ಅಂಕಪರದೆ: ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಇಂದು ಪ್ರದರ್ಶನ
A Midsummer Night’s Dream : ನನಗೆಸಗಿರುವ ಕೇಡು ಸ್ತ್ರೀಕುಲಕ್ಕೆ ಅಪಚಾರ, ನಾವು ಪ್ರೇಮಕ್ಕಾಗಿ ಕಾದಾಡುವಂತಿಲ್ಲ, ಗಂಡಸರ ಹಾಗೆ. ನಾವು ಪ್ರೀತಿಸಲ್ಪಡಲು ಹುಟ್ಟಿರುವೆವೇ ಹೊರತು ನಾವಾಗಿ ಪ್ರೀತಿಸುವುದಕ್ಕಲ್ಲ.
ಅಂಕಪರದೆ | Ankaparade : ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕ ಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿ ತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಹೆಲೆನಾಳಿಗೆ ಡಿಮಿಟ್ರಿಯಸ್ ಮೇಲೆ ಪ್ರೇಮ, ಆದರೆ ಹರ್ಮಿಯಾಳ ತಂದೆ ಈಜಿಯಸ್ ಅವಳ ಮದುವೆಯನ್ನು ಡಿಮಿಟ್ರಿಯಸ್ ಜೊತೆ ಮಾಡಲು ನಿಶ್ಚಯಿಸಿರುತ್ತಾನೆ. ಮದುವೆಯ ಸಂಭ್ರಮಾಚರಣೆಯಲ್ಲಿ ಆಡಬೇಕಾದ ನಾಟಕದ ತಾಲೀಮನ್ನು ಬಾಟಮ್ ಮತ್ತು ಅವನ ತಂಡ ಕಾಡಿನಲ್ಲಿ ನಡೆಸುತ್ತಿರುತ್ತದೆ. ಇದೇ ವೇಳೆಯಲ್ಲಿ ಕಿನ್ನರಲೋಕದ ಒಬೆರಾನ್ ಮತ್ತು ಟೈಟಾನಿಯ ಮಧ್ಯೆ ವಾಗ್ವಾದ ಉಂಟಾಗುತ್ತದೆ. ಇದರ ಭಾಗವಾಗಿ ಒಬೆರಾನ್ ತನ್ನ ಸೇವಕ ಪಕ್ ಎಂಬುವನನ್ನು ರಹಸ್ಯ ನಿಯೋಜನೆಯೊಂದಕ್ಕೆ ಕಳುಹಿಸುತ್ತಾನೆ. ಮೊದಲೇ ಗೊಂದಲದಲ್ಲಿದ್ದ ಮದುವೆ ಮನೆಯ ಪ್ರೇಮಿಗಳು, ಪಕ್ ಗೊತ್ತಿಲ್ಲದೆ ಮಾಡುವ ಒಂದು ತಪ್ಪಿನಿಂದಾಗಿ ಇನ್ನೂ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ತಾನು ಮಾಡಿದ ತಪ್ಪನ್ನು ಪಕ್ ಸರಿಪಡಿಸಿದ ಮೇಲೆ ಎಲ್ಲಾ ಸುಖಾಂತ್ಯವಾಗಿ ಜೋಡಿಗಳು ಒಂದಾಗುತ್ತಾರೆ.
ಡೆಮಿಟ್ರಿಯಸ್: ಬೆನ್ನಟ್ಟಿ ಬರಬೇಡ ನಾ ನಿನ್ನ ಪ್ರೀತಿಸುವುದಿಲ್ಲ, ಚೆಲುವೆ ಹರ್ಮಿಯ ಮತ್ತು ಲೈಸ್ಯಾಂಡರ್ ಎಲ್ಲಿ? ಒಬ್ಬಳನ್ನು ನಾನು ಕೊಲ್ಲುತ್ತಿದ್ದರೆ, ಮತ್ತೊಬ್ಬಳು ನನ್ನ ಕೊಂದಿದ್ದಾಳೆ. ಅವರು ಕದ್ದು ಕಾಡಿಗೆ ಓಡಿದ್ದನ್ನ ನೀನು ತಿಳಿಸಿದ್ದಕ್ಕೆ; ನನ್ನ ಮೆಚ್ಚಿನ ಹರ್ಮಿಯಳನ್ನ ಕಾಣದೆ ಈ ಕಗ್ಗಾಡಿನಲ್ಲಿ ಹುಚ್ಚನಂತಲೆದಿದ್ದೇನೆ. ನಡೆ ಇಲ್ಲಿಂದ, ಮತ್ತೆಂದೂ ಹಿಂಬಾಲಿಸಿ ಬರಬೇಡ.
ಹೆಲೆನ: ಡೆಮಿಟ್ರಿಯಸ್. ನನಗೆಸಗಿರುವ ಕೇಡು ಸ್ತ್ರೀಕುಲಕ್ಕೆ ಅಪಚಾರ, ನಾವು ಪ್ರೇಮಕ್ಕಾಗಿ ಕಾದಾಡುವಂತಿಲ್ಲ, ಗಂಡಸರ ಹಾಗೆ. ನಾವು ಪ್ರೀತಿಸಲ್ಪಡಲು ಹುಟ್ಟಿರುವೆವೇ ಹೊರತು ನಾವಾಗಿ ಪ್ರೀತಿಸುವುದಕ್ಕಲ್ಲ. ನಿನ್ನ ಬೆಂಬತ್ತಿ ಬರುತ್ತೇನೆ. ಅತಿಯಾಗಿ ಪ್ರೇಮಿಸಿದ ತೋಳುಗಳಲ್ಲೇ ನನ್ನ ಬಾಳ ಕೊನೆಕಂಡು ಈ ನರಕಯಾತನೆಯನ್ನೆ ಸ್ವರ್ಗ ಸುಖವಾಗಿಸುತ್ತೇನೆ.
ಇಲ್ಲೇ ಓದುತ್ತ ಕುಳಿತರೆ ಹೇಗೆ? ಈ ನಾಟಕ ನೋಡಲು ಬಂದುಬಿಡಿ.
ಮೂಲ : ವಿಲಿಯಂ ಶೇಕ್ಸ್ಪಿಯರ್ ಕನ್ನಡಕ್ಕೆ : ಡಾ. ಕೆ. ಎಸ್. ನಿಸಾರ್ ಅಹಮ್ಮದ್ ನಿರ್ಮಾಣ : ರಂಗವಲ್ಲಿ ಬೆಳಕು, ವಿನ್ಯಾಸ ಹಾಗೂ ನಿರ್ದೇಶನ: ಜೀವನ್ ಕುಮಾರ್ ಹೆಗ್ಗೋಡು ವಸ್ತ್ರ ವಿನ್ಯಾಸ : ಬಿ.ಎನ್. ಶಶಿಕಲಾ ನೃತ್ಯ ಹಾಗೂ ಸಹ ನಿರ್ದೇಶನ: ಕಾರ್ತಿಕ್ ಉಪಮನ್ಯು ರಂಗಸಜ್ಜಿಕೆ, ಪರಿಕರ, ಪ್ರಸಾದನ: ಮಂಜುನಾಥ್ ಕಾಚಕ್ಕಿ ಸಹಾಯ: ಪುರುಷೋತ್ತಮ ಕಾಕಂಬಿ ಹಿನ್ನೆಲೆ ಸಂಗೀತ ನಿರ್ವಹಣೆ: ಮಂಜು ಮಂಗಲ ಸಂಗೀತ ಸಾಂಗತ್ಯ: ಚಿರಂತ್ ಎನ್. ಅಮೋಘ್, ಶಾಂತಕುಮಾರ್ ರಂಗ ನಿರ್ವಹಣೆ: ಕು. ಮಾನಸ ಮತ್ತು ಕು. ಸ್ನೇಹಾ ನಿರ್ಮಾಣ ನಿರ್ವಹಣೆ: ರವಿಪ್ರಸಾದ್ ಹೆಚ್.ಆರ್. ಮತ್ತು ರಾಜೇಶ್ ಬಿ. ಸಮಯ : ಮಧ್ಯಾಹ್ನ 3.30 ಮತ್ತು ಸಂಜೆ 7.30 ಸ್ಥಳ : ರಂಗಶಂಕರ
ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com