AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುವಿಲಾಸಿನಿ: ಈ ಪುಲ್ಲಿಂಗಗಳಿಗೆ ‘ತೊರೆಯುವುದು’ ಎಂದರೆ ಅದೆಷ್ಟು ಸಲೀಸು?

Love : ಧ್ವನಿಯ ಕಂಪನದಲ್ಲೇ ಈ ಕ್ಷಣದ ಅವನ ಭಾವ ಕೃತ್ರಿಮದ್ದಾ, ಕರ್ತವ್ಯದ್ದಾ, ಒಲುಮೆಯದ್ದಾ, ತೀವ್ರತೆಯದ್ದಾ ಅಂತ ಗುರುತಾಗುತ್ತಿತ್ತು ನನಗೆ. ಈ ಹಾಳು ವಿದ್ಯೆ ತಿಳಿಯದೇ ಹೋಗಿದ್ದರೆ ನೆಮ್ಮದಿಯಾಗಿರ್ತಿದ್ದೆ.

ಋತುವಿಲಾಸಿನಿ: ಈ ಪುಲ್ಲಿಂಗಗಳಿಗೆ ‘ತೊರೆಯುವುದು’ ಎಂದರೆ ಅದೆಷ್ಟು ಸಲೀಸು?
ಫೋಟೋ : ಡಾ. ನಿಸರ್ಗ
Follow us
ಶ್ರೀದೇವಿ ಕಳಸದ
|

Updated on:Mar 15, 2022 | 9:56 AM

ಋತುವಿಲಾಸಿನಿ | Rutuvilaasini : ಈ ಬೆಳಗು ಬಹಳ ಸುಂದರವಾಗಿದೆ ತನು… ಈ ಬೆಳಗೊಂದೇ ಅಲ್ಲ. ಪ್ರತಿ ಬೆಳಗೂ ಸುಂದರವೇ! ಪೂರ್ವಕ್ಕೆ ಮುಖ‌ಮಾಡಿ ಇಲ್ಲಿ ಕುಂತ ನನಗೆ ಈಗಷ್ಟೇ ಉದಯಿಸಿದ ಎಳೆಕಿರಣಗಳ ಸ್ಪರ್ಶ ಬೆಚ್ಚಗನಿಸುತ್ತಿದೆ. ನಿನಗೆ ಕೇಳಿಸ್ತಿದೆಯಾ? ಹತ್ತು ದಿಕ್ಕಿನಿಂದಲೂ ಹಕ್ಕಿಗಳು ಪೈಪೋಟಿಯಲ್ಲಿ ಕಛೇರಿ ನಡೆಸುತ್ತಿವೆ. ದೂರದ ಕೆರೆಯ ದಿಕ್ಕಿಗೆ ನೀರುಕೋಳಿಗಳು ದೊಡ್ಡ ಸ್ವರದಲ್ಲಿ ಕೂಗುತ್ತ ಮಳೆ ಕರೆವ ಅವಸರದಲ್ಲಿವೆ. ಇನ್ನೇನು ಕಿಡಿ ಹೊತ್ತಿಕೊಳ್ಳುವಂತಹ ರವರವ ಬಿಸಿಲಿನ ಭಯ ಅವಕ್ಕೆ. ನಡುಮನೆಯಲ್ಲಿ ಹಚ್ಚಿಟ್ಟ ಶಿವಸ್ರುತಿ ಮಂತ್ರ ಅಲೆಅಲೆಯಾಗಿ ಇಲ್ಲೆಲ್ಲ ಹರವಿಕೊಳ್ತಿದೆ. ಬೆಳಗು ಸುಂದರ ಮಾತ್ರ ಅಲ್ಲ ಪವಿತ್ರವೂ. ಪಕ್ಕದೂರಿನಲ್ಲಿ ನಾಯಿಗಳು ದೊಡ್ಡದಾಗಿ ಬೊಗಳಿ ಜಗಳ ಆಡ್ತಿರುವ‌ ಸದ್ದಿಗೆ ನನ್ನ ಬ್ರೂನೋಗೆ ಕಾಲು ನೆಲದ ಮೇಲೆ ನಿಲ್ಲದೆ ತಕಪಕ ಕುಣಿತಿದಾನೆ. ಕಿವಿ‌ ನಿಮಿರಿಸಿ ಒಮ್ಮೆ ನನ್ನ ಕಡೆಗೂ ಮತ್ತೊಮ್ಮೆ ಗೇಟಿನ ಕಡೆಗೂ‌ ನೋಡ್ತಿದಾನೆ. ಗೇಟು ಹಾರಬಹುದಾದ ಸಾಧ್ಯತೆಗಳ ಕುರಿತು ಚಿಂತನೆ ನಡೆಸ್ತಿರುವ ಹಾಗಿದೆ. ಅದೋ.. ನೆರೆಮನೆಯ ಶೆಡ್​ನಲ್ಲಿನ್ನೂ ರಾತ್ರಿ ಹಚ್ಚಿದ ಕಂಬದ ದೀಪ ಉರಿಯುತ್ತಲೇ ಇದೆ. ನಂದಿನಿ ಹೆದ್ದುರ್ಗ, ಕವಿ (Nandini Heddurga)

(ಋತು 3, ಭಾಗ1)

ಪೂರ್ವಕ್ಕೆ ನೋಡು. ಕೆಮ್ಮಣ್ಣು ಹಚ್ಚಿ ಸಾರಿಸಿದ ಅಂಗಳವಾಗಿದೆ ಮೂಡಲು. ಹಾದಿಗೆದುರಾದ ಹುಡುಗಿಯೊಂದಿಗೆ ಅಕಸ್ಮಾತ್ ಕಣ್ಣು ಕೂಡಿ ಅವಳಿಂದ ಪುಕ್ಕಟೆ ಸಿಕ್ಕ ಮುಗುಳ್ನುಗುವಿನೊಂದಿಗೆ ಹೊತ್ತಿಕೊಳ್ಳುವ ಹದಬೆಂಕಿಯಂತಹ ನಿಗಿನಿಗಿ ಮುಗಿಲು.

ಒಂದು ಕಾಲದಲ್ಲಿ ಈ ಬಾಲಸೂರ್ಯನ್ನ ಮನಸೋ ಇಚ್ಛೆ ಪ್ರೇಮಿಸಿ ಏಳಿಗೆಗಾಗಿ ಬೇಡಿಕೊಳ್ತಿದ್ದೆ. ಈಗಲೂ ಅವನ ಸಲುವಾದ ಆ ಪ್ರೇಮ, ಎಳೆಕಿರಣಗಳು ತಾಗಿ ಮೂಡುವ ರೋಮಾಂಚನ ಮುಂದುವರಿದೇ ಇದೆ ಅಂದರೆ ನೀ ನಂಬಲ್ಲ ಅಲಾ?

ನೋಡಲ್ಲಿ ತನು..

ಉರಿವ ಸೂರ್ಯನ ಖದರಿಗೆ ಹೆದರಿರುವ ದಾಸವಾಳಗಳು ರಾತ್ರಿ ಕುಡಿದ ನೀರಿನ ಅಮಲಿನ್ನೂ ಇಳಿದಿಲ್ಲವೆನ್ನುವಂತೆ ಅರೆಮಂಪರಿನಲ್ಲಿವೆ. ಒಳಗೊಳಗೇ ನಡು ಮಧ್ಯಾಹ್ನದ ಕಾವು ನೆನೆದು ದಣಿಯುತ್ತಿವೆ. ಹರೆ ತುದಿಯ ಮೊಗ್ಗೊಂದು ಈಗಲೇ ಕಣ್ಣು ಬಿಡಲೋ ಅಥವಾ ಇನ್ನಷ್ಟು ಹೊತ್ತು ಮಲಗಿರಲೋ ಅಂತ ಅಮ್ಮನ್ನ ಕೇಳುತ್ತಿರುವಂತಿದೆ. ಗೇಟು ಹಾರಬಹುದಾ ಅಂತ ಸರ್ವೆ ಮುಗಿಸಿದ ಬ್ರೂನೋ ವಾಸ್ತವ ಗೊತ್ತಾಗಿ ನನ್ನ ಕಾಲಿನ ಬಳಿ ಕುಳಿತು ಆಮಿಷದ ಮುಗುಳ್ನಗು ಎಸೆಯುತ್ತಾ ಕುಯ್ಯ್ಯ್ಯ…ಯ್… ಎನ್ನುವ ನರಳಿಕೆಯ ಒಗ್ಗರಣೆ ಹಾಕ್ತಿದ್ದಾನೆ.

ಅವನ ನಗುವಿಗೂ ಸೋಗಿನ ನರಳಿಕೆಗೂ ಸೋತು ಗೇಟು ತೆಗೆದರೂ ತೆಗೆಯಬಹುದೆಂಬ ದೂರದ ನಿರೀಕ್ಷೆ ಅವನಿಗೆ.

ತನು… ದೂರದ ಮಹಾನಗರಿಯಲ್ಲಿದ್ದೀಯಾ ನೀನು.

ನನ್ನ ಮನೆಯೂ, ನನ್ನ ಅಂಗಳಕ್ಕೆ ಬರುವ ಈ ಹೊಸ ಬೆಳಗೂ, ನನ್ನ ಕಾಂಪೋಂಡಿನಲ್ಲಿ ಕೂರುವ ಗುಬ್ಬಚ್ಚಿಗಳೂ ಎಷ್ಟು ಇಷ್ಟ ನಿನಗೆಂಬುದು ತಿಳಿದಿದೆ ನನಗೆ. ಇದೋ.. ಇಲ್ಲಿ ಪೋರ್ಟಿಕೋದಲಿ ಕೂತು ದೂರಕ್ಕೆ ನೋಡಿದಾಗ ಗದ್ದೆ ಕಾಣ್ತಿದ್ವಲ್ಲಾ?

ಅವು ನೆನಪಿದೆಯಾ ನಿನಗೆ?

ನೀ ಇಲ್ಲಿ ಬಂದಾಗ ಭತ್ತದ ಹೂಗೊನೆ ತೂಗುತ್ತಿದ್ದವು. ಈಗ ಕೊಯ್ಲು ಮುಗಿದ ಖಾಲಿ ಗದ್ದೆ. ಹಗಲೆಲ್ಲ ಕೂಳೆ ಹುಲ್ಲು ಮೇಯುವ ಊರದನಗಳು ಗೋಕುಲದ ದೃಶ್ಯ ನೆನಪಿಗೆ ತರಿಸುತ್ತದೆ ನನಗೆ. ಇಂತಹ ಹುಚ್ಚೆಲ್ಲಾ ತಲೆ ಸರಿಯಿಲ್ಲದವರ ಬಾಬತ್ತೆಂದು ಮನೆಯವರು ಹಂಗಿಸುವುದು ತಿಳಿದೂ ನನ್ನ ನಾನು ಬದಲಿಸಿಕೊಳ್ಳಲಾರೆ ತನು.

ಕೊಯ್ಲು ಮುಗಿದ ಮೇಲೆ ಚೆಲ್ಲಿದ ಅಷ್ಟಿಷ್ಟು ಭತ್ತ ಗದ್ದೆಯಲ್ಲಿನ್ನೂ ಉಳಿದಿದೆ ಕಾಣುತ್ತೆ. ನವಿಲುಗಳ ದೊಡ್ಡ ದೊಡ್ಡ ದಂಡು ವಯ್ಯಾರ ಮಾಡುತ್ತ ಹುಳುಹುಪ್ಪಡಿ ಕೆದಕುತ್ತ ಅಳಿದುಳಿದ ಭತ್ತದ ಕಾಳು ಹೆಕ್ಕುತ್ತ ನಡೆದಾಡುತ್ತಿವೆ.

ಇದನ್ನೂ ಓದಿ : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು

ಐವತ್ತಕ್ಕೂ ಹೆಚ್ಚಿರುವ ಈ ನವಿಲುಗಳ ಗುಂಪಿನಲ್ಲಿ ಎರಡೋ ಮೂರೋ ಗಂಡು ನವಿಲಿವೆ ತನು. ತಮ್ಮ ಉದ್ದಬಾಲವನ್ನು ಆಗಾಗ ಬೆನ್ನ ಹಿಂದೆ ಚಕ್ರದಂತೆ ಹರಡಿಕೊಂಡು ನೆತ್ತಿಯ ಶಿಖೆಯನ್ನು ಇನ್ನಷ್ಟು ನೀಳಕ್ಕೆ ಹಿಗ್ಗಿಸಿ ತನ್ನ ಚಲುವಿಗೆ ತಾನೇ ಬೆರಗಾಗಿ ಮಣ್ಣು ಕೆದಕುತ್ತಿರುವ ಹೆಣ್ಣುನವಿಲಿನ‌ ಬಳಿ ಸುಳಿದಾಡಿ ಅವಳಿನ್ನೂ ಮರುಳಾಗದೇ ಹೋದದ್ದು ಯಾಕೆ ಅಂತ‌ ನಿಡುಸುಯ್ಯುತ್ತಿದೆ ಅಲ್ಲೊಂದು ನವಿಲು.

ರೇಗಬೇಡ ಮತ್ತೆ ಅವನದ್ದೇ ಮಾತಾಡ್ತಿದ್ದೀನಿ ಅಂತ.

ಈಗಲೂ ಅವನು ನನ್ನ ಮೆದುಳ ಸೂಕ್ಷ್ಮ ಮಡಿಕೆಯೊಳಗೆ ಎದೆಯ ತೆಳುನಾಳದ ಒಳಪದರದೊಳಗೆ ನೆಲೆಯಾಗಿರುವಂತೇ ಅನಿಸ್ತದೆ ಕಣೆ. ಅದು ಹೇಗೆ ಈ ಪುಲ್ಲಿಂಗಗಳು ತೊರೆಯುವುದನ್ನು ಅಷ್ಟೊಂದು ಸಲೀಸು ಮಾಡಿಕೊಳ್ತವೆ. ಧ್ವನಿಯ ಕಂಪನದಲ್ಲೇ ಈ ಕ್ಷಣದ ಅವನ ಭಾವ ಕೃತ್ರಿಮದ್ದಾ, ಕರ್ತವ್ಯದ್ದಾ, ಒಲುಮೆಯದ್ದಾ, ತೀವ್ರತೆಯದ್ದಾ ಅಂತ ಗುರುತಾಗುತ್ತಿತ್ತು ನನಗೆ. ಈ ಹಾಳು ವಿದ್ಯೆ ತಿಳಿಯದೇ ಹೋಗಿದ್ದರೆ ನೆಮ್ಮದಿಯಾಗಿರ್ತಿದ್ದೆ. ಯಾವ ದಿನದಿಂದ ಇದನ್ನು ಹೃದಯ ಕರಗತ ಮಾಡಿಕೊಳ್ತೋ ಗೊತ್ತಿಲ್ಲ. ಪ್ರತೀ ಧ್ವನಿಯ ಕಂಪನಗಳೂ ಹೊಮ್ಮಿಸುವ ಭಾವ ತಿಳಿದು ತಳಮಳವೋ ಪುಳಕವೋ ಏನೋ ಒಂದು ಆಗ್ತದೆ.

ತನು… ಬದುಕು ಇಷ್ಟು ಸರಳ ಇಲ್ಲ. ಸರಳ ಮಾಡಿಕೊಳ್ಳಿ ಅನ್ನುವ ಅರಿವಿನ ಉಪನ್ಯಾಸಗಳನ್ನು ಕೇಳಿದ್ದಷ್ಟೇ ಬಂತು. ದಿನೇದಿನೇ ಸಂಕೀರ್ಣವಾಗುವ ಆತ್ಮಕ್ಕೆ ಸಂಬಂಧಿಸಿದ ಸಂಗತಿಗಳು ಸುಣ್ಣಕ್ಕೆ ತಣ್ಣಿರು ಹುಯ್ದಂತೆ. ಕುದಿಯೆಬ್ಬಿಸುತ್ತವೆ. ಜೀವ‌ ದಣಿಸುತ್ತದೆ. ಸ್ವರ ಕೇಳದೆ ಸರಿಯೆನಿಸದು ಮುದ್ದೂ ಅಂತಿದ್ದ ಆರಂಭದ ದಿನಗಳನ್ನೂ., ಕರ್ತವ್ಯಕ್ಕೆ ಕರೆ ಮುಗಿಸಿ ಮತ್ತೆಲ್ಲೋ ಹಗಲು ಹೊಸದಾಗಿಸಿಕೊಳ್ಳುತ್ತಿರುವ ಈ ದಿನಗಳನ್ನೂ ಮೌನವಾಗಿ ನೋಡುತ್ತಿದ್ದೇನೆ.

ಈ ಹೆಣ್ಣು ಜೀವಕ್ಕೆ ಪ್ರೀತಿಯೆಂಬ ಬಲಹೀನತೆಯೊಂದೂ ಇಲ್ಲದೇ ಇದ್ದಿದ್ದರೆ ಅಂತ ಯೋಚಿಸ್ತೀನಿ. ಅವನು ದಿಕ್ಕು ಬದಲಿಸಿದ್ದಾನಾ ಅಥವಾ ಅವನ ಕುರಿತಾದ ಅತಿ ಪ್ರೀತಿ ಸ್ವರ ಅರ್ಥೈಸಿಕೊಳ್ಳಲು ಅಸಹಕಾರ ತೋರುತ್ತಿರಬಹುದಾ ಅಂತಲೂ ಯೋಚಿಸಿದೆ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಎರಡೂ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/rutuvilaasini

ಹಿಂದಿನ ಋತು : ಋತುವಿಲಾಸಿನಿ: ಮುಕ್ಕಾಲು ಹೆಣ್ಣುಮಕ್ಕಳು ಮೊಮ್ಮಕ್ಕಳ ಕಂಡರೂ ಕನ್ಯೆಯಾಗಿಯೇ ಸಾಯುತ್ತಾರೆ

Published On - 9:19 am, Tue, 15 March 22

ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ