Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೆಂಬ ಪರಿಮಳದ ಹಾದಿಯಲಿ: ಮಗುವನ್ನು ಬೆಳೆಸುವುದು ವಿಶ್ವಪ್ರೇಮದ ಸಂಕೇತ

‘ಸ್ಪೆಷಲ್ ವಾರ್ಡ್​ ಆದರೆ ಖರ್ಚು ಹೆಚ್ಚು ಎಂಬ ಕಾರಣಕ್ಕೆ ಜನರಲ್ ವಾರ್ಡನಲ್ಲಿಯೇ ಅಮ್ಮ ಕ್ಯಾನ್ಸರಿಗೆ ಚಿಕಿತ್ಸೆ ಪಡೆದರು. ಅಲ್ಲಿಯ ಬಾತ್​ರೂಮುಗಳು, ಟಾಯ್ಲೆಟ್‍ಗಳು ಅಲ್ಲಿಯ ವ್ಯವಸ್ಥೆಯನ್ನು ಕಣ್ಣು ಮೂಗು ಬಾಯಿ ಮುಚ್ಚಿ ಸಹಿಸಿಕೊಂಡರು. ಕಾರಣವಿಷ್ಟೇ, ಒಂದಿಷ್ಟು ಹಣ ಉಳಿತಾಯವಾದರೆ ಮೂವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಭವಿಷ್ಯಕ್ಕೆ ನೆಲೆಯಾಗಬಹುದೆಂದು.‘ ನಾಗರೇಖಾ ಗಾಂವಕರ

ನಾನೆಂಬ ಪರಿಮಳದ ಹಾದಿಯಲಿ: ಮಗುವನ್ನು ಬೆಳೆಸುವುದು ವಿಶ್ವಪ್ರೇಮದ ಸಂಕೇತ
ಲೇಖಕಿ ನಾಗರೇಖಾ ಗಾಂವಕರ
Follow us
ಶ್ರೀದೇವಿ ಕಳಸದ
|

Updated on: Jan 23, 2021 | 2:49 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ ಉಪನ್ಯಾಸಕಿ ನಾಗರೇಖಾ ಗಾಂವಕರ ಅವರ ಅನುಭವದ ಬುತ್ತಿ ನಿಮ್ಮ ಓದಿಗೆ…

ಹೆಣ್ಣು ಮತ್ತಾಕೆಯ ಮಾನಸಿಕ ಜಗತ್ತು ಅದರ ವ್ಯಾಪಾರಗಳು ತೀರಾ ಸಂಕೀರ್ಣ ಆದರೆ ಅಷ್ಟೇ ಸಂವೇದನಾತ್ಮಕ. ಇದು ತಾಯ್ತನಕ್ಕೂ ಅನ್ವಯಿಸುತ್ತದೆ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆಯವರು ಮಾತೃತ್ವದ ಕುರಿತು ಮಾತನಾಡುತ್ತಾ ಹೇಳಿದ ಒಂದು ಮಾತನ್ನು ಉದಾಹರಿಸುವೆ. ‘ಮಗುವನ್ನು ಬೆಳೆಸುವುದು ವಿಶ್ವಪ್ರೇಮದ ಸಂಕೇತ. ತಾಯ್ತನ ಮನುಷ್ಯ ಲೋಕಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಜಗತ್ತಿನಲ್ಲೂ ಎಲ್ಲ ಪ್ರಾಣಿಗಳು ತಮ್ಮ ಸಂತತಿಯನ್ನು ಅನನ್ಯವಾಗಿ ಪ್ರೀತಿಸುತ್ತವೆ. ಪಕ್ಷಿಗಳದ್ದು ಸ್ಪರ್ಶ ಪ್ರೀತಿ, ಹಾವಿನದು ದೃಷ್ಟಿ ಪ್ರೀತಿ, ಆಮೆಯದು ಸಂಕಲ್ಪ ಪ್ರೀತಿ’ ಎಂದಿದ್ದರು. ಅಂದರೆ ಪಕ್ಷಿಗಳು ಸ್ಪರ್ಶದಿಂದ ತಮ್ಮ ಪ್ರೀತಿಯನ್ನು ತಮ್ಮ ಕುಡಿಗಳಿಗೆ ಉಣಿಸಿದರೆ ಹಾವು ಕೇವಲ ದೃಷ್ಟಿಯಿಂದಲೇ ಅನನ್ಯ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಹಾಗೇ ಆಮೆ ತಾನಿಟ್ಟ ಮೊಟ್ಟೆಯ ಕುರಿತು ನೆನೆಯುತ್ತಾ ಕೇವಲ ಸಂಕಲ್ಪ ಮಾತ್ರದಿಂದಲೇ ಹೊರಗಡಿಯಿಡುವ ಮರಿಗಳಿಗೆ ಬೆಚ್ಚಗಿನ ಪ್ರೀತಿಯ ಅನುಭವ ನೀಡಬಲ್ಲದು. ತಾಯ್ತನದ ಹಿರಿಮೆಯನ್ನು ನಿಸರ್ಗ ನಿರ್ಮಿಸಿದ ರೀತಿ ಎಷ್ಟು ಅನುಪಮವೋ ಅಷ್ಟೇ ಅನನ್ಯವಾದುದು ಅಮ್ಮನಾಗುವ ಖುಷಿ. ಹಾಗಾಗಿ ಅಮ್ಮನಾದಾಗ ನಾನು ಒಂದೇ ಸಲಕ್ಕೆ ಹತ್ತು ವರ್ಷಗಳಷ್ಟು ಹೆಚ್ಚು ಪ್ರೌಢಳಾಗಿದ್ದೆ. ಆ ಮಟ್ಟಿನ ಪ್ರೌಢತೆಯನ್ನು ಗಳಿಸಿಕೊಟ್ಟಿದ್ದು ನನಗೆ ನನ್ನ ತಾಯ್ತನ.

ಮನೆಯ ಕಿರಿಮಗಳಾದ ಕಾರಣ ಚಿಕ್ಕಂದಿನಿಂದಲೂ ನನಗೆ ಮನೆಯ ಜವಾಬ್ದಾರಿಗಳು ಹೆಚ್ಚಿರಲಿಲ್ಲ. ಆದರೆ ಮಾಡಬೇಕಿದ್ದ ಕೆಲಸದಿಂದ ನನಗೆ ರಿಯಾಯಿತಿ ಏನೂ ಇರಲಿಲ್ಲ. ಅದರಲ್ಲೂ ಮನೆಯ ಒಳಗಿನ ಕೆಲಸಗಳಿಗಿಂತ ಹೆಚ್ಚಾಗಿ ಇಷ್ಟಪಡುತ್ತಿದ್ದದ್ದು ನನ್ನಪ್ಪನ ಜೊತೆ ತೋಟಕ್ಕೆ ನೀರು ಬಿಡಲು ಹೋಗುವ ಕೆಲಸವಾಗಿತ್ತು. ಗದ್ದೆ ಬಯಲಿನಲ್ಲಿ ತೋಟಕ್ಕೆ ನೀರು ಬಿಡಲೆಂದೆ ಕಟ್ಟಿದ ಬಾವಿ ಇತ್ತು. ಪಂಪಿನ ಸಹಾಯದಿಂದ ತೆಂಗಿನಗಿಡಗಳಿಗೆ ನೀರು ಬಿಡುವುದು ಕ್ರಮ ಆದರೆ ಆಗ ಈಗಿನ ಹಾಗೇ ಸ್ಪ್ರಿಂಕ್ಲರ್ ವ್ಯವಸ್ಥೆಯಾಗಲಿ, ಡ್ರಿಪ್ ಇರಿಗೇಷನ್ ಪದ್ಧತಿಯಾಗಲಿ ಬಂದಿರಲಿಲ್ಲ. ಪಂಪು ಚಾಲೂ ಮಾಡಿ ಅದು ಮೇಲಕ್ಕೆ ದಪ್ಪ ಪೈಪಿನ ಮೂಲಕ ಬಂದು ಬೀಳುತ್ತಿತ್ತು. ಅಲ್ಲಿಂದ ಬೆಲಗುಗಳ ಮೂಲಕವೇ ತೆಂಗಿನ ಬುಡಗಳಿಗೆ ನೀರುಣಿಸುವ ಕಾಯಕ. ಒಂದು ಗಿಡದ ಬುಡ ತುಂಬಿದ ಕೂಡಲೇ ಆ ಬದಿಯ ಬೆಲಗಿನ ಬಾಯಿ ಬಂದು ಮಾಡುವುದು. ಮತ್ತು ಇನ್ನೊಂದು ಗಿಡಕ್ಕೆ ಬಿಡುವುದು. ಮಣ್ಣು ಒತ್ತಾರೆಯಾಗಿ ಪೇರಿಸಿಲು ಕುಟಾರ ಬಳಸಿಯೇ ಮಾಡಬೇಕಿತ್ತು. ಅದರಲ್ಲಿ ನಾನೆಷ್ಟು ಪರಿಣಿತಳಾಗಿದ್ದೆ ಎಂದರೆ ನನ್ನ ಅಣ್ಣಂದಿರಿಗಿಂತ ಅಚ್ಚುಕಟ್ಟಾಗಿ ಗಿಡಗಳಿಗೆ ನೀರುಣಿಸುತಿದ್ದೆ. ಹಾಗಾಗಿ ಅಪ್ಪ ತಮ್ಮ ಜೊತೆ ಕೆಲಸಕ್ಕೆ ನನ್ನನ್ನೆ ಕರೆದೊಯ್ಯುತ್ತಿದ್ದರು, ‘ನೀ ಗಂಡ ಮಗ ಆಗ್ಬೇಕಾಗತ, ನೋಡ ಮಗಾ’ ಎಂದು ಯಾವಾಗಲೂ ಹೇಳುತ್ತಿದ್ದರೆ ನನಗೆ ಅದೊಂದು ರೀತಿಯ ಹೆಮ್ಮೆ ಎನಿಸುತ್ತಿತ್ತು.

ಕೃಷಿ ಇಲಾಖೆಯಲ್ಲಿ ನೌಕರನಾಗಿದ್ದ ತಂದೆ ಎರಡು ಬಾರಿ ಹೃದಯಾಘಾತವಾದಾಗ ಅಮ್ಮನ ಒತ್ತಾಯಕ್ಕೆ ಸ್ವಯಂ ನಿವೃತ್ತಿ ಪಡೆದು ಊರಿಗೆ ಬಂದರು. ಆದರೆ ಬರುವ ಪೆನ್ಶನ್ ಆರು ಜನ ಮಕ್ಕಳನ್ನು ಸೇರಿಸಿ, ಎಂಟು ಜನರ ಬದುಕಿನ ಬಂಡಿ ಎಳೆಯಲು ಸಾಲುತ್ತಿರಲಿಲ್ಲ. ಮನೆಯ ಕೃಷಿಯ ಉತ್ಪನ್ನಗಳು ಆಗಷ್ಟೇ ಅಲ್ಪಸ್ವಲ್ಪ ಕೈಗೆ ನಿಲುಕಲಾರಂಭಿಸಿದ್ದವು. ಸಮಾಜದಲ್ಲಿ ದೊಡ್ಡ ಮನೆಯವರೆಂದು ಹೆಸರಾಗಿದ್ದ ಕಾರಣ, ‘ಹೆಸರಿಗೆ ಹೆಬ್ಬಾರ ಮೊಸರಿಗೆ ತತ್ವಾರ’ ಅನ್ನುವಂತೆ ಮನೆಯ ಸಂಕಟಗಳ ಅನ್ಯರೆದುರು ತೋಡಿಕೊಳ್ಳಲು ಆಗದ, ನುಂಗಿ ಬದುಕಲು ಆಗದ ದ್ವಂದ್ವದಲ್ಲಿ ತೊಳಲಾಡುವ ಪರಿಸ್ಥಿತಿ ಅದಾಗಿತ್ತು. ಯಾಕೆಂದರೆ ತಂದೆಯ ಆಸ್ಪತ್ರೆಯ ಖರ್ಚು, ತದನಂತರ ಔಷಧೋಪಚಾರದ ಖರ್ಚು ಏರಿತ್ತು. ಇದೇ ಹೊತ್ತಿಗೆ ಹಿರಿಯಣ್ಣ ಕಾಲೇಜು ಸೇರಿದ್ದ. ಇನ್ನು ಊರಲ್ಲಿ ಹೈಸ್ಕೂಲು ಇರಲಿಲ್ಲವಾದ್ದರಿಂದ ದೊಡ್ಡಕ್ಕ, ಅಣ್ಣ, ಕಿರಿಯಣ್ಣ ಸೇರಿ ಪಟ್ಟಣದಲ್ಲಿ ಒಂದು ರೂಮು ಮಾಡಿದ್ದರು. ಮನೆಯಿಂದ ಅಕ್ಕಿ ತೆಂಗಿನ ಕಾಯಿ ಬಿಟ್ಟರೆ ಬೇರೆಲ್ಲ ಕೊಂಡುಕೊಳ್ಳಬೇಕಿತ್ತು. ಇದರಿಂದ ಎರಡು ಮನೆಗಳ ನಿಭಾಯಿಸಬೇಕಾದ ಜವಾಬ್ದಾರಿ ತಂದೆಯದಾಗಿತ್ತು. ರೂಮು ಬಾಡಿಗೆ, ದಿನಸಿ ತಂದುಕೊಡುವುದು, ಪ್ರತಿ ಶನಿವಾರ ಮನೆಗೆ ಬರುವ ಮಕ್ಕಳ ಬಸ್ಸಿನ ಖರ್ಚು, ಶಾಲೆಯ ಪಠ್ಯಪುಸ್ತಕದ ಖರ್ಚು ಒಂದೇ ಎರಡೇ? ಎಲ್ಲ ಖರ್ಚಿನ ಬಾಬತ್ತುಗಳೇ ಆಗಿದ್ದವು. ಹೀಗಾಗಿ ಅವರಲ್ಲಿ ಒಂದು ರೀತಿಯ ಹತಾಶೆ ಆಗಾಗ ಪ್ರಕಟಗೊಳ್ಳುತ್ತಿತ್ತು. ಅಮ್ಮ ಸಮಾಧಾನಿಸುತ್ತಿದ್ದರು.

ಎರಡನೇ ಅಣ್ಣ ಓದು ಬಿಟ್ಟು ತೋಟ ನೋಡಿಕೊಳ್ಳತೊಡಗಿದ. ಅವನೊಂದಿಗೆ ಅಮ್ಮ ಅಡುಗೆ ಮಾಡಿಟ್ಟು ಗದ್ದೆಗೆ ನಡೆದುಬಿಡುತ್ತಿದ್ದರು. ಅಮ್ಮ ವಿಪರೀತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು. ಗದ್ದೆ ತೋಟ ಮನೆ ಅಡುಗೆ ಇತ್ಯಾದಿಗಳ ಮಧ್ಯೆ ಹೈರಾಣಾಗಿದ್ದಳು. ನಾವು ಬೆಳಿಗ್ಗೆ ನಮ್ಮ ಪಾಲಿನ ಮನೆಗೆಲಸ ಮುಗಿಸಿ ತಿಂಡಿ ತಿಂದು ಶಾಲೆಗೆ ಹೋಗುತ್ತಿದ್ದೆವು. ನಾನಾಗ ಎಂಟನೇ ತರಗತಿ ಪಾಸಾಗಿದ್ದೆ. ಅಮ್ಮನಿಗೆ ವಿಪರೀತ ರಕ್ತಸ್ರಾವ ಆಗಿ ಊರಲ್ಲಿಯ ಆಸ್ಪತ್ರೆಗಳಿಗೆ ಎಡತಾಕಿದರೆ, ಅಲ್ಲಿ ಗುಣ ಕಾಣದೇ ಹುಬ್ಬಳ್ಳಿಗೆ ಪೂರ್ತಿ ತಪಾಸಣೆಗೆ ಕೊಂಡೊಯ್ದರು. ಅಲ್ಲಿ ಅವರನ್ನು ಕಾನ್ಸರ್ ತನ್ನ ಮುಷ್ಟಿಯಲ್ಲಿ ಬಂಧಿಸಿರುವುದು ಗೊತ್ತಾಗಿತ್ತು. ದಿನಕ್ಕೆರಡು ಕರೆಂಟುಗಳನ್ನು ಕೊಡಿಸಿಕೊಳ್ಳುತ್ತಾ ತಿಂಗಳಾನುಗಟ್ಟಲೆ ಅಮ್ಮ ಹುಬ್ಬಳ್ಳಿ ಕಾನ್ಸರ್ ಆಸ್ಪತ್ರೆಯಲ್ಲಿ ಜನರಲ್ ವಾರ್ಡಿನ ಹಾಸಿಗೆಯಲ್ಲಿ ಮಲಗಿರುತ್ತಿದ್ದರು. ಸ್ಪೆಷಲ್ ವಾರ್ಡ್​ ಮಾಡಿದರೆ ಖರ್ಚು ಹೆಚ್ಚಾಗುವುದು ಎಂಬ ಕಾರಣಕ್ಕೆ ಜನರಲ್ ವಾರ್ಡನಲ್ಲಿಯೇ ಚಿಕಿತ್ಸೆ ಪಡೆದರು. ಬಾತ್​ರೂಮುಗಳು, ಟಾಯ್ಲೆಟ್‍ಗಳು ಎಲ್ಲರೂ ಬಳಸುತ್ತಿದ್ದರಿಂದ ಅಲ್ಲಿಯ ವ್ಯವಸ್ಥೆಯನ್ನು ಕಣ್ಣು ಮೂಗು ಬಾಯಿ ಮುಚ್ಚಿ ಸಹಿಸಿಕೊಂಡಿದ್ದರು. ಕಾರಣವಿಷ್ಟೇ, ಒಂದಿಷ್ಟು ಹಣ ಇದ್ದರೂ ಮುಂದೆ ಮೂರು ಹೆಣ್ಣು ಮಕ್ಕಳು, ಮೂವರು ಗಂಡುಮಕ್ಕಳ ಭವಿಷ್ಯ ನೆಲೆಯಾಗಬಹುದೆಂದು. ಅಮ್ಮನೊಂದಿಗೆ ಆಸ್ಪತ್ರೆ ವಾಸಕ್ಕೆ ನಾನೂ ಜೊತೆಯಾಗಿದ್ದೆ. ಒಂದೊಂದು ಅನುಭವವೂ ನನ್ನ ಮಿತಿಯನ್ನು ವಿಸ್ತರಿಸುತ್ತಲೇ ಇದ್ದವು. ಸಂಕಟಗಳನ್ನು ಎದುರಿಸುತ್ತಾ ಬೆಳೆದೆ. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಜನರ ಜೊತೆ ಮಾತನಾಡುತ್ತಾ, ಅಮ್ಮ ಒಮ್ಮೊಮ್ಮೆ ಕಣ್ಣಲ್ಲಿ ನೀರು ತಂದುಕೊಳ್ಳುತ್ತಿದ್ದರು. ನನಗೂ ಅಳು ಬರುತ್ತಿತ್ತು. ಕೆಲವೇ ವರ್ಷಗಳಲ್ಲಿ ಕ್ಯಾನ್ಸರ್ ಗುಣವಾದರೂ ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮದಿಂದ ಡಯಾಬಿಟೀಸ್ ಶುರು.

ಮತ್ತೆ ಶೋಕ… ಅಪ್ಪ ಮೂರನೇ ಬಾರಿ ಹೃದಯಾಘಾತಕ್ಕೆ ಒಳಗಾದಾಗ ಮತ್ತೆ ಬದುಕಲಿಲ್ಲ. ಆ ಒಂದುಕೆಟ್ಟ ಮುಂಜಾನೆ ಬೆಳಿಗ್ಗೆಯ ನಾನೇ ಕೊಟ್ಟ ಚಹಾ ಲೋಟ ಕೈಯಲ್ಲಿ ಹಿಡಿದಿದ್ದರಷ್ಟೇ. ಮರುಕ್ಷಣ ಮಂಚದ ಮೇಲಿನ ಹಾಸಿಗೆಯಿಂದ ಕೆಳಗೆ ಬಿದ್ದವರು ಹೊರಟೇ ಹೋಗಿದ್ದರು. ಅದು ಬಿ.ಎಡ್ ಪರೀಕ್ಷೆಯ ಸಮಯ. ಅಂದು ಅಪ್ಪನ ಕಳೆದುಕೊಂಡ ದುಃಖದಲ್ಲಿಯೇ ಪರೀಕ್ಷೆ ಬರೆದು ಬಂದ ನನಗೆ ಈಗ ನೆನಸಿಕೊಂಡರೆ ಆಶ್ಚರ್ಯವೆನಿಸುತ್ತದೆ. ತಂದೆಯ ಆಶಿರ್ವಾದವೋ ಏನೋ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದೆ. ನಂತರವೆಲ್ಲಾ ನಾನು ಹಿಂತಿರುಗಿ ನೋಡಲೇ ಇಲ್ಲ. ಅದಕ್ಕೆ ಕಾರಣ ನನ್ನೊಳಗೆ ಸದಾ ಕಾಡುವ ನನ್ನ ತಂದೆಯ ಸ್ಪೂರ್ತಿ. ಫಲಿತಾಂಶ ಬಂದ ಮೂರನೇ ತಿಂಗಳಿಗೆ ನನ್ನ ಕೈಯಲ್ಲಿ ಸರಕಾರಿ ನೌಕರಿಯ ಆದೇಶ ಪತ್ರವಿತ್ತು. ಇಪ್ಪತ್ತೆರಡೂವರೇ ವರ್ಷದ ನಾನು ಮಂಗಳೂರಿನ ಬಸ್ಸು ಹತ್ತಿದ್ದೆ. ಬಂಟ್ವಾಳದ ತಾಲೂಕಿನ ಕನ್ಯಾನ ಎಂಬ ಊರಿನ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಸಿಕ್ಕಿತ್ತು. ನಮ್ಮ ಉತ್ತರ ಕನ್ನಡದ ನೆಲದ ಹಸಿರಲ್ಲಿ ಬೆಳೆದ ನನ್ನನ್ನು ದಕ್ಷಿಣ ಕನ್ನಡದ ನೆಲ ಎರಡೇ ವರ್ಷಗಳಲ್ಲಿ ಸಾಕಷ್ಟು ಅನುಭವಗಳನ್ನು ನೀಡಿತ್ತು. ಅಪ್ಪ-ಅಮ್ಮನಿಂದ ದೂರವಾಗಿ ಉಳಿಯುವ, ಎಲ್ಲ ಜವಾಬ್ದಾರಿಗಳನ್ನು ಸ್ವತಃ ನಿಭಾಯಿಸುವ ಧೈರ್ಯವನ್ನು ತಂದುಕೊಟ್ಟಿತ್ತು. ನೌಕರಿ ದೊರೆತು ಎರಡು ವರ್ಷದ ನಂತರ ಮದುವೆಯಾಗಿತ್ತು. ಗಂಡ ಉತ್ತರದಲ್ಲಿ ನಾನು ದಕ್ಷಿಣದಲ್ಲಿ. ಅದೂ ಒಂದೂವರೆ ವರ್ಷ ಹೇಗೋ ಏಗಿದೆವು. ಅದೇ ಸಮಯಕ್ಕೆ ಗರ್ಭವತಿಯೂ ಆದೆ. ಯಾರದೋ ಕೈಕಾಲು ಹಿಡಿದು ಕೊನೆಗೂ ಗಂಡನೂರಿಗೆ ವರ್ಗಾವಣೆಯಾಗಿತ್ತು.

ಅದು ಮೊದಲ ಬಸಿರು. ನಮ್ಮ ಕಡೆಯಲ್ಲಿ ಚೊಚ್ಚಿಲ ಬಸಿರು ಎಂದೇ ಕರೆಯುವುದು ವಾಡಿಕೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಆದರೆ ಮೈಯಲ್ಲಿ ಒಂದು ರೀತಿಯ ಆಲಸ್ಯ, ಹೊರ ದುಡಿಮೆಯಲ್ಲಿ ಬಸವಳಿದು ಬಂದು ಮನೆಯ ಕರ್ತವ್ಯ ಮಾಡಬೇಕಾದ ಅನಿವಾರ್ಯತೆ. ಪತಿ ಬೇಡವೆಂದರೂ ದಾಂಪತ್ಯದ ಹೊಸತು. ಗಂಡನ ಮೆಚ್ಚಿಸುವ ಇರಾದೆ. ದಿನವೂ ಮನೆಕೆಲಸವನ್ನೂ ಮಾಡಿ, ಅಡುಗೆಯನ್ನೂ ಮಾಡಿ, ಕೆಲಸಕ್ಕೆ ಹೋಗಬೇಕಾದ ಒತ್ತಡವೋ ಏನೋ ಹೆರಿಗೆಗೆ ತಿಂಗಳಿದೆ ಎನ್ನುವಾಗ ವಿಪರೀತ ಅನಾರೋಗ್ಯ ಕಾಡಿತ್ತು ಬೆಡ್‍ರೆಸ್ಟ್​ ಮಾಡಲೇಬೇಕಾದ ಅನಿವಾರ್ಯತೆ. ತಂದೆ ಇರಲಿಲ್ಲ. ಒಡಹುಟ್ಟಿದವರೆಲ್ಲರ ಮದುವೆಯೂ ಆದ ಕಾರಣ ಎಲ್ಲರೂ ಅವರವರ ಕುಟುಂಬ ಜೀವನದಲ್ಲಿ ವ್ಯಸ್ತರಾಗಿದ್ದರು. ಅನಾರೋಗ್ಯದ ಕಾರಣ ತಾಯಿಯೂ ನನ್ನೊಂದಿಗೆ ಬಂದಿರಲು ಆಗಲಿಲ್ಲ. ಏಕಾಂಗಿಯಾದೆ.

ಕಾದು ಕಾದು ಅಂತೂ ಮೊದಲ ಹೆರಿಗೆ ಸಿಸೇರಿಯನ್ ಆಪರೇಷನ್ ಮೂಲಕ ಆಗಿತ್ತು. ನನಗೆ ಮಗುವಾಗುತ್ತಲೇ ತ್ಯಾಗಮಯಿಯಾಗಿಬಿಟ್ಟಿದ್ದೆ. ಮಗುವಿಗಾಗಿ ನನ್ನಿಷ್ಟದ ಆಹಾರವನ್ನು ಬಿಡುತ್ತಿದ್ದೆ. ಓದು ಬರವಣಿಗೆಯನ್ನು ಇಷ್ಟಪಡುತ್ತಿದ್ದ ನಾನು ಈಗ ಮಗಳನ್ನೇ ಓದುತ್ತಿದ್ದೆ. ಸಂಗಾತಿಯಾಗಿದ್ದ ಪುಸ್ತಕಗಳೆಲ್ಲ ಕಪಾಟಿನಲ್ಲಿ ಚಂದಕ್ಕೆ ಸಾಲಾಗಿ ಸೇರಿಸಲ್ಪಟ್ಟವು. ನನ್ನ ಹವ್ಯಾಸಗಳನ್ನು ಮರೆತಿದ್ದೆ. ಜನರ ಜೊತೆ ಆರಾಮ್ ಆಗಿ ಕೂತು ಹರಟೆ, ಸಂಭ್ರಮದ ಕ್ಷಣಗಳನ್ನು ಆನಂದಿಸಲು ಮರೆತುಬಿಟ್ಟಿದ್ದೆ. ಮಗಳು ಬೆಳೆಯುತ್ತಿದ್ದಳು. ಅಂಬೆಗಾಲು ಇಡುವುದರಿಂದ ಹಿಡಿದು ಉಮ್ಮಾ ಉಮ್ಮಾ… ಎಂಬ ತೊದಲಿನಿಂದ ಕರೆಯಲು ಶುರುವಾದಳು. ಯಾರಾದರೂ ‘ಮಮ್ಮಿ’ ಎಂದು ಕರೆದು ಹೇಳಿಕೊಟ್ಟರೆ ಮೀ.. ಮೀ.. ಎನ್ನುತ್ತಿದ್ದಳೇ ಹೊರತು ಮಮ್ಮಿ ಎನ್ನುತ್ತಿರಲಿಲ್ಲ. ಕ್ರಮೇಣ ಅಮ್ಮ… ಎನ್ನತೊಡಗಿದಳು. ಇಷ್ಟಿಷ್ಟೇ ಮುದ್ದೆಯಂತಹ ಮಗಳ ದೇಹ, ಎಳೆ ಬೆರಳುಗಳು, ಹಾಲುಣಿಸುವಾಗ ಒಂದು ಕೈ ಕುಡಿಯುವ ಮೊಲೆ ಹಿಡಿದು ಮತ್ತೊಂದು ಕೈಯಿಂದ ಇನ್ನೊಂದು ಎದೆಯನ್ನು ಸವರುತ್ತಾ ಕಣ್ಣು ಮಿಟುಕಿಸುತ್ತಿತ್ತು.

ಮೂರೇ ತಿಂಗಳಿಗೆ ಮತ್ತೆ ಕೆಲಸಕ್ಕೆ ಹೋಗಬೇಕಾದ ಹೊತ್ತು. ಮಗುವನ್ನು ನೋಡಿಕೊಳ್ಳಲು ಬಂದ ಸಹಾಯಕಿಯ ಕೈಯಲ್ಲಿ ಕೂಸಿಟ್ಟು, ಅಳುತ್ತಾ ಹೋದ ದಿನ ನೆನಪಾದರೆ ಈಗಲೂ ಕಣ್ಣಂಚು ಒದ್ದೆಯಾಗುತ್ತದೆ. ಬಾಡಿಗೆ ಮನೆಯಲ್ಲಿದ್ದೆವು. ಮಗು ಹೊರಗೆ ಹೋಗಬಾರದೆಂಬ ಕಾರಣಕ್ಕೆ ಮನೆ ಬಾಗಿಲಿಗೆ ಕಟ್ಟಿಗೆಯ ಅಡ್ಡಪಟ್ಟಿ ಹೊಡೆದಿದ್ದೆವು. ಆ ಹಲಗೆಯ ಪಟ್ಟಿ ಸರಿಸಿ ನಾನು ಶಾಲೆಗೆ ಹೊರಟರೆ ಅಳು ಶುರು ಮಾಡಿಬಿಡುತ್ತಿದ್ದಳು. ಆಗಾಗ ಹೋಗಬೇಡವೆಂದು ರಚ್ಚೆ ಹಿಡಿಯುತ್ತಿದ್ದವಳು ನಾನು ಶಾಲೆಗೆ ತಲುಪುವರೆಗೂ ಅಳುತ್ತಲೇ ಇರುತ್ತಿದ್ದಳು. ಈ ನಡುವೆಯೇ ಮಗುವಿಗೆ ಹಾಲೂಣಿಸುತ್ತಾ, ಇನ್ನೊಂದು ಕಡೆಯಲ್ಲಿ ಪುಸ್ತಕ ಹಿಡಿದು ಎಂ.ಎ ಇಂಗ್ಲೀಷ ಪರೀಕ್ಷೆ ಬರೆದು ಪಾಸಾದೆ. ನನ್ನ ಅದೃಷ್ಟವೋ, ಹೆತ್ತವರ ಆಶೀರ್ವಾದವೋ ಏನೋ ಮರುವರ್ಷವೇ ಕಾಲೇಜಿಗೆ ಆಂಗ್ಲ ಭಾಷೆಯ ಉಪನ್ಯಾಸಕಳಾಗಿ ನೇಮಕವಾಗಿದ್ದೆ.

ಈಗ ಊರು ಮನೆ ಬದಲಾಗಿತ್ತು ಸ್ವಂತ ಸೂರು ಕೊಂಡುಕೊಂಡೆವು. ಕೆಲವು ವರ್ಷಗಳಲ್ಲಿ ಎರಡನೆ ಮಗು ಬಂದಿತ್ತು. ಅದು ಹೆಣ್ಣಾದಾಗ ನಾವಿಬ್ಬರೂ ಸಂಸತದಿಂದಲೇ ಸ್ವಾಗತಿಸಿದ್ದೆವು. ಆದರೆ ಹೋದಲ್ಲಿ ಬಂದಲ್ಲಿ ಕೇಳುವ ವಿಚಿತ್ರ ಪ್ರಶ್ನೆಗಳು ಕುಹಕಗಳು ಕೆಲವು ಬಾರಿ ಕೋಪ ತರಿಸುತ್ತಿದ್ದರೆ, ಇನ್ನು ಕೆಲವು ಬಾರಿ ಅವರ ಅಜ್ಞಾನಕ್ಕೆ ಉತ್ತರಿಸದೆ ನಿರ್ಲಕ್ಷಿಸುವುದು ರೂಢಿಯಾಯಿತು. ಮಕ್ಕಳು ಚಿಕ್ಕವಿರುವಾಗ ಅದರ ಆರೋಗ್ಯದಲ್ಲಾಗುವ ಏರುಪೇರುಗಳು ಆ ಅನುಭವ ತಾಯಿಯಾದವಳಿಗೆ ಗೊತ್ತು. ದೊಡ್ಡವಳು ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳುವುದನ್ನು ಕಲಿತಳು. ಆದರೆ ಈಗ ಎರಡನೆಯದು ತೀರಾ ಚಿಕ್ಕದು. ಅಕ್ಕತಂಗಿಯ ನಡುವೆ ಸುಮಾರು ಏಳೂವರೆ ವರ್ಷಗಳಷ್ಟು ಅಂತರ. ದೊಡ್ಡವಳು ಶಾಲೆಗೆ ಹೋದರೆ ನಾವಿಬ್ಬರೂ ಹೊರಗೆ ದುಡಿಯಲು ಹೋಗಬೇಕಾದ ಅನಿವಾರ್ಯತೆ. ಮತ್ತೆ ಕೆಲಸದವಳ ಮೇಲೆಯೇ ಮಗು ಮನೆ ಎಲ್ಲಾ ಬಿಟ್ಟು ಹೋಗಬೇಕಾದಂತಹ ಪರಿಸ್ಥಿತಿ.

ಈಗ ನಾನು ಕಾಲೇಜಿಗೆ ಹೋಗಲು ದೂರದ ಮೂವತ್ತು ಕಿ. ಮೀ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿತ್ತು. ನಡುವೆ ಬಂದು ಹಾಲುಣಿಸಿ ಹೋಗುವ ಅವಕಾಶವಿರಲಿಲ್ಲ. ನಾಲ್ಕುವರೆ ತಿಂಗಳಿಗೆ ಬೆಳಿಗ್ಗೆ ಏಳುವರೆಗೆ ಬಸ್ಸು ಹತ್ತಿದ್ದರೆ ಮಧ್ಯಾಹ್ನ ಮೂರೂವರೆಗೆ ಮನೆಗೆ ಬರುತ್ತಿದ್ದೆ. ಆ ನಡುವಿನ ಸಮಯವೆಲ್ಲ ನಾನು ಮಗಳನ್ನು ನೆನೆಸಿಕೊಂಡರೆ ಸಾಕು. ರವಿಕೆಯೊಳಗೆ ಹಾಲುಕ್ಕಿ ಎದೆಯೆಲ್ಲಾ ಹಸಿಯಾಗುತ್ತಿತ್ತು. ಅವಳು ಕುಡಿಯಬೇಕಾದ ಹಾಲು ಸೋರಿ ಹೋಗುತ್ತಿತ್ತು. ಮನೆಗೆ ಬಂದ ಮೇಲೆ ಕೂಡಾ ಬೆಳಿಗ್ಗೆಯಿಂದ ಹೆಪ್ಪುಗಟ್ಟಿದ ಹಾಲೆಂದು ಒಂದಿಷ್ಟು ಹಿಂಡಿ ತೆಗೆಯುತ್ತಿದ್ದೆ. ಯಾಕೆಂದರೆ ಬಹಳ ಹೊತ್ತಿನವರೆಗೆ ಎದೆಯೊಳಗೆ ಗಟ್ಟಿಯಾದ ಹಾಲು ಮಗುವಿನ ಹೊಟ್ಟೆಗೆ ಹಿತವಲ್ಲವೆಂದು ಅಮ್ಮ ಹೇಳುತ್ತಿದ್ದರು. ಹೀಗಾಗಿ ಮಗು ಬಾಟಲಿಯ ಹಾಲನ್ನೇ ಲೊಚಲೊಚ ಕುಡಿಯುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಆದರೆ ದುರಾದೃಷ್ಟಕ್ಕೆ ಕೆಲಸದವಳ ಅಜಾಗ್ರತೆಯ ಕಾರಣ ಬಾಟಲಿಯನ್ನು ಸರಿಯಾಗಿ ತೊಳೆಯದೆ ಮಗುವಿಗೆ ಅಲರ್ಜಿ ಬೇಧಿ ಶುರುವಾಯಿತು. ಸುಮಾರು ಎರಡು ವರ್ಷಗಳವರೆಗೆ ಮಗುವನ್ನು ಹಿಂಡಿ ಹಿಪ್ಪೆಮಾಡಿತು. ಹತ್ತಾರು ವೈದ್ಯರ ಬಳಿ ಹೋದರೂ ಗುಣ ಕಾಣಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆದರೆ ಕ್ರಮೇಣ ಆಕೆ ದೊಡ್ಡವಳಾಗುತ್ತಾ ಜೀರ್ಣಕ್ರಿಯೆಯಲ್ಲಿ ಪ್ರಗತಿ ಉಂಟಾಗುತ್ತಲೇ ಕೊಂಚ ಚೇತರಿಸಕೊಳ್ಳತೊಡಗಿದಳು. ಆದರೆ ಒಂದಿಷ್ಟು ಆರಾಮ ದಕ್ಕಿತು ಎನ್ನುವಾಗಲೇ ದುರಾದೃಷ್ಟ. ನನ್ನಮ್ಮ ನನ್ನ ಕೈ ಬಿಟ್ಟು ಹೊರಟೇ ಹೋದರು. ಹಾಸಿಗೆ ಹಿಡಿಯದೇ, ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ, ಒಂದು ದಿನ ಹೇಳದೆ ಕೇಳದೆ ಹೃದಯಾಘಾತದಿಂದ ಹೊರಟೇ ಹೋದರು. ಬದುಕಿಗೆ ಬೆಳದಿಂಗಳಿನಂತಹ ಅಮ್ಮ ಇನ್ನಿಲ್ಲವಾದರು.

ಮಕ್ಕಳು ಈಗ ಬೆಳೆಯುತ್ತಿದ್ದಾರೆ. ಮೊದಲೆಲ್ಲಾ ಮಕ್ಕಳು ಬೇಗ ದೊಡ್ಡವರಾದರೆ ಕೊಂಚ ಆರಾಮ ಆಗಿ ಇರಬಹುದು ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಈಗವರ ವಿದ್ಯಾಭ್ಯಾಸದ ಚಿಂತೆ. ಆನಂತರ ಅವರ ಮುಂದಿನ ಭವಿಷ್ಯದ ಕುರಿತ ಜವಾಬ್ದಾರಿ. ಬಹುಶಃ ಈ ಅನುಭವಗಳೇ ನಿಜಕ್ಕೂ ನಮ್ಮ ಬೆಳೆಸುವುದು. ಏನೇ ಇರಲಿ ತಾಯಿಯ ಪ್ರೀತಿ ಉಣಿಸುವ ಹಂಬಲವನ್ನು ನನ್ನ ತಾಯ್ತನ ಸಾಕಾರಗೊಳಿಸಿದೆ. ತಾಯ್ತನದ ಹಿರಿಮೆಯ ನಿಸರ್ಗ ನಿರ್ಮಿಸಿದ ರೀತಿ ಎಷ್ಟು ಅನುಪಮವೋ ಅಷ್ಟೇ ಅನನ್ಯವಾದುದು ಅಮ್ಮನಾಗುವ ಸೌಭಾಗ್ಯ. ಅಮ್ಮನಾದ ಮೇಲೆಯೇ ನಾನು ಪ್ರೌಢಳಾದದ್ದು ಎಂದು ಯಾವಾಗಲೂ ನನಗೆ ಅನಿಸುತ್ತದೆ.

***

ಪರಿಚಯ: ನಾಗರೇಖಾ ಗಾಂವಕರ ಕೃಷಿ ಕುಟುಂಬದಿಂದ ಬಂದವರು. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಎಂಬ ಗ್ರಾಮದಲ್ಲಿ. ಓದಿದ್ದು ಕನ್ನಡ ಮತ್ತು ಇಂಗ್ಲಿಷ ಭಾಷೆಯಲ್ಲಿ ಎಂ.ಎ ಪದವಿ. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದು, ಸದ್ಯ ಸರಕಾರಿ ಪದವಿಪೂರ್ವ ಕಾಲೇಜು ದಾಂಡೇಲಿಯಲ್ಲಿ ಉಪನ್ಯಾಸಕಿಯಾಗಿರುತ್ತಾರೆ. ಪ್ರಕಟಿತ ಕೃತಿಗಳು: ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ (ಕವನ ಸಂಕಲನಗಳು) ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ) ಕವಾಟ- ಪುಸ್ತಕ ಪರಿಚಯ ಕೃತಿ. ಪ್ರಶಸ್ತಿಗಳು: ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ, ‘ಬರ್ಫದ ಬೆಂಕಿ’ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ ಗೀತಾ ದೇಸಾಯಿ ದತ್ತಿಬಹುಮಾನ ಲಭಿಸಿದೆ. ‘ಮೌನದೊಳಗೊಂದು ಅಂತರ್ಧಾನ’ ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಇವರು ಕೊಡಮಾಡುವ ಶ್ರೀಮತಿ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ ಲಭಿಸಿದೆ.

ನಾನೆಂಬ ಪರಿಮಳದ ಹಾದಿಯಲಿ: ಮನಸ್ಸು ಅನ್ನೋ ಸ್ಪ್ರಿಂಗಿನ ಮಾಯಾ ಬಹಳ ದೊಡ್ಡದು