಣೆಯುತ್ತೇನೆ. ಒಂದು ಶಾಲ್ ಮಾಡಲು 3 ದಿನ ಆಗುತ್ತದೆ. ಕಣ್ಣು ನೋವು ಬರುತ್ತೆ, ಕನ್ನಡಕ ಹಾಕಿಕೊಂಡು ಮಾಡುತ್ತೇನೆ.
‘ಸಿಟಿ ಮಾರ್ಕೆಟ್ನಿಂದ ಪಾಲಿಯೆಸ್ಟರ್, ಸಿಲ್ಕ್, ಕಾಟನ್ ಇತ್ಯಾದಿ ಬಟ್ಟೆ ರೋಲ್ಗಳನ್ನು ತಂದು, ಗಾರ್ಮೆಂಟ್ಸ್ಗೆ ಬಟ್ಟೆ ಕೊಟ್ಟು ಹೊಲೆಸಿ, ಮತ್ತೆ ಸಿಟಿ ಮಾರ್ಕೆಟ್ಗೆ ತೆಗೆದುಕೊಂಡು ಹೋಗಿ ಪ್ರಿಂಟ್ ಮಾಡಿಸಿ ಮನೆಗೆ ತಂದು ಅದಕ್ಕೆ ಒಂದೊಂದಕ್ಕೂ ಪ್ರತ್ಯೇಕವಾಗಿ ಕೋಲುಗಳನ್ನು ಹಾಕಬೇಕು. ಒಂದೊಂದು ಕೋಲು 10 ರೂಪಾಯಿ ಇರುತ್ತೆ. ಕಡಿಮೆ ಕೊಡೋದಿಲ್ಲ, ಕನಿಷ್ಠ 500 ಕೋಲುಗಳನ್ನಾದರೂ ಒಮ್ಮೆಗೆ ತೆಗೆದುಕೊಳ್ಳಬೇಕು. ವ್ಯಾಪಾರ ಆದರೂ ಇಲ್ಲವಾದರೂ ಬಂಡವಾಳ ಹಾಕಲೇಬೇಕು. ಬಂಡವಾಳಕ್ಕೆ ಹೆಚ್ಚು ಕಡಿಮೆ ಅಂದರೂ ರೂ. 1, 50,000 ಹೂಡಬೇಕು. ಒಮ್ಮೊಮ್ಮೆ ವ್ಯಾಪಾರ ಬಂಡವಾಳದ ಅರ್ಧದಷ್ಟು ಕೂಡ ಆಗೋದಿಲ್ಲ. ಕೆಲವೊಮ್ಮೆ ಲಾಭ ರೂ 40,000 ದಿಂದ 50,000 ಆದರೆ ಅದೇ ಹೆಚ್ಚು. ಆಗ ಉಳಿದಿರುವ ಹೆಚ್ಚು ಸಾಮಗ್ರಿಗಳನ್ನು ಮನೆಯಲ್ಲಿ ಇಟ್ಟಿರುತ್ತೇವೆ. ಮುಂದಿನ ಸಾರಿ ಅದನ್ನೇ ಉಪಯೋಗಿಸುತ್ತೇವೆ.
‘ಆಟೋ, ಲಾರಿ, ಕಾರಿನವರು ಎಲ್ಲರೂ ನಮ್ಮಲ್ಲಿ ವ್ಯಾಪಾರ ಮಾಡುತ್ತಾರೆ. ಕೆಲವರು ವಿಸಿಟಿಂಗ್ ಕಾರ್ಡ್ ಕೇಳಿ ಇಟ್ಟುಕೊಂಡಿರುತ್ತಾರೆ. ಫೋನ್ ಮಾಡಿ ನಮಗೆ ಇಷ್ಟು ಬಾವುಟ ಬೇಕು ಅಂದಾಗ ಅವರ ವಿಳಾಸಕ್ಕೆ ಕೊರಿಯರ್ ಸಹ ಮಾಡುತ್ತೇವೆ. ಅವರ ಊರಿನ ವಿಳಾಸ, ಫೋಟೋ, ಸಂಸ್ಥೆ ಹೆಸರು ಹೀಗೆ ಗ್ರಾಹಕರ ಆಸಕ್ತಿ, ಇಷ್ಟದ ಮೇರೆಗೆ ಪ್ರಿಂಟ್ ಮಾಡಿಸಿ ಅವರಿಗೆ ತಲುಪಿಸುತ್ತೇವೆ. ಕೊರೊನಾದ ಭಯ ಇದೆ. ಆದರೆ, ಮನೆಯಲ್ಲಿದ್ದು ಹಸಿವಿನಿಂದ ಸಾಯುವ ಬದಲು ಕೆಲಸ ಮಾಡುತ್ತಲೇ ಸಾಯುವುದೇ ಮೇಲು’ ಎನ್ನುತ್ತಾರೆ ಗೀತಮ್ಮ.
ಇವರಿಗೆ ಈತನಕ ಇರಲು ಮನೆಯಿಲ್ಲ. ಒಮ್ಮೆ ಗೀತಾ ಅವರು ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವಾಗ ಯಾರೂ ಸಹಾಯಕ್ಕೆ ಬರಲಿಲ್ಲ. ಆಗ ಯಾರದೋ ಸಲಹೆಯ ಮೇರೆಗೆ ಸುಮನಹಳ್ಳಿಯಲ್ಲಿ ಇರುವ ಫಾದರ್ ಜಾರ್ಜ್ ಬಳಿ ಹೋದೆವು. ಆಗ ಅವರು ಉಚಿತ ಊಟ, ವಸತಿ ನೀಡಿ, ಆರೋಗ್ಯ ಸುಧಾರಿಸುವಂತೆ ನೋಡಿಕೊಂಡರು. ನಮ್ಮ ಮಗಳನ್ನು ಅವರದ್ದೇ ಶಾಲೆಯಲ್ಲಿ ಓದಲು ಸಹಾಯ ಮಾಡಿದರು. ನಾವು ಬಾವುಟ ವ್ಯಾಪಾರ ಮಾಡುತ್ತೇವೆ ಅಂತ ಗೊತ್ತಾದಾಗ ಬಂಡವಾಳಕ್ಕೂ ಸಹಾಯ ಮಾಡಿದರು. ಮತ್ತೆ ನಮ್ಮಂತೆ ಇರುವ ಬೇರೆಯವರಿಗೆ ಅವರು ಸಹಾಯ ಮಾಡಬೇಕಲ್ವಾ… ಹಾಗಾಗಿ ನಾವು ದುಡಿದು ಅವರಿಗೆ ಹಣ ವಾಪಸ್ ಕೊಟ್ಟೆವು. ಆದರೂ ಇಷ್ಟುವರ್ಷಗಳಲ್ಲಿ ಕೆಲವೊಮ್ಮೆ ಕಿವಿಯೋಲೆ, ತಾಳಿ ಅಡವಿಟ್ಟು ಬಂಡವಾಳ ಹೂಡಿದ್ದಿದೆ’ ಎನ್ನುತ್ತಾರೆ ಶಂಕರ್ ದಂಪತಿಗಳು.
ಗೀತಾ ಮಹಾರಾಷ್ಟ್ರದವರು. ಈ ಗಡಿಜಗಳಗಳು ಬೇಗ ಮುಗಿದು ಎಲ್ಲರೂ ಚೆನ್ನಾಗಿ ಇರಬೇಕು. ಕರ್ನಾಟಕ ಮಹಾರಾಷ್ಟ್ರ ಒಂದಾಗಿ ಇರಬೇಕು ಎಂದು ಬಯಸುತ್ತಾರೆ. ‘ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಿಗೆ ಕೂಡಿ ಬದುಕಬೇಕು ಎನ್ನುವ ಆಲೋಚನೆಯಿಂದಲೇ ನಾನು ಮರಾಠಿ ಹುಡುಗಿಯನ್ನು ಮದುವೆಯಾದೆ. ನಾವಂತೂ ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ನಮಗೆ ಒಬ್ಬಳು ಮಗಳು ಇದ್ದಾಳೆ’ ಎನ್ನುವ ಶಂಕರ್, ಸಾಕಷ್ಟು ಕನ್ನಡ ಸಿನೆಮಾದಲ್ಲಿ ಡ್ಯೂಪ್ ಹಾಕಿದ್ದಾರಂತೆ. ಶಿವರಾಜ್ಕುಮಾರ್ ಅಭಿನಯದ ‘ಹೊಡಿಮಗ’, ‘ಮುಸ್ಸಂಜೆ ಮಾತು’ ಚಿತ್ರದಲ್ಲಿ ಸೈಡ್ ಆ್ಯಕ್ಟರ್ ಆಗಿ, ಸುದೀಪ್ ಅಭಿನಯದ ‘ತೀರ್ಥ’, ದುನಿಯಾ ವಿಜಯ್ ಅಭಿನಯದ ‘ಕೋಬ್ರಾ’ ಹೀಗೆ ಹಲವಾರು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದಾರೆ. ಪ್ಲಂಬರ್, ಕಾರ್ಪೆಂಟರ್, ಎಲೆಕ್ಟ್ರಿಕಲ್, ಡ್ರೈವಿಂಗ್ ಎಲ್ಲಾ ಕೆಲಸವನ್ನೂ ಇವರು ಮಾಡಬಲ್ಲರು. ಆದರೆ ಏನೇ ಕೆಲಸ ಮಾಡಿದರೂ ನಾನು ಮೊದಲು ಕನ್ನಡಾಭಿಮಾನಿ’ ಎನ್ನುತ್ತಾರೆ.
(ಕನ್ನಡ ಧ್ವಜಗಳಿಗಾಗಿ ಇವರನ್ನು ಸಂಪರ್ಕಿಸಬಹುದು. ಶಂಕರ್ 6363235558/9342576185)
ಇದನ್ನೂ ಓದಿ : Old Age Homes : ‘ಒಂದೆರಡು ಸಾವಿರ ನಿಮ್ಮ ಅಕೌಂಟಿಗೆ ಹಾಕ್ತೀವಿ, ಕಾರ್ಯ ಮಾಡಿ ಮುಗಿಸಿಬಿಡಿ’