ಅಂಕಪರದೆ : ‘ಸತ್ಯನಾಪುರದ ಸಿರಿ’ ಮೇ 15ಕ್ಕೆ ಪೂರ್ಣಿಮಾ ಸುರೇಶ್ ಏಕವ್ಯಕ್ತಿಪ್ರದರ್ಶನ

|

Updated on: May 14, 2022 | 6:01 PM

Satyanapurada Siri : ಗಂಡನಾದವನು ಕೌಟುಂಬಿಕ ವ್ಯವಸ್ಥೆಯ ನಿಯಮ ಮುರಿದಾಗ ಹೆಂಡತಿಯಾದವಳೂ ಶಾಸ್ತೃಬದ್ದವಾಗಿ ಅವನನ್ನು ನಿರಾಕರಿಸುವಂತಹ ಹೊಸ ಛಾತಿ ಇಲ್ಲಿದೆ "ಗಂಡಹೆಂಡತಿಯರಲ್ಲಿ ಪ್ರೀತಿಯೇ ಇಲ್ಲದ ಮೇಲೆ ಅಂತಹ ಸಂಬಂಧ.. ಬೇರುಸಹಿತ ಕಿತ್ತು ಬಿಸಾಕಿದ ಗಿಡದಂತೆ.

ಅಂಕಪರದೆ : ‘ಸತ್ಯನಾಪುರದ ಸಿರಿ’ ಮೇ 15ಕ್ಕೆ ಪೂರ್ಣಿಮಾ ಸುರೇಶ್ ಏಕವ್ಯಕ್ತಿಪ್ರದರ್ಶನ
‘ಸತ್ಯನಾಪುರದ ಸಿರಿ‘ ಪೂರ್ಣಿಮಾ ಸುರೇಶ್
Follow us on

ಅಂಕಪರದೆ | Ankaparade : ಸಿರಿ ಎಂದರೆ ಸಂಪತ್ತು. ಸಂಭ್ರಮ. ಆದರೆ ಇಲ್ಲಿ ಸಿರಿ ಎಂಬ ತುಳು ಮಣ್ಣಿನ ಮಗಳು ಹೆಣ್ಣು ಜೀವದ ಸ್ಚಾಭಿಮಾನದ ಆಸ್ಮಿತೆಯ ರೂಪಕವಾಗಿ ಕಂಡು ಬರುತ್ತಾಳೆ. ಸಿರಿಯ ದ್ವಸ್ಥ ಮನಸ್ಸಿನ ಪರಿಪಾಟಲು, ಹೋರಾಟ ಕೊನೆಗೂ ದುರಂತ ಅಂತ್ಯ ಹೊಂದುವ ಕಥನ. ಆದರೆ ಶತಶತಮಾನಗಳ ಹಿಂದೆ ಗ್ರಾಮೀಣ ಭಾಗದ ಹೆಣ್ಣೊಬ್ಬಳ ಸ್ತ್ರೀಪರ ಹೋರಾಟ ಇಂದಿಗೂ ಎಲ್ಲ ಹೆಣ್ಣುಮನಸ್ಸಿಗೂ ಆದರ್ಶ.
ಸಿರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಆಡುಮಾತಿನ, ಮಾತೃಮೂಲೀಯ ಕುಟುಂಬದ ಕೃಷಿನಿರತ ತುಳು ಮಹಿಳೆ. ಆಕೆಯನ್ನು ತುಳುವರು ದೇವರ ಮಗಳೆಂದು ತುಂಬು ಆಪ್ತವಾಗಿ ಆರಾಧಿಸುವಂತಹ ಮೌಖಿಕ ಕಾವ್ಯ ಪರಿಚಲನವಿದು. ಇದನ್ನೇ ಆದರಿಸಿ 1984ರಲ್ಲಿ ಎನ್​.ವಿ. ರಾವ್ ಅವರು ತುಳುನಾಡ ಸಿರಿ ಎಂಬ ಕಾದಂಬರಿ ರಚಸಿದ್ದಾರೆ. “ಸತ್ಯಾನಾಪುರದ ಸಿರಿ” ನಾಟಕಕ್ಕೆ ಮೂಲ ಆಧಾರವಿದು. ಸಾಮಾನ್ಯ ಹೆಣ್ಣೊಬ್ಬಳು ಬದುಕಿನ ಪ್ರತೀ ತಿರುವುಗಳಲ್ಲಿ ನ್ಯಾಯಕ್ಕಾಗಿ, ವ್ಯವಸ್ಥೆಯ ನಿರಂತರತೆಗಾಗಿ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ಮೌಲ್ಯಗಳ ನಿರ್ಮಾಣ ಮಾಡುವತ್ತ ಹೆಜ್ಜೆ ಇರಿಸುತ್ತಾಳೆ. ಇದರಿಂದ ಆಕೆ ದೇವಿ, ದೈವತ್ವಕ್ಕೇರುತ್ತಾಳೆ.
ಪೂರ್ಣಿಮಾ ಸುರೇಶ್, ರಂಗಕಲಾವಿದೆ

ಹೆಣ್ಣು ಜೀವದ ನೋವುಗಳನ್ನು ಅರ್ಥೈಸಬೇಕಾದರೆ ಸಿರಿಯ ಬದುಕಿಗೆ ಇಣುಕ ನೋಟ ಬೀರಬೇಕು. ಹೆಣ್ಣು ನೋವಿನ ಮೂರ್ತರೂಪ ಆಕೆಯ ಪರಿಚಲನೆ. ಹೋರಾಟ. ಬಾಲ್ಯದಿಂದಲೂ ಊರಿನ ಸಿರಿ ಜಾತ್ರೆಯನ್ನು ಕುತೂಹಲದಿಂದ ಕಾಣುವವಳಿಗೆ ಒಳಗಿನ ಹೆಣ್ಣು ಮಾತನಾಡಲು ಆರಂಭಿಸಿದಾಗ ಸಿರಿಯನ್ನು ಓದಬೇಕು ಅನಿಸಿತ್ತು. ಆಕೆಯ ಪ್ರತಿಭಟನೆ ಒಲ್ಲದ ಗಂಡನ ವಿಚ್ಛೇದನೆ, ಮರುಮದುವೆ ಸೀಮಂತದ ಸಮಯದಲ್ಲಿ ಪ್ರಕಟಪಡಿಸುವ ಹೆಣ್ತನದ ಸ್ವಾಭಿಮಾನ ಎಲ್ಲವೂ ಕೌತುಕ, ಅಚ್ಚರಿ, ವಿಸ್ಮಯ, ಆದರ್ಶ. ಅವಳನ್ನು ರಂಗಕ್ಕೆ ಕರೆತರುವ “ಮಗುಹಠ” ಇದಕ್ಕೆ ಪೂರಕವಾಗಿ ದೊರಕಿದುದು ಎನ್. ವಿ. ರಾವ್ ಕಾದಂಬರಿ ಹಾಗೂ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನ. ಪ್ರತೀ ಪ್ರಸ್ತುತಿಯಲ್ಲೂ ಸಿರಿ ಹೊಸದಾಗಿ ಆಲೋಚನೆಗಳಿಗೆ, ವಿಮರ್ಶೆಗೆ, ಹೆಣ್ಣುಮನಸ್ಸಿಗೆ ರೂಪಕವಾಗಿ ಮಾತನಾಡುತ್ತಾ ಹೋಗುತ್ತಾಳೆ. “ಗಂಡು ದಿಕ್ಕಿಲ್ಲದ ನಿಮಗೆ ಕಡೆಗಾಲದಲ್ಲಿ ಕಾಂತಣ ನೋಡಿಕೊಳ್ಳಬೇಕು” ” “ಹೆಣ್ಣಿಗೆ ಗೌರವ ಕೊಡಲು ತಿಳಿಯದ ಗಂಡಿಗೆ ತನ್ನ ಮೇಲೆ ಅದೆಂತಹ ಅಭಿಮಾನ”
ಸೂಳೆ ಸಿದ್ದು ಮಡಿಕೆಡಿಸಿದ ಸೀಮಂತದ ಸೀರೆಯನ್ನು ತುಂಬಿದ ಸಭೆಯಲ್ಲಿ ಎಸೆದು “ಸೂಳೆ ಸಿದ್ದು ಉಟ್ಟು ಸೀರೆಯನ್ನು ಸಿರಿ ಉಡಲಾರಳು” “ನನಗೆ ನಿಮ್ಮಿಂದ ಬಿಡುಗಡೆ ಬೇಕು. ಇದೋ ಹಿತ್ತಲ ಹುಲ್ಲನ್ನು ಎದುರಿಗೆ ಹಿಡಿದಿರುವೆ. ಇದನ್ನೇ ನನ್ನ ದಾತಾರವೆಂದು ಪರಿಗಣಿಸಿ. ಮುಕ್ತಿ ಕೊಡಿ.”

ಸಕಲ ಚರಾಚರಗಳಲ್ಲಿ ಜೀವದ ಅಸ್ತಿತ್ವ ಮನ್ನಿಸುವ ಆಕೆಯ ವೈಶಾಲ್ಯತೆ ಇಲ್ಲಿನ ಕೃಷಿ ಸಂಸ್ಕೃತಿಯ ವರವಿರಬೇಕು. ಜೊತೆಗೆ ಗಂಡನಾದವನು ಕೌಟುಂಬಿಕ ವ್ಯವಸ್ಥೆಯ ನಿಯಮ ಮುರಿದಾಗ ಹೆಂಡತಿಯಾದವಳೂ ಶಾಸ್ತೃಬದ್ದವಾಗಿ ಅವನನ್ನು ನಿರಾಕರಿಸುವಂತಹ ಹೊಸ ಛಾತಿ ಇಲ್ಲಿದೆ “ಗಂಡಹೆಂಡತಿಯರಲ್ಲಿ ಪ್ರೀತಿಯೇ ಇಲ್ಲದ ಮೇಲೆ ಅಂತಹ ಸಂಬಂಧ.. ಬೇರುಸಹಿತ ಕಿತ್ತು ಬಿಸಾಕಿದ ಗಿಡದಂತೆ. ಅಂತಹ ಬಂಧ ಒಪ್ಪಲಾರೆ. ನಿಮ್ಮ ಸಂಪತ್ತು ಸೂಳೆ ಸಿದ್ದುವಿಗೇ ಕೊಡಿ” ಆಕೆಯ ಈ ಪ್ರತಿಭಟನೆಗಳ ಬೆಂಕಿ ಉಗುಳಿನಲ್ಲಿ ಗಂಡು ವ್ಯಕ್ತಿತ್ವ ಪತನದ ಜೊತೆಜೊತೆಗೆ ಹೆಣ್ಣಿನ ನೈತಿಕತೆಯ ವಿಜಯ ದಾಖಲಿಸುವ ಗುರುತುಗಳೇ ಕಾಣಸಿಗುತ್ತವೆ.

ಇದನ್ನೂ ಓದಿ
ಅಂಕಪರದೆ: ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಇಂದು ಪ್ರದರ್ಶನ
Theatre : ಅಂಕಪರದೆ; ‘ನವೋದಯ’ ತಂಡದಿಂದ ಮೇ5ರಂದು ‘ಅಯೋಧ್ಯಾ ಕಾಂಡ’ ಪ್ರದರ್ಶನ
Theatre: ಅಂಕಪರದೆ; ಭಿಕ್ಷಾಟನೆಯಿಂದ ಹೋರಾಟದವರೆಗೆ, ಇದು ‘ಅಕ್ಕಯ್’ ನಡೆದ ಹಾದಿ
New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು

“ಸತ್ಯನಾಪುರದ ಸಿರಿ” ಎಂಬ ಸಿರಿಕಥೆ ಹೆಣ್ಣು ಪ್ರಪಂಚದ ಒಳಕಥೆ. ಗಂಡು ಅಹಂಗೆ ಕನ್ನಡಿ ಹಿಡಿದ ಕಥೆ. ಶತಶತಮಾನಗಳ ಹಿಂದೆ ಬದುಕಿದ ಹೆಣ್ಣು ಹುಟ್ಟಿದ ಮನೆ, ಸೇರಿದ ಮನೆಯಲ್ಲಿ ಪರಂಪರಾಗತವಾಗಿ ಊರಿದ್ದ ನಿಯಮಗಳನ್ನು ಉಲ್ಲಂಘಿಸಿ ಹೊಸ ಮೌಲ್ಯಗಳಿಗೆ ನಾಂದಿ ಹಾಡುತ್ತಾಳೆ. 1 ತಾಸು 20 ನಿಮಿಷದ ಏಕವ್ಯಕ್ತಿ ಪ್ರಸ್ತುತಿ ತುಳು ಭೂಮಿ ಹೆಣ್ಣಿನ ಜೊತೆಗೆ ಹೆಣ್ಣು ಜೀವಗಳ ಬದುಕಿನ ಸಂಕಟಗಳ ಅನಾವರಣ.

ಮೂಲಕಾದಂಬರಿ : ಎನ್. ವಿ. ರಾವ್
ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್
ಪ್ರಸ್ತುತಿ : ಅಮೋಘ ರಂಗತಂಡ ಉಡುಪಿ
ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ, ಮೇಖ್ರಿ ವೃತ್ತದ ಹತ್ತಿರ, ಬೆಂಗಳೂರು
ದಿನಾಂಕ ಮತ್ತು ಸಮಯ: ಮೇ 15 ಭಾನುವಾರ ಸಂಜೆ 6
ಹಾಗೂ
ಸ್ಥಳ: ಕಪ್ಪಣ್ಣ ಅಂಗಳ, ಜೆ.ಪಿ.ನಗರ ಮೊದಲ ಹಂತ, ಬೆಂಗಳೂರು
ದಿನಾಂಕ ಮತ್ತು ಸಮಯ : ಮೇ 16 ಸೋಮವಾರ ಸಂಜೆ 6.30

ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

Published On - 5:57 pm, Sat, 14 May 22