Chitra Film society : ಸಿನೆಮಾ ಥಿಯೇಟರ್ಗಳಲ್ಲಿ ಆಗ ಕಮರ್ಷಿಯಲ್ ಸಿನೆಮಾಗಳನ್ನಷ್ಟೇ ತೋರಿಸುತ್ತಿದ್ದರು. ಹಾಗಿದ್ದರೆ ಹೊಸ ಅಲೆಯ ಕಲಾತ್ಮಕ, ಪ್ರಯೋಗಾತ್ಮಕ ಸಿನೆಮಾಗಳನ್ನು ಎಲ್ಲಿ ನೋಡುವುದು? ಎಂಬ ಪ್ರಶ್ನೆಗಳು ಉದ್ಭವಿಸತೊಡಗಿದಾಗ ಸತ್ಯಜೀತ್ ರೇಯಂಥ ನಿರ್ದೇಶಕರುಗಳು ಫಿಲಂ ಸೊಸೈಟಿ ಮೂವ್ಮೆಂಟ್ ಹುಟ್ಟುಹಾಕಿದರು. ಆ ಸಂದರ್ಭದಲ್ಲೇ ಧಾರವಾಡದಲ್ಲಿ 1971ರಲ್ಲಿ ಗಿರೀಶ ಕಾರ್ನಾಡ, ಡಾ. ಶಫೀ ಖಾನ್, ವಿಜಯ ನಿಲೇಕಣಿ (ನಂದನ ನಿಲೇಕಣಿ ಸೋದರ)ಯವರು ಸಮಾನಾಸಕ್ತರನ್ನು ಕಲೆಹಾಕಿ ಚಿತ್ರಾ ಫಿಲಂ ಸೊಸೈಟಿಯನ್ನು ಆರಂಭಿಸಿದರು. ಮೊದಲ ಬಾರಿಗೆ ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಲ್ಲಿರುವ ಗ್ಯಾಲರಿ ಕ್ಲಾಸ್ನಲ್ಲಿ ಸಿನೆಮಾ ತೋರಿಸುವ ಮೂಲಕ ಸೊಸೈಟಿಯ ಚಟುವಟಿಕೆಗಳು ಆರಂಭವಾದವು. ನಂತರ ಲಕ್ಷ್ಮೀ ಟಾಕೀಸ್ನಲ್ಲಿ ಸಿನೆಮಾ ಏರ್ಪಡಲಾಗುತ್ತಿತ್ತು. ನಾನು ವಿದ್ಯಾರ್ಥಿದೆಸೆಯಿಂದಲೇ ಸೊಸೈಟಿಯ ಚಿತ್ರಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದೆ. ನಂತರ ಸದಸ್ಯತ್ವ ಪಡೆಯುವುದರ ಮೂಲಕ ಕ್ರಮೇಣ ಅದರ ಭಾಗವೇ ಆಗಿ ಹೋದೆ. ಇದೀಗ ನಮ್ಮ ಸೊಸೈಟಿ ಐವತ್ತರ ಸಂಭ್ರಮದಲ್ಲಿದೆ.
ಅಬ್ದುಲ್ ಖಾನ್, ಕಾರ್ಯದರ್ಶಿ, ಚಿತ್ರಾ ಫಿಲಂ ಸೊಸೈಟಿ, ಧಾರವಾಡ
ಯಾವಾಗ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತದ ಪ್ರಸಾರ ಶುರುವಾಯಿತೋ ಆಗ ಸಿನೆಮಾ ಪ್ರದರ್ಶನಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು, ಉದ್ಯೋಗಸ್ಥರ ಸಂಖ್ಯೆ ಇಳಿಮುಖವಾಯಿತು. ಎಷ್ಟರ ಮಟ್ಟಿಗೆ ಎಂದರೆ, ಕೆಲವೊಮ್ಮೆ ಪ್ರೊಜೆಕ್ಟರ್ ಆಪರೇಟರ್ ಮತ್ತು ಮೂರು ಜನ ಪದಾಧಿಕಾರಿಗಳಷ್ಟೇ ಜಗತ್ತಿನ ಸಾಕಷ್ಟು ಭಾಷೆಗಳ ಸಿನೆಮಾ ನೋಡಿದ್ದಿದೆ. ಒಟ್ಟಿನಲ್ಲಿ ಪ್ರದರ್ಶನ ನಿಲ್ಲಬಾರದು ಎಂಬ ನಿಲುವು. ಈಗ ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಗಳು ಬೆಸೆದುಕೊಂಡಿವೆ. ಸಾಹಿತ್ಯ, ಸಂಗೀತ, ಕಲೆಯ ಅಭಿರುಚಿಯುಳ್ಳವರು ಮತ್ತು ಸಿನಿಮಾಸಕ್ತರು ಪ್ರದರ್ಶನಗಳಲ್ಲಿ ಭಾಗಿಯಾಗುತ್ತಾರೆ. ನಿರ್ದೇಶಕರುಗಳೊಂದಿಗೆ ಸಂವಾದ ನಡೆಸುತ್ತಾರೆ. ಉಪನ್ಯಾಸ, ರಸಗ್ರಹಣ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ : Girish Karnad Birth Anniversary : ‘ಕಾರ್ನಾಡರ ‘ಒಡಕಲು ಬಿಂಬ’ದಿಂದಲೇ ಇಡೀ ಭಾರತವನ್ನು ನೋಡಿದೆ’ ಗಾಯತ್ರಿ ಕೃಷ್ಣ
ಸುವರ್ಣ ಸಂಭ್ರಮದಲ್ಲಿ…
ಜೂನ್ 11,12 ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಗಿರೀಶ ಕಾರ್ನಾಡರ ಸಂಸ್ಮರಣೆ ಮತ್ತು ಗಿರೀಶ ಕಾರ್ನಾಡರು ಸ್ಥಾಪಿಸಿದ ಚಿತ್ರಾ ಫಿಲಮ್ ಸೊಸೈಟಿಯ ‘ಸುವರ್ಣ ಸಂಭ್ರಮ’ ನಡೆಯಲಿದೆ. ಅಂಗವಾಗಿ, ತಲೆದಂಡ ರಂಗಪ್ರಯೋಗದ ಸಾಕ್ಷ್ಯಚಿತ್ರ ಪ್ರದರ್ಶನ, ರಘು ಕಾರ್ನಾಡ ಅವರಿಂದ ಗಿರೀಶ ಕಾರ್ನಾಡರ ‘ಆಡಾಡತಾ ಆಯುಷ್ಯ’ ಆತ್ಮಕಥನದ ಓದು, ಅನುವಾದಕ ಶ್ರೀನಾಥ ಪೆರೂರ ಅವರಿಂದ ಆತ್ಮಕಥನದ ಬಗ್ಗೆ ಮಾತು, ಮರಾಠಿ ನಿರ್ದೇಶಕ ಮೋಹ ಅಗಸೆ ಅವರಿಂದ ‘ಒಂದಾನೊಂದು ಕಾಲದಲ್ಲಿ’ ಸಿನೆಮಾ ಪ್ರದರ್ಶನವಿರುತ್ತದೆ.
ಇದನ್ನೂ ಓದಿ : Girish Karnad Birth Anniversary : ಯಾಹೂ ಚಾಟ್ರೂಮಿನ ‘ಯವಕ್ರಿ’ ಇಂದು ಮಾತಿಗೆ ಸಿಕ್ಕಾಗ
ಕಾರ್ನಾಡರ ಕುರಿತು ಬರಲಿರುವ ಪುಸ್ತಕದ ಬಗ್ಗೆ ನಿರ್ದೇಶಕ ಬಿ. ಸುರೇಶ, ಕಾರ್ನಾಡರ ಸಾಹಿತ್ಯ ಕೊಡುಗೆ ಬಗ್ಗೆ ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆ. ಅವರ ಸಿನೆಮಾ ನಿರ್ದೇಶನದ ಕುರಿತು ನಿರ್ದೇಶಕ ಕೆ. ಎಂ. ಚೈತನ್ಯ ಅನುಭವ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಕಾರ್ನಾಡರ ‘ಉತ್ಸವ’ ಸಿನೆಮಾ ಪ್ರದರ್ಶನವಿರುತ್ತದೆ. ಚಿದಂಬರ ರಾವ್ ನಿರ್ದೇಶನದಲ್ಲಿ ‘ತಲೆದಂಡ’ ರಂಗಪ್ರಯೋಗದ ಸಾಕ್ಷ್ಯಚಿತ್ರ ಪ್ರದರ್ಶನವೂ ಇರುತ್ತದೆ.
Published On - 5:54 pm, Fri, 10 June 22