Poetry: ಅವಿತಕವಿತೆ: ಹಾಸಿದ ಚಾಪೆಯ ಖಾಲಿತನ ರಾತ್ರಿಗಳ ಬೆನ್ನ ಮೇಲಿನ ಗುರುತು
Poem : ಹಸಿವು, ಬಡತನ, ಶೋಷಣೆ ಉಂಡ ದಿನಗಳು, ಕಾಯ್ದು ಆರಿದ ಪ್ರೀತಿ ಇವೆಲ್ಲದರ ಬಿಡುಗಡೆಯ ನಿರಾಳತೆಗಾಗಿ ಒಂದು ಪಥ ಬೇಕಿತ್ತು, ನನ್ನೊಳಗೆ ಮೊಳತೆ ಭಾವ ಬೀಜ ಕಾವ್ಯದ ಗಿಡವಾಯಿತು.
ಅವಿತಕವಿತೆ | AvithaKavite : ಕಾವ್ಯ ನನ್ನ ನಾಡಿ ಮಿಡಿತ, ಕವಿತೆ ಬರೆಯದಿದ್ದರೆ ಏನೋ ಕಳಕೊಂಡ ಭಾವ, ಖಾಲಿತನ. ಹಸಿವು, ಬಡತನ, ಶೋಷಣೆ ಉಂಡ ದಿನಗಳು, ಕಾಯ್ದು ಆರಿದ ಪ್ರೀತಿ ಇವೆಲ್ಲದರ ಬಿಡುಗಡೆಯ ನಿರಾಳತೆಗಾಗಿ ಒಂದು ಪಥ ಬೇಕಿತ್ತು, ನನ್ನೊಳಗೆ ಮೊಳತೆ ಭಾವ ಬೀಜ ಕಾವ್ಯದ ಗಿಡವಾಯಿತು. ಕವಿತೆ ಒಂದು ಧ್ಯಾನಸ್ಥ ಸ್ಥಿತಿಯ ಹುಟ್ಟು. ಆಗ ತಾನೆ ಹುಟ್ಟಿದ ಮಗುವಿಗೆ ಮುಖ ಮೂಗು ತಿದ್ದುವ ರೀತಿ ಕವಿತೆಯನ್ನೂ ತಿದ್ದಬೇಕು. ಅವ್ಯಕ್ತಭಾವವೊಂದು ಕವಿತೆಯಾಗಿ ರೂಪತಾಳಿ ನಿಟ್ಟುಸಿರು ಬಿಡುವ ಹೊತ್ತಿಗೆ ಪರಕಾಯ ಪ್ರವೇಶ ಮಾಡಿದಷ್ಟು ಹಗುರ ನಿರಾಳ. ಚಂದ್ರನಿಲ್ಲದ ಬಾನಲ್ಲಿ ಚುಕ್ಕಿಯೊಂದು ಮೂಡಿ ಬೆಳಕಾದ ಭಾವ ಕವಿತೆಯ ಹುಟ್ಟು. ಸದಾ ನನ್ನ ಕಿರುಬೆರಳಿಡಿದು ಕವಿತೆಯೊಂದು ನಡೆದು ಬರುವ ಭಾವ ನನ್ನ ಅಂತರಂಗದ ದಾರಿ. ಯಾರೂ ಇಲ್ಲದ ಹೊತ್ತು ನನ್ನೊಂದಿಗೆ ಸದ್ದಿಲ್ಲದೆ ಮಾತಿಗಿಳಿಯುವ ಕವಿತೆ ಸಹಜ ಪ್ರಸವವೇದನೆ. ನಿದ್ರೆ ಇಲ್ಲದೆ ಇರಬಲ್ಲೆ ಕವಿತೆಯ ಒಳಸುಳಿ ಇಲ್ಲದೆ ಉಸಿರಾಡಲಾರೆ. ಅದು ಮೈಗಂಟಿದ ಚರ್ಮ. ಬಿದಲೋಟಿ ರಂಗನಾಥ, ಕವಿ
ಈ ನೆಲದ ಮಣ್ಣಿಗೆ ಕಣ್ಣು ಬಿಡಿಸಬೇಕಿದೆ!
ಬೊಗಸೆ ತುಂಬಿದ ಮಣ್ಣು ಕರುಣೆಗೆ ಜೋಳಿಗೆ ಕಟ್ಟಿ ಬೆಳಕು ತುಂಬಿದ ಕಣ್ಣುಗಳನ್ನು ಹುಡುಕುತ್ತಿದೆ…
ಹಸಿದ ಹೊಟ್ಟೆಗಳಲ್ಲಿ ಕನಸು ನೇಣು ಬಿಗಿದುಕೊಂಡಿದೆ ಹಾಸಿದ ಚಾಪೆಯ ಖಾಲಿತನ ರಾತ್ರಿಗಳ ಬೆನ್ನ ಮೇಲಿನ ಗುರುತು
ಮಣ್ಣ ಮೇಲೆ ಮೂಡಿದ ಹೆಜ್ಜೆ ನಡಿಗೆಯನ್ನು ಸಾವರಿಸಿಕೊಂಡಾಗ ಹಿಡಿಗನ್ನಡಿಗೆ ಮೆತ್ತಿದ ಚಿಟ್ಟೆ ಜೀವಬಂದು ರೆಕ್ಕೆ ಬಡಿದಂತೆ ಭಾವ
ಕರುಳಿಲ್ಲದ ಕಾವ್ಯ ಮೂಳೆ ಹೊತ್ತವನ ದಾರಿದೀಪವಾಗದು ಅವಮಾನದ ಬೆಂಕಿಯಲ್ಲಿ ಬೆಂದವನು ಕತ್ತಲೆ ತಬ್ಬಿಯೇ ನಡೆಯುತ್ತಿದ್ದಾನೆ ಅಕ್ಷರ ಹೊತ್ತ ಬೋರ್ಡುಗಳು ತುಕ್ಕಿಡಿದು ಕೂತಿರುವಾಗ… ಬೆಳಕ ಬಿತ್ತುವೆನೆಂದ ಮೂರ್ಖ ಬಿಳಿಗಡ್ಡ ಬಿಟ್ಟು ಕೂತವನೆ ಮೌಢ್ಯ ಕಟ್ಟಿದ ಗುಡಿಗೆ ದೇಶವೇ ಹೂದವನ ಎಸೆಯುತ್ತಿದೆ
ಮುಖವಾಡಗಳ ಕಳಚದ ಧರ್ಮ ಮನುಷ್ಯತ್ವ ತೂರುತ್ತಿದೆ ಗಾಳಿ ಗಂಗಾನದಿಯ ಮೈಸವರಿದೆ ಈ ನೆಲದ ಮಣ್ಣಿಗೆ ಕಣ್ಣು ಬಿಡಿಸಬೇಕಿದೆ ! ಕವಲು ದಾರಿಗಳು ಹೆದ್ದಾರಿಯ ಸೇರಬೇಕಿದೆ.
ನಾಗರಾಜ ಪೂಜಾರರ ಕವಿತೆಯನ್ನೂ ಓದಿ : Poetry: ಅವಿತಕವಿತೆ; ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ
ಕಾವ್ಯ ತಾನು ಬದುಕುತ್ತಿರುವ ಸಮಾಜದ ಒಳದನಿಯ ಬಹಿರ್ರೂಪ. ದಮನಿತರ ದನಿಯಾಗಿ ಅಕ್ಷರಕ್ಕೆ ಅಂತಃಕರಣ ತುಂಬಿದ ಬಿದಲೋಟಿ ರಂಗನಾಥ್ ವಿಶಿಷ್ಟ ಹೆಜ್ಜೆ ಮೂಡಿಸುತ್ತಿರುವ ಅಂತರ್ಮುಖಿ ಕವಿ. ಇವರು ಬಳಸುವ ಪ್ರತಿಮೆ, ರೂಪಕ, ಲಯ, ನುಡಿಗಟ್ಟುಗಳು ಪರಿಚಿತವಾದವುಗಳಾದರೂ ಒಂದು ಓದಿಗೆ ಕವಿತೆ ದಕ್ಕುವಂತದ್ದಲ್ಲ ಬಹುಮಗ್ಗಲಿನಿಂದ ನೋಡಿದಾಗ ಮಾತ್ರ ಇವರ ಕಾವ್ಯದ ಆಳ ಅಗಲವನ್ನು ಅರಿಯಲು ಸಾಧ್ಯವಾದೀತು. ಆತ್ಮಶೋಧನೆ ಶೋಧನೆಗೆ ಅವಕಾಶ ಮಾಡಿಕೊಡುತ್ತಲೇ ಓದುಗನ ಅಂತರಂಗವನ್ನು ಮುಟ್ಟುವ ಪ್ರಮಾಣಿಕತೆ ಇದೆ. ಇವರ ಕವಿತೆಗಳಲ್ಲಿ ಇಡಾಡಿದ ಭಾವಗಳು ಕೇಂದ್ರ ನೆಲೆಯನ್ನೇ ಆಶ್ರಯಿಸಿ ಹುಟ್ಟಿವೆ. ಇವರ ಕವಿತೆಗಳು ಸರೀಕರ ಕವಿತೆಗಳೊಂದಿಗೆ ಸಂವಾದಿಸುತ್ತಲೇ ಭಿನ್ನತೆಯನ್ನು ಸ್ಥಾಪಿಸುತ್ತವೆ. ಸಿದ್ದರೂಪದ ಮೀಮಾಂಸೆಯ ಚೌಕಟ್ಟಿನಲ್ಲಿ ಗ್ರಹಿಸಲು ಸಾಧ್ಯವಾಗದೆ ತನ್ನದೆ ಹೊಸ ಕಾವ್ಯ ಮೀಮಾಂಸೆಯನ್ನು ಹುಟ್ಟು ಹಾಕಲು ಎಡೆಮಾಡಿಕೊಡುತ್ತವೆ. ಇದು ಒಬ್ಬ ಕವಿಯ ಗೆಲುವು ವೈಶಿಷ್ಟ್ಯ, ಜೀವಪರಕಾಳಜಿ. ಪ್ರೊ. ಮ.ಲ.ನ. ಮೂರ್ತಿ, ಸಾಹಿತಿ
ಬಿದಲೋಟಿ ರಂಗನಾಥ : (ರಂಗನಾಥ ಬಿ.ಎಂ) 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನನ. ವೃತ್ತಿಯಲ್ಲಿ ವಕೀಲಿಕೆ. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ನಾಲ್ಕು ಕವನ ಸಂಕಲನಗಳು ಪ್ರಕಟ. ‘ಸಂಕ್ರಮಣ’ ಬಹುಮಾನ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ ‘ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ’ ಹಾಗೂ ‘ಶಾಲಿನಿ ಪುರಸ್ಕಾರ’ ಲಭಿಸಿವೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಜ. ನಾ. ತೇಜಶ್ರೀ ಅವರ ಕವಿತೆಯನ್ನೂ ಓದಿ : Poetry: ಅವಿತಕವಿತೆ; ನನ್ನ ಪುಟ್ಟತಂಗಿಯ ಪುಟ್ಟಪುಟ್ಟ ಪಾದಗಳನ್ನೂ ಹೊತ್ತೊಯ್ದರು ಅವರು