Bangalore Literature Festival : ‘ನಾನು ಪ್ರಶಸ್ತಿ ನಿರೋಧಕ ಲಸಿಕೆಯನ್ನು ಹಾಕಿಕೊಂಡೇ ಓಡಾಡುತ್ತಿದ್ದೇನೆ’ ಕಥೆಗಾರ ಜೋಗಿ

|

Updated on: Dec 16, 2021 | 6:08 PM

Atta Galatta Book Prize : ‘ಈಗಲೂ ಅನಾಮಿಕನಾಗಿಯೇ ಇರಲು ಇಚ್ಛಿಸುತ್ತೇನೆ. ಅವರಾಗಿಯೇ ಕೇಳದ ಹೊರತು ನಾನು ಕತೆಗಾರ, ಪತ್ರಕರ್ತ ಅಂತ ತಪ್ಪಿಯೂ ಹೇಳಿಕೊಳ್ಳುವುದಿಲ್ಲ. ಬಸ್ಸಿನಲ್ಲಿ ಪಕ್ಕದ ಸೀಟಲ್ಲಿ ಕುಳಿತವರು ಮಾತಾಡಿಸಿದರೆ ಗುಮಾಸ್ತ, ಹಾಲಿನ ಡಿಪೋ, ರೇಷನ್ ಅಂಗಡಿ, ಹೋಟೆಲ್ ಅಂತ ತೋಚಿದ್ದನ್ನು ಹೇಳುತ್ತೇನೆ. ಜನಜಂಗುಳಿಯಲ್ಲಿ ಬೆರೆತುಹೋಗುವುದು ಕೊಡುವಷ್ಟು ಆನಂದವನ್ನು ಮತ್ಯಾವುದೂ ಕೊಡುವುದಿಲ್ಲ.’ ಜೋಗಿ

Bangalore Literature Festival : ‘ನಾನು ಪ್ರಶಸ್ತಿ ನಿರೋಧಕ ಲಸಿಕೆಯನ್ನು ಹಾಕಿಕೊಂಡೇ ಓಡಾಡುತ್ತಿದ್ದೇನೆ’ ಕಥೆಗಾರ ಜೋಗಿ
ಪ್ರಶಸ್ತಿ ಪುರಸ್ಕೃತ ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್)
Follow us on

Atta Galatta Bengaluru Literature Festival Book Award 2021 : ಜನಪ್ರಿಯ ಲೇಖಕ, ಕಥೆಗಾರ ಮತ್ತು ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) 2021ನೇ ಸಾಲಿನ ಅಟ್ಟಾ ಗಲಾಟ್ಟಾ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಬುಕ್ ಅವಾರ್ಡ್​ಗೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಇವರು ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈತನಕ ಇವರು ಒಟ್ಟು 74 ಕೃತಿಗಳನ್ನು ರಚಿಸಿದ್ದಾರೆ; 18 ಕಾದಂಬರಿ, 14 ಸಣ್ಣಕಥೆ, 19 ಅಂಕಣಬರಹ, ಎರಡು ನಾಟಕ, 2 ಅನುಭವ ಕಥನ, 6 ಜೀವನಸ್ಫೂರ್ತಿಯ ಕಥಾನಕ, 2 ಕಲಿಕಾ ಕೃತಿ, 4 ವ್ಯಕ್ತಿಚಿತ್ರಗಳು ಮತ್ತು ಇತರೇ 7 ಕೃತಿಗಳು. ಸದ್ಯ ‘ಕನ್ನಡ ಪ್ರಭ’ ಸಂಪಾದಕರಾಗಿರುವ ಇವರು ವಾಸಿಸುತ್ತಿರುವುದು ಬೆಂಗಳೂರಿನಲ್ಲಿ. ಊರು ಮೈಸೂರು. ಹುಟ್ಟಿದ್ದು ಸುರತ್ಕಲ್ ಸಮೀಪದ ಹೊಸಬೆಟ್ಟು. ಬಾಲ್ಯ ಗುರುವಾಯನಕೆರೆ ಮತ್ತು ಉಪ್ಪಿನಂಗಡಿ. ಈ ಸಂದರ್ಭದಲ್ಲಿ, ‘ನಿಮ್ಮೊಳಗಿನ ಬರಹಗಾರನನ್ನು ರೂಪಿಸಿದ ಅನಾಮಿಕತೆ, ಅನಿವಾರ್ಯತೆ ಮತ್ತು ಆ ಎರಡರ ಮಧ್ಯೆ ಜೀಕು ಹೊಡೆಯುವ ಸ್ವಾತಂತ್ರ್ಯ, ಬೆರಗು, ಆತಂಕ, ಅನಿಶ್ಚಿತತೆ, ಜೀವಂತಿಕೆ, ಸಂಕಟ, ಖುಷಿ ಇತ್ಯಾದಿ ಕುರಿತು ‘ಟಿವಿ9 ಕನ್ನಡ ಡಿಜಿಟಲ್​’ ನೊಂದಿಗೆ ಹಂಚಿಕೊಳ್ಳಬಹುದೆ ಎಂದು ಕೇಳಿದಾಗ ಅವರು ಮನಬಿಚ್ಚಿದರು.      

ನನ್ನನ್ನು ಅನೇಕರು ಅನೇಕ ಥರ ಕರೆಯುತ್ತಾರೆ. ಪ್ರತಿಭಾ ನಂದಕುಮಾರ್ ಒಮ್ಮೆ ನನ್ನ ಕುರಿತು ಬರೆಯುತ್ತಾ ಮೆಚ್ಚುಗೆಯಿಂದ ರೈಟಿಂಗ್ ಮೆಷೀನ್ ಅಂದರು. ಸಿಕ್ಕಾಪಟ್ಟೆ ಬರೆಯುತ್ತಾನೆ, ದಿನಕ್ಕೊಂದು ಕಾದಂಬರಿ ಬರೆಯುತ್ತಾನೆ. ತಿಂಗಳಿಗೊಂದು ಪುಸ್ತಕ ತರುತ್ತಾನೆ ಅಂತೆಲ್ಲ ನನ್ನ ಮಿತ್ರರು, ಹಿತೈಷಿಗಳು, ಹಿತಶತ್ರುಗಳು ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಕತೆಗಳನ್ನು ಹೇಳುತ್ತಿರುತ್ತಾರೆ. ಹಾಗೆ ಹೇಳಿದಾಗ ನನಗೆ ಬೇಸರವೇನೂ ಆಗುವುದಿಲ್ಲ. ಬದಲಿಗೆ ಸಂತೋಷವೇ ಆಗುತ್ತದೆ. ನಮ್ಮ ಕುರಿತು ಯಾರಾದರೂ ಸತ್ಯ ಹೇಳಿದಾಗ ಸಂತೋಷವಾಗುತ್ತದೋ ಇಲ್ಲವೋ ಹೇಳಲಾರೆ, ಸುಳ್ಳು ಹೇಳಿದಾಗಂತೂ ಭಯಂಕರ ಖುಷಿಯಾಗುತ್ತದೆ.

ನಾನು ಬರೆಯುವುದು ಕೊಂಚ ಜಾಸ್ತಿ ಅನ್ನುವುದು ಸುಳ್ಳೇನಲ್ಲ. ದಿನಕ್ಕೆ ಹತ್ತು ಪುಟಗಳನ್ನಂತೂ ನಾನು ಬರೆಯುತ್ತೇನೆ. ಅದೃಷ್ಟವಶಾತ್ ನಾನು ಅವನ್ನೆಲ್ಲ ಪ್ರಕಟಿಸಲಿಕ್ಕೆ ಹೋಗುವುದಿಲ್ಲ. ಬರೆಯುವುದು ನನಗೆ ಒಂಥರ ರಿಯಾಝ್ ಇದ್ದಂತೆ. ಇಂಗ್ಲಿಷ್ ಕವಿತೆ ಕಂಡರೆ ಅದನ್ನು ಅನುವಾದಿಸಿಬಿಡೋದರಿಂದ ಹಿಡಿದು, ಥಟ್ಟನೆ ಹೊಳೆದ ಯಾವುದಾದರೂ ಸಂಗತಿಯ ಬಗ್ಗೆ ಒಂದೆರಡು ಪುಟ ಬರೆಯೋದು, ಆವತ್ತು ಓದಿದ ಪುಸ್ತಕದ ಬಗ್ಗೆ ಮುನ್ನೂರು ಪದ ಬರೆದು, ಹಾಗೆ ಬರೆದಿದ್ದರಲ್ಲಿ ಆಕ್ಷೇಪಣೆಗಳಿದ್ದರೆ ನೇರವಾಗಿ ಲೇಖಕರಿಗೆ ಕಳಿಸಿಕೊಡೋದು, ಮೆಚ್ಚುಗೆಯಿದ್ದರೆ ಫೇಸ್‌ಬುಕ್ಕಿಗೋ ನಮ್ಮ ಕತೆಕೂಟ ಎಂಬ ವಾಟ್ಸ್ಯಾಪ್ ಗ್ರೂಪಿಗೋ ಹಾಕುವುದು, ನಮ್ಮೂರಿನಿಂದ ಯಾರಾದರೂ ಫೋನ್ ಮಾಡಿ ಒಂದು ಲೇಖನ ಕೊಡಿ ಅಂತ ಹೇಳಿದರೆ ಬರೆದು ಕೊಡೋದು, ತುಂಬ ಕಾಡಿದ ಘಟನೆಗಳಿಗೆ ಪ್ರತಿಕ್ರಿಯಿಸುವುದು- ಹೀಗೆ ದಿನಕ್ಕೆ ಹತ್ತಾರು ಪುಟ ಹೇಗೋ ಬರೆದುಹೋಗುತ್ತದೆ.

ನಾನಿದನ್ನು ಹೈಸ್ಕೂಲು ದಿನಗಳಿಂದಲೇ ಮಾಡುತ್ತಾ ಬಂದಿದ್ದೇನೆ. ನನ್ನ ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿಯ ಬರಹಗಳ ಕಾಟದಿಂದ ನಮ್ಮ ಇಂಗ್ಲಿಷ್ ಪ್ರಾಧ್ಯಾಪಕರು ಎಷ್ಟು ಕಂಗಾಲಾಗಿದ್ದರೆಂದರೆ, ಕೊನೆಕೊನೆಗೆ ನಾವು ಏನು ಬರೆದುಕೊಂಡು ಹೋದರೂ ಯಾವುದಾದರೂ ಪತ್ರಿಕೆಗಳಿಗೆ ಕಳಿಸಿ ಅನ್ನುತ್ತಿದ್ದರು. ಪತ್ರಿಕೆಗೆ ಕಳಿಸು ಅನ್ನುವುದು ಅವರು ಲೇಖನ ಚೆನ್ನಾಗಿದೆ ಅಂದ ಹಾಗೆ ಎಂದು ಭಾವಿಸಿ, ನಾವು ಅದನ್ನು ವಾರಪತ್ರಿಕೆ, ಮಾಸಪತ್ರಿಕೆ, ದಿನಪತ್ರಿಕೆಗಳಿಗೆಲ್ಲ ಕಳಿಸುತ್ತಿದ್ದೆವು. ನಾವು ಕಳುಹಿಸಿದ್ದು ಒಂದೇ ವಾರದಲ್ಲಿ ವಾಪಸ್ಸು ಬರುತ್ತಿತ್ತು. ನಿಮ್ಮ ಬರಹದ ಯೋಗ್ಯತೆ ಇಷ್ಟೇ ಅಂತ ನಮಗೆ ಗೊತ್ತಾಗಲಿಕ್ಕೆ ಮೇಷ್ಟ್ರು ಅವನ್ನು ಪತ್ರಿಕೆಗೆ ಕಳಿಸಲು ಹೇಳುತ್ತಿದ್ದರು ಅಂತ ಎಷ್ಟೋ ವರ್ಷಗಳ ನಂತರ ನಮಗೆ ಅನ್ನಿಸಿತ್ತು.

ನಾನು ಅಜ್ಞಾತವಾಗಿ ಓದುತ್ತಾ, ಬರೆಯುತ್ತಾ ಇರಲಿಕ್ಕೆ ಇಷ್ಟಪಡುವವನು. ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ ಕನ್ನಡಪ್ರಭಕ್ಕೆ ಒಂದು ಅಂಕಣ ಬರೆಯುತ್ತಿದ್ದೆ. ಅದು ಎಷ್ಟು ರಹಸ್ಯವಾಗಿತ್ತು ಎಂದರೆ ಕನ್ನಡಪ್ರಭದ ಪುರವಣಿ ವಿಭಾಗದಲ್ಲಿದ್ದ ಉದಯ ಮರಕಿಣಿ, ಶಾಮಸುಂದರ, ಸುಧಾಕರ ದರ್ಬೆ, ಸಿ. ಸೀತಾರಾಮ್- ಮುಂತಾದವರಿಗೆ ಕೂಡ ಅದರ ಲೇಖಕ ಯಾರೆಂಬುದು ಗೊತ್ತಿರಲಿಲ್ಲ. ಆಗಲೇ ನಾನು ಜೋಗಿ ಎಂಬ ಹೆಸರಲ್ಲಿ ಬರೆಯಲು ಆರಂಭಿಸಿದ್ದು. ಒಂದೆರಡು ವರುಷ ಅಜ್ಞಾತವಾಗಿ ಬರೆದ ನಂತರ ರವಿ ಕಾಣದ್ದು ಅಂಕಣವನ್ನು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಆರಂಭಿಸಿದಾಗ ರವಿ ಬೆಳಗೆರೆ ಜೋಗಿ ಯಾರೆಂಬುದನ್ನು ಬಹಿರಂಗಗೊಳಿಸಿದರು.

ಜೋಗಿ ರವಿ ಬೆಳಗೆರೆಯೊಂದಿಗೆ

ನಾನು ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದದ್ದು ಶ್ರೀಶಾ ಎಂಬ ಹೆಸರಲ್ಲಿ. ಅದು ನನ್ನ ಅಪ್ಪ ಮತ್ತು ಅಮ್ಮನ ಹೆಸರಿನ ಮೊದಲಕ್ಷರವಾಗಿತ್ತು. ಶಾಮಸುಂದರ್ ಅವರ ವೆಬ್​ಸೈಟಿಗೆ ಬರೆಯಲು ಹೇಳಿದಾಗ ಸತ್ಯವ್ರತ ಹೊಸಬೆಟ್ಟು ಎಂಬ ಹೆಸರಲ್ಲಿ ಬರೆಯಲು ಆರಂಭಿಸಿದೆ. ಕನ್ನಡಪ್ರಭ ಸೇರಿದಾಗ ಜಾನಕಿ ಹೆಸರಲ್ಲಿ ಹಾಯ್ ಬೆಂಗಳೂರು ಪತ್ರಿಕೆಗೆ ಬರೆಯುತ್ತಿದ್ದೆ. ಇದಲ್ಲದೇ, ಅನೇಕ ಹೆಸರುಗಳಲ್ಲಿ ಬರೆದದ್ದೂ ಸಾಕಷ್ಟಿವೆ. ನಾನು ಬರೆದದ್ದನ್ನು ನಾನು ಕತ್ತರಿಸಿ, ಶೇಖರಿಸಿ ಇಟ್ಟುಕೊಂಡದ್ದೂ ಕಡಿಮೆಯೇ. ಬರಹದ ಸಂತೋಷ ಇರುವುದು ಬರೆವಣಿಗೆಯಲ್ಲೇ ಹೊರತು, ನಂತರದಲ್ಲಿ ಅಲ್ಲ ಎಂದು ನನಗೀಗಲೂ ಅನ್ನಿಸುತ್ತಿರುತ್ತದೆ.

ನನ್ನ ಮೊದಲ ಪುಸ್ತಕ ಬಂದದ್ದು ನಾನು ಬರೆಯಲಿಕ್ಕೆ ಆರಂಭಿಸಿ ಹದಿನಾರು ವರುಷಗಳ ನಂತರ. ಒಟ್ಟಿಗೇ ಮೂರು ಪುಸ್ತಕಗಳನ್ನು ನೆಮ್ಮದಿ ಪ್ರಕಾಶನದ ರಾಜಾ ಚೆಂಡೂರ್ ತಂದರು. ನಾನು ಅವುಗಳ ಬಿಡುಗಡೆಗೆ ಹೋಗಲಿಲ್ಲ. ಆಮೇಲೆ ಜಾನಕಿ ಕಾಲಂ ಪ್ರಕಟವಾದಾಗಲೂ ನನ್ನ ಅನಾಮಿಕತೆ ಬಯಲಾಗುತ್ತದೆ ಎಂಬ ಕಾರಣಕ್ಕೆ ನಾನು ಹೋಗಿರಲಿಲ್ಲ.

ಅನಾಮಿಕತೆಯ ಲಾಭವೇನು ಎಂದು ನಾನೇ ಹಲವು ಸಲ ಕೇಳಿಕೊಂಡಿದ್ದೇನೆ. ನನಗೆ ಹೊಳೆದ ಉತ್ತರಗಳಿವು. ನಾವು ಯಾರೆಂಬುದು ಗೊತ್ತಿಲ್ಲದೇ ಇದ್ದಾಗ ನಮಗೊಂದು ಬಗೆಯ ನಿರಾಳತೆ ಇರುತ್ತದೆ. ಲೇಖಕನ ಮೇಲೆ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಒತ್ತಡಗಳಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬರೆದವನು ಸಮಾಜದ ಮೆಚ್ಚುಗೆಯನ್ನೋ ಟೀಕೆಯನ್ನೋ ಎದುರಿಸಬೇಕಾಗಿಲ್ಲ. ನಮ್ಮನ್ನು ಗೈಡ್ ಮಾಡುವವರ ಸಂಖ್ಯೆ ಕಡಿಮೆಯಿರುತ್ತದೆ. ನೀವೊಂದು ಪುಸ್ತಕದ ಬಗ್ಗೆ ನಾಲ್ಕು ಸಾಲು ಟೀಕಿಸಿ ಬರೆದು ನೋಡಿ. ಹತ್ತಾರು ಮಂದಿ ನಿಮ್ಮನ್ನು ಹುರಿದುಂಬಿಸಲು ಮುಂದಾಗುತ್ತಾರೆ. ಇನ್ನಷ್ಟು ಟೀಕಿಸಬೇಕಿತ್ತು ಅನ್ನುತ್ತಾರೆ. ನಿಮ್ಮ ಟೀಕೆ ವಸ್ತುನಿಷ್ಠವೂ ಪ್ರಾಮಾಣಿಕವೂ ಆಗಿದ್ದರೂ ಅದಕ್ಕೆ ಬೇರೆ ಬೇರೆ ರೂಪಗಳು ದೊರೆಯುತ್ತಾ ಹೋಗುತ್ತವೆ. ಅದು ಕ್ರಮೇಣ ನಮ್ಮನ್ನು ಮುದುಡುವಂತೆ ಮಾಡುತ್ತವೆ.

ಕತೆ, ಕಾದಂಬರಿಗಳ ವಿಚಾರದಲ್ಲೂ ಅಷ್ಟೇ. ನಮ್ಮ ಅನೇಕ ಲೇಖಕರು ಅನಾಮಿಕರಾಗಿದ್ದಾಗಲೇ ಹೆಚ್ಚು ಆಪ್ತರಾಗಿದ್ದರು. ಟಿ.ಕೆ. ರಾಮರಾವ್, ಭಾರತೀಸುತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶ್ರೀಕೃಷ್ಣ ಆಲನಹಳ್ಳಿ- ಇವರನ್ನೆಲ್ಲ ನಾನು ಯಾವತ್ತೂ ಭೇಟಿಯಾಗಿರಲೇ ಇಲ್ಲ. ಅವರ ಕುರಿತ ಅಕ್ಕರೆ ಈಗಲೂ ಮುಕ್ಕಾಗಿಲ್ಲ. ಲೇಖಕನ ಮೇಲಿರುವ ಪ್ರೀತಿಗೂ ಅವನ ಬರಹಕ್ಕೂ ಸಂಬಂಧವಿದೆ ಎಂದು ಭಾವಿಸಬಾರದು. ಬರಹ ಕೆಟ್ಟದಾಗಿದೆ ಅಂತ ಆಗಲೂ ಅನ್ನಿಸುತ್ತಿತ್ತು. ಆದರೆ ಲೇಖಕರ ಮೇಲಿನ ಪ್ರೀತಿ ಮಾತ್ರ ಮಸುಕಾಗುತ್ತಿರಲಿಲ್ಲ. ಅನಾಮಿಕತೆಗಿರುವ ಗುಣ ಅದು.

ಜೋಗಿ (ಗಿರೀಶ್ ರಾವ್ ಹತ್ವಾರ್)

ಹೆಮಿಂಗ್ವೇಯನ್ನು ನಾನು ನೋಡಿಲ್ಲ. ಆದರೆ ಹೆಮಿಂಗ್ವೇ ನನ್ನ ಮನಸ್ಸಿನಲ್ಲಿ ಬಹಳ ಕಾಲ ಜತೆಗೆ ಜೀವಿಸಿದ ಹಿರಿಯ ಮಿತ್ರನಂತೆ ಉಳಿದುಬಿಟ್ಟಿದ್ದಾರೆ. ಯೇಟ್ಸ್ ಕೂಡ ನನಗೆ ಆಪ್ತ. ಬ್ರೆಕ್ಟ್ ನನ್ನ ಕೈ ಹಿಡಿದು ನಡೆಸಿದ ಗುರು, ಚಿನುಅ ಅಚಿಬೆಯ ಮನೆಯನ್ನು ನಾನು ನೋಡಿ, ಅಲ್ಲೇ ಊಟ ಮಾಡಿ ಬಂದಂತೆ ಅನ್ನಿಸುತ್ತಿರುತ್ತದೆ. ಸ್ಯಾಮ್ಯುಯೆಲ್ ಜಾನ್ಸನ್ ನನ್ನ ಇಂಗ್ಲಿಷ್ ಮೇಷ್ಟರ ಥರ ಕಾಣುತ್ತಾನೆ.

ಅನಾಮಿಕತೆ ಎಂಬುದು ಎಲ್ಲಿದೆ ಹಾಗಾದರೆ? ನಾವು ಎದುರು ಕಾಣಿಸಿಕೊಂಡು ನಾನು ಲೇಖಕ ಅಂತ ಹೇಳಿಕೊಂಡು ಓಡಾಡುತ್ತಾ, ನನ್ನ ಬರಹ ಓದಿ ಅಂತ ಪುಸಲಾಯಿಸುತ್ತಾ ಬದುಕಬೇಕೇ ಅಥವಾ ಶಿಲಾಯುಗದ ಮನುಷ್ಯ ಗುಹೆಯಲ್ಲಿ ತನಗೆ ತೋಚಿದ್ದನ್ನು ತನಗೆ ತೋಚಿದ ಭಾಷೆಯಲ್ಲಿ ಗೀಚಿ ಕಣ್ಮರೆಯಾದಂತೆ ಮರೆಯಾಗಬೇಕೇ? ಈ ಪ್ರಶ್ನೆಗೆ ಉತ್ತರ ನನಗೆ ಗೊತ್ತಿದೆ. ಗೊತ್ತಿರುವ ಉತ್ತರದಂತೆ ಬದುಕುವುದು ಕಷ್ಟವಿದೆ.

ನಾನು ಈಗಲೂ ಅನಾಮಿಕನಾಗಿಯೇ ಇರಲು ಇಚ್ಛಿಸುತ್ತೇನೆ. ಅವರಾಗಿ ಕೇಳದೇ ಹೋದರೆ ಯಾರ ಹತ್ತಿರವೂ ನಾನು ಕತೆಗಾರ ಅಂತ ಹೇಳುವುದಿಲ್ಲ, ಪತ್ರಕರ್ತ ಅಂತ ತಪ್ಪಿಯೂ ಹೇಳಿಕೊಳ್ಳುವುದಿಲ್ಲ. ಬಸ್ಸಿನಲ್ಲಿ ಪಕ್ಕದ ಸೀಟಲ್ಲಿ ಕುಳಿತವರು ಮಾತಾಡಿಸಿದರೆ ಗುಮಾಸ್ತ, ಹಾಲಿನ ಡಿಪೋ, ರೇಷನ್ ಅಂಗಡಿ, ಹೋಟೆಲ್ ಅಂತ ತೋಚಿದ್ದನ್ನು ಹೇಳುತ್ತೇನೆ. ಜನಜಂಗುಳಿಯಲ್ಲಿ ಬೆರೆತುಹೋಗುವುದು ಕೊಡುವಷ್ಟು ಆನಂದವನ್ನು ಮತ್ಯಾವುದೂ ಕೊಡುವುದಿಲ್ಲ.

ಪ್ರಶಸ್ತಿಯ ಕುರಿತೂ ನನಗೆ ಸ್ಪಷ್ಟ ನಿಲುವುಗಳಿವೆ. ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕುವುದಿಲ್ಲ, ಪುಸ್ತಕ ಬಹುಮಾನಗಳಿಗೆ ಪುಸ್ತಕ ಕಳಿಸುವುದಿಲ್ಲ, ಇವತ್ತು ಪ್ರಶಸ್ತಿ ಪಡೆಯುವುದು ಕಷ್ಟವಲ್ಲ, ಪಡೆಯದೇ ಇರುವುದು ಕಷ್ಟ ಎಂಬುದನ್ನು ನಾನು ಮರೆತಿಲ್ಲ. ಆದ್ದರಿಂದ ಪ್ರಶಸ್ತಿ ನಿರೋಧಕ ಲಸಿಕೆಯನ್ನು ಎರಡು ಡೋಸು ಹಾಕಿಸಿಕೊಂಡೇ ನಾನು ಓಡಾಡುತ್ತೇನೆ.

*

(ಪ್ರಸ್ತುತ ಪ್ರಶಸ್ತಿಯು ಈ ಹಿಂದೆ ವೈದೇಹಿ ಎಚ್. ಎಸ್​. ವೆಂಕಟೇಶಮೂರ್ತಿ, ಜಯಂತ ಕಾಯ್ಕಿಣಿ, ಬೊಳುವಾರ ಮಹಮ್ಮದ ಕುಂಌ, ಕೆ. ವಿ. ತಿರುಮಲೇಶ ಮತ್ತು ಪ್ರತಿಭಾ ನಂದಕುಮಾರ ಅವರಿಗೆ ಲಭಿಸಿತ್ತು.)

ಕಳೆದವಾರ ಬಿಡುಗಡೆಯಾದ ಜೋಗಿಯವರ ಕೃತಿಗಳು : Book Release : ಅಚ್ಚಿಗೂ ಮೊದಲು ; ಇಂದು ಕಥೆಗಾರ ಜೋಗಿ ‘ಕಥೆಪುಸ್ತಕ’ ಮತ್ತು ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’ ಲೋಕಾರ್ಪಣೆ