
ಹಾದಿಯೇ ತೋರಿದ ಹಾದಿ | Haadiye Torida Haadi : ‘ಬೆಂಗಳೂರಿಗೆ ಬಂದಮೇಲೆ ಗಂಡುಮಕ್ಕಳಿಬ್ಬರನ್ನು ಅಂಗನವಾಡಿಗೆ ಬಿಟ್ಟು, ಕೈಗೂಸು ಹೆಣ್ಣುಮಗುವನ್ನು ಮನೆಗೆಲಸಕ್ಕೆ ಕರೆದೊಯ್ಯುತ್ತಿದ್ದೆ. ಒಂದು ಸೀರೆಯನ್ನು ಮನೆಗೆಲಸದವರ ಬಾಗಿಲು ಮತ್ತು ಮಗುವಿನ ಕಾಲಿಗೆ ಕಟ್ಟಿ ಕಡಲೆಪುರಿ ಹಾಕಿ ಆಟವಾಡಿಕೊಳ್ಳಲು ಬಿಟ್ಟು ಕೆಲಸ ಮುಗಿಸುತ್ತಿದ್ದೆ. ಗಂಡ ಏನೂ ಕೆಲಸ ಮಾಡುತ್ತಿರಲಿಲ್ಲ. ಆಗ ಮನೆಗೆಲಸದ ಜೊತೆಗೆ ಬೇರೆಬೇರೆ ಮನೆಗಳಲ್ಲಿ ಎರಡು ಟಬ್ ಬಟ್ಟೆ ಒಗೆದುಕೊಟ್ಟರೆ ನೂರು ರೂಪಾಯಿ ಕೊಡುತ್ತಿದ್ದರು. ಮಗುವಿಟ್ಟುಕೊಂಡು ಆ ಕೆಲಸ ಮಾಡುವುದು ಕಷ್ಟವಾಗುತ್ತಿತ್ತು. ಆಗ ಬಾಗಲೂರಿನಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದೆ. ಸೊಪ್ಪು ಕಂತೆ ಕಟ್ಟಿ ಮಾರಿಬಂದ ಹಣವನ್ನು ಮಾಲೀಕರಿಗೆ ಕೊಡುತ್ತಿದ್ದೆ. ಒಂದು ಕಟ್ಟು ಹತ್ತು ರೂಪಾಯಿಗೆ ಮಾರು ಎಂದು ಅವರು ಹೇಳಿದರೆ, ನಾನು ಎರಡು ಕಟ್ಟು ಮೂವತ್ತು ರೂಪಾಯಿಗೆ ಮಾರಿ ಹೆಚ್ಚು ಲಾಭ ಮಾಡಿಕೊಡುತ್ತಿದ್ದೆ. ಆಗ ಅವರು ನನ್ನ ಜಾಣತನ, ಪ್ರಾಮಾಣಿಕತೆ ಮೆಚ್ಚಿ, ನಿನಗೆ ಮೂರು ಮಕ್ಕಳಿವೆ. ನೀನೇ ಸ್ವಂತ ದುಡಿಮೆ ಮಾಡಿಕೋ ಎಂದು ದಿನಕ್ಕೆ ಐವತ್ತು ಕಂತೆ ಸೊಪ್ಪು ಕೊಡುತ್ತಿದ್ದರು’ ಎನ್ನುತ್ತಾರೆ ನಾಗವೇಣಿ.
ಜ್ಯೋತಿ ಎಸ್, ಸಿಟೆಝೆನ್ ಜರ್ನಲಿಸ್ಟ್ (Jyothi S)
(ಹಾದಿ 11, ಭಾಗ 2)
ನಾನು ಸಂಜೆ ಹೊತ್ತಿಗೆ ಅದನ್ನೆಲ್ಲ ಮಾರಿ, ಬಂಡವಾಳದ ಹಣವನ್ನು ಅವರಿಗೆ ಕೊಟ್ಟು ಉಳಿದ ಲಾಭದ ಹಣವನ್ನು ಮನೆಗೆ ತರುತ್ತಿದ್ದೆ. ಆಗಲೇ ಮೊದಲು ವ್ಯಾಪಾರ ಅಂತ ಶುರು ಮಾಡಿದ್ದು. ಮೊದಲ ದಿನ ನೂರು ರೂಪಾಯಿ ಲಾಭ ಸಿಕ್ಕಿತ್ತು. ಹಾಗೆ ಮಾರುತ್ತಾ ಒಂದು ವರ್ಷ ಕಳೆಯಿತು. ವ್ಯಾಪಾರ ಮಾಡುವುದನ್ನು ಕಲಿತುಬಿಟ್ಟೆ. ಈ ವಸ್ತು ತಂದರೆ ಇಷ್ಟು ವ್ಯಾಪಾರ ಮಾಡಬಹುದು, ಈ ವಸ್ತು ತಂದರೆ ನಾಳೆಗೂ ಇಡಬಹುದು ಎಲ್ಲಾ ವ್ಯಾಪಾರದ ಟ್ರಿಕ್ಸ್ ಕಲಿತು ಜೊತೆಗೆ ಸೊಪ್ಪು, ತರಕಾರಿ, ತೆಂಗಿನಕಾಯಿ, ಎಳನೀರು, ನಿಂಬೆಹಣ್ಣು, ಮೆಣಸಿನಕಾಯಿ ಇತ್ಯಾದಿ. ಆಗ ಗಂಡನೂ ಜೊತೆಗೆ ಬರತೊಡಗಿದರು.
ಆದರೆ ಇದ್ದಕ್ಕಿದ್ದ ಹಾಗೆ ಮತ್ತೆ ಕುಡಿತಕ್ಕೆ ಬಿದ್ದರು. ವ್ಯಾಪಾರಕ್ಕೆ ಕರೆದರೆ ಹಣಕ್ಕಾಗಿ ಡಿಮ್ಯಾಂಡ್. ಕೊಡದಿದ್ದರೆ ನಾನು ಬರುವುದಿಲ್ಲ, ಅದ್ಹೇಗೆ ವ್ಯಾಪಾರ ಮಾಡ್ತೀಯೋ ಮಾಡು ಹೋಗು ಎಂದು ಬೆದರಿಕೆ ಬೇರೆ. ಇವರ ಕುಡಿತದ ವಾಸನೆಗೆ ಜನ ಹತ್ತಿರ ಬರುತ್ತಿರಲಿಲ್ಲ. ಆಗಲೇ ಒಂದು ನಿರ್ಧಾರಕ್ಕೆ ಬಂದೆ, ಕಷ್ಟವಾದರೂ ನಷ್ಟವಾದರೂ ಗಾಡಿ ಓಡಿಸುವುದನ್ನು ಕಲಿಯಲೇಬೇಕೆಂದು ತೀರ್ಮಾನಿಸಿದೆ.
ಭಾಗ 1 : Woman: ಹಾದಿಯೇ ತೋರಿದ ಹಾದಿ; ಕುರಗೋಡಿನ ನಾಗವೇಣಿ ಬೆಂಗಳೂರಿಗೆ ಬಂದಿದ್ದು ಹೀಗೆ
ಆಗ ನಮ್ಮ ಚರ್ಚಿನ ಜಯಶೀಲ ಮೇಡಂ ಅವರ ಗಾರ್ಡನ್ನಲ್ಲಿ ನಾವು ವಾಸವಿದ್ದೆವು. ಅವರು ನನ್ನನ್ನು ಬಹಳ ಪ್ರೇರೇಪಿಸುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಮೊದಲ ಬಾರಿಗೆ Tvs Excel ಹಳೆಯ ಗಾಡಿಯಲ್ಲಿ ಡ್ರೈವಿಂಗ್ ಕಲಿಯಲು ಹೋಗಿ ರಸ್ತೆಯ ತಿರುವಿನಲ್ಲಿ ಎರಡೂ ಬ್ರೇಕ್ ಹಿಡಿದು ಪ್ರಜ್ಞೆ ತಪ್ಪಿಬಿದ್ದೆ. ಆಗ ಟ್ರ್ಯಾಕ್ಟರ್ನವರು ಯಾರೋ ನೋಡಿ ನಿಲ್ಲಿಸಿ ನನ್ನ ಮುಖಕ್ಕೆ ನೀರು ಚುಮುಕಿಸಿ, ಮನೆಯವರೆಗೂ ಬಿಟ್ಟುಹೋದರು. ಆಮೇಲೆ ಜಯಶೀಲ ಮೇಡಂ ಗಾರ್ಡನ್ ಒಳಗೇ ಎರಡು ಕಲ್ಲಿಟ್ಟು ಎಡಕ್ಕೆ ತಿರುಗಿಸು, ಬಲಕ್ಕೆ ತಿರುಗಿಸು ನಿಧಾನಕ್ಕೆ ಹೋಗಿ ಟರ್ನ್ ಮಾಡು ಎಂದು ಗಾಡಿ ಕಲಿಸಿದರು. ನಾನು ಅಂಥದ್ದೇ ಹೊಸ ಗಾಡಿ ತೆಗೆದುಕೊಂಡು ವ್ಯಾಪಾರಕ್ಕೆ ಒಬ್ಬಳೇ ಹೊರಟೆ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Woman: ಹಾದಿಯೇ ತೋರಿದ ಹಾದಿ; ಹೆಣ್ಣುಮಗು ಬೇಕು ಎಂದು ಗಂಡ ಆಪರೇಷನ್ ಮಾಡಿಸಲಿಲ್ಲ
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 11:27 am, Thu, 17 March 22