Qatar Mail: ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಆತ ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ

|

Updated on: Mar 18, 2022 | 9:04 AM

Gate Pass : ಲೇಖನವೊಂದನ್ನು ತುರ್ತಾಗಿ ಪ್ರಕಟಿಸಬೇಕೆನ್ನುವ ತರಾತುರಿಯಲ್ಲಿ ಏಳೂವರೆಗೇ ಆಫೀಸಿಗೆ ಬಂದರೆ ಗೇಟ್ ಪಾಸ್ ಫಜೀತಿ. ಎಚ್. ಆರ್ ಒಳಗೊಂಡಂತೆ ನನ್ನ ಟೀಮಿನ ಯಾರೊಬ್ಬರೂ ಫೋನ್ ತೆಗೆಯುತ್ತಿಲ್ಲ, ಕಸಿವಿಸಿಯಾಯಿತು.

Qatar Mail: ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಆತ ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ
ಪ್ರಾತಿನಿಧಿಕ ಚಿತ್ರ : ಚೈತ್ರಾ ಅರ್ಜುನಪುರಿ
Follow us on

ಕತಾರ್ ಮೇಲ್ | Qatar Mail : ಅಲ್ ಜಜೀರಾ ಟಿವಿ ಚಾನೆಲ್ ನಲ್ಲಿ ಆನ್​ಲೈನ್​ ಪ್ರೊಡ್ಯೂಸರ್ ಆಗಿ ಕೆಲಸಕ್ಕೆ ಸೇರಿ ವರ್ಷಕ್ಕೂ ಮೇಲಾಗಿತ್ತು. ಆ ದಿನ ಪ್ರಕಟಿಸಬೇಕಾಗಿದ್ದ ಕೆಲವು ಲೇಖನಗಳನ್ನು ಹಿಂದಿನ ದಿನವೇ ಎಡಿಟ್ ಮಾಡಿಕೊಂಡಿದ್ದೆ. ಬೆಳ್ಳಂಬೆಳಗ್ಗೆ ಅತ್ಯವಶ್ಯಕವಾದ ಒಪೆಡ್ ಒಂದು ಆಫೀಸಿನ ಈ-ಮೇಲಿನಲ್ಲಿ ಬಂದು ಕೂತಿತ್ತು. ಅದನ್ನು ಆದ್ಯತೆಯ ಮೇರೆಗೆ ಪ್ರಕಟ ಮಾಡಬೇಕೆಂದು ರಜೆಯ ಮೇಲೆ ಅಮೆರಿಕಾಕ್ಕೆ ತೆರಳಿದ್ದ ಎಡಿಟರ್ ಈ-ಮೇಲಿನಲ್ಲಿ ನೋಟ್ ಕಳುಹಿಸಿದ್ದರು. ಆ ದಿನ ಗಂಡನಿಗೆ ಮೀಟಿಂಗ್ ಇದ್ದ ಕಾರಣ ಎಂದಿಗಿಂತಲೂ ಸ್ವಲ್ಪ ಮುಂಚಿತವಾಗಿಯೇ ಆಫೀಸ್ ದಾರಿ ಹಿಡಿದೆವು. ನನ್ನನ್ನು ಆಫೀಸಿನ ಎದುರು ಇಳಿಸಿ ಆತ ತನ್ನ ಕಚೇರಿಗೆ ತೆರಳಿದ. ನಾನು ಎಂದಿನಂತೆ ಹ್ಯಾಂಡ್ ಬ್ಯಾಗನ್ನು ಸ್ಕ್ಯಾನಿಂಗ್ ಮಷೀನ್‌ ಗೆ ಹಾಕಿ, ಕೈಲಿದ್ದ ಊಟದ ಬ್ಯಾಗನ್ನು ಮಷೀನ್ ಮೇಲಿರಿಸಿ, ಮೆಟಲ್ ಡಿಟೆಕ್ಟರ್ ಗೇಟನ್ನು ಹಾದು ಸೆಕ್ಯೂರಿಟಿಯ ಮುಂದೆ ನಿಂತೆ.
ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

 

(ಪತ್ರ 6, ಭಾಗ 1)

ಭಾರತ ಮೂಲದ ದಕ್ಷಿಣ ಆಫ್ರಿಕಾ ಪ್ರಜೆಯಾದ ಆ ಸೆಕ್ಯೂರಿಟಿ ಗಾರ್ಡ್ ಆ ದಿನವೂ ಗುಡ್ ಮಾರ್ನಿಂಗ್ ಹೇಳಿ, “ಏನು ತಿಂಡಿ ಮೇಡಂ?” ಎಂದು ನಗುತ್ತಾ ಕೇಳಿದ. ನಾನು ಉತ್ತರಿಸಿ, ಸ್ಕ್ಯಾನಿಂಗ್ ಮುಗಿಸಿ ಹೊರಬಂದಿದ್ದ ಬ್ಯಾಗಿನ ಝಿಪ್ ಎಳೆದು ಅದರಲ್ಲಿದ್ದ ಪ್ರವೇಶ ಪರವಾನಗಿಯನ್ನು ಅವನ ಕೈಗಿರಿಸಿದೆ. ಅವನು ಅದನ್ನೊಮ್ಮೆ ನೋಡಿ, ನಾನು ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ. ಅವನ ಮಾತು ಕೇಳಿ ನಾನು ತಬ್ಬಿಬ್ಬಾದೆ. ಗೇಟ್ ಪಾಸ್ ಮುಗಿದಿದೆ, ಅದನ್ನು ನವೀಕರಿಸದೆ ನಾನು ಒಳಗೆ ಹೋಗುವಂತಿಲ್ಲ ಎಂದು ಸ್ಪಷ್ಟಪಡಿಸಿದ. ನಾನು ಪರವಾನಗಿಯನ್ನು ನೋಡಿದೆ. ಅವನು ಹೇಳಿದ್ದು ನಿಜ. ಭಾರತದ ಹಾಗೆ ಇಲ್ಲಿ ದಿನಾಂಕವನ್ನು ಮೊದಲು ನಮೂದಿಸದೆ ಅಮೆರಿಕನ್ನರ ಹಾಗೆ ತಿಂಗಳನ್ನು ಮೊದಲು ನಮೂದಿಸಿಬಿಟ್ಟರೇನೋ ಎಂದು ಅನುಮಾನವಾಗಿ ಎರಡೆರಡು ಬಾರಿ ಅದನ್ನು ತಿರುಗಿಸಿ ಮುರುಗಿಸಿ ನೋಡಿದೆ. ಆತ ಹೇಳಿದಂತೆಯೇ ಪರವಾನಗಿ ಹಿಂದಿನ ದಿನವೇ ಮುಗಿದಿತ್ತು, ಅದನ್ನು ನವೀಕರಿಸಲು ಅರ್ಜಿ ಕೊಡಬೇಕಿತ್ತು, ಕೆಲಸದ ಒತ್ತಡದ ನಡುವೆ ಮರೆತೇಬಿಟ್ಟಿದ್ದೆ.

ಸರಿ, ಆಫೀಸ್ ಒಳಗೆ ಹೋಗಿ ಅದನ್ನು ನವೀಕರಿಸಲು ಅರ್ಜಿ ಕೊಟ್ಟು ಬರುತ್ತೇನೆಂದರೆ ಆಸಾಮಿ ಒಪ್ಪುತ್ತಿಲ್ಲ. ಆಫೀಸಿನಲ್ಲಿ ಎಲ್ಲರೂ ಬರುವುದು ಹತ್ತು ಗಂಟೆಯ ಮೇಲೆಯೇ ಎನ್ನುವುದನ್ನು ಆತನೂ ತಿಳಿದಿದ್ದ. ಬೆಳಗ್ಗೆ ಬಂದಿದ್ದ ಲೇಖನವನ್ನು ಎಡಿಟ್ ಮಾಡಿ ತುರ್ತಾಗಿ ಪ್ರಟಕಟಿಸಬೇಕೆನ್ನುವ ತರಾತುರಿಯಲ್ಲಿ ಏಳೂವರೆಗೇ ಆಫೀಸಿಗೆ ಬಂದರೆ ಗೇಟ್ ಪಾಸ್ ಫಜೀತಿ.

ಇದನ್ನೂ ಓದಿ : Qatar Mail: ‘ಐ ಡೋಂಟ್ ರೇಪ್ ಮೈ ಲೆನ್ಸ್!’ ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ

ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಹಾಗೆ ತುರ್ತಾಗಿ ಒಳಗೆ ಹೋಗಬೇಕು ಬಿಡಪ್ಪ ಎಂದರೆ ಅವನು ಬಗ್ಗಲಿಲ್ಲ. ಮನೆಗೆ ಮರಳಿ ಹೋಗುವ ಹಾಗಿಲ್ಲ, ಆಫೀಸಿನ ಒಳಗೆ ಹೋಗಲು ಸೆಕ್ಯೂರಿಟಿ ಬಿಡುತ್ತಿಲ್ಲ, ಗೇಟ್ ಪಾಸ್ ಮಂಜೂರು ಮಾಡುತ್ತಿದ್ದ ಎಚ್.ಆರ್. ಒಳಗೊಂಡಂತೆ ಸಹೋದ್ಯೋಗಿಗಳು ಯಾರೂ ಕರೆ ಎತ್ತುತ್ತಿಲ್ಲ. ಹತ್ತು ಗಂಟೆಯ ನಂತರ ಆಫೀಸಿಗೆ ಬಂದು ಸಂಜೆ ಅಥವಾ ರಾತ್ರಿಯವರೆಗೆ ಇದ್ದು ನಿಧಾನಕ್ಕೆ ಹೋಗುತ್ತಿದ್ದ ನನ್ನ ಟೀಮಿನ ಯಾರೊಬ್ಬರೂ ಫೋನ್ ತೆಗೆಯದಿದ್ದಾಗ ಕಸಿವಿಸಿಯಾಯಿತು.

ಇಂತಹ ತುರ್ತು ಸಮಯಗಳಲ್ಲಿ ಕೆಲವೊಮ್ಮೆ ಏಳು ಗಂಟೆಗೇ ಆಫೀಸಿನಲ್ಲಿ ಹಾಜರಿರುತ್ತಿದ್ದ ಎಡಿಟರ್ ರಜೆಗೆಂದು ವಾಷಿಂಗ್ಟನ್ ಗೆ ತೆರಳಿ ವಾರದ ಮೇಲಾಗಿತ್ತು. ಆತನಿಗೆ ಕರೆ ಮಾಡಿ ಸೆಕ್ಯೂರಿಟಿಗೆ ಹೇಳಿಸಿದರೆ ಹೇಗೆಂದುಕೊಂಡು ಸಮಯ ನೋಡಿದೆ, ಕತಾರಿನಲ್ಲಿ ಗಂಟೆ ಎಂಟು, ವಾಷಿಂಗ್ಟನ್ ನಲ್ಲಿ ರಾತ್ರಿ ಒಂದು ಗಂಟೆ. ಯಾವುದಾರರೂ ಪಾರ್ಟಿಯಲ್ಲಿದ್ದರೆ (ಆತ ಪಾರ್ಟಿ ಅನಿಮಲ್ ಅಲ್ಲ ಎನ್ನುವುದು ತಿಳಿದಿದ್ದರೂ ಸಹ) ಕರೆಯನ್ನು ಸ್ವೀಕರಿಸಬಹುದೋ ಇಲ್ಲವೋ ಎಂದು ಅನುಮಾನಿಸುತ್ತಲೇ ಕರೆ ಮಾಡಿದೆ. ಆತ ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಯಾರಿಗೆ ಕರೆ ಮಾಡಿದರೆ ಆಫೀಸ್ ಒಳಗೆ ಹೋಗಬಹುದು ಎಂದು ಯೋಚಿಸುತ್ತಿರುವಾಗಲೇ ನನ್ನ ಫೋನು ರಿಂಗಾಯಿತು. ತಾನು ಮಲಗಿಬಿಟ್ಟಿದ್ದೆ, ಏನು ವಿಷಯ ಈ ಸಮಯದಲ್ಲಿ ಎಂದು ಎಡಿಟರ್ ಆ ಕಡೆಯಿಂದ ಆತಂಕದಲ್ಲಿ ಕೇಳಿದಾಗ, ನನ್ನ ಗೇಟ್ ಪಾಸ್ ಪಜೀತಿಯನ್ನು ಸಂಕ್ಷಿಪ್ತವಾಗಿ ತಿಳಿಸಿದೆ. ಆತ ನಕ್ಕು, ಸಂಬಂಧಪಟ್ಟವರಿಗೆ ಕರೆ ಮಾಡಿ ಗೇಟ್ ಪಾಸ್ ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿದಾಗ ಸ್ವಲ್ಪ ಸಮಾಧಾನವಾಯಿತು.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಹಿಂದಿನ ಪತ್ರ : Qatar Mail: ‘ನ್ಯಾಷನಲ್ ಜಿಯಾಗ್ರಫಿಕ್’ ರೇಂಜ್​ನಲ್ಲಿರುವ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/qatar-mail

Published On - 8:27 am, Fri, 18 March 22