ರೂಮಿ ಕಾಲಂ | Rumi Column : ನಂ ಎನ್‌ಜಿಒ ಬಾಸ್‌ಗೆ ಸೌಹಾರ್‌ದತೆ ಅಂದ್ರೆ ಬೇರೊಂದು ತಳಸಮುದಾಯದ ಒಂದು ಪ್ರತಿಬಟನೆಗೆ ಹೆಚ್ಚಿನ ಸಂಕ್ಯೆಯಲ್ಲಿ ಹೋಗುವುದು. ಆ ಹೆಚ್ಚಿನ ಸಂಕ್ಯೆಯಲ್ಲಿ ಹೋಗುವವರಿಗೆ ಏನನ್ನು ಪ್ರತಿಬಟಿಸೋಕೆ ಹೋಗ್ತಿದ್ದೀವಿ ಅಂತ ಕೂಡ ಬ್ರೀಫ್ ಮಾಡಲ್ಲ. ಹೋಗೋವ್ರಿಗೆ ಪ್ರೊಟೆಸ್ಟ್ಗೆ ಹೋದ್ರೆ ದುಡ್ಡು ಬರತ್ತೆ ಅನ್ನೋ ಬಾವನೆ ಬೆಳೆಸಿ ಬಿಟ್ರು. ಒಂದು ನರ‍್ಮದ ಬಚಾವ್ ಆಂದೋಲನದಲ್ಲಿ ಒಂದು ಹಳ್ಳಿ ನೀರಿನಲ್ಲಿ ಮುಳುಗುವಾಗ ಮೇದ ಪಾಟ್ಕರ್ ಅರೆಸ್ಟ್ ಆದ್ರು. ಆಗ ನಾವು ಎಂಜಿ ರಸ್ತೆಯಲ್ಲಿ ಪ್ರೊಟೆಸ್ಟ್ ಮಾಡ್ತಿದ್ವಿ. ಈ ನಂ ಎನ್‌ಜಿಒ ಬಾಸ್ ಕರೆದದ್ರಿಂದ ಒಂದಶ್ಟು ಜನ ಬಂದ್ರು. ಅದರಲ್ಲಿ ಒಬ್ರು ಆತಂಕದಿಂದ ಕೇಳಿದ್ದು “ಮೇದ ಯಾವ ಹಿಜ್ರಾ, ಯಾವ ಹಮಾಮ್, ಅವರಿಗೆ ತುಂಬ ಟಾರ್‌ಚರ್ ಆಯ್ತ” ಅಂತ. ಎಲ್ಲರ ಮುಂದೆ ಜೋರಾಗಿ ಕೇಳಿ ನಂ ಬಾಸ್‌ಗೆ ಸರೀಗೆ ಅವಮಾನ ಆಯ್ತು. ತಮಾಶೆ ಅಂದ್ರೆ ಅವರು ತುಂಬಾ ಹೊತ್ತು ತೊಗೊಂಡ್ರು ಮೇದ ಪಾಟ್ಕರ್ ಯಾರು ಅಂತ ತಿಳ್ಕೊಳಕ್ಕೆ. ಹಾಗಂತ ಅವರು ಕಾರ್‌ಮಿಕ ವರ್‌ಗದ ಅರೆ ಬರೆ ವಿದ್ಯಾವಂತರಲ್ಲ. ಅವರು ಬ್ರಾಮಣ ಜಾತಿಯಲ್ಲಿ ಹುಟ್ಟಿ, ಡಿಗ್ರೀ ಮಾಡಿದ ಸಲಿಂಗಕಾಮಿ ದಂಪತಿಗಳು.
ರೂಮಿ ಹರೀಶ್, ಟ್ರಾನ್ಸ್ ಮ್ಯಾನ್ (Rumi Harish)
*
(ಕೊನೆಯ ಅಲೆ)
ಸೌಹಾರ್‌ದತೆ – ಈ ಪದ ನಾವು ತುಂಬಾ ಸರಿ ಉಪಯೋಗಸ್ತೀವಿ. ಎಸ್ಪೆಶಲಿ ಹೋರಾಟದ ಮತ್ತೆ ಸಾಮಾಜಿಕ ನ್ಯಾಯದ ಕಾಂಟೆಕ್ಸ್ಟಲ್ಲಿ. ಆದ್ರೆ ಇದು ಒಮ್ಮೊಮ್ಮೆ ಜೀವನದಲ್ಲಿ ತುಂಬಾ ಪರ್‌ಸನಲ್ ಆಗಿ ಕೂಡ ಅನುಬವ ಆಗುತ್ತೆ. ನನಗೆ ಸುಮಾರು ೨೭ ವರ್‌ಶ ಇರಬೇಕು. ಆಗ ನನ್ ಮನೇಲಿ ನನಗೆ ಮದುವೆ ಮಾಡಲು ತುಂಬಾ ಬಲವಂತವಾಗಿ ಪ್ರಯತ್ನಿಸುತಿದ್ರು. ಒಂದು ನಾನು ಕ್ವಿಯರ್ ಎಂದು ನನ್ನ ರೀತಿಯಲ್ಲಿ ಎಶ್ಟು ಹೇಳಿದರೂ ನನ್ನ ಪೇರೆಂಟ್ಸ್ ಅರ‍್ತ ಮಾಡ್ಕೋತಿರ್‌ಲಿಲ್ಲ. ಒಂದ್ ಸರ್‌ತಿ ಅಂತೂ ಒಬ್ಬ ಹುಡುಗ ನೋಡಲು ಬಂದೌನು “ಸುಮತಿ ನಿನ್ ಹೆಸ್ರೇನು” ಅಂತ ಕೇಳುವಶ್ಟು ಇಡಿಯಟ್. ನನಗೆ ನಾನು ಕ್ವಿಯರ್ ಅನ್ನೋದು ಬಿಡಿ, ಒಂದು ಹೆಣ್ಣು ಎಂದರೂ ನನ್ ಪೇರೆಂಟ್ಸ್ ಈ ತರದ ಗಂಡಸರನ್ನು ಅದೂ ಬ್ರಾಮಣ ಬುದ್ದಿ ಇಲ್ಲದ ಗಂಡಸರನ್ನು ತೋರಿಸುತ್ತಿದ್ದುದು ತುಂಬಾ ಅವಮಾನ ಆಗುತ್ತಿತ್ತು. ಏಕಂದ್ರೆ ನಂಗೆ ಇದನ್ನ ತಪ್ಪಿಸಿಕೊಳ್ಳಲು ಗೊತ್ತು ಆದ್ರೂ ಯಾರಾದ್ರು ಅವರ ಮಗಳಿಗೆ ಇಂತಾ ಸ್ಟುಪಿಡ್ ಗಂಡಸರನ್ನು ತೋರಿಸುವಶ್ಟು ಬೇಜವಾಬ್ದಾರಿ ವಹಿಸಿಕೊಂಡರೆ ಏನ್ ಗತಿ ಅಂತ ತುಂಬಾ ನೋವಾಗಿ ಮನೆ ಬಿಡಲು ಯೋಚಿಸ್ತಿದ್ದೆ.
ಆಗ ಒಂದ್ ದಿವ್ಸ ಒಂದು ಪ್ರೊಟೆಸ್ಟ್ನಲ್ಲಿ ನಮ್ ಸರ್‌ಸಿ ಮಾ ಸಿಕ್ಕಿದ್ಲು. ಸರ್‌ಸಿ ಮಾ ಅದು ನನಗೆ. ನಿಮಗೆಲ್ಲರಿಗೂ ಅವರು ಸರಸ್ವತಿ. ಹೆಸರಾಂತ ಬರಹಗಾರ್‌ತಿ, ಮಹಿಳಾ ಹೋರಾಟಗಾರ್‌ತಿ. ಅವಳು “ಬಾ ಮನೆಗೆ, ನನ್ ಜೊತೆ ಇರು, ನಿಂಗೆ ಎಶ್ಟು ಬೇಕೋ ಹಾಡ್ಕೊ” ಅಂದ್ಲು. ನಾನು ಅವಳ ಹತ್ರ ನಾನೇನು ಅಂತ ಏನೂ ಹೇಳಿಲ್ಲ. ನನ್ ತಂಬೂರಿ ತಗೊಂಡು ಅವಳ ಮನೆಗೆ ಹೋದೆ. ಅವಳು ಆ ಟೈಮಲ್ಲಿ “ಈಗೇನ್ ಮಾಡೀರಿ” ಪುಸ್ತಕ ಬರೀತಿದ್ಲು. ನಾನು ದಿನಕ್ಕೆ ೧೨ ಗಂಟೆಗಳಶ್ಟು ಹಾಡ್ತಿದ್ದೆ. ಅವಳು ನಾನು ಹಾಡುವಾಗೆಲ್ಲಾ ಬರೀತಿದ್ಲು. ಆ ೩ ತಿಂಗಳು ನಾನು ಸ್ವರ್‌ಗದಲ್ಲಿದ್ದೆ. ಒಟ್ಟಿಗೆ ಅಡುಗೆ ಮಾಡ್ತಿದ್ವಿ, ಊಟ ಮಾಡ್ತಿದವಿ, ಆಮೇಲೆ ಯಾವಾಗಲಾದರೂ ಮಾರ್‌ಕೆಟ್‌ಗೆ ಹೋಗಿ ತರ್‌ಕಾರಿ ತಂದು ಮತ್ತೆ ಹಾಡು ಬರಹ. ನನಗೆ ಇದು ಸೌಹಾರ್‌ದತೆ ಮತ್ತು ಪ್ರೀತಿ. ಆವಾಗ್ಲೇ ನಾನು ಅವಳಲ್ಲಿ ಅಮ್ಮ ಅನ್ನೋ ಒಂದು ಫೀಲಿಂಗ್ ಕಂಡಿದ್ದು. ತಮ್ಮ ಜೊತೆ ಜೊತೆಗೆ ಬೆಳೆಸೋದು. ನನಗೆ ಪುಸ್ತಕಗಳನ್ನು ಪರಿಚಯಿಸಿದ್ದು, ನನ್ನ ಹೋರಾಟಕ್ಕೆ ಪರಿಚಯಿಸಿದ್ದು.
ಇದನ್ನೂ ಓದಿ : Transgender World : ‘ಲತ್ ಹಿಡೀಬೇಕು, ಮನ್ಸೂರರಿಗೆ ಹಿಡಿದ ಶಿವನ ಚಟದಂತೆ, ಅಂಬೇಡ್ಕರರಿಗೆ ಹಿಡಿದ ಸಾಮಾಜಿಕ ನ್ಯಾಯದ ಚಟದಂತೆ’
ನಾನು ಕ್ವಿಯರ್ ಅಂತ ಹೇಳಿದಾಗ್ಲೂ ಅವಳು ಇಶ್ಟೇ ಹೇಳಿದ್ದು, “ಅದು ನಿನ್ನ ಆಯ್ಕೆ”. ಮತ್ತೆ ನನ್ ಫ್ರೆಂಡ್ ಫಮಿಲ. ಅವಳು ಹುಟ್ಟಿನಲ್ಲಿ ಗಂಡಸು ಎಂದು ಗುರುತಿಸುವ ಟ್ರಾನ್ಸ್ ಸಮುದಾಯದವಳು. ಅವಳು ತನ್ನನ್ನು ಪರಿಚಯಿಸುತ್ತಿದ್ದದು ಹೀಗೆ “ನನ್ನ ಹೆಸರು ಫಮೀಲ, ನಾನು ದ್ವಿಲಿಂಗಕಾಮಿ, ಹಿಜ್ರಾ, ಲೈಂಗಿಕ ಕಾರ್‌ಮಿಕೆ” ಎಂದು. ಆ ಪರಿಚಯದಲ್ಲೇ ಎಶ್ಟೊಂದು ಸೌಹಾರ್‌ದತೆಗಳಿವೆ! ಎಶ್ಟೋ ಜನರಿಗೆ ಇದು ಅರ್‌ತನೇ ಆಗ್ತಿರ್‌ಲಿಲ್ಲ. ಇದರಲ್ಲಿ ಅತೀ ತಳ ಮಟ್ಟದಲ್ಲಿರುವ ಲೈಂಗಿಕ ಕಾರ್‌ಮಿಕರ ಬಗ್ಗೆ ಹೆಮ್ಮೆಯಿಂದ ತನ್ನ ಕೆಲಸ ಎಂದು, ತಾನು ಹಿಜ್ರಾ ಸಮುದಾಯದವಳು ಎಂದು, ಅದರ ಹೆಮ್ಮೆ ಹೇಳುವುದಲ್ಲದೇ ತಾನು ಎಲ್ಲರನ್ನೂ ಪ್ರೇಮಿಸಲು ಸಾದ್ಯವಾಗುವ ವ್ಯಕ್ತಿ ಎಂದು ಗಂಟಾಗೋಶವಾಗಿ ಹೇಳುತ್ತಿದ್ದಳು.
ಒಂದು ದಿನ ರಾತ್ರಿ ೨೦೦೧ರಲ್ಲಿ ಜುಲೈ ತಿಂಗಳಲ್ಲಿ ಒಂದು ಹಿಜ್ರಾನ ಅಶೋಕ್ ನಗರ ಪೋಲೀಸ್ ಸ್ಟೇಶನ್‌ಲ್ಲಿ ಕೇಸಿಲ್ಲದೇ ಬಂದಿಸಿಟ್ಟಿದ್ದಾರೆ ಎಂದು ತಿಳಿದು ನಾನು ಅವಳು ನನ್ನ ಗಾಡಿಯಲ್ಲಿ ಹೋಗಿ ಇಳಿದ್ವಿ. ಆಗ ನಂಗೆ ನನ್ ಪಿರಿಯಡ್ಸ್ ಶುರುವಾಗಿದೆ ಎಂದು ಫೀಲ್ ಆಯ್ತು. ಆದ್ರೂ ಸುಮ್ಮನಿದ್ದು ಪೋಲೀಸ್ ಸ್ಟೇಶನ್‌ನಲ್ಲಿ ತುಂಬಾ ವಾಗ್ವಾದ ಆಯ್ತು ಆ ಹಿಜ್ರಾನ ಬಿಡಿಸಿಕೊಳ್ಳಕ್ಕೆ. ಅವಳನ್ನು ಚೆನ್ನಾಗಿ ಹೊಡೆದಿದ್ರು. ಇನ್ನೂ ಕೇಸ್ ಹಾಕಿರಲಿಲ್ಲ. ಅವಳು ಕದೀತಿದ್ಲು ಅಂತ ಅವರು ನಮಗೆ ಹೇಳ್ತಿದ್ರು. ಆದ್ರೆ ಅವಳು ಬಿಕ್ಶೆ ಬೇಡ್ತಿದ್ಲು. ಇದನ್ನ ವಾದ ಮಾಡುವ ಮದ್ಯದಲ್ಲಿ ನನಗೆ ಸಡನ್ನಾಗಿ ತಡೀಲಾರದಂತ ಹೊಟ್ಟೆ ನೋವು ಮತ್ತೆ ಬ್ಲೀಡಿಂಗ ಶುರವಾಯ್ತು.
ಇದನ್ನೂ ಓದಿ : Transgender World : ರೂಮಿ ಕಾಲಂ : ಎಮೋಷನಲ್ ಟ್ರಿಪ್ ಅಂತ ತಿಳೀಬೇಡಿ, ಇದು ಸರ್ಕಾರದ ಜವಾಬ್ದಾರಿ
ಫಮೀಲ ನನ್ ಮುಖ ನೋಡಿ ಏನು ಅಂತ ಸನ್ನೆ ಮಾಡಿದ್ಲು. ನಾನು ಪಿರಿಯಡ್ಸ್ ಅಂತ ಸನ್ನೆ ಮಾಡಿದೆ. ಸಡನ್ನಾಗಿ ಅವಳು ಅಲ್ಲಿಂದ ಹೊರಟು ಹತ್ತು ನಿಮಿಶಗಳಲ್ಲಿ ವಾಪಸ್ಸು ಬಂದು ನನ್ನ ಕೈಗೆ ಒಂದ್ ಪ್ಯಾಕೆಟ್ ಕೊಟ್ಟು ಪೋಲೀಸ್‌ನ “ವಾಶ್ರೂಮ್ ಎಲ್ಲಿದೆ” ಎಂದು ಕೇಳಿದ್ಲು. ನಾನು ಫುಲ್ ಕನ್‌ಫ್ಯೂಸ್ ಆದೆ. ಆದ್ರೆ ನಂಗೆ ಆ ನಿಮಿಶದಲ್ಲಿ ಬೇಕಿದ್ದೂ ಅದೇ. ನನಗೆ ಇದು ನಿಜವಾದ ದೇವನೂರು ಮಹಾದೇವ ಅವರ ಸಂಬಂಜ (ಫ್ರೆಟರ್‌ನಿಟಿ) – ಸೌಹಾರ್‌ದತೆಗೆ ಇನ್ನೊಂದು ಹೆಸರು. ಒಂದು ಹಿಜ್ರಾ ಅವಳು ಹೇಳಿದ ಹಾಗೆ ಇಶ್ಟು ಸೆನ್‌ಸಿಟಿವ್ ಆಗಿ ಆಗ ನನ್ನ ಪರಿಸ್ತಿತಿ ಅರ್‌ತ ಮಾಡಿಕೊಳ್ಳಲು ಆಗಿದ್ದು ನನಗೆ ಮಮತೆ. ಇದೂ ಸೌಹಾರ್‌ದತೆಯ ಮತ್ತೊಂದು ಹೆಸರು.
ನಂ ಎನ್‌ಜಿಒ ಬಾಸ್‌ಗೆ ಸೌಹಾರ್‌ದತೆ ಅಂದ್ರೆ ಬೇರೊಂದು ತಳಸಮುದಾಯದ ಒಂದು ಪ್ರತಿಬಟನೆಗೆ ಹೆಚ್ಚಿನ ಸಂಕ್ಯೆಯಲ್ಲಿ ಹೋಗುವುದು. ಆ ಹೆಚ್ಚಿನ ಸಂಕ್ಯೆಯಲ್ಲಿ ಹೋಗುವವರಿಗೆ ಏನನ್ನು ಪ್ರತಿಬಟಿಸೋಕೆ ಹೋಗ್ತಿದ್ದೀವಿ ಅಂತ ಕೂಡ ಬ್ರೀಫ್ ಮಾಡಲ್ಲ. ಹೋಗೋವ್ರಿಗೆ ಪ್ರೊಟೆಸ್ಟ್ಗೆ ಹೋದ್ರೆ ದುಡ್ಡು ಬುತ್ತೆ ಅನ್ನೋ ಬಾವನೆ ಬೆಳೆಸಿ ಬಿಟ್ರು. ಒಂದು ನರ‍್ಮದ ಬಚಾವ್ ಆಂದೋಲನದಲ್ಲಿ ಒಂದು ಹಳ್ಳಿ ನೀರಿನಲ್ಲಿ ಮುಳುಗುವಾಗ ಮೇದ ಪಾಟ್ಕರ್ ಅರೆಸ್ಟ್ ಆದ್ರು. ಆಗ ನಾವು ಎಂಜಿ ರಸ್ತೆಯಲ್ಲಿ ಪ್ರೊಟೆಸ್ಟ್ ಮಾಡ್ತಿದ್ವಿ. ಈ ನಂ ಎನ್‌ಜಿಒ ಬಾಸ್ ಕರೆದದ್ರಿಂದ ಒಂದಶ್ಟು ಜನ ಬಂದ್ರು. ಅದರಲ್ಲಿ ಒಬ್ರು ಆತಂಕದಿಂದ ಕೇಳಿದ್ದು “ಮೇದ ಯಾವ ಹಿಜ್ರಾ, ಯಾವ ಹಮಾಮ್, ಅವರಿಗೆ ತುಂಬ ಟಾರ್‌ಚರ್ ಆಯ್ತ” ಅಂತ. ಎಲ್ಲರ ಮುಂದೆ ಜೋರಾಗಿ ಕೇಳಿ ನಂ ಬಾಸ್‌ಗೆ ಸರೀಗೆ ಅವಮಾನ ಆಯ್ತು. ತಮಾಶೆ ಅಂದ್ರೆ ಅವರು ತುಂಬಾ ಹೊತ್ತು ತೊಗೊಂಡ್ರು ಮೇದ ಪಾಟ್ಕರ್ ಯಾರು ಅಂತ ತಿಳ್ಕೊಳಕ್ಕೆ. ಹಾಗಂತ ಅವರು ಕಾರ್‌ಮಿಕ ವರ್‌ಗದ ಅರೆ ಬರೆ ವಿದ್ಯಾವಂತರಲ್ಲ. ಅವರು ಬ್ರಾಮಣ ಜಾತಿಯಲ್ಲಿ ಹುಟ್ಟಿ, ಡಿಗ್ರೀ ಮಾಡಿದ ಸಲಿಂಗಕಾಮಿ ದಂಪತಿಗಳು. ಆಗಶ್ಟೆ ನಮ್ ವಿಶಯದ ಬಗ್ಗೆ ಒಂದೆರಡು ಹೋರಾಟಗಳನ್ನು ಮಾಡಿದ್ದು ಹೀಗಾಗಿ ಅವರಿಗೆ ನಂ ವಿಶಯ ಬಿಟ್ರೆ ಬೇರೆ ಗೊತ್ತಿರಲಿಲ್ಲ.
ಇದನ್ನೂ ಓದಿ : Transgender World : ‘ನೀವು ಹೋಮೊ ಸೆಕ್ಷುವಲ್ ಆಗಿದ್ದು ನಾರ್ಮಲ್ ಆಗಿ ಇರುವವರ ಜೊತೆ ಟೀ ಕುಡಿದಾಗ ಏನು ಅನ್ನಿಸುತ್ತದೆ?’
ಸೌಹಾರ್‌ದತೆ ಅಂದ್ರೆ ನಂಗೆ ನೆನಪಾಗೋದು ನಂ ಕ್ಲಿಫ್‌ಟನ್. ಈಗ ದೊಡ್ಡ ಲಾಯರ್. ತುಂಬಾ ಕೆಲಸ ಮಾಡಿದ್ದಾನೆ. ನಾನು ಹೇಳ್ತಿರೋದು ಯಾವಾಗ ಅಂದ್ರೆ 2003 –2004. ಅವನು ಆಗಿನ್ನು ಲಾಯರ್ ಆಗಿರಲಿಲ್ಲ. ಓದ್‌ತ್ತಿದ್ದ. ಬಟ್ ಅವನು ಆಗ ಒಬ್ಬ ಎಂಜಿನಿಯರ್. ಹಲವು ವರ್‌ಶಗಳು ನರ್ಮದ ಬಚಾವ್ ಆಂದೋಲನದಲ್ಲಿ ಕೆಲಸ ಮಾಡಿ ಬಂದಿದ್ದ ವಕೀಲ ಆಗಲು. ಆಗ ನಾವೆಲ್ಲರೂ ಒಬ್ಬರನ್ನೊಬ್ಬರು ಮಗ ಮಗ ಅಂತ ಕರೀತಿದ್ವಿ. ಅವನು ತೋರಿಸಿದ ದೈರ್ಯ ಮತ್ತೆ ಆ ಸೌಹಾರ್‌ದತೆ ನನಗೆ ಇವತ್ತಿಗೂ ಕಣ್ ಮುಂದೆ ನಿಂತಿದೆ. ಫಮೀಲ ಮತ್ತು ಸಂಗಡಿಗರು ಹಿಜ್ರಾ ಹಬ್ಬ ಮಾಡಲು ತೀರ್‌ಮಾನ ಮಾಡಿದರು. ಅದಕ್ಕೆ ದುಡ್ಡು ಬೇಕಿತ್ತು. ಹಿಜ್ರಾ ಹಬ್ಬ ಅಂದರೆ ಆಗ ಅವರು ಪ್ಲಾನ್ ಮಾಡಿದ್ದು ಅಂದ್ರೆ ೨೦೦೩ರಲ್ಲಿ ತಾವು ಈ ದೇಶದ ಪ್ರಜೆಗಳು, ತಮಗೂ ಎಲ್ಲಾ ಹಕ್ಕುಗಳಿದೆ ಸಂವಿದಾನದ ಪ್ರಕಾರ ಅಂತ ಸಾರಲು. ದುಡ್ಡಿಗಾಗಿ ಅವರು ತಮ್ಮ ಮಂಕತಿ (ಅಂದ್ರೆ ಬಿಕ್ಶೆ ಬೇಡುವುದು) ಯಲ್ಲಿ ದಿನಕ್ಕೆ ೬೦ % ಹಿಜ್ರಾ ಹಬ್ಬಕ್ಕೆ ಮತ್ತೆ ಬಾಕಿ ಅವರಿಗೆ ಅಂತ. ಒಂದು ಪಾಂಪಲೆಟ್ ಬರೆದು ಅವರು ಬೀದಿ ಬೀದಿಗೆ ಹೋಗಿ ಸಾರ್‌ವಜನಿಕರಿಂದ ಹಣ ಎತ್ತಿದರು.
ಆಗ ಪ್ರೆಸ್ ಕಾನ್‌ಫರೆನ್ಸ್ ಮಾಡಿ ಕೋಶೀಸ್ ರೆಸ್ಟೋರೆಂಟಿಗೆ ಹೋದಾಗ, ಅಡ್‌ಮಿಶನ್ ರಿಸರ್‌ವ್ಡ್ ಅನ್ನೋದ್ರಲ್ಲಿ ನಿಮಗೆ ಇಲ್ಲಿ ಪ್ರವೇಶವಿಲ್ಲ ಎಂದು ಆಚೆ ಹಾಕಿದರು. ಕೋಶೀಸ್ ಇಂದ ಹತ್ತು ನಿಮಿಶದ ದೂರ ಪರ್‌ಯಾಯ ಕಾನೂನು ವೇದಿಕೆ. ಅಲ್ಲಿಗೆ ಹೋದಾಗ ನಾವು, ಕ್ಲಿಫ್ಟನ್ ಬಿಟ್ಟು ಬೇರಾರಿಲ್ಲ. ಅವನು ಆಗಿನ್ನೂ ಕಾನೂನು ಓದುತ್ತಿದ್ದ. ಆದ್ರೂ ಬಿಟ್ಟಿಲ್ಲ. ಫಮೀಲ ಆಗಿದ್ದೆಲ್ಲಾ ಹೇಳಿದಳು. ತಕ್ಶಣ ಅವನು ಪಟಪಟಪಟ ಅಂತ ಒಂದು ಲೆಟರ್ ಟೈಪ್ ಮಾಡಿ ಎಲ್ಲರ ಹತ್ರ ಸಹಿ ಮಾಡಿಸಿಕೊಂಡು ಬಂದ ಗುಂಪು ಫಮೀಲ ಮತ್ತು ಕ್ಲಿಫ್ಟನ್ ಹಿಂದೆ ಹಾಗೇ ನಡೆದುಕೊಂದು ಹೋದ್ವಿ. ಕೋಶೀಸ್ ಮುಂದೆ ಕೂತು ಧರಣಿ ಮಾಡಿ, ಅವರಿಂದ ಅಪಾಲಜಿ ತಗೊಂಡು ಮೇಲೆ ಕ್ಲಿಫ್ಠನ್ ನಂ ಜೊತೆ ಟೀ ಕುಡಿದು ಆಮೇಲೆ ಹೋದ. ಅದು ನಿಜವಾದ ಸೌಹಾರ್‌ದತೆ.
ಇಲ್ಲಿಗೆ ಈ ಅಂಕಣವನ್ನು ಮುಗಿಸ್ತಿದೇನೆ. ಇಷ್ಟು ದಿನ ಓದಿದಿರಿ ಧನ್ಯವಾದ. ಮತ್ತೆ ಸಿಗೋಣ.
ಇಂತಿ ಎಲ್ಲರಿಗೂ ಪ್ರೀತಿ ಪ್ರೇಮದ ಒಂದು ಹಗ್!
(ಮುಗಿಯಿತು)
(ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗಿದೆ. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com)
ಹಿಂದಿನ ಅಲೆ : Transgender World : ತಳಸಮುದಾಯಗಳ ಯಾವ ಕಸುಬೂ ಜ್ಞಾನವ್ಯವಸ್ಥೆಯಾಗಿ ಬೆಳೆಯಲು ಈ ಬ್ರಾಹ್ಮಣೀಕರಣ ಬಿಟ್ಟಿಲ್ಲ
Published On - 9:17 am, Tue, 15 February 22