AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Qatar Mail: ‘ಐ ಡೋಂಟ್ ರೇಪ್ ಮೈ ಲೆನ್ಸ್!’ ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ

Women‘s Day 2022 : ಹೆಣ್ಣನ್ನು ವಸ್ತುವಿನ ಹಾಗೆ ಕಾಣುವವರು, ಅತ್ಯಾಚಾರವನ್ನು ಮೆನ್ಸ್ ಟಾಕ್ ಎಂದು ಹಗುರವಾಗಿ ಮಾತನಾಡುವವರ ನಡುವೆ ಒಬ್ಬ ಸ್ವಾಭಿಮಾನವಿರುವ ಹೆಣ್ಣುಮಗಳಾಗಿ ಹೇಗೆ ಮುಂದುವರೆಯಲು ಸಾಧ್ಯ ಎಂದು ಆತನನ್ನೇ ಕೇಳಿದೆ.

Qatar Mail: ‘ಐ ಡೋಂಟ್ ರೇಪ್ ಮೈ ಲೆನ್ಸ್!’ ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ
ಶ್ರೀದೇವಿ ಕಳಸದ
|

Updated on: Mar 04, 2022 | 2:24 PM

Share

ಕತಾರ್ ಮೇಲ್ | Qatar Mail : ಅಷ್ಟಕ್ಕೂ ತಾವು ಮಾತನಾಡಿದ್ದರಲ್ಲಿ ತಪ್ಪೇನಿತ್ತು, ಗುಂಪಿನಲ್ಲಿ ಬೇರೆ ಯಾರಿಗೂ ಬರದೇ ಇದ್ದ ಕೋಪ ನನಗೇಕೆ ಬರಬೇಕಿತ್ತು, ನಾನು ಫೋಟೋಗ್ರಫಿಯಲ್ಲಿ ಕಣ್ಣು ಬಿಡುತ್ತಿರುವ ಕೂಸು, ಚರ್ಚೆ ಮಾಡುತ್ತಿದ್ದವರು ಹಿರಿಯ ಫೋಟೋಗ್ರಾಫರ್​ಗಳು, ಅದರಲ್ಲೂ ಎಲ್ಲಾ ಗಂಡಸರು ಅನ್ನುವುದೂ ತಿಳಿದಿರಲಿಲ್ಲವೇ ಎಂದು ಆತ ನನ್ನನ್ನೇ ಮರುಪ್ರಶ್ನೆ ಮಾಡಿದಾಗ ಮೈ ಪರಚಿಕೊಳ್ಳುವ ಹಾಗಾಯಿತು. “ಇಟ್ ವಾಸ್ ಲೈಕ್ ಎ ಸ್ಮಾಲ್ ಪನಿಷಮೆಂಟ್ ಫಾರ್ ಯು. ನಿನ್ನನ್ನು ಆಗ ತಡೆಯದಿದ್ದರೆ ನಮ್ಮನ್ನು ಮತ್ತಷ್ಟು ಮುಜುಗರಕ್ಕೊಳಪಡಿಸುತ್ತಿದ್ದೆ,” ಆತ ದೃಢವಾಗಿ ಹೇಳಿದಾಗ ನಾನು ಮೂಕಳಾದೆ. ಆ ಸಣ್ಣ ವಾಟ್ಸಾಪ್ ಗ್ರೂಪ್ ರಚಿಸಿ ನನ್ನ ವರ್ತನೆಯನ್ನು ಎಷ್ಟು ಮಾನಿಟರ್ ಮಾಡಿದರು, ನನ್ನನ್ನು ಎಷ್ಟು ಬದಲಾಯಿಸಿದರು, ಅದನ್ನು ರಚಿಸಿದ ಮೂರೇ ತಿಂಗಳಿಗೆ ಅಂಗಡಿ ಯಾಕೆ ಮುಚ್ಚಿದರು ಎಂದು ಕೇಳಿದಾಗ ನಾನು ಅದರಲ್ಲಿ ಸರಿಯಾಗಿ ಭಾಗವಹಿಸುತ್ತಿರಲಿಲ್ಲ, ಅದಕ್ಕೇ ಅದನ್ನು ನಿಲ್ಲಿಸಿದರು ಎಂದು ಆತ ಹೇಳಿದಾಗ ನಗು ಬಂತು. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್

(ಪತ್ರ 5, ಭಾಗ 3)

ನಾನು ಬೇರೊಂದು ಫೋಟೋವಾಕ್ ಗುಂಪಿನ ಸದಸ್ಯತ್ವ ಪಡೆದುಕೊಂಡಿದ್ದರೆ ಬಗ್ಗೆ ತಕರಾರೆತ್ತಿದಾಗ, ಹೆಣ್ಣನ್ನು ವಸ್ತುವಿನ ಹಾಗೆ ಕಾಣುವವರು, ಅತ್ಯಾಚಾರವನ್ನು ಮೆನ್ಸ್ ಟಾಕ್ ಎಂದು ಹಗುರವಾಗಿ ಮಾತನಾಡುವವರ ನಡುವೆ ಒಬ್ಬ ಸ್ವಾಭಿಮಾನವಿರುವ ಹೆಣ್ಣುಮಗಳಾಗಿ ಹೇಗೆ ಮುಂದುವರೆಯಲು ಸಾಧ್ಯ ಎಂದು ಆತನನ್ನೇ ಕೇಳಿದೆ. ಆತ ಮತ್ತೆ ತಾವಾಡಿದ ಮಾತುಕತೆಯನ್ನು ಸಮರ್ಥಿಸಿಕೊಂಡಾಗ, ಹೆಣ್ಣುಮಕ್ಕಳ ಬಗ್ಗೆಯಾಗಲಿ, ರೇಪ್ ಬಗ್ಗೆಯಾಗಲಿ ಹಗುರವಾಗಿ ಮಾತನಾಡುವವರ ನಡುವಿನಲ್ಲಿ ನಾನು ಸುರಕ್ಷಿತವಲ್ಲವೆಂದು ನನಗೆ ಆಗಲೂ ಅನ್ನಿಸಿತ್ತು, ಈಗಲೂ ಅನಿಸುತ್ತಿದೆ ಎಂದು ತಿಳಿಸಿದೆ. ಅವರ ಗುಂಪನ್ನು ತೊರೆದುದ್ದರ ಬಗ್ಗೆ ಯಾವುದೇ ವಿಷಾದವಿಲ್ಲವೆನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿ, ಸತ್ಯವನ್ನು ಅವರ ಬಾಯಿಂದಲೇ ಕೇಳಿ ಮನಸ್ಸು ಮತ್ತಷ್ಟು ಹಗುರವಾಯಿತೆಂದು ಹೇಳಿ ಕರೆಯನ್ನು ಮುಗಿಸಿದೆ.

ಉಡಾಫೆ ಮಾತು: ಆ ಒಂದು ಕರೆ ಮತ್ತೊಮ್ಮೆ ಎರಡು ವರ್ಷಗಳ ಹಿಂದಕ್ಕೆ ನನ್ನನ್ನು ದಬ್ಬಿತು. ಅದೊಂದು ದಿನ ಬೆಳಗ್ಗೆ ಯಾವುದೊ ಫೋಟೋ ಎಡಿಟ್ ಮಾಡುತ್ತಾ ಕೂತಿದ್ದ ನಾನು ನಡುವಲ್ಲಿ ವಾಟ್ಸಾಪ್​ನತ್ತ ಕಣ್ಣಾಡಿಸಿದೆ. ವರ್ಷದ ಹಿಂದೆ ನಾನು ಸೇರಿದ್ದ ಫೋಟೋವಾಕ್ ಗುಂಪಿನಲ್ಲಿ ಹತ್ತನ್ನೆರಡು ನಗುವ ಇಮೋಜಿಗಳು, ಮೇಲಕ್ಕೆ ಸ್ಕ್ರೋಲ್ ಮಾಡಿದರೆ ನಾನು ಕರೆ ಮಾಡಿದ ವ್ಯಕ್ತಿಯ ಹೇಳಿಕೆ ರಪ್ಪನೆ ಕಣ್ಣಿಗೆ ರಾಚಿದಂತಾಗಿ ಬೆಚ್ಚಿಬಿದ್ದೆ. “ಐ ಡೋಂಟ್ ರೇಪ್ ಮೈ ಲೆನ್ಸ್”! ಅದಕ್ಕೆ ಉತ್ತರವಾಗಿ ಉಳಿದವರ ನಗುವ, ಕಣ್ಣಲ್ಲಿ ಹೃದಯವನ್ನು ತೋರುವ ಇಮೋಜಿಗಳು, ವಾವ್ ಏನು ಹೇಳಿದಿರಿ ಅಣ್ಣ ಎನ್ನುವ ಮೆಚ್ಚುಗೆಯ ಸಾಲುಗಳನ್ನು ಕಂಡು ನಂಬಲು ಸಾಧ್ಯವಾಗದೆ, ನನ್ನ ಭ್ರಮೆಯೇನೋ ಎಂದುಕೊಂಡು ಮತ್ತೆ ಮತ್ತೆ ಮೇಲೆ ಕೆಳಗೆ ಸ್ಕ್ರೋಲ್ ಮಾಡಿ ಎರಡೆರಡು ಬಾರಿ ನೋಡಿದೆ. ಭ್ರಮೆಯಲ್ಲ, ಅದೇ ಸಾಲು, ಲೌಡ್ ಅಂಡ್ ಕ್ಲಿಯರ್.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ, ಇದರಿಂದ ನಾವೆಲ್ರೂ ನಾಶವಾಗ್ತೀವಿ

ಆ ಮಾತನ್ನು ಹೇಳಿದ ವ್ಯಕ್ತಿ, ಆತನ ಮಾತಿಗೆ ಮೆಚ್ಚುಗೆ ಸೂಚಿಸಿದ ವ್ಯಕ್ತಿಗಳೆಲ್ಲರೂ ಎರಡೆರಡು ಹೆಣ್ಣುಮಕ್ಕಳ ತಂದೆ ಎನ್ನುವುದನ್ನು ನೋಡಿ ಮತ್ತಷ್ಟು ವಿಷಾದವೆನಿಸಿತು. ಆ ವ್ಯಕ್ತಿ ಅತ್ಯಾಚಾರ ಎನ್ನುವ ಪದವನ್ನು ಅಷ್ಟು ಹಗುರವಾಗಿ ಬಳಸಿರುವುದರ ಬಗ್ಗೆ ಅಲ್ಲೇ ನನ್ನ ವಿರೋಧ ವ್ಯಕ್ತಪಡಿಸಿದೆ, ಹೆಣ್ಣೆಂದರೆ ಅಷ್ಟು ಹಗುರವೇ ಎಂದೆ. ತಾನು ಹೆಣ್ಣು ಮಕ್ಕಳನ್ನು ತುಂಬಾ ಗೌರವಿಸುವುದಾಗಿಯೂ, ವಾಸ್ತವವಾಗಿ ತನ್ನ ಕ್ಯಾಮೆರಾ ಮತ್ತು ಲೆನ್ಸ್ ಗಳನ್ನು ತನ್ನ ಗರ್ಲ್ ಫ್ರೆಂಡ್ ಎಂದುಕೊಂಡಿರುವುದಾಗಿಯೂ ಆತ ಉತ್ತರಿಸಿದಾಗ ತಬ್ಬಿಬ್ಬಾದೆ. ಒಂದು ಹೆಣ್ಣಿನ ಮೇಲಾಗುವ ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಎಷ್ಟು ಸುಲಭವಾಗಿ, ಉಡಾಫೆಯಿಂದ ಹೇಗೆ ನೀರ್ಜೀವ ವಸ್ತುಗಳ ಮೇಲೆ ಬಳಸುತ್ತಿದ್ದೀರಿ ಎಂದು ನಾನು ಕೋಪದಲ್ಲಿ ಕೇಳಿದಾಗ ಬಂದ ಉತ್ತರ, “ಅದು ಹಾಗಲ್ಲ, ನಾನು ಕ್ಯಾಶುಯಲ್ ಆಗಿ ಹೇಳಿದೆ ಅಷ್ಟೇ, ಅದನ್ನೇನು ರೇಪ್ ಮಾಡೋಕಾಗುತ್ತಾ?”

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು