woman: ಹಾದಿಯೇ ತೋರಿದ ಹಾದಿ; ದೊಡ್ಡ ಡಿಗ್ರಿ ದೊಡ್ಡ ಕೆಲಸ ದೊಡ್ಡ ಸಂಬಳದ ಮಹಿಳೆಯರಷ್ಟೇ ಆದರ್ಶವಲ್ಲ
Women Empowerment : ‘ಅವತ್ತು ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಬಂದೆವು. ಈಗ ಮಗಳಿಗೆ ಏನು ಬೇಕೋ ಅದನ್ನು ಮಾಡಿದ್ದೇನೆ. ಗಂಡು ಮಕ್ಕಳಿಬ್ಬರಿಗೂ ಅವರವರ ಹೆಸರಿನಲ್ಲಿ ಸ್ವಲ್ಪ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿ ಬಳ್ಳಾರಿಯಲ್ಲಿ ಮನೆ ಕಟ್ಟಿಸಿದ್ದೇನೆ.’ ನಾಗವೇಣಿ
ಹಾದಿಯೇ ತೋರಿದ ಹಾದಿ | Haadiye Torida Haadi : ‘ಬ್ಯಾಟಯರಾಯನಪುರ ಸಂತೆಯಲ್ಲಿ ಹೋಲ್ಸೇಲ್ನಲ್ಲಿ ತರಕಾರಿ, ತೆಂಗು, ಸೊಪ್ಪು, ಇತ್ಯಾದಿ ತೆಗೆದುಕೊಂಡು ಕಟ್ಟಿಗೇನಹಳ್ಳಿ, ಯಲಹಂಕ, ದ್ವಾರಕಾನಗರ, ಹೊಸಬೀದಿ, ಮಾರುತಿನಗರ, ಇಟ್ಟಿಗೆ ಫ್ಯಾಕ್ಟರಿ, ಜಕ್ಕೂರು ಹೀಗೆ ಒಂದೊಂದು ಊರಲ್ಲಿ ಒಂದೊಂದು ದಿನ ವ್ಯಾಪಾರ ಮಾಡುತ್ತ ಹೊರಟೆ. ಮಕ್ಕಳೂ ನನಗೆ ಜೊತೆಯಾದರು. ಶಾಲೆ ಮುಗಿಸಿಕೊಂಡು ಬಂದು ಬಾಗಲೂರು ಸಂತೆ, ಚಿಕ್ಕಜಾಲ ಸಂತೆ, ಗುಬ್ಬಿ ಸಂತೆ, ಯಲಹಂಕ ಸಂತೆಗಳಲ್ಲೂ ವ್ಯಾಪಾರ ಶುರುಮಾಡಿದೆವು. ಮಕ್ಕಳು ಇಂಗ್ಲಿಷ್, ಹಿಂದಿ, ತಮಿಳು ಭಾಷೆ ಕಲಿತಿರುವುದರಿಂದ ಗಿರಾಕಿಗಳೊಂದಿಗೆ ವ್ಯವಹರಿಸುವುದು ಸುಲಭವಾಯಿತು. ತೆಲುಗು ಮಾತೃಭಾಷೆಯಾದರೂ ಒಡನಾಟದಿಂದ ನಾನೂ ಅಲ್ಪಸ್ವಲ್ಪ ಮಾತನಾಡಲು ಕಲಿತೆ. ಈಗ ಮಕ್ಕಳನ್ನು ನೋಡಿ ಹಳೆಯ ಕಷ್ಟವನ್ನೆಲ್ಲ ಮರೆಯುತ್ತೇನೆ. ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡ ಮಕ್ಕಳು ಮನೆ ಸ್ವಚ್ಛವಾಗಿ ಇಟ್ಟುಕೊಂಡು, ಒಬ್ಬರು ಬಟ್ಟೆ ಒಗೆದು, ಮತ್ತೊಬ್ಬರು ಅಡುಗೆ ಮಾಡಿ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಬಂದ ಕೂಡಲೇ ಚಹಾ ಮಾಡಿಕೊಟ್ಟು ಊಟ ಹಾಕಿಕೊಡುತ್ತಾರೆ.’ ಎನ್ನುತ್ತಾರೆ ನಾಗವೇಣಿ. ಜ್ಯೋತಿ ಎಸ್, ಸಿಟೆಝೆನ್ ಜರ್ನಲಿಸ್ಟ್ (Jyothi S)
(ಹಾದಿ 10, ಭಾಗ 3)
ಅವತ್ತು ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಬಂದೆವು. ಈಗ ಮಗಳಿಗೆ ಏನು ಬೇಕೋ ಅದನ್ನು ಮಾಡಿದ್ದೇನೆ. ಗಂಡು ಮಕ್ಕಳಿಬ್ಬರಿಗೂ ಅವರವರ ಹೆಸರಿನಲ್ಲಿ ಸ್ವಲ್ಪ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿ ಬಳ್ಳಾರಿಯಲ್ಲಿ ಮನೆ ಕಟ್ಟಿಸಿದ್ದೇನೆ. ಈಗ ನನ್ನ ಮಾವನವರಿಗೆ ನಾವೆಂದರೆ ತುಂಬಾ ಪ್ರೀತಿ. ನನ್ನ ಸೊಸೆ ತುಂಬ ಕಷ್ಟಪಟ್ಟಿದ್ದಾಳೆ, ಮಗನಂತೆ ದುಡಿದಿದ್ದಾಳೆ ಎಂದು ಆಗಾಗ ಫೋನ್ ಮಾಡಿ ಊರಿಗೆ ಕರೆಯುತ್ತಾರೆ. ಊರಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ನಾನಂತೂ ಓದಲಿಲ್ಲ, ನನ್ನ ಹಾಗೆ ನನ್ನ ಮಕ್ಕಳು ಕಷ್ಟಪಡಬಾರದು ಅಂತ ವ್ಯಾಪಾರಕ್ಕೆ ಅವರು ಬರುವುದನ್ನು ತಡೆದು ಓದಿಸುತ್ತಿದ್ದೇನೆ. ದೊಡ್ಡ ಮಗ ನಂದ ಕಿಶೋರ್ 9ನೇ ತರಗತಿ, ಎರಡನೇ ಮಗ ಸಂತೋಷ್ ಕುಮಾರ್ 7ನೇ ತರಗತಿ, ಮಗಳು ಅಂಜಲಿ 4ನೇ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲಿಯವರೆಗೂ ಓದುತ್ತಾರೋ ಅಲ್ಲಿಯವರೆಗೂ ಓದಿಸುತ್ತೇನೆ.
ಭಾಗ 3 : Woman: ಹಾದಿಯೇ ತೋರಿದ ಹಾದಿ; ಎದ್ದುಬಿದ್ದು ಗಾಡಿಯನ್ನೂ ಪ್ರಾಮಾಣಿಕತೆಯಿಂದ ವ್ಯಾಪಾರ ತಂತ್ರವನ್ನೂ ಕಲಿತೆ
ಒಂದು ಕಾಲಕ್ಕೆ ಕೆಲಸದ ಮನೆಯವರು ಕೊಟ್ಟ ಊಟವನ್ನು, ನಾನೀಗಷ್ಟೇ ತಿಂದು ಬಂದಿದ್ದೇನೆ ಎಂದು ಸುಳ್ಳು ಹೇಳಿ, ಮಕ್ಕಳಿಗೆ ಅದನ್ನು ತಂದು ಮೊಸರು ಹಾಕಿ ತಿನ್ನಿಸುತ್ತಿದ್ದೆ. ಇವತ್ತು ನನ್ನ ಮಕ್ಕಳು ನನಗೆ ಊಟ ಹಾಕಿ ಕೊಡುತ್ತಿದ್ದಾರೆ, ಅವರು ಕೂಡಿಟ್ಟ ಹಣದಲ್ಲಿ ನನಗೆ ಹೊಸ ಸೀರೆ ತಂದು ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ಅಂತ ಕೊಡುತ್ತಾರೆ. ನನಗ್ಯಾಕಪ್ಪ ಅಂದರೆ? ಇಷ್ಟು ದಿನ ಹಳೆಯ ಬಟ್ಟೆ ಹಾಕಿಕೊಂಡದ್ದು ಸಾಕಮ್ಮ, ಇನ್ನಾದರೂ ಹೊಸ ಬಟ್ಟೆ ಹಾಕಿಕೋ. ಇಲ್ಲದಿದ್ದರೆ ನಮಗೂ ಹೊಸ ಬಟ್ಟೆ ತರಬೇಡ ನಾವೂ ಹರಿದದ್ದು ಹಳೆಯದ್ದೇ ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಹೀಗೆ ನನ್ನ ಮಕ್ಕಳು ಖುಷಿ ತುಂಬಿಕೊಡುತ್ತಿದ್ದಾರೆ.
ದೊಡ್ಡ ಡಿಗ್ರಿ ದೊಡ್ಡ ಕೆಲಸ ದೊಡ್ಡ ಸಂಬಳದ ಮಹಿಳೆಯರಷ್ಟೇ ಆದರ್ಶವಲ್ಲ. ಗಂಡಸರನ್ನೂ ಮೀರಿಸುವ ಧೈರ್ಯ, ಚೆನ್ನಾಗಿ ಬದುಕಬೇಕೆಂಬ ಧ್ಯೇಯ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವ ಇಂಥವರ ಬದುಕೂ ದೊಡ್ಡ ಆದರ್ಶವಾಗಬಲ್ಲದು.
(ಮುಗಿಯಿತು)
(ಮುಂದಿನ ಹಾದಿ : 24.3.2022)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 11:59 am, Thu, 17 March 22