Literature: ನೆರೆನಾಡ ನುಡಿಯೊಳಗಾಡಿ; ಕಾಗೆಎಂಜಲು ಮಾಡುವ ಅವನು ಈ ದೇಹವನ್ನು ಅರಿತುಕೊಳ್ಳುತ್ತಾನೋ?
Indraneela Story by A. Vennila : ಹಾರುವ ಸ್ಥಿತಿಯಲ್ಲಿದ್ದ ದೇಹದೊಂದಿಗೆ ಕಣ್ಣನನ್ನು ತಿರುಗಿ ನೋಡಿದೆ. ಮೊಳಕಾಲಿನೊಳಗೆ ಕೈಗಳ ಜೋಡಿಸಿ ಮುದುಡಿಕೊಂಡು ನಿದ್ದೆ ಮಾಡುವ ಅವನೊಳಗೆ ಗಾಳಿ ಸಹ ನುಸುಳಲು ಸಾಧ್ಯವಿಲ್ಲ. ದೇಹದ ವಿಶ್ವರೂಪದರ್ಶನ ಮತ್ತೆ ದೊರಕಬಹುದೇ?

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ದೇವರ ಮುಂದೆ ಸಮರ್ಪಿಸಿ, ಮನ ಕರಗಿ ನಿಂತಿರುವಂತೆ ನಿಂತಿದ್ದೆ. ಆರಿಸಬೇಕಾದ ಬೆಂಕಿಯಾಗಿ ನನ್ನನ್ನು ಸುಡಲಿಲ್ಲ. ತಪ್ಪಿಸಿಕೊಂಡು ಓಡಬೇಕಾದ ಕಡುಚಳಿಯಾಗಿ ಅಟ್ಟಿಸಿಕೊಂಡು ಬರಲಿಲ್ಲ. ಎರಡೂ ಕೈಚಾಚಿ ಒಳಗೆಳೆದು, ಕರಗಿ ಹೋಗಲು ಕರೆ ನೀಡುವ ಜಲಪಾತವಾಗಿ ನನ್ನ ಸ್ವಾಗತಿಸಿತು. ತೆರೆವ ಕಾಮದ ಕದದೊಳಗೆ ನುಸುಳಲು ನನ್ನ ಜತೆ ಕಣ್ಣ ಬೇಕಲ್ಲಾ? ಹಾರುವ ಸ್ಥಿತಿಯಲ್ಲಿದ್ದ ದೇಹದೊಂದಿಗೆ ಕಣ್ಣನನ್ನು ತಿರುಗಿ ನೋಡಿದೆ. ಮೊಳಕಾಲಿನೊಳಗೆ ಕೈಗಳ ಜೋಡಿಸಿ ಮುದುಡಿಕೊಂಡು ನಿದ್ದೆ ಮಾಡುವ ಅವನೊಳಗೆ ಗಾಳಿ ಸಹ ನುಸುಳಲು ಸಾಧ್ಯವಿಲ್ಲ. ದೇಹದ ವಿಶ್ವರೂಪದರ್ಶನ ಮತ್ತೆ ದೊರಕಬಹುದೇ? ಸಣ್ಣ ಮುತ್ತು ಸಾಕು. ದೇಹದ ರಹಸ್ಯದ ಬಾಗಿಲುಗಳನ್ನು ತೆರೆದು ನೋಡಲು. ಕಣ್ಣ ಎಚ್ಚೆತ್ತುಕೊಂಡರೇ, ಇಷ್ಟು ದಿನ ನನ್ನಲ್ಲಿ ಹುಡುಕಿ ಸೋತು ಹೋದ ಸುರಂಗದ ಚಾವಿ ದೊರಕುತ್ತದೆ. “ಎದ್ದೇಳು ಕಣ್ಣ” ಎಂದು ಮನಸ್ಸಿನೊಳಗೆ ಒತ್ತಿ ಹೇಳಿದೆ. ಒತ್ತಿ ಹೇಳಿದರೂ ಮೃದುವಾಗಿಯೇ ಧ್ವನಿಸಿತು ಮಾತುಗಳು.
ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ
(ಭಾಗ 10)
“ನಾನೇ ಯಾಕೆ ಕಣ್ಣನನ್ನು ಎಬ್ಬಿಸಬಾರದು?” ಸದ್ದಿಲ್ಲದೆ ಅವನಿಗೆ ಒಂದು ಮುತ್ತು ಕೊಟ್ಟರೆ ಹೇಗಿರುತ್ತದೆ? ಹೆದರಿ ಕಿರುಚುತ್ತಾನೆಯೇ? ಕೈಯನ್ನು ದೂರ ಸರಿಸುತ್ತಾನೆಯೇ? “ಛ್ಛೂ” ಎಂದು ಲೊಚಗುಟ್ಟಿದರೇ? ಮಂಚದಲ್ಲಿ ಕಣ್ಣನ ಬಳಿ ಕುಳಿತುಕೊಂಡೆ. ಫ್ಯಾನಿನ ಎಳೆಗಳು ಅವನ ಮುಖದ ಮೇಲೆ ಸುತ್ತಿಸುತ್ತಿ ಬಂದವು. ನೆರಳೂ ಬೆಳಕೂ ಒಂದರ ನಂತರ ಒಂದು ತಾಕಿದ್ದರಿಂದ ವ್ಯತ್ಯಾಸವಾಗಿತ್ತು ಮುಖ. ಇನ್ನೂ ಹತ್ತಿರ ಕುಳಿತೆ. ತಲೆಯಲ್ಲಿ ಕೈಯಿಟ್ಟು ಕೂದಲಲ್ಲಿ ಕೈಯಾಡಿಸಿದೆ. ಬೆರಳುಗಳು ಹಿಂಜರಿಯುತ್ತಲೇ ಕೈಯಾಡಿಸಿದವು. ಹಣೆಯ ಮೇಲೆ ಕೈಯಿಟ್ಟೆ. ಕಣ್ಣನ ಬಳಿ ಯಾವ ಚಲನೆಯೂ ಇರಲಿಲ್ಲ. ಬೆರಳುಗಳು ಕೂದಳೊಳಗೆ ಅಲೆದಾಡುತ್ತಿದ್ದವು.
ನೀಲಿ ಬಣ್ಣದ ದೀಪ. ಕೋಣೆಯನ್ನು ರಾತ್ರಿಯ ಬೆಳಕಲ್ಲಿ ಮಂಕಾಗಿ ಬೆಳಗುವ ಬಯಲಾಗಿ ತೋರಿಸಿತು. ಗಾಳಿಯಲ್ಲಿ ಹಾರಾಡುತ್ತಿರುವ ದಿನ ತೋರಿಸುವ ಕ್ಯಾಲಂಡರ್ ಮಾತ್ರ ಮೇಲೆ ಕೆಳಗೆ ಆಡುತ್ತಿತ್ತು. ತಿರುಗುವ ಫ್ಯಾನ್, ಕೋಣೆಯ ತುಂಬ ಗಾಳಿಯನ್ನು ಬಾಚಿ ಬೀಸಿದರೂ ಕೋಣೆ ಚಲನೆಯಿಲ್ಲದೆ ಇತ್ತು.
ಕಣ್ಣ ಎಚ್ಚರವಾಗಿ ಕೇಳಿದರೆ ಏನು ಹೇಳುವುದು? “ನೀನು ನನಗೆ ಬೇಕು ಎಂದೇ?” ಕಣ್ಣ ಎಂದಾದರೂ ನನ್ನ ಬಳಿ ಅಂಗಲಾಚಿ ನಿಂತದ್ದುಂಟೇ? ಅವನ ಹಕ್ಕನ್ನು ತೆಗೆದುಕೊಳ್ಳುವ ಸ್ಪಷ್ಟ ನಿಲುವು ಅವನ ನಡೆವಳಿಕೆಗಳಲ್ಲಿತ್ತು. ಅವನು ಬಯಸಿದರೆ ನಡೆಸಿಕೊಳ್ಳುತ್ತಾನೆ. ಪಳಗಿದ ದಾಂಪತ್ಯ, ನನಗೆ ಹಿಡಿಸಿದ ನನ್ನ ಕಣ್ಣ. ನಾನೇಕೆ ಹಿಂಜರಿಯಬೇಕು? ನನಗೆ ನೀನು ಬೇಕೆಂದು ಹೇಳಿದರೆ, ನನ್ನನ್ನು ಅಸಹ್ಯವಾಗಿ ನೋಡುತ್ತಾನೋ? ದೇಹ ಸಿದ್ಧವಾಗಿದೆ ಎಂದು ಹೇಳಲು ಯಾಕೆ ಭಯ?
ಭಾಗ 8 : Literature: ನೆರೆನಾಡ ನುಡಿಯೊಳಗಾಡಿ; ಕಣ್ಣನಿಗೆ ಫೋನ್ ಮಾಡಿ ಎಷ್ಟು ಗಂಟೆಗೆ ಮನೆಗೆ ಬರುತ್ತೀಯಾ ಎಂದೆ
ಕಣ್ಣನ ಹಾಗೆ ನಾನೂ ಯಾಕೆ ನನಗೆ ಬೇಕಾದುದನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಮರೆತುಹೋದ ಮುತ್ತನ್ನು ಕೊಟ್ಟು ಅವನನ್ನು ಎಚ್ಚರಗೊಳಿಸಲೇ? “ಏನಾಯಿತು?” ಎನ್ನುತ್ತಾನೆಯೇ? ಕಣ್ಣನ ಬೆನ್ನಿಗೆ ಒರಗಿ ಮಲಗಿಕೊಂಡೆ. ದೇಹ ತಕ್ಷಣ ಸೆಟೆದು ಸಿದ್ಧವಾಯಿತು. ಸೊಳ್ಳೆ ಕಚ್ಚುವುದಾಗಿ ಅಂದುಕೊಂಡನೋ? ಮಕ್ಕಳು ಕಾಲೆತ್ತಿ ಹಾಕುವುದಾಗಿ ಅಂದುಕೊಂಡನೋ? ಸ್ವಲ್ಪ ಮುಂದೆ ಜರುಗಿ ಕಾಲಿನ ಬಳಿ ಇದ್ದ ಹೊದಿಕೆಯನ್ನು ಎಳೆದು ಹೊದ್ದುಕೊಂಡ. ಮುಂದಿನ ಕ್ಷಣ, ಅವನ ಉಸಿರು ಬಿಡುವ ಶಬ್ಧ ಕ್ರಮವಾಗಿ ಕೇಳಿಸಿತು.
ಒರಗಿದ್ದ ನಾನು ಸುಧಾರಿಸಿಕೊಂಡು ನೆಟ್ಟಗೆ ಕುಳಿತೆ. ಗಂಟೆ ಹನ್ನೆರಡನ್ನು ದಾಟಿ, ಅರ್ಧ ಗಂಟೆಯಾಗಿತ್ತು. ಕಣ್ಣುಗಳಲ್ಲಿ ಉರಿಯಿಲ್ಲ. ದೇಹದಲ್ಲಿ ಆಲಸ್ಯವಿಲ್ಲ. ಆ ಮಧ್ಯರಾತ್ರಿ ನನಗೊಂದು ನಿಧಿಯನ್ನು ಕಂಡುಹಿಡಿದು ಕೊಡಲು ಕಾದಿರುವಂತೆ ನನ್ನನ್ನು ಸಿದ್ಧ ಮಾಡಿತ್ತು. ತೂಕವಿಲ್ಲದ ದೇಹ. ಹಾರಲು ಅನುಕೂಲ ಮಾಡಿಕೊಟ್ಟಂತೆ ಇತ್ತು.
ಮೆನೋಪಾಸ್ ಸಮಯಗಳಲ್ಲಿ ಬಗೆಬಗೆಯಾದ ಭಾವನೆಗಳ ತರಂಗ ಏಳುತ್ತವೆ ಎಂದು ಡಾಕ್ಟರ್ ಹೇಳಿದ್ದು ಇದನ್ನೇ? ಕಾಮ ಹೆಚ್ಚಾಗುತ್ತದೆ, ದೇಹವನ್ನು ಆಕ್ರಮಿಸುತ್ತದೆ ಎಂದು ಹೇಳಲಿಲ್ಲವಲ್ಲಾ? ಕಣ್ಣನ ಜತೆಯಲ್ಲಿ ಮಾತನಾಡಿರಬಹುದಿತ್ತಲ್ಲಾ? ಅವನಿಗೂ ಹೇಳಿದ್ದರೆ ನಾನು ಕೇಳದಲೇ ಕೊಡುತ್ತಿದ್ದನೇನೋ? ಕಾಗೆ ಎಂಜಲು ಮಾಡುವ ಅವನು, ಅಣೆಕಟ್ಟು ಒಡೆದು ಹರಿಯಲು ಕಾದಿರುವ ಪ್ರವಾಹದಂತೆ ಇರುವ ಈ ದೇಹವನ್ನು ಅರಿತುಕೊಳ್ಳುತ್ತಾನೆಯೇ?
ಭಾಗ 9 : Literature: ನೆರೆನಾಡ ನುಡಿಯೊಳಗಾಡಿ; ಮುತ್ತೇ ಕೊಟ್ಟುಕೊಳ್ಳದೆ ನಾವಿಬ್ಬರೂ ಒಂದಾಗಿ ಕೂಡಿದ್ದೇವೆಯೇ?
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi




