ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: “ಇಲ್ಲಿ ನೋಡಿ, ಸೆರ್ಜಿ ಕೆಪಿಟೊನಿಚ್,” ಹೆಡಮಾಸ್ಟರ್ ಹೇಳತೊಡಗಿದರು, “ತಪ್ಪು ತಿಳಿಯಬೇಡಿ, ಇದು ನನ್ನ ಕೆಲಸವಲ್ಲ. ಆದರೂ ಈ ಸಂಗತಿಯನ್ನು ನಿಮಗೆ ಮನವರಿಕೆ ಮಾಡಿಕೊಡಬೇಕಾದದ್ದು ನನ್ನ ಕರ್ತವ್ಯ, ನಿಮಗೆ ಗೊತ್ತಾ, ನೀವು ಆ ಅಡುಗೆಯವಳೊಡನೆ ಚಕ್ಕಂದ ಆಡುತ್ತೀರಿ ಎಂಬ ಗಾಳಿಸುದ್ದಿ ಇದೆ, ಇದು ನನಗೇನೂ ಸಂಬಂಧವಿಲ್ಲದ್ದು; ಆದರೂ… ಆಕೆಯ ಜೊತೆ ಚಕ್ಕಂದ ಆಡೋದು, ಆಕೆಯನ್ನು ಚುಂಬಿಸುವುದು… ನಿಮಗೆ ಖುಷಿಯಾಗಬಹುದು, ಆದರೆ ದಯವಿಟ್ಟು ಈ ಸಂಗತಿಯನ್ನು ಜಗಜ್ಜಾಹೀರು ಮಾಡಬೇಡಿ, ಇದು ನನ್ನ ವಿನಂತಿ ಅಂತ ಬೇಕಾದ್ರೂ ಅಂದ್ಕೊಳ್ಳಿ. ನೀವೊಬ್ಬ ಶಾಲಾ ಶಿಕ್ಷಕ ಎನ್ನುವುದನ್ನು ಮರೀಬೇಡಿ,” ಅಂದರು. ಅಹಿನಿವ್ ಒಮ್ಮೇಲೆ ತಣ್ಣಗಾದರು. ಬವಳಿ ಬಂದ ಹಾಗಾಯ್ತು. ಜೇನ್ನೋಣದ ಇಡೀ ಗುಂಪೊಂದರ ಕಡಿತಕ್ಕೆ ಬಲಿಯಾದವನಂತೆ, ಕುದಿಯುವ ನೀರಲ್ಲಿ ಬೆಂದು ಹೋದ ಮನುಷ್ಯನಂತೆ ಅಹಿನಿವ್ ನಿಸ್ತೇಜಗೊಂಡರು ಅದೇ ಸ್ಥಿತಿಯಲ್ಲೆ ಮನೆಗೆ ಹೋದರು.
ಕಥೆ: ಅಪನಿಂದೆ (A Slander) | ಮೂಲ : ಆ್ಯಂಟನ್ ಚೆಕಾವ್ | ಕನ್ನಡಕ್ಕೆ : ಪ್ರೊ. ನಾಗರೇಖಾ ಗಾಂವಕರ
(ಭಾಗ 4)
ಮನೆಯ ದಾರಿಯಲ್ಲಿ ಹೋಗುತ್ತಾ, ತನ್ನ ಮುಖಕ್ಕಿಡಿ ಕಪ್ಪುಮಸಿ ಮೆತ್ತಿದ ಹಾಗೆ, ಇಡೀ ಪಟ್ಟಣವೂ ತನ್ನ ಕಡೆಯೇ ನೋಡ್ತಾ ಇರೋ ಹಾಗೇ ಭಾಸವಾಗತೊಡಗಿತು. ಇದಿಷ್ಟಲ್ಲದೇ ಮನೆಯಲ್ಲಿ ಹೊಸದೊಂದು ಸಂಕಟ ಅವರಿಗಾಗಿ ಕಾಯುತ್ತಿತ್ತು.
“ನೀವ್ಯಾಕೆ ಈಗೀಗ ಮೊದಲಿನ ಹಾಗೇ ಸರಿಯಾಗಿ ಊಟ ಮಾಡ್ತಿಲ್ಲ?” ಊಟದ ಸಮಯದಲ್ಲಿ ಹೆಂಡತಿ ಕೇಳತೊಡಗಿದಳು. “ಯಾವ ವಿಷಯದ ಬಗ್ಗೆ ಇಷ್ಟು ವಿಚಾರ ಮಾಡುತ್ತಿದ್ದೀರಿ? ಸಂಸಾರಕ್ಕಿಂತ ನಿಮಗೆ ಆ ಪ್ರಣಯವೇ ಹೆಚ್ಚಾಯ್ತಾ? ನಿಮ್ಮ ಮಾರ್ಫಾಳಿಗಾಗಿ ಹಂಬಲಿಸುತ್ತಿದ್ದೀರಾ? ಮಹಮ್ಮೆದನ್! ನನ್ನ ಸ್ನೇಹಿತರು ನನ್ನ ಕಣ್ಣು ತೆರೆಸಿದರು. ‘‘ಓಹ್! ನೀನೊಬ್ಬ ಅನಾಗರಿಕ, ಕೀಳು ಮನುಷ್ಯ!” ಎಂದವಳೆ ಕೆನ್ನೆಗೊಂದು ಬಾರಿಸಿದಳು. ಅಹಿನಿವ್ ಟೇಬಲ್ ಬಿಟ್ಟು ಏಳುತ್ತಿದ್ದಂತೆ ಭೂಮಿಯೇ ತಲೆಕೆಳಗಾದಂತೆ ಕಾಣತೊಡಗಿತು. ಹ್ಯಾಟು ಕೋಟು ಏನನ್ನು ತೊಡದೆ ಸೀದಾ ವ್ಯಾನ್ಕಿನ್‌ನಲ್ಲಿಗೆ ನಡೆದರು. ವ್ಯಾನ್ಕಿನ ಮನೆಯಲ್ಲಿಯೇ ಸಿಕ್ಕಿದ.
“ಲೇ ದುರುಳ!” ವ್ಯಾನ್ಕಿನ್‌ನ ಹಾಗೇ ಕರೆದರು, “ಯಾಕೆ ಇಡೀ ಪಟ್ಟಣದ ಎದುರು ನನ್ನ ಮೇಲೆ ಕೆಸರನ್ನ ಎರಚಿದ್ದಿ? ಇಂತಹ ಅಪನಿಂದೆಯನ್ನ ನನ್ನ ಮೇಲೆ ಯಾಕೆ ಹೊರಿಸಿದೆ?”
“ಯಾವ ಅಪನಿಂದೆ? ನೀವೇನು ಹೇಳುತ್ತಿದ್ದಿರಿ?” ವ್ಯಾನ್ಕಿನ್ ನುಡಿದ.
ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’
“ನಾನು ಮಾರ್ಫಾಳಿಗೆ ಚುಂಬಿಸುತ್ತಿದ್ದೆ, ಅನ್ನೋ ಗಾಳಿಸುದ್ದಿ ಹಬ್ಬಿಸಿದವರು ಯಾರು ಮತ್ತೆ? ನೀನಲ್ಲವೇ?ನಿಜ ಹೇಳು. ಖದೀಮ, ನೀನೇ ಹೌದೋ ಅಲ್ಲವೊ ?”
ವ್ಯಾನ್ಕಿನ್ ಕಣ್ಣು ಪಿಳಿಗುಟ್ಟಿತು. ಅವನ ಜರ್ಜರಿತಗೊಂಡ ಮುಖದ ಎಲ್ಲ ನರಗಳು ಒಮ್ಮೆಲೆ ಸೆಳೆದುಕೊಂಡವು. ದೇವರೆಡೆಗೆ ಕಣ್ಣು ನೆಟ್ಟು “ನಾನೇನಾದರೂ ಒಂದೇ ಒಂದು ಶಬ್ದವನ್ನು ನಿಮ್ಮ ಬಗ್ಗೆ ಹೇಳಿದ್ದೆ ಹೌದಾದರೆ, ದೇವರು ನನ್ನ ನಾಶಮಾಡಲಿ! ನನ್ನ ಕಣ್ಣ ಕಿತ್ಕೊಳ್ಲಿ, ಮನೆ ಮಠ ಕಿತ್ಕೊಳ್ಲಿ, ಕಾಲರಾಕ್ಕಿಂತ ಭಯಂಕರ ರೋಗ ಬಂದು ನಾನು ಪರಿತಪಿಸುವಂತಾಗಲಿ” ಪ್ರಾಮಾಣಿಕವಾಗಿ ಹೇಳತೊಡಗಿದ. ವ್ಯಾನ್ಕಿನ್‌ನ ಪ್ರಾಮಾಣಿಕತೆಯಲ್ಲಿ ಯಾವ ಸಂದೇಹವೂ ಬರುವಂತಿರಲಿಲ್ಲ. ಅವನ ವರ್ತನೆಯಿಂದ ಈ ಅಪನಿಂದೆಯ ಸೃಷ್ಟಿಕರ್ತ ಅವನಲ್ಲ ಎಂಬುದು ಸಾಬೀತಾಗುವಂತಿತ್ತು.
“ಆದರೆ ಬೇರೆ ಯಾರು ಹಾಗಾದರೆ? ಯಾರಿರಬಹುದು?’’ ಅಹಿನಿವ್‌ಗೆ ಆಶ್ಚರ್ಯವಾಯಿತು. ಅವರ ಮನಸ್ಸಿನಲ್ಲಿ ಎಲ್ಲ ಪರಿಚಿತ ಮುಖಗಳು ಬಂದು ಹೋಗತೊಡಗಿದವು. ಅವರೆದೆ ಹೊಡೆದುಕೊಳ್ಳತೊಡಗಿತು. “ಯಾರು ಹಾಗಾದರೆ?”
(ಮುಗಿಯಿತು)
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/anton-chekhov
Published On - 1:14 pm, Fri, 18 February 22