AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಸಾವಿರ ಸಲ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಬೇಕೆಂದರೆ

Indraneela Story by A. Vennila : ಅಂದು ಅವನ ಮುಖದ ಮೇಲೆ ನನ್ನ ಎರಡು ತೊಟ್ಟು ಕಣ್ಣೀರು ಬಿತ್ತು. ಹೆಂಡತಿಯ ಮೂಲಕವೇ ಗಂಡು, ಹೆಣ್ಣಿನ ದೇಹವನ್ನು ಅರಿತುಕೊಳ್ಳುತ್ತಾನೆ. ಅನುಭವಿಸುತ್ತಾನೆ. ಬೇಗನೆ ಬೇಸತ್ತೂ ಹೋಗುತ್ತಾನೆ.

Literature: ನೆರೆನಾಡ ನುಡಿಯೊಳಗಾಡಿ; ಸಾವಿರ ಸಲ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಬೇಕೆಂದರೆ
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on: Mar 18, 2022 | 2:58 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಅಮ್ಮನ ಬಳಿ ಹಾಲು ಕುಡಿದದ್ದು ನೆನಪಿಲ್ಲ. ನನ್ನ ಅಪ್ಪ ಎಂಟು ವಯಸ್ಸಿನವರೆಗೆ ಹಾಲು ಕುಡಿದರಂತೆ. ನಮ್ಮ ಅಜ್ಜಿ ಎಲ್ಲಿ ನಿಂತರೂ ಸೀದಾ ಬಂದು ಸೆರಗನ್ನು ಸರಿಸಿ ಬಾಯಿಡುವರಂತೆ. ಅಜ್ಜಿ ನಾಚಿಕೊಳ್ಳುವಳಂತೆ. ಕೋಪವೂ ಬರುವುದಂತೆ. ಸೀರೆಯನ್ನು ಸರಿಸಿ ಮಾನ ಕಳೆಯುತ್ತಿದ್ದಾನಲ್ಲಾ ಎಂದು ಬೆನ್ನ ಮೇಲೆ ಎರಡು ಏಟು ಹಾಕುತ್ತಾಳಂತೆ. ಆದರೂ ಅಪ್ಪ ಬಾಯಿ ತೆಗೆಯುತ್ತಿರಲಿಲ್ಲವಂತೆ. ಎಂಟು ವಯಸ್ಸಿನವರೆಗೆ ಅಮ್ಮನ ಮೊಲೆ ಹಾಲನ್ನು ಕುಡಿದ ಅಪ್ಪ, ಮರೆಯಲಾಗದೆ ಅವಸ್ಥೆಪಟ್ಟಿದ್ದಾರೆ. ರಾತ್ರಿ ಮಲಗುವಾಗ ಅಮ್ಮನ ಸೀರೆಯೊಳಗೆ ಕೈಬಿಟ್ಟು, ಮೊಲೆಯನ್ನು ಹಿಡಿದುಕೊಂಡೇ ನಿದ್ರೆ ಮಾಡುತ್ತಿದ್ದರಂತೆ” ಎನ್ನುತ್ತಿದ್ದ. “ಒಂದು ವರ್ಷದವರೆಗೆ ಹಾಲು ಕುಡಿದ ನನಗೆ ಇನ್ನೂ ನೆನಪಿದೆ? ಅದಕ್ಕೆ ನೀನು ನನಗೆ ಎರಡನೇಯ ಅಮ್ಮ” ಎಂದು ತಿವಿಯುತ್ತಿದ್ದ. ಅಂದು ಅವನ ಮುಖದ ಮೇಲೆ ನನ್ನ ಎರಡು ತೊಟ್ಟು ಕಣ್ಣೀರು ಬಿತ್ತು. ಹೆಂಡತಿಯ ಮೂಲಕವೇ ಗಂಡು, ಹೆಣ್ಣಿನ ದೇಹವನ್ನು ಅರಿತುಕೊಳ್ಳುತ್ತಾನೆ. ಅನುಭವಿಸುತ್ತಾನೆ. ಬೇಗನೆ ಬೇಸತ್ತೂ ಹೋಗುತ್ತಾನೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 12)

*ಕುಜ್ಹಲ್ವಾಯ್ ಮೊಜ್ಹಿ – ಕೊಳಲಿನಂತಹ ಇಂಪಾದ ಧ್ವನಿಯುಳ್ಳವಳು – ಶಿವನ ಗುಡಿಯಲ್ಲಿದ್ದರೆ ಪಾರ್ವತಿ. ವಿಷ್ಣುವಿನ ಆಲಯದಲ್ಲಿದ್ದರೆ ಲಕ್ಷ್ಮಿ.

ದೇಹದ ಕೂಡುವಿಕೆಯ ನಂತರ ತುಟಿ, ಮೊಲೆ, ಕೈ, ಕಾಲು ಎಲ್ಲವೂ ಎರಡನೇಯ ಸ್ಥಾನ ಪಡೆಯುತ್ತವೆ. ನಿದ್ದೆಗೆ ಮೊದಲು ಮಾಡುವ ವ್ಯಾಯಾಮವಾಗುತ್ತದೆ. ಕಣ್ಣನೂ ಹಾಗೆಯೇ ಪಳಗಿಹೋದ. ನಾನೂ ಸಹ ಕಾರಣ. ಕೆಲಸ, ಯಾಳಿನಿ, ಆದಿ ಎಂದು ಎಲ್ಲಕ್ಕೂ ಗಮನ ಹರಿಸುತ್ತೇನೆ. ನನಗೂ ಕಣ್ಣನಿಗೂ ಪ್ರತ್ಯೇಕ ಸಮಯ ಒದಗಿಸಿಕೊಳ್ಳಲಿಲ್ಲ.  ಹೆಸರಿಗೆ ಕೂಡಿ ಬದುಕುತ್ತಿದ್ದೇವೆ. ಸಣ್ಣ ಅನ್ಯೋನ್ಯತೆಯೂ ಇಲ್ಲ. ರಾತ್ರಿಪೂರ್ತಿ ಕಣ್ಣನಿಗೆ ಒಂದು ಮುತ್ತು ಕೊಡಲು ಹಿಂಜರಿಕೆ. ಕೊನೆಯವರೆಗೂ ಕೊಡಲೇ ಇಲ್ಲ. ಸಾವಿರ ಸಲವಾದರೂ ಒಂದರೊಂದಿಗೆ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಲು ಹಲವು ಗಂಟೆಗಳು ಕಾಯಬೇಕು.

* ಮರಳಿನಲ್ಲಿ ಮನೆ ಕಟ್ಟಿ ಆಟಿಕೆಗಳನ್ನಿಟ್ಟು ಆಡುತ್ತಿದ್ದೆವು. ಬಿಸಿಲು ಏರುತ್ತಿತ್ತು. ಬಿಸಿಲು ಹೆಚ್ಚಾದ ಕೂಡಲೇ ಅಮ್ಮ ಕಿರುಚುತ್ತಾಳೆ. “ಹಾವು ಪೊರೆ ಕಳಚುವಂತೆ ಬಿಸಿಲಿಗೆ ಚರ್ಮ ಸುಲಿಯುತ್ತದೆ. ಬಿಸಿಲಲ್ಲಿ ಇನ್ನೂ ಆಟವೇ?” ಎಂದು ಬೀದಿಗೆ ಕೇಳುವಂತೆ ಕೂಗುತ್ತಾಳೆ. ನನಗೆ ಏರು ಬಿಸಿಲಿನಲ್ಲಿ ಹೊರಗೆ ಆಟವಾಡುವುದೇ ಹಿಡಿಸುತ್ತದೆ. ಬಿಸಲಿನ ಕಿರಣಗಳು ಚುರ್ ಎಂದು ತಾಕುತ್ತದೆ. ತಾಕಿದ ಕ್ಷಣದಲ್ಲಿ ದೇಹ ಉರಿಯುತ್ತದೆ. ಬಿಸಿಲನ್ನೇ ಗಮನಿಸುತ್ತಿರಬೇಕು. ಮುಂದಿನ ಕಿರಣ, ಅದರ ಮುಂದಿನ ಕಿರಣ, ಅದರ ನಂತರದ ಕಿರಣ ಎಂದು ಬಿಸಿಲಿನ ಕಿರಣಗಳು ದೇಹದೊಳಗೆ ನುಸುಳುವಾಗ ಹಿತವಾಗಿರುತ್ತದೆ. ಹೆಚ್ಚಿನ ಬಿಸಿಗೆ ದೇಹದೊಳಗೆ ಹರಡುವ ತಂಪು ಪ್ರತ್ಯೇಕವಾಗಿ ತಿಳಿಯುತ್ತದೆ. ದೇಹ ಪೂರ್ತಿ ಬೆವರಿನಲ್ಲಿ ಮೀಯುತ್ತದೆ. ಒಳೊಳಗೆ ಹಿತವಾದ ತಂಪು ಹರಡುತ್ತದೆ. ಅನ್ನ ಬೇಯಿಸಿ, ತರಕಾರಿ ಮಾಡಿ, ಊಟ ಮಾಡಿ, ಮರದ ನೆರಳಲ್ಲಿ ಮಲಗುವಾಗಲೂ ಬಿಸಿಲಿನ ಕಿರಣ ದೇಹವನ್ನು ಸುಡುವಂತೆ ಇರುತ್ತದೆ. ನಡು ನೆತ್ತಿಯ ಮೇಲೆ ತಾಕುವ ಬಿಸಿಲು ಒಳಗೆ ಸುಸುಳಿದಾಗ ದೇಹ ಪೂರ್ತಿ ಪುಳಕಿಸಿತು. ಸುತ್ತಲೂ ಎಲ್ಲರೂ ಇದ್ದರೂ, ನನ್ನ ದೇಹ ಮಾತ್ರ ಪ್ರತ್ಯೇಕವಾಗಿ ತೇಲಿತು.

ಭಾಗ 10 : Literature: ನೆರೆನಾಡ ನುಡಿಯೊಳಗಾಡಿ; ಕಾಗೆಎಂಜಲು ಮಾಡುವ ಅವನು ಈ ದೇಹವನ್ನು ಅರಿತುಕೊಳ್ಳುತ್ತಾನೋ?

ಆಟದಲ್ಲಿ ಸದಾ ಮಣಿಯೂ ಸಹ ಇರುತ್ತಿದ್ದ. ಸುಂದರಿ ಹೊಡೆದು ಓಡಿಸುತ್ತಿದ್ದಳು . “ಛ್ಛೂ ಪಾಪ. ಪುಟ್ಟದು ಕಣೇ ಅದು, ಹೊಡೆಯಬೇಡ” ಎಂದ ತಕ್ಷಣ ಬಾಲ ಆಡಿಸುತ್ತಾ ನನ್ನ ಬಳಿ ಬರುತ್ತಿತ್ತು. ನಾನು ಅದನ್ನು ಬೆಂಬಲಿಸುತ್ತಿದ್ದೇನೆ ಎಂಬುದನ್ನು ಅದು ಕಂಡು ಹಿಡಿದುಬಿಡುತ್ತದೆ. ಕಾಲಡಿಯಲ್ಲಿ ಉಜ್ಜುತ್ತಲೇ ಕುಳಿತಿರುತ್ತದೆ. ಬಿಸಿಲಿನ ಹಿತಕ್ಕೆ ನಾವು ಮೈ ಕಾಯಿಸುತ್ತಿರುತ್ತೇವೆ. ಮಣಿ ಧಗೆ ತಾಳಲಾಗದೆ ಗೊಣಗುತ್ತಾನೆ. ನನ್ನ ಲಂಗದೊಳಗೆ ತಲೆಯನ್ನು ನುಸುಳಿಸಿ ತಪ್ಪಿಸಿಕೊಳ್ಳಲು ನೋಡುತ್ತಾನೆ. ಬಿಸಿಲಿನ ದಾಳಿಗೆ ಕಾಲುಗಳ ಮಧ್ಯೆ ಬಾಲ ಮುಡಿದುಕೊಂಡು ಬಿದ್ದುಕೊಂಡು, ಲಂಗದೊಳಗೆ ತಿವಿಯುತ್ತಿರುತ್ತಾನೆ. “ನಾಯಿ ಉಣ್ಣೆ ಅಂಟಿದರೆ ಅಷ್ಟೇ ಕಣೇ, ರಕ್ತವನ್ನು ಹೀರಿ ಬಿಡುತ್ತೇ” ಎಂದಳು ಸುಂದರಿ. “ನಾಯಿ ರಕ್ತವನ್ನು ಹೀರುತ್ತೆ, ಮನುಷ್ಯರ ರಕ್ತವನ್ನಲ್ಲಾ” ಎಂದು ಹೇಳಿ, ಮಣಿಯನ್ನು ಎಳೆದು ಹೊರಗೆ ಹಾಕಿದೆ. ‘ಬೌ ಬೌ’ ಎಂದು ಬೊಗುಳುತ್ತಾ ಮತ್ತೆ ಲಂಗದೊಳಗೆ ನುಸುಳಿತು. ತುಂಬೆ ಟೊಂಗೆಗಳನ್ನು ರಾಶಿರಾಶಿಯಾಗಿ ಕಿತ್ತುಕೊಂಡು ಬಂದಿದ್ದೆವು. ಹೂಗಳನ್ನು ಮಾತ್ರ ಬೇರ್ಪಡಿಸುತ್ತಿದ್ದೆವು. ಮಣ್ಣಿನ ಕುಡಿಕೆಯಲ್ಲಿ ಒಂದೊಂದು ಹೂವಾಗಿ ಕಿತ್ತು ಹಾಕಿದೆವು. ಉಚ್ಚೆ ಹುಯ್ಯುವ ಜಾಗದಲ್ಲಿ ಅಂಟು ಅಂಟಾಗಿ ಒದ್ದೆಯಾಯಿತು.

“ಉಚ್ಚೆ ಹುಯ್ದೆನೋ” ಎಂದು ಹೆದರಿದೆ. ಸುಂದರಿ ಹೇಳಿದ ಹಾಗೆ ನಾಯಿ ಉಣ್ಣೆ ಕಚ್ಚಿದೆಯೋ? ದೇಹ ಪೂರ್ತಿ ಏನೋ ಹರಡಿತು. ಏನೆಂದು ತಿಳಿಯಲಿಲ್ಲ. ಆದರೆ ಹಿಡಿಸಿತ್ತು. ಸುಂದರಿಯೂ, ಸುಮತಿಯೂ ಹತ್ತಿರ ಕುಳಿತಿದ್ದರು. ನನ್ನಲ್ಲಿ ನಡೆಯುವುದನ್ನು ಅವರು ನೋಡಲಿಲ್ಲ. ಯಾರೂ ನೋಡದಂತೆ ಲಂಗದ ಮೇಲೆ ಮೆಲ್ಲಗೆ ಕೈಯಿಟ್ಟು ನೋಡಿದೆ. ಮಣಿ ಇದ್ದ. ಎದೆ ಅಡಗಿ ಹೋದಂತೆ ಇತ್ತು. ಹೊರಗೆ ಎಳೆದುಬಿಡಲು ಧೈರ್ಯವಿಲ್ಲ. ಆ ಭಾವನೆಯನ್ನು ದಾಟಲು ಆಗಲಿಲ್ಲ. ಹುಚ್ಚಿಡಿದಂತೆ ಇತ್ತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 11 : Literature: ನೆರೆನಾಡ ನುಡಿಯೊಳಗಾಡಿ; ದೇವರನ್ನು ವಿವಾಹವಾದರೆ, ತನ್ನ ಅಗತ್ಯಕ್ಕೆ ಅವನನ್ನು ಕರೆಯಬಾರದೇ?

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi