ನಿವೃತ್ತ ಐಎಎಸ್ ಅಧಿಕಾರಿ ಮಾಡಭೂಷಿ ಮದನಗೋಪಾಲ್ ಅವರ ‘ರೇನ್ಬೋ ಇಯರ್ಸ್ ಕಾನ್ಫ್ಲಿಕ್ಟ್ ಟು ಕಂಟೆಂಟ್ ಮೆಂಟ್’ (Rainbow Years Conflict to Contentment) ಕೃತಿಯನ್ನು ಗರುಡ ಪ್ರಕಾಶನವು (Garuda Prakashan) ಪ್ರಕಟಿಸಿದೆ. ಈ ಕೃತಿಯು ಸ್ವತಂತ್ರ ಭಾರತದಲ್ಲಿ ರಾಜಕೀಯ ಬಿರುಗಾಳಿಗೆ ಸಿಲುಕಿದ ಮತ್ತು ಮಾರ್ಕ್ಸ್ವಾದ- ಲೆನಿನ್ ವಾದದ ಕ್ರಾಂತಿಯ ಕನಸನ್ನು ಹೊತ್ತಿದ್ದ ಸ್ನೇಹಿತರ ಕಥೆಯನ್ನು ಹೊಂದಿದೆ. ರಾಜನ್, ಸೂರಿ ಮತ್ತು ಮಲ್ಲಣ್ಣ ಎಂಬ ಮೂವರು ಎಡಪಂಥೀಯ ಸಂಘಟನೆ ಮತ್ತು ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಾಂತಿಯ ಹಾದಿಯಲ್ಲಿದ್ದರು. ದಶಕಗಳು ಕಳೆದಂತೆ ಎಡಪಂಥೀಯ ಚಳುವಳಿಗಳ ಕಾರ್ಯತಂತ್ರಗಳು ವಿಫಲವಾಗುತ್ತದೆ. ಕ್ರಾಂತಿಯ ವೈಚಾರಿಕತೆ ಮತ್ತು ಆದರ್ಶಗಳು ಕರಗುತ್ತವೆ. ಇದರಿಂದಾಗಿ ಸಹಜವಾಗಿಯೇ ಜನ ಸಂಪರ್ಕವು ಇಲ್ಲದಂತಾಗುತ್ತದೆ. ಈ ಸಂದರ್ಭದಲ್ಲಿ ವಿದೇಶಿ ಶಕ್ತಿಗಳ, ಸಂಘಟನೆಗಳ ವಿಚಾರಧಾರೆಗಳೂ ನಮ್ಮ ಸಮಾಜದಲ್ಲಿ ಮಧ್ಯಪ್ರವೇಶಿಸಿ ಗೊಂದಲದ ಪರಿಸ್ಥಿತಿ ಉದ್ಭವವಾಗುತ್ತದೆ. ಆದರೆ ವ್ಯವಸ್ಥೆಯು ತನ್ನದೇ ಆದ ಆಟವಾಡುತ್ತದೆ. ದಶಕಗಳ ನಂತರ ಅವರು ಮತ್ತೊಮ್ಮೆ ಭೇಟಿ ಆದಾಗಲೂ ತಮ್ಮ ನಿಲುವುಗಳ ಬಗ್ಗೆ ಅವರಿಗೆ ಯಾವುದೇ ಸೂಕ್ಕ ನಿರ್ಧಾರಕ್ಕೂ ಬರಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾಗುತ್ತದೆ. ಬದುಕಿನ ಏರಿಳಿತಗಳನ್ನು ಸ್ವೀಕರಿಸುವುದು ಅವರಿಗೆ ಅನಿವಾರ್ಯವಾಗುತ್ತದೆ.
ಮದನಗೋಪಾಲ್ ಅವರ ಅರ್ಧ ಆತ್ಮಚರಿತ್ರೆಯ ಕಾದಂಬರಿಯಂತಿರುವ ಈ ಕೃತಿಯು, ಕ್ರಾಂತಿಯ ಕನಸನ್ನು ಹೊತ್ತುದ್ದ ಪೀಳಿಗೆಯವರ ಬದುಕಿನ ಸಾಹಸಗಾಥೆಯನ್ನು ಮತ್ತು ವಾಸ್ತವ ಬದುಕಿನಲ್ಲಿ ತದನಂತರ ನುಚ್ಚುನೂರಾದ ಅವರ ಕನಸುಗಳ ಬಗ್ಗೆ ಮತ್ತು ಜನಸಾಮಾನ್ಯರ ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವಂಥ ಸನ್ನಿವೇಶಗಳನ್ನು ಒಳಗೊಂಡಿದೆ.
‘ಕಾಂಚನಜುಂಗಾ ಡೈರಿ’ ಈ ಲೇಖಕರ ಪ್ರಥಮ ಕೃತಿಯಾಗಿದ್ದು, ಇದರ ವಸ್ತುವಿಷಯಗಳು ಹೆಚ್ಚಾಗಿ ವ್ಯಕ್ತಿಯ ಆಧ್ಯಾತ್ಮದ ಅಂತರಂಗದ ಪಯಣದ ಬಗ್ಗೆ ಹಾಗೂ ಮಾನವನ ಅಸ್ತಿತ್ವದ ಅಂತರಾರ್ಥದ ಶೋಧನೆಗಳನ್ನು ಒಳಗೊಂಡಿದೆ.
ರೈನ್ಬೋ ಇಯರ್ಸ್ ಕೃತಿಯು ಮೂವರು ಅಪರೂಪದ ಗುಣಗಳುಳ್ಳ ವ್ಯಕ್ತಿಗಳ ಬದುಕಿನ ಪಯಣವನ್ನು ವಿಚಾರ ಪ್ರಚೋದಕ ಅಂಶಗಳೊಂದಿಗೆ ತೆರೆದಿಡುತ್ತದೆ. ಲೇಖಕರು ಸೂಕ್ಷ್ಮ ಸಂವೇದನೆಗಳೊಂದಿಗೆ ಈ ಮೂವರು ವ್ಯಕ್ತಿಗಳ ಅಸಮಾನ್ಯ ಹಾಗೂ ಅಪರೂಪದ ವಿಶಿಷ್ಟ ಅನುಭವಗಳನ್ನು ಈ ಕೃತಿಯಲ್ಲಿ ಹೆಣೆದು ಕೊಟ್ಟಿದ್ದಾರೆ.
ಇದು ನೈಜ ಬದುಕಿನ ಘಟನೆಗಳನ್ನು ಆಧರಿಸಿದ ಐತಿಹಾಸಿಕ ಕಥಾನಕ ಎಂಬುದು ಲೇಖಕ ಮದನಗೋಪಾಲ್ ಅವರ ಅಭಿಪ್ರಾಯ. ಅವರ ಪ್ರಕಾರ 1960ರ ಕಾಲಘಟ್ಟವು ಬಂಡಾಯದ ಕಾಲವಾಗಿತ್ತು. ನಾನು ಈ ದಿಟ್ಟ ಕಾಲಘಟ್ಟದಲ್ಲಿಯೇ ಬೆಳೆದವನು. ಅಂತಹ ಅಗ್ನಿಕುಂಡಗಳ ಮೂಲಕವೇ ಸಾಗಿ ತಾಜಾತನದೊಂದಿಗೆ ಹೊರಬಂದವನು ಎನ್ನುತ್ಥಾರೆ ಲೇಖಕರು.
ಪ್ರತಿಭಟನಾ ಚಳುವಳಿಗಳು, ಹಾದಿತಪ್ಪಿದ ಗಲಭೆಗಳು, ನಾಗರಿಕ ಸಮಾಜದಲ್ಲಿ ವ್ಯಾಪಕವಾಗಿ ಹರಡಿದ್ದ ಅಶಾಂತಿ ಅಸಮಾಧಾನ ರಾಜಕೀಯ ಹತ್ಯೆಗಳು, ಸಮಾಜದಿಂದ ವಿಮುಖವಾಗಿದ್ದ ಯುವ ಸಮೂಹ, ಆದರ್ಶವಾದದ ಹುಸಿ ಕನಸುಗಳು ಮತ್ತು ಹಿಂಸಾತ್ಮಕ ಬಂಡಾಯಗಳ ವಿದ್ಯಮಾನಗಳು ಆ ದಶಕದ ಪ್ರಮುಖ ಬೆಳವಣಿಗೆ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಯೋಚನೆಗಳೊಂದಿಗೆ ಹೊಸ ಪೀಳಿಗೆಯು ಉದಯಿಸುವುದಕ್ಕೆ ಆಗ ಪ್ರಶಸ್ತ ಕಾಲವಾಗಿತ್ತು.
ಅತ್ಯಂತ ವಿರಳ ಮತ್ತು ಅಪರೂಪದ ಗುಣಗಳನ್ನು ಹೊಂದಿರುವ ಮೂವರು ವ್ಯಕ್ತಿಗಳ ಜಗತ್ತಿಗೆ ಓದುಗರು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ನಾನು ಓದುಗರೆಲ್ಲರಿಗೂ ಸ್ವಾಗತ ಕೋರುತ್ತೇನೆ.
ಈ ಮೂವರೂ ವ್ಯವಸ್ಥೆಯಲ್ಲಿ ಹೇಗೆ ಬೆಳೆದರು? ಯಾವ ರೀತಿಯಲ್ಲಿ ಬದುಕಿನ ಪಯಣ ಕೈಗೊಂಡರು ಮತ್ತು ಹೇಗೆ ಪ್ರಫುಲ್ಲಿತವಾಗಿ ಅರಳಿದರು ಎಂಬೆಲ್ಲ ಸಂಗತಿಗಳನ್ನು ನಮ್ಮ ಓದುಗರು ಓದಿ ಅನುಭಾವಿಸಿಕೊಂಡರೆ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ಮದನಗೋಪಾಲ್.
ರಾಜಕೀಯ ಸಿದ್ಧಾಂತವನ್ನು ಒಬ್ಬ ಯುವಕ ಒಪ್ಪಿಕೊಳ್ಳುವ ಪ್ರಕ್ರಿಯೆಯನ್ನು ಅತ್ಯಂತ ಒಳಗಣ್ಣಿನಿಂದ ಸೂಕ್ಷ್ಮವಾಗಿ ಅಷ್ಟೇ ಸೃಜನಶೀಲತೆಯಿಂದ ಈ ಕೃತಿಯು ಅನಾವರಣಗೊಳಿಸುತ್ತದೆ. ಈ ಕೃತಿಯು ವಾಸ್ತವವಾಗಿ ಲೇಖಕರ ವಿದ್ಯಾರ್ಥಿ ಜೀವನದಲ್ಲಿ ನಡೆದ ಖಾಸಗಿ ಅನುಭವಗಳನ್ನು ತೆರೆದಿಡುತ್ತದೆ. ನಾನು ಈ ಪುಸ್ತಕವನ್ನು ಓದಿದ ನಂತರ ನನಗೆ ಅನಿಸಿದ್ದೇನೆಂದರೆ ಪ್ರತಿಯೊಬ್ಬರೂ ಅದರಲ್ಲಿಯೂ ವಿಶೇಷವಾಗಿ ಈ ರಾಷ್ಟ್ರದ ಯುವಕರು ಇದನ್ನು ಓದಲೇಬೇಕು. ಏಕೆಂದರೆ ರಾಜಕೀಯ ಸಿದ್ಧಾಂತ ಹೊಂದುವ ಅನುಭವ, ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಉಂಟಾಗುವ ತಾಕಲಾಟಗಳನ್ನು ಮತ್ತು ಸಾಧನೆಯ ಅನುಭೂತಿಯನ್ನು ಈ ಕೃತಿಯು ಸಮರ್ಥವಾಗಿ ಅರ್ಥ ಮಾಡಿಸುತ್ತದೆ ಎಂಬುದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮಾರ್ತಿಗಳಾದ ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಅವರ ಅಭಿಪ್ರಾಯ.
ರೈನ್ಬೋ ಇಯರ್ಸ್ಗೆ ಕನ್ಫ್ಲಿಕ್ಟ್ ಟು ಕಂಟೋನ್ಮೆಂಟ್ (ತಾಕಲಾಟಗಳಿಂದ ಸಂತೃಪ್ತಿಯೆಡೆಗೆ) ಎಂಬ ಧ್ಯೇಯವಾಕ್ಯವನ್ನು ನೀಡಿರುವುದು ತುಂಬಾ ಸಮರ್ಪಕವಾಗಿದೆ. ನನಗೆ ಸುಮಾರು 25 ವರ್ಷಗಳಿಂದ ಈ ಲೇಖಕರೊಂದಿಗೆ ಒಡನಾಟವಿದೆ ಅವರನ್ನು ತೀರಾ ಹತ್ತಿರದಿಂದಲೂ ನಾನು ಬಲ್ಲೆ. ಅವರು ಐಎಎಸ್ ಅಧಿಕಾರಿ ಆಗಿದ್ದಾಗಲೂ ಒಬ್ಬ ಸಾಮಾನ್ಯ ಮನುಷ್ಯನಂತೆ ಬದುಕುವ ಅವರ ಗುಣ, ನ್ಯಾಯ ಪರವಾದ ಅವರ ಮನೋಧರ್ಮ ಮತ್ತು ಬಡವರ ಬಗ್ಗೆ ಅವರಿಗಿರುವ ಅನುಕಂಪಗಳನ್ನು ನಾನು ಅವರಲ್ಲಿ ಸದಾ ಗಮನಿಸಿದ್ದೆ. ವಿದ್ಯಾರ್ಥಿ ಜೀವನದಲ್ಲಿ ಸ್ವತಃ ವಿವಿಧ ಚಳುವಳಿಗಳಲ್ಲಿ ತಾನು ಹೇಗೆ ಭಾಗವಹಿಸುತ್ತಿದ್ದೆ ಮತ್ತು ಅದು ಹೇಗೆ ಹಿಂಸಾತ್ಮಕತೆಯಿಂದ ಗುರಿ ಸಾಧಿಸುವ ಪ್ರಯತ್ನವಾಗಿತ್ತು ಎಂಬುದನ್ನು ಲೇಖಕರು ಸ್ವಾರಸ್ಯವಾಗಿ ವಿವರಿಸಿದ್ದಾರೆ. ಹಿಂಸೆಯು ಕೇವಲ ಮತ್ತಷ್ಟು ಹಿಂಸೆಯನ್ನು, ರಕ್ತಪಾತವನ್ನು ಮತ್ತು ನೋವನ್ನು ಹೆಚ್ಚಿಸುತ್ತದೆಯೇ ಹೊರತು ಮತ್ತೇನನ್ನೂ ಅಲ್ಲ. ಈ ಎಲ್ಲ ಸಂಗತಿಗಳು ಮದನಗೋಪಾಲ್ ಅವರಿಗೆ ಸ್ಪಷ್ಟವಾಗಿ ಅರ್ಥವಾಗಿ ಅವರಲ್ಲಿ ತೀವ್ರ ಬದಲಾವಣೆ ಉಂಟಾಯಿತು. ಅವರೊಬ್ಬ ಆದರ್ಶ ವ್ಯಕ್ತಿಯಾಗಿ ರೂಪುಗೊಂಡರು.
ಮದನ್ ಅವರ ನೆನಪಿನ ಶಕ್ತಿ ಹಾಗೂ ಅವರ ಭಾಷಾ ಕೌಶಲ್ಯವು ಈ ಕೃತಿಯನ್ನು ಮತ್ತಷ್ಟು ಆಪ್ತಗೊಳಿಸುತ್ತ ಓದಲು ಪ್ರೇರೇಪಿಸುತ್ತದೆ ಎಂಬುದು ಶಾಸಕ ಮತ್ತು ಮಾಜಿ ಸಚಿವರಾದ ಸುರೇಶ್ ಕುಮಾರ್ ಅಭಿಪ್ರಾಯ. ರೈನ್ಬೋ ಇಯರ್ಸ್ ಕೃತಿಯು ಭಾರತದ ಇತ್ತೀಚಿನ ಇತಿಹಾಸದ ಮೇಲೆಯೂ ಬೆಳಕು ಚೆಲ್ಲುತ್ತದೆ. ಭಾರತದ ಬೆಳವಣಿಗೆ ದೃಷ್ಟಿಯಿಂದ, ಅಭಿವೃದ್ಧಿಯ ದೃಷ್ಟಿಯಿಂದ 60ರ ದಶಕವು ತುಂಬಾ ಮಹತ್ವಪೂರ್ಣ ಘಟನೆಗಳ ಕಾಲಘಟ್ಟವಾಗಿತ್ತು. ಆದರೆ ಎಡಪಂಥೀಯ ಧೋರಣೆಗಳ ಪ್ರಭಾವದಿಂದ ಮತ್ತು ಕ್ರಾಂತಿಯ ಭ್ರಮೆಯಿಂದಾಗಿ ಅನೇಖ ಯುವಕರು ದಾರಿ ತಪ್ಪಿದರು. ಈ ರೀತಿಯ ಕ್ರಾಂತಿಯ ಕನಸು ಹೇಗೆ ಮಿಥ್ಯ ಮತ್ತು ಮುಂದಿನ ದಶಕಗಳಲ್ಲಿ ಇವು ಹೇಗೆ ವಿಫಲವಾದವು ಎಂಬ ಚಿತ್ರಣವನ್ನು ಈ ಕಾದಂಬರಿಯು ಸ್ಪಷ್ಟವಾಗಿ ವಿವರಿಸುತ್ತದೆ. ಇದು ಲೇಖಕರ ಆತ್ಮಚರಿತ್ರೆಯ ಒಂದು ಭಾಗವೇ ಆಗಿರುವುದರಿಂದ ಇದು ವಾಸ್ತವಕ್ಕೆ ತೀರಾ ಹತ್ತಿರವಾಗಿ ಓದುಗರಲ್ಲಿ ಪ್ರಭಾವ ಬೀರಲು ಸಾಧ್ಯ. ಹೀಗೆ ಅತ್ಯಂತ ಸೂಕ್ಷ್ಮಮತಿಯಾಗಿ ಓದುಗರನ್ನು ತಲುಪಬಲ್ಲ ಲೇಖಕರೊಂದಿಗೆ ಕೈಜೋಡಿಸಿ ಈ ಪುಸ್ತಕವನ್ನು ಪ್ರಕಟಿಸಿ ಓದುಗರ ಮುಂದಿಡುವುದಕ್ಕೆ ನಮಗೆ ಅತ್ಯಂತ ಸಂತೋಷವಾಗುತ್ತದೆ ಎಂಬುದು ಗರುಡ ಪ್ರಕಾಶನದ ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಕ್ರಾಂತ್ ಸಾನು ಅವರ ಅಭಿಪ್ರಾಯ.
ಈ ಅರ್ಥಪೂರ್ಣ ಕೃತಿಯನ್ನು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಸುರೇಶ್ ಕುಮಾರ್ ಮತ್ತು ಡಾ. ಅಜಯ್ ಕುಮಾರ್ ಸಿಂಗ್ ಮಾರ್ಚ್ 23 ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಪುಸ್ತಕ ಖರೀದಿಸಲು ಗರುಡಬುಕ್ಸ್.ಕಾಂ ಸಂಪರ್ಕಿಸಬಹುದು. ಅಷ್ಟೇ ಅಲ್ಲ ನಾಡಿನ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ಲೈನ್ ಮೂಲಕ ಈ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ.
ಇದನ್ನೂ ಓದಿ: Modi@20: ಶೀಘ್ರದಲ್ಲೇ ಬರಲಿದೆ ಪ್ರಧಾನಿ ಮೋದಿಯವರ 20 ವರ್ಷಗಳ ರಾಜಕೀಯ ಪಯಣದ ಪುಸ್ತಕ
ಇದನ್ನೂ ಓದಿ: The Kashmir Files: ಮೀಟುಗೋಲು; ಕಾಶ್ಮೀರಿ ಶಾಲು ನೇಯುವ ಅವನನ್ನು ಭಯೋತ್ಪಾದಕರು ಯಾಕೆ ಹೊತ್ತೊಯ್ದಿದ್ದರು?