Music Award : ಖ್ಯಾತ ತಬಲಾವಾದಕ ಪಂ. ಅನಿಂದೋ ಚಟರ್ಜಿ ಅವರಿಗೆ ‘ಕಲಾ ಶೃಂಗ’ ಪ್ರಶಸ್ತಿ

| Updated By: ಶ್ರೀದೇವಿ ಕಳಸದ

Updated on: May 11, 2022 | 11:46 AM

Tabla Artist : ಪಂ. ಮಲ್ಲಿಕಾರ್ಜುನ ಮನಸೂರ್, ಅಲಿ ಅಕಬರ್ ಖಾನ್, ಗಂಗೂಬಾಯಿ ಹಾನಗಲ್, ಪಂ ರವಿಶಂಕರ್ ಮುಂತಾದ ದಿಗ್ಗಜರುಗಳಿಗೆ ತಬಲಾ ಸಾಥ್ ನೀಡಿದ ಪಂ. ಅನಿಂದೋ ಚಟರ್ಜಿ ಬೆಂಗಳೂರಿನ ಶ್ರೀರಾಮ ಕಲಾವೇದಿಕೆ ಏರ್ಪಡಿಸಿರುವ ‘ನಾದನಮನ’ದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.

Music Award : ಖ್ಯಾತ ತಬಲಾವಾದಕ ಪಂ. ಅನಿಂದೋ ಚಟರ್ಜಿ ಅವರಿಗೆ ‘ಕಲಾ ಶೃಂಗ’ ಪ್ರಶಸ್ತಿ
ಬೆಂಗಳೂರಿಗೆ ಬರಲಿರುವ ತಬಲಾ ಕಲಾವಿದರಾದ ಪಂ. ಅನುಬ್ರತ್ ಚಟರ್ಜಿ ಮತ್ತು ಪಂ ಅನಿಂದೋ ಚಟರ್ಜಿ
Follow us on

Pandit Anindo Chattarjee : ಬೆಂಗಳೂರಿನ ಶ್ರೀರಾಮ ಕಲಾ ವೇದಿಕೆಯ ಈ ಸಲದ ವಾರ್ಷಿಕ ಕಾರ್ಯಕ್ರಮ ‘ನಾದ ನಮನ’ ಮತ್ತು ಗುರು ಪಂ. ಶೇಷಗಿರಿ ಹಾನಗಲ್ಲ ಅವರ ಜನ್ಮಶತಮಾನೋತ್ಸವವನ್ನು ಇದೇ ತಿಂಗಳು 21 ಮತ್ತು 22 ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಖ್ಯಾತ ತಬಲಾ ಕಲಾವಿದ ಕೊಲ್ಕತ್ತಾದ ಪಂ. ಅನಿಂದೋ ಚಟರ್ಜಿಯವರನ್ನು ‘ಕಲಾ ಶೃಂಗ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ  ನಯನ್ ಯಾವಗಲ್, ಧ್ರೃವ ಹಾನಗಲ್ಲ, ಧನಂಜಯ ಹೆಗಡೆ ಹಾಗೂ ಪಂ. ಅನಿಂದೋ ಚಟರ್ಜಿಯವರು ತಮ್ಮ ಮಗ ಅನುಬ್ರತ್ ಚಟರ್ಜಿ (Anubrath Chattarjee) ಯವರೊಂದಿಗೆ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ. ಕಲಾಭಿಮಾನಿಗಳಿಗೆ ಪ್ರವೇಶ ಉಚಿತ. ಬೆಂಗಳೂರಿನ ಶ್ರೀರಾಮ ಕಲಾ ವೇದಿಕೆಯು (Shri Ram Kalavedike) ಕಳೆದ ಹದಿನಾರು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದೆ. ದೇಶದ ಖ್ಯಾತ ಕಲಾವಿದರು ಸೇರಿದಂತೆ ಹಲವಾರು ಪ್ರತಿಭಾನ್ವಿತ ಯುವ ಕಲಾವಿದರು, ಬಾಲ ಪ್ರತಿಭೆಗಳ ಸಂಗೀತ ಪ್ರಸ್ತುತಿಗೆ ಅವಕಾಶ ಕಲ್ಪಿಸುತ್ತ ಬಂದಿದೆ.

ಪಂಡಿತ್ ಅನಿಂದೋ ಚಟರ್ಜಿ ಫರೂಖಾಬಾದ್ ಘರಾಣೆಯ ಹಿನ್ನೆಲೆಯವರು. ಸಂಗೀತ ಕುಟುಂಬದಲ್ಲಿ ಜನಿಸಿದ ಇವರು ಪಂಡಿತ್ ಜ್ಞಾನ್ ಪ್ರಕಾಶ್ ಘೋಷ್ ಅವರ ಶಿಷ್ಯರು. ಹಾಜಿ ವಿಲಾಯತ್ ಖಾನ್​ ಸಾಹೇಬ್​ರಿಂದ ಪ್ರತಿಷ್ಠಾಪನೆಗೊಂಡ ಫರೂಖಾಬಾದ್ ಘರಾಣಾ ಸಂಸ್ಥೆಯ ನಿರ್ದೇಶಕರು ಆಗಿರುವ ಇವರು, ನಿಖಿಲ್ ಬ್ಯಾನರ್ಜಿ, ಇಮ್ರತ್ ಖಾನ್, ಬುಧಾದಿತ್ಯ ಮುಖರ್ಜಿ, ರಾಯೀಸ್ ಖಾನ್, ಪಂ. ರವಿಶಂಕರ್, ಮಣಿಲಾಲ್ ನಾಗ್, ಕೃಷ್ಣಾ ಭಟ್, ಬುದ್ಧದೇವ ದಾಸ್​ ಗುಪ್ತಾ, ಶಾಹೀದ್ ಪರ್ವೇಝ್, ತೇಜೇಂದ್ರ ನಾರಾಯಣ ಮಜುಮ್ದಾರ್, ಹರಿಪ್ರಸಾದ್ ಚೌರಾಸಿಯಾ ಮತ್ತು ನಿನ್ನೆಯಷ್ಟೇ ನಿಧನರಾದ ಪಂ. ಶಿವಕುಮಾರ ಶರ್ಮಾ ಅವರೊಂದಿಗೆ ತಬಲಾ ಸಾಥ್ ನೀಡಿದ್ದಾರೆ. ಅಲ್ಲದೆ ಪಂ. ಮಲ್ಲಿಕಾರ್ಜುನ ಮನ್ಸೂರ, ಡಾ. ಗಂಗೂಬಾಯಿ ಹಾನಗಲ್​ ಅವರೊಂದಿಗೂ ಇವರು ನುಡಿಸಿದ್ದಾರೆ.

ಇದನ್ನೂ ಓದಿ  : Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

ಇಂಥ ಅನುಭವಿ, ಹಿರಿಯ, ಚತುರ ಕಲಾವಿದರಿಗೆ 2022ರ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿತು. ಆದರೆ ಆ ಪ್ರಶಸ್ತಿಯನ್ನು ತಿರಸ್ಕರಿಸಿದವ ಪಟ್ಟಿಯಲ್ಲಿ ಅನಿಂದೋ ಅವರ ಹೆಸರೂ ಇತ್ತು. ತನ್ನ ಸಮಕಾಲೀನರಿಗೆ, ಕಿರಿಯರಿಗೆ ಈಗಾಗಲೇ ಈ ಪ್ರಶಸ್ತಿ ಲಭಿಸಿದೆ. ಹತ್ತು ವರ್ಷಗಳ ಹಿಂದೆಯೇ ಇದು ಲಭಿಸಿದ್ದರೆ ಖುಷಿ ಇರುತ್ತಿತ್ತು ಎಂಬ ಕಾರಣವನ್ನು ಅವರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಶ್ರೀರಾಮ ಕಲಾ ವೇದಿಕೆಯ ಉದ್ದೇಶ ಮತ್ತು ಧ್ಯೇಯಗಳಿಗೆ ಅನುಗುಣವಾಗಿ ಆಯೋಜಿಸುವ ಪ್ರತಿ ಕಾರ್ಯಕ್ರಮಗಳಲ್ಲಿ ಒಬ್ಬ ಖ್ಯಾತ ಹಿರಿಯ ಕಲಾವಿದ, ಒಬ್ಬ ಪ್ರತಿಭಾವಂತ ಯುವ ಕಲಾವಿದ ಮತ್ತು ಒಬ್ಬ ಬಾಲಪ್ರತಿಭೆ ಸಂಗೀತ ಕಛೇರಿ ನೀಡುವುದು ಕ್ರಮವಾಗಿ ನಡೆದುಕೊಂಡು ಬಂದಿದೆ. ಕಾರ್ಯಕ್ರಮ ಆಯೋಜಿಸುವುದಲ್ಲದೇ, ವಾರ್ಷಿಕೋತ್ಸವದಲ್ಲಿ ನಮ್ಮ ದೇಶದ ಹಿರಿಯ ಕಲಾವಿದರೊಬ್ಬರನ್ನು ವೇದಿಕೆಯ ಪ್ರತಿಷ್ಠಿತ ‘ಕಲಾಶೃಂಗ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುವುದು, ಅರ್ಹ ಸಂಗೀತದ ವಿದ್ಯಾರ್ಥಿಗಳಿಗೆ ವೇತನಗಳನ್ನು ನೀಡುವುದು ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಕಲಾವಿದರಿಗೆ ಸಹಾಯ ನೀಡುವುದು ಮುಂತಾದ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.

ಇದನ್ನೂ ಓದಿ : Theatre : ಅಂಕಪರದೆ; ‘ನವೋದಯ’ ತಂಡದಿಂದ ಮೇ5ರಂದು ‘ಅಯೋಧ್ಯಾ ಕಾಂಡ’ ಪ್ರದರ್ಶನ

Published On - 11:44 am, Wed, 11 May 22