New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ನಾನು ನಾನೆ? ನಾನು ನಾನೇ! (ಕಥಾ ಸಂಕಲನ)
ಲೇಖಕರು : ಎಂ. ಎಸ್. ಶ್ರೀರಾಮ್
ಪುಟ : 186
ಬೆಲೆ : ರೂ. 180
ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣಕರ್
ಪ್ರಕಾಶನ : ಮನೋಹರ ಗ್ರಂಥಮಾಲಾ, ಧಾರವಾಡ
ಶ್ರೀರಾಮ್ ಅವರು ಮೈಮರೆತು ಬರೆಯುವುದು ಅಪರೂಪ. ಇತರ ಪಾತ್ರಗಳ ವಿಷಯ ಹಾಗಿರಲಿ, ಸ್ವತಃ ತಮ್ಮ ಬಗ್ಗೆ ಬರೆಯುವಾಗಲೂ ಅವರು ಒಂದು ‘ಬೌದ್ಧಿಕ ದೂರ’ವನ್ನು ಕಾದಿಟ್ಟುಕೊಳ್ಳುತ್ತಾರೆ. ಹಾಸ್ಯ, ವ್ಯಂಗ್ಯ, ಸ್ವ-ವಿಮರ್ಶೆ, ವಿಟ್ ಮುಂತಾದ ಪರಿಕರಗಳು ಅವರನ್ನು ಭಾವುಕತೆಯಿಂದ ‘ಪ್ರೊಟೆಕ್ಟ್’ ಮಾಡುತ್ತವೆ. ಆದರೆ ಅವರ ಪಾತ್ರಗಳಲ್ಲಿ ಭಾವನೆಗಳೇ ಇಲ್ಲವೆಂಬ ತೀರ್ಮಾನಕ್ಕೆ ನಾವು ಬರಬಾರದು. ಅಲ್ಲಿರುವುದು ಒಂದು ಬಗೆಯ ಸಂಯಮ ಹಾಗೂ ‘ಅಂಡರ್ ಸ್ಟೇಟ್ಮೆಂಟ್’. ಹಾಗೆಯೇ ಅವರ ಕನ್ನಡಕ್ಕೆ ತೆಲುಗು, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳ ‘ನುಡಿಕಟ್ಟು’ ಮತ್ತು ‘ನಡೆಕಟ್ಟು’ಗಳು ಸಹಜವಾಗಿಯೇ ಬರುತ್ತವೆ. ಅವರು ತೆಲುಗಿನಿಂದ ಅನುವಾದಗಳನ್ನು ಮಾಡಿರುವುದು ಕಾಕತಾಳೀಯವಲ್ಲ. ಒಂದು ಅರ್ಥದಲ್ಲಿ ಅವರು ದ್ವಿ-ಭಾಷಿಕ ಲೇಖಕರು. ಯಶವಂತ ಚಿತ್ತಾಲರ ಗದ್ಯದಲ್ಲಿ ಕೊಂಕಣಿಯು ಹಾಸುಹೊಕ್ಕಾಗಿರುವಂತೆ ಇಲ್ಲಿಯೂ ಆಗುತ್ತದೆ.
ನಾನು ಇದುವರೆಗೆ ಹೇಳಿದ ಮಾತುಗಳು, ‘ನಾನು, ನಾನೇ? ನಾನು ನಾನೇ!’ ಎಂಬ ಸಂಕಲನವನ್ನು ಒಳಗೊಳ್ಳುವ ಕೆಲಸದಲ್ಲಿಯೂ ನೆರವಾಗುತ್ತವೆ. ಪ್ರಶ್ನೆಯಲ್ಲಿ ಮೊದಲಾಗಿ ಆಶ್ಚರ್ಯದಲ್ಲಿ ಕೊನೆಯಾಗುವ ಸಂಕಲನದ ಶೀರ್ಷಿಕೆಯು, ‘ಲೋಕಶೋಧನೆ’ ಮತ್ತು ‘ಆತ್ಮಶೋಧನೆ’ ಎರಡರಲ್ಲಿಯೂ ‘ಖಚಿತವಾದ’, ‘ಸರಿಯಾದ’ ತೀರ್ಮಾನಗಳಿಗೆ ಎಡಯಿಲ್ಲವೆಂಬ ಸತ್ಯವನ್ನೇ ಹೇಳುತ್ತವೆ. ನಿಜ ಹೇಳುವುದಾದರೆ ‘ಲೋಕ’ವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನವು ನನ್ನನ್ನು ಅರಿಯುವ ದಿಕ್ಕಕ್ಕಿನಲ್ಲಿ ಚಲಿಸುತ್ತದೆ. ಅಂತೆಯೇ ನನ್ನನ್ನು ಅರಿಯುವ ದಿಟವಾದ ಹುಡುಕಾಟವು ಕೊನೆಗೆ ಇಡೀ ಲೋಕವನ್ನೇ ಒಳಗೊಳ್ಳುತ್ತದೆ. ಏಕಾಂತ ಮತ್ತು ಲೋಕಾಂತಗಳು ಪ್ರತ್ಯೇಕ ದ್ವೀಪಗಳಲ್ಲ. ಹಾಗೆಯೇ ‘ನನ್ನನ್ನು’ ಮತ್ತು ‘ಲೋಕವನ್ನು’ ಅರಿಯುವ ಕೆಲಸವನ್ನು, ಭಾಷೆಯೆಂಬ ಮಾಧ್ಯಮವನ್ನು ಬಳಸುವ ‘ಸಾಹಿತ್ಯ’ವೆಂಬ ಕಲೆಯ ಮೂಲಕ ನಡೆಸಿದಾಗ, ಆ ಹುಡುಕಾಟಕ್ಕೆ ಅದರದೇ ಲಕ್ಷಣಗಳು, ಶಕ್ತಿಗಳು, ಬಿಕ್ಕಟ್ಟುಗಳು ಒದಗಿ ಬರುತ್ತವೆ.
ಡಾ. ಎಚ್. ಎಸ್. ರಾಘವೇಂದ್ರ ರಾವ್, ಹಿರಿಯ ವಿಮರ್ಶಕರು
ಕಳೆದ ನಲವತ್ತು ವರ್ಷಗಳಲ್ಲಿ ಬರೆದ ಐವತ್ತು ಕಥೆಗಳ ಗುಚ್ಛ ನಿಮ್ಮ ಕೈಯಲ್ಲಿದೆ. ಇವು ಭಿನ್ನ ಸಮಯದಲ್ಲಿ ಭಿನ್ನ ಕಾರಣಗಳಿಗೆ ಬರೆದ ಕಥೆಗಳು. ಹಿಂದಿನ ಸಂಕಲನದಲ್ಲಿ ಇವುಗಳು ಯಾವುವನ್ನೂ ನಾನು ಸೇರಿಸದಿರಲು ಕಾರಣ ಆ ಕಥೆಗಳ ಒಟ್ಟಾರೆ ಜಾಯಮಾನಕ್ಕೆ ಇವು ಒಗ್ಗುತ್ತಿರಲಿಲ್ಲ ಎನ್ನುವುದೇ. ಕಥನ ತಂತ್ರದಲ್ಲಿ ಆಸಕ್ತಿಯಿದ್ದದ್ದರಿಂದ ಹಲವು ಬಾರಿ ಹೇಗೆಲ್ಲಾ ಕಥೆ ಬರೆಯಬಹುದೆನ್ನುವ ಪ್ರಯೋಗಗಳನ್ನು ಮಾಡಿದ್ದೆ. ಹೀಗಾಗಿಯೇ ಒಂದೇ ಶೀರ್ಷಿಕೆಯ ಭಿನ್ನ ನಿರೂಪಣೆಯ ಕಥೆಗಳೂ ಇಲ್ಲಿ ನಿಮಗೆ ಸಿಗುತ್ತವೆ. ಈ ಕಥೆಗಳನ್ನು ಪ್ರಯೋಗಗಳೆಂದೇ ನೋಡಬೇಕು. ಇವು ಪ್ರಯೋಗವಾಗಿಯೇ ಉಳಿಯಲು ಕಾರಣವಿದೆ. ಇವುಗಳ ಕಥಾತಂತ್ರದಲ್ಲಿ ಯಾವೊಂದೇ ತಂತ್ರವನ್ನು ಹಿಡಿದು ನಾನು ಅದರ ಹಿಂದೆ ಓಡಿದವನಲ್ಲ. ಬದಲಿಗೆ ಈ ಪ್ರಯೇಗಗಳ ಅಂಶಗಳು ನನ್ನ ಬೇರೆ ಕಥೆಗಳಲ್ಲಿ ಬಂದಿರಬಹುದು. ಅಲ್ಲದೇ ನನ್ನ ಮಿಕ್ಕ ಕಥೆಗಳಲ್ಲಿ ಕಾಣದಿರಬಹುದಾದ ಒಂದು ರಾಜಕೀಯ ಅಂಶವನ್ನೂ ನಾನು ಅಡಕಗೊಳಿಸಿದ್ದೇನೆ.
ಎಂ. ಎಸ್. ಶ್ರೀರಾಮ್, ಹಿರಿಯ ಲೇಖಕರು, ಕಥೆಗಾರರು
*
ಊರುಗೋಲು
“ನಿನ್ನ ಕಾಲು ಆಂಪ್ಯುಟೇಟ್ ಮಾಡುವಂಥಹ ಪರಿಸ್ಥಿತಿ ಬಂದದ್ದಾದರೂ ಹೇಗೆ?” ಕೇಶವ ಕೇಳಿದ.
“ಅಯ್ಯೋ ಅದೊಂದು ಪುಟ್ಟ ಕಥೆ. ಮೊನ್ನೆ ಏನಾಯ್ತೂಂದ್ರೆ…” ಎಂದು ಪ್ರಾರಂಭಿಸಿದೆ.
ನಡೆದೆ… ನಡೆದೆ, ದಣಿಯದೇ ನಡೆಯುತ್ತಿದ್ದೆ. ಸೀದಾ ಈ ಜಗದಿಂದಾಚೆಗೆ, ದಿಗಂತದಾಚೆಗೆ ನಡೆದು ಹೋಗಬೇಕನ್ನಿಸಿತ್ತು. ಧುತ್ತೆಂದು ನನ್ನ ದಾರಿಗಡ್ಡವಾಗಿ ಎದ್ದು ನಿಂತುಕೊಂಡ ಮರ. ಬೀಜ ಬಿತ್ತದ್ದು ಗೊತ್ತಿಲ್ಲ. ಅಂಕುರವಾದದ್ದು ಗೊತ್ತಿಲ್ಲ. ಗಿಡವಾದದ್ದು ಗೊತ್ತಿಲ್ಲ. ಮರವಾಗಿ ಎದ್ದುನಿಂತಿದೆ ಅಡ್ಡವಾಗಿ.
ಗಿಡವಾಗಿ ತಿಳಿಯದ್ದು ಮರವಾಗಿ ತಿಳಿದೀತೇ? ಉಹೂಂ. ಅರ್ಥವೇ ಆಗಲಿಲ್ಲ. “ಏ ಮರ ಯಾಕೆ ದಾರಿಗಡ್ಡವಾಗಿ ನಿಂತಿದ್ದೀ?” “ನಾನೇನು ಮಾಡಿದ್ದು ತಪ್ಪು?” “ನಿನ್ನನ್ನು ಕಡಿದೇ ನಾನು ಮುಂದೆ ಸಾಗಬೇಕೆಂದು ನಿನ್ನ ಉದ್ದೇಶವೋ ಹೇಳು?” ಹೀಗೆ ಮೂರು ಪ್ರಶ್ನೆಗಳನ್ನು ಒಗೆದೆ. ಏನೂ ದನಿ ಕೇಳಿಸಲಿಲ್ಲ. ಒಣಗಿದೆಲೆಗಳ ಮರಮರ ಸದ್ದು. ಗಾಳಿ ಬೀಸಿದಾಗ ಅಲುಗಾಡಿದ ಕೊಂಬೆಗಳು ಅರಿಯದ ಭಾಷೆಯೊಂದರಲ್ಲಿ ಪಿಸುಗುಟ್ಟಿದುವು.
ಮರದಿಂದ ಎಲೆಯೊಂದು ತೇಲಾಡುತ್ತಾ ಕೆಳಕ್ಕಿಳಿಯಿತು.
ಹಣ್ಣೊಂದು ತುಪಕ್ಕನೆ ಬಂದು ಬಿತ್ತು.
ನ್ಯೂಟನ್ನನಂತೆ ಆಶ್ಚರ್ಯಚಕಿತನಾಗಿ ನೋಡಿದೆ. ನ್ಯೂಟನ್ನನ ಕಾಲಕ್ಕೂ ನನ್ನ ಕಾಲಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಹಣ್ಣನ್ನು ಉದುರಲು ಬಿಟ್ಟರೆ ಈಗಲೂ ಅದು ಹಾರಾಡದೇ ನೆಲದ ಮೇಲೆಯೇ ಬೀಳುತ್ತದೆ. ಗುರುತ್ವಾಕರ್ಷಣೆ ಅಲ್ಲವೇ ಗುರೂ?
ಕೆಳಬಿದ್ದ ಹಣ್ಣನ್ನು ಕೈಗೆತ್ತಿಕೊಂಡೆ. ಒಂದಿಷ್ಟೇ ಸಿಪ್ಪೆ ಬಿಡಿಸಿದೆ. ರಸ ಜಿನುಗಿತು. ಗಾಯವಾದಾಗ ದೇಹದಿಂದ ಜಿನುಗುವ ರಕ್ತದಂತೆ! ಹಲ್ಲು ಹಾಕಿ ಆ ಹಣ್ಣನ್ನು ಜೋರಾಗಿ ಕಚ್ಚಿ ಅಗೆಯತೊಡಗಿದೆ. ತಂದೂರಿ ಚಿಕನ್‌ನಂತೆ! ನಂತರ ಜುರ್ರೆಂದು ರಸ ಹೀರಿದೆ. ಪಸಂದಾದ ರುಚಿ. ತುಸು ಸಿಹಿ, ತುಸು ಉಪ್ಪುಪ್ಪು, ತುಸು ಒಗರು ಅಂತೂ ಚೆನ್ನಾಗಿತ್ತೂ ಅನ್ನಿ.
ಹಣ್ಣು ತಿನ್ನುತ್ತಿದ್ದಂತೆ ನನಗೆ ಎ.ಕೆ.ರಾಮಾನುಜನ್ನರ ಅಂಗುಲ ಹುಳುವಿನ ನೆನಪಾಯಿತು. ಕೋಗಿಲೆಯ ಹಾಡನ್ನು ಅಳೆಯುತ್ತಾ ಅಳೆಯುತ್ತಾ ಅಂಗುಲದು ಹುಳು ದಿಗಂತದೆಡೆಗೆ ನಡೆದೇ ಬಿಟ್ಟಿತಂತಲ್ಲಾ. ಅಂದ ಹಾಗೆ ನಾನೂ ಈ ಜಗವನ್ನು ಹೆಜ್ಜೆಗಳಲ್ಲಿ ಅಳೆಯುತ್ತಾ ಇಷ್ಟುದೂರ ಬಂದವ. ನನ್ನ ದಿಗಂತವನ್ನು ನಾನು ಮರೆಯಬಾರದಲ್ಲಾ. ನಿಧಾನವಾಗಿ ಆದರೂ ನಡೆದು ಹೋಗಬೇಕು. ಮರ ಬಳಸಿ ಹೋಗಬೇಕೆಂದು ಮುಂದೆ ಹೆಜ್ಜೆ ಇಟ್ಟರೆ ಅದೇ ಹಣ್ಣು ಕೊಟ್ಟಮರ ಆಲದ ಮರದ ಕೆಳಗೆ ಬಿಳಲು ಬಿಡುತ್ತಿದೆ! ಈ ಬಾರಿ ಬಿಳಲು ಅಡ್ಡ ಬಂತು.
ಮತ್ತೆ ನನ್ನ ಪ್ರಯಾಣದ ಗತಿ? ಏನು ಮಾಡುವುದು? ಆಲೋಚಿಸುತ್ತಿದ್ದಂತೆ ಹೊಳೆಯಿತು. ಮರವನ್ನು ಈ ಬದಿಯಿಂದ ಹತ್ತಿ ಆ ಬದಿಯಿಂದ ಇಳಿದು ಬಿಟ್ಟರೆ! ಹೌದು ಘಟ್ಟವೊಂದನ್ನು ದಾಟಿದ ಹಾಗೆ! ಆ ಬದಿ ಏನಿದೆಯೋ ಮತ್ತೆ.
ಇದೇ ಸರಿ ಎಂದು ಮರ್ ಏರುತ್ತಾ ಹೋದೆ. ಮೊದಲ ಹಂತ ಚೆನ್ನಾಗಿಯೇ ಏರಿದೆ. ಆದರೆ ನಂತರ ಮರ ಕವಲೊಡೆಯಿತು. ಈ ಬದಿಯೋ-ಆ ಬದಿಯೋ.. ಹೋಗುವುದೋ, ನಿಲ್ಲುವುದೋ, ಏರುವುದೋ, ಇಳಿಯುವುದೋ – ಈ ಬದಿ ಹೋದರೆ ಮುಂದೆ ಎರಡು ಕವಲುಗಳು. ಆ ಬದಿಯಲ್ಲಿ ಮೂರು. ಈ ಎರಡು ಕವಲುಗಳಲ್ಲಿ ಎಡ ಬದಿಯದು ಮತ್ತೆ ಮೂರು ಕವಲುಗಳಾಗಿ ಒಡೆಯುತ್ತದೆ. ಬಲಬದಿಯದು ನಾಲ್ಕಾಗಿ. ಒಟ್ಟು ಎಷ್ಟಾಯ್ತು? ತಲೆ ತುರಿಸಿಕೊಂಡೆ. ನಾನು ಅನಂತನಾರಾಯಣ ಎಂದು ಹೆಸರಿಟ್ಟುಕೊಳ್ಳಬಾರದಿತ್ತು. ಈ ಅನಂತ ಮಾರ್ಗಗಳಲ್ಲಿ ಆಯ್ದುಕೊಳ್ಳುವುದು ಯಾವುದನ್ನು?
ಬೇಡ ಇಳಿದು ವಾಪಸ್ಸಾಗೋಣ ಎಂದುಕೊಂಡೆ. ಕೆಳನೋಡಿದರೆ ಬುಡವೇ ಇಲ್ಲ. ಯಾರೋ ಈಗಾಗಲೇ ಅದನ್ನು ಕಡಿದುಹಾಕಿಬಿಟ್ಟಿದ್ದಾರೆ. ಅದೋ ಅಲ್ಲಿ. ದೂರದಲ್ಲಿ ಅದು ಉರುವಲಾಗಿ ಉಪಯೋಗಿಸಲ್ಪಡುತ್ತಿದೆ. ಹಾ.. ಧಗೆ.. ವಿಪರೀತ ಕಾವು.. ಬಿಸಿ.. ಬೆವರುತ್ತಿದ್ದೇನೆ. ಬೆವರು ತೊಟ್ಟು ತೊಟ್ಟಾಗಿ ಕೆಳಬೀಳುತ್ತಿದೆ. ದೂರದ ಬೆಂಕಿ ಸಮೀಪಕ್ಕೆ ಹಬ್ಬಿದೆ. ಆದರೇನು? ಬೆವರಿನ ಹನಿಗಳಿಂದ ಬೆಂಕಿ ನಂದುವುದನ್ನೆಂದಾದರೂ ಕೇಳಿದ್ದೀರಾ?
ಮರದ ಕೊಂಬೆಯಿಂದ ‘ಸತಿ’ ಯ ಹಾಗೆ ನೇರ ಬೆಂಕಿಗೆ ಹಾರುತ್ತೇನೆ. ಆದರೇನಾಯಿತು ನಾನೀಗ ಫೈರ್ ಪ್ರೂಫ್ ಆಗಿದ್ದೇನೆ. ಗಂಡಾದ ನಾನು ಸತಿಯಾಗುವುದಾದರೂ ಎಂತು?
ಕೆಳಗೆ ಹಾದಿದ ನಾನು ಹಾಗೇ ಬಿದ್ದು ಬಿಟ್ಟೆ. ಏನಾಯ್ತೂಂತ ಗೊತ್ತಿಲ್ಲ. ಎದ್ದಾಗ ಸರಕಾರಿ ಆಸ್ಪತ್ರೆಯಲ್ಲಿದ್ದೆ. ಕಾಲುಕಡಿದಿದ್ದರು.
ನನ್ನ ಕಥೆ ಮುಗಿಸಿದೆ.
“ಅಲ್ಲ ನಿನ್ನ ದೇಹ ಆಸ್ಪತ್ರೆಯವರಿಗೆ ಎಲ್ಲಿ ಸಿಕ್ಕಿತು?“
“ನಾನೇ ನಡಕೊಂಡು ಬಂದೇಂತ ಹೇಳ್ತಾರೆ. ಮೂಳೆ ಪುಡಿಪುಡಿಯಾಗಿ ಸುಟ್ಟುಹೋಗಿದ್ದ ಕಾಲನ್ನ ಹೇಗೆ ಊರಿ ನಡೆ ಬರೋಕ್ಕೆ ಸಾಧ್ಯ? ಅಂತ ಕೇಳಿದರೆ ಆ ಡಾಕ್ಟರುಗಳ ಹತ್ತಿರ ಉತ್ತರವಿಲ್ಲ.”
“ಮಲಗಿದ್ದಾಗ ಈ ಕನಸು ಬಿದ್ದು ಕಲ್ಲು ಗುಂಡೇನಾದರೂ ಕಾಲಿನ ಮೇಲೆ ಬೀಳಿಸಿಕೊಂಡ್ಯೇನೋ?“
“ಹಾಗೇನೂ ನೆನಪಿಲ್ಲ”
“ಇದು ಕನಸೂನ್ನೋದು ಖಾತ್ರೀನಾ?“
“ನನಗಂತೂ ನಿದ್ದೇದೇ ನೆನಪಿಲ್ಲ. ಆದ್ದರಿಂದ ಇದನ್ನು ಕನಸೂನ್ನೋದು ಹ್ಯಾಗೆ? ಬೇಕಿದ್ದರೆ ರಾತ್ರಿ ಕಂಡ ಹಗಲುಗನಸೂಂತ ಹೇಳಬಹುದೇನೋ.”
“ನಿನಗೆಲ್ಲೋ ಭ್ರಮೆ”
“ಅದು ನಿನಗೇ ಯಾಕಾಗಿರಬಾರದು?“
“ಹೋಗಲಿ ಬಿಡು. ಈಗ ಏನು ಮಾಡ್ತೀಯ?“
“ನನ್ನ ಕಾಲನ್ನು ಕಡಿದುಹಾಕಿದ ಆ ಮರವನ್ನು ಕಡಿದುಹಾಕಿ ಈಟ್ ಕಾ ಜವಾಬ್ ಪತ್ಥರ್ ಸೇ..” ಅಂತ ಹಿಂದಿ ಸಿನೇಮಾದ ಹೀರೋ ಹಾಗೆ ಕೇಶವನಿಗೆ ಹೇಳಿಬಿಟ್ಟೆ. ನಾನು ಊರುಗೋಲೂರುತ್ತಾ ಹೆಜ್ಜೆ ಹಾಕಿದೆ.
ಆದರೆ ಈಗ ಇಷ್ಟುದಿನದ ಹುಡುಕಾಟದ ನಂತರವೂ ಆ ಮರ ನನಗೆ ಸಿಕ್ಕಿಲ್ಲ. ನನ್ನ ಕಂಕುಳ ಕೆಳಗಿನ ಊರುಗೋಲು ಆ ಮರವೇ ಎಂದು ನನಗೀಗ ಖಾತ್ರಿ ಅನ್ನಿಸಲಿಕ್ಕೆ ಸುರುವಾಗಿದೆ. ಆದ್ದರಿಂದ ಈಗೀಗ ನಾನು ಊರುಗೋಲನ್ನು ಸುದೀರ್ಘ ದಿಟ್ಟಿಸುತ್ತೇನೆಯೇ ಹೊರತು ಹುಡುಕಾಟದ ಪ್ರಯಾಣಗಳನ್ನು ಕೈಗೊಳ್ಳುತ್ತಿಲ್ಲ.
(1988ರಲ್ಲಿ ಬರೆದ ಕಥೆ)
ಈ ಕಥಾಸಂಕಲನದ ಖರೀದಿಗೆ ಸಂಪರ್ಕಿಸಿ : ಮನೋಹರ ಗ್ರಂಥಮಾಲಾ
ಪರಿಚಯ : ಎಂ.ಎಸ್. ಶ್ರೀರಾಮ್ ಹುಟ್ಟಿದ್ದು 1962ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದ್‌ನಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಿಂದ ಡಾಕ್ಟರೇಟ್ ಪಡೆದ ಶ್ರೀರಾಮ್ ಆನಂತರ ಆಣಂದದ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ಮೊದಲ ಕಥಾ ಸಂಕಲನ ‘ಮಾಯಾದರ್ಪಣ‘ಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ. ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು (ಅಂಕಿತ ಪುಸ್ತಕ) ಕಥಾಸಂಗ್ರಹಕ್ಕೆ 2014ರ ಮತ್ತು ಅರ್ಥಾರ್ಥ (ಅಕ್ಷರ ಪ್ರಕಾಶನ) ಪ್ರಬಂಧಗಳ ಸಂಗ್ರಹಕ್ಕೆ 2015ರ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ಇದಲ್ಲದೇ ಅವರವರ ಸತ್ಯ (ಸಪ್ನಾ ಬುಕ್ ಹೌಸ್), ತೇಲ್ ಮಾಲಿಶ್ (ಅಂಕಿತ ಪುಸ್ತಕ), ನಡೆಯಲಾರದ ದೂರ, ಹಿಡಿಯಲಾಗದ ಬಸ್ಸು (ಆಕೃತಿ ಪ್ರಕಾಶನ) ಎಂಬ ಕಥಾಸಂಕಲನಗಳನ್ನೂ, ಬೇಟಯಲ್ಲ ಆಟವೆಲ್ಲ ಎಂಬ ಕಥಾಕಾದಂಬರಿಯನ್ನೂ, ಕನಸು ಕಟ್ಟುವ ಕಾಲ (ವಸಂತ ಪ್ರಕಾಶನ) , ಶನಿವಾರ ಸಂತೆ (ಅಂಕಿತ ಪುಸ್ತಕ), ಕಥನಕುತೂಹಲ (ಅಕ್ಷರ ಪ್ರಕಾಶನ) ಎಂಬ ಪ್ರಬಂಧ ಸಂಕಲನಗಳನ್ನೂ ಹಾಗೂ ವೈವಿ ರೆಡ್ಡಿಯವರ ಜೀವನದ ಬಗ್ಗೆ ಬಂದ ಪುಸ್ತಕಗಳನ್ನಾಧರಿಸಿ ಬರೆದ ಭಿನ್ನ-ಅಭಿಪ್ರಾಯ ಎನ್ನುವ ನಿರೂಪಣೆಯನ್ನೂ ಶ್ರೀರಾಮ್ ಪ್ರಕಟಿಸಿದ್ದಾರೆ.
ಇದನ್ನೂ ಓದಿ : New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು
ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ಮಲ್ಲಿಕಾರ್ಜುನ ಹಿರೇಮಠರ ಹೊಸ ಕಾದಂಬರಿ ‘ಹಾವಳಿ’
Published On - 2:48 pm, Fri, 27 August 21