Yakshagana Odissi : ‘ಶಕ್ತಿ 1.0’ ನಾಳೆ ವ್ಯೋಮದಲ್ಲಿ ರಂಗರಥದಿಂದ ಯಕ್ಷಗಾನ ಒಡಿಸ್ಸಿ ಜುಗಲ್​ಬಂದಿ

|

Updated on: Nov 28, 2021 | 9:12 AM

Art : ‘ಯಾವುದಾದರೂ ಹೊಸತೊಂದು ಹುಟ್ಟಬೇಕಾದರೆ ಎರಡು ವಿರುದ್ಧ ಸಂಗತಿಗಳ ಹೊಂದಾಣಿಕೆ, ಸಂವಹನದಿಂದ ಮಾತ್ರ ಸಾಧ್ಯ. ಈ ವಿಚಾರ ನಮ್ಮ ದೈನಂದಿನ ಬದುಕಿಗೂ ಅನ್ವಯಿಸುತ್ತದೆ. ಗಂಡುಹೆಣ್ಣಿನ ಪ್ರಾಕೃತಿಕ ಸಾಮರಸ್ಯ, ತಾತ್ವಿಕ ಸಂಯೋಗವೇ ‘ಅರ್ಧನಾರೀಶ್ವರ’ ಪರಿಕಲ್ಪನೆಯ ಸಂಕೇತ. ಇದು ಲಿಂಗಾತೀತ ಕಲ್ಪನೆ. ಈ ವಿಲೀನ ಪ್ರಕ್ರಿಯೆ, ಎರಡು ಅಂಶಗಳು ಚಲನೆಯಲ್ಲಿದ್ದಾಗ ಮಾತ್ರ ಸಾಧ್ಯ.’ ಆಸಿಫ್ ಕ್ಷತ್ರಿಯ

Yakshagana Odissi : ‘ಶಕ್ತಿ 1.0’ ನಾಳೆ ವ್ಯೋಮದಲ್ಲಿ ರಂಗರಥದಿಂದ ಯಕ್ಷಗಾನ ಒಡಿಸ್ಸಿ ಜುಗಲ್​ಬಂದಿ
ಯಕ್ಷಗಾನ ಪಾತ್ರಧಾರಿ ಶ್ವೇತಾ ಶ್ರೀನಿವಾಸ ಮತ್ತು ಒಡಿಸ್ಸಿ ನೃತ್ಯ ಕಲಾವಿದೆ ಸಹನಾ ಆರ್. ಮಯ್ಯ
Follow us on

Yakshagana-Odissi Jugalbandi : ನಮ್ಮ ಈ ಶಕ್ತಿ ನೃತ್ಯನಾಟಕ ಶೃಂಖಲೆಯ ಉದ್ದೇಶವೇ,ಇಂತಹ ತಾತ್ವಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯನ್ನು ಸಮಕಾಲೀನ ದೃಷ್ಟಿಕೋನಗಳಲ್ಲಿ ಅರ್ಥೈಸಿ, ನಮ್ಮ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ರಂಜನೀಯವಾಗಿ ಪ್ರಸ್ತುತಪಡಿಸುವುದು. ಈ ಶೃಂಖಲೆಯ ಚೊಚ್ಚಲ ಪ್ರಸ್ತುತಿಯೇ ‘ಶಕ್ತಿ 1.0- Shakthi 1.0’. ಇದರಲ್ಲಿ ‘ಅರ್ಧನಾರೀಶ್ವರ’ ಸ್ತೋತ್ರದ ಮುಖಾಂತರ ಎರಡು ವಿರುದ್ಧ ಪ್ರಜ್ಞೆಗಳ ಸಂಯೋಗದ ಪ್ರಾಮುಖ್ಯವನ್ನು ಹೇಳಲಾಗಿದೆ. ಬ್ರಹ್ಮಾಂಡದ ಸೃಷ್ಟಿಯಾಗಿದ್ದೇ ಎರಡು ವಿರುದ್ಧ ಶಕ್ತಿಗಳ ಸಂಘರ್ಷದಿಂದ. ಪ್ರಕೃತಿಯ ‘ವಿರುದ್ಧ ಚೈತನ್ಯ’ವೇ ‘ಪುರುಷ’. ಶಕ್ತಿಯ ‘ವಿರುದ್ಧ ಚೈತನ್ಯ’ವೇ ‘ಶಿವ’. ಈ ನೃತ್ಯನಾಟಕದಲ್ಲಿ ‘ಆತ್ಮಲಿಂಗ ಪ್ರಸಂಗ’ವೂ ಒಂದು. ಮಾನವನ ವ್ಯಾಮೋಹ, ದುರಾಸೆ ಮತ್ತು ಅಸಮಂಜಸ ಆಕಾಂಕ್ಷೆಗಳ ಕುರಿತಾದ ಅನೇಕ ಪ್ರಸಂಗಗಳನ್ನು, ಕಥಾನಕಗಳನ್ನು ನಮ್ಮ ಪುರಾಣಗಳನ್ನು, ಕಥಾನಕಗಳನ್ನು ನಮ್ಮ ಪುರಾಣಗಳಲ್ಲಿ ಆತ್ಮಲಿಂಗವೂ ಒಂದು. ಲಂಕಾಧಿಪತಿ ದಶಕಂಠನು, ತನ್ನ ತಾಯಿಯ ಆಕಾಂಕ್ಷೆಯನ್ನು ಪೂರೈಸಲಿಕ್ಕಾಗಿ ಶಿವನ ಆತ್ಮಲಿಂಗವನ್ನು ಪಡೆಯಲು ಮಾಡುವ ಹರಸಾಹಸವೇ ಈ ಕಥೆಯ ಭಾಗ.
ಆಸಿಫ್ ಕ್ಷತ್ರಿಯ, ನಿರ್ದೇಶಕ, ರಂಗರಥ (ಭಾರತೀಯ ಪ್ರದರ್ಶನ ಕಲಾಸಂಸ್ಥೆ), ಬೆಂಗಳೂರು

*

ಶಕ್ತಿ ೧.೦, ಒಂದು ಪ್ರಾಯೋಗಿಕ ನೃತ್ಯನಾಟಕ. ‘ಶಕ್ತಿ’, ಈ ಸೃಷ್ಟಿಯನ್ನು ಸಾಕಾರಗೊಳಿಸುವ, ನಿಯಂತ್ರಿಸುವ, ಪೋಷಿಸುವ ಮತ್ತು ನಾಶಗೊಳಿಸುವ ಒಂದು ಅಗೋಚರ ಚೈತನ್ಯ. ನಾವು ನಿರಂತರವಾಗಿ ವಿವಿಧ ಚೈತನ್ಯಗಳಿಂದ ಸುತ್ತುವರಿಯಲ್ಪಟ್ಟಿರುತ್ತೇವೆ. ಇಂತಹ ಚೈತನ್ಯಗಳ ಪ್ರಭೆಯಲ್ಲಿ ಕಲಾವಿದರು ಮತ್ತು ಪ್ರೇಕ್ಷಕರು, ಏಕಕಾಲಕ್ಕೆ ಮಿಂದು, ಒಂದು ವಿಶಿಷ್ಟ ಅನುಭೂತಿಯನ್ನು ಪಡೆಯಲೋಸುಗ, ಈ ‘ಶಕ್ತಿ’ಯು ವಿನ್ಯಾಸಗೊಂಡಿದೆ. ಈ ವಿವಿಧ ಚೈತನ್ಯಗಳು ವಿಲೀನಗೊಂಡು ಉದ್ಭವಿಸುವ ಶಕ್ತಿಯೇ ಪರಮ-ಆತ್ಮ. ಇದೇ ಅರಿವು. ಇದೇ ಜಾಗೃತಿ. ಈ ಶಕ್ತಿ. ನಮ್ಮನ್ನು ಆವರಿಸಿ, ಆಲಂಗಿಸಿ ಕೊನೆಗೆ ತನ್ನಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ.

ಈ ನೃತ್ಯನಾಟಕವು ತಾಯಿ (ಪ್ರಕೃತಿ), ಬದುಕು (ಅಸ್ತಿತ್ವ), ಕರ್ಮ (ಕ್ರಿಯೆ) ಮತ್ತು ಮೋಕ್ಷ (ವಿಲೀನ) ಈ ನಾಲ್ಕು ಸೃಷ್ಟಿಯ ಮೂಲಾಧಾರಗಳ ಬಗ್ಗೆ ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. ಪೂರ್ವ ಭಾರತದ ಶಾಸ್ತ್ರೀಯ ನೃತ್ಯಪ್ರಕಾರ ಒಡಿಸ್ಸಿ ಹಾಗೂ ಕರ್ನಾಟಕದ ಶಾಸ್ತ್ರೀಯ ಜಾನಪದ ನೃತ್ಯಪ್ರಕಾರ ಯಕ್ಷಗಾನದ ಜುಗಲ್​ಬಂದಿಯಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಈ ಪ್ರಾಯೋಗಿಕ ನೃತ್ಯನಾಟಕ, ವಿಶೇಷವಾಗಿ ವಿನ್ಯಾಸಗೊಂಡಿದೆ. ಇದರ ರಂಗವಿನ್ಯಾಸವು ವಿಶೇಷವಾಗಿದ್ದು, ವೃತ್ತಾಕಾರ ರಂಗಸ್ಥಳ ಹೊಂದಿದೆ. ರಂಗಸ್ಥಳದಲ್ಲಿ ಎರಡು ವೃತ್ತಗಳಿಂದ ಮೂರುಭಾಗಗಳನ್ನಾಗಿಸಿ, ಈ ವೃತ್ತದೊಳಗೆ ನೃತ್ಯ ನಡೆಯುತ್ತದೆ. ಇದರ ಸುತ್ತಲೂ ಕೂಡುವ ಪ್ರೇಕ್ಷಕರಿಗೆ ನೃತ್ಯನಾಟಕದ ಎಲ್ಲ ಭಾವ ಭಂಗಿಗಳು ಕಾಣಿಸುವ ಹಾಗೆ ಚಲನವಲನಗಳನ್ನು ಸಂಯೋಜಿಸಲಾಗಿದೆ.

ಒಳಗಿನ ಸಣ್ಣ ವೃತ್ತದ ಕೇಂದ್ರಬಿಂದು ಆತ್ಮವನ್ನು ಪ್ರತಿನಿಧಿಸಿದರೆ, ಇದರ ಹೊರಗಡೆ ಮತ್ತು ಎರಡನೆಯ ವೃತ್ತದ ಒಳಗಡೆ ಇರುವ ಸ್ಥಳವು ಮನಸ್ಸನ್ನು ಪ್ರತಿನಿಧಿಸುತ್ತದೆ. ಹೊರಗಿನ ವೃತ್ತದ ಆಚೆ ಇರುವ (ಪ್ರೇಕ್ಷಕರು ಕೂರುವ) ಸ್ಥಳ ದೇಹವನ್ನು ಪ್ರತಿನಿಧಿಸುತ್ತದೆ. ದೇಹವು ಭೌತಿಕ ಜಗತ್ತು ಅಥವಾ ಬದುಕನ್ನು, ಮನಸ್ಸು ಕರ್ಮ ಅಥವಾ ಕ್ರಿಯೆಗಳನ್ನು ಬಿಂಬಿಸಿದರೆ, ಆತ್ಮವು ಪ್ರಜ್ಞೆ ಮತ್ತು ಅರಿವನ್ನು ಬಿಂಬಿಸುತ್ತದೆ. ನಮ್ಮ ಈ ನೃತ್ಯನಾಟಕದಲ್ಲಿ ಬರುವ ಚಲನೆಯ ಸಂಯೋಜನೆ, ನಮ್ಮೆಲ್ಲರಿಗೂ ಅವಶ್ಯವಾಗಿರುವ ಆಂತರಿಕ ಪಯಣದ ಅನುಭವವನ್ನು ನೀಡುತ್ತದೆ. ಭೌತಿಕ ಪ್ರಪಂಚದಿಂದ ನಮ್ಮ ದೇಹ, ನಮ್ಮ ದೇಹದಿಂದ ನಮ್ಮ ಮನಸ್ಸು, ಮನಸ್ಸಿನಿಂದ ನಮ್ಮ ಆತ್ಮದ ಕಡೆಗೆ ಇರುವ ಪಯಣವೇ ‘ಆಂತರಿಕ ಪಯಣ’. ಆಂತರಿಕ ಪಯಣವೆಂದರೆ ನಮ್ಮ ಅಸ್ತಿತ್ವದ ಅಂತರಾಳಕ್ಕೆ ಇಳಿಯುವುದು. ಇದರ ಆಳಕ್ಕೆ ಇಳಿದಷ್ಟು ನಾವು ಆಧ್ಯಾತ್ಮದ ಶಿಖರವನ್ನೇರುತ್ತೇವೆ. ಇದೆಲ್ಲ, ನಮ್ಮ ಪ್ರಪಂಚ, ಮಾನವ ಸಂವೇದನೆಗಳು, ಮಾನವ ಸಂಬಂಧಗಳು, ನಮ್ಮ ಹುಟ್ಟಿನ ಉದ್ದೇಶ- ಇವುಗಳನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಅರ್ಥಮಾಡಿಕೊಳ್ಳುವುದಾಗಿದೆ.

ವೃತ್ತದೊಳಗಣ ವೃತ್ತದೊಳಗೆ ಸಹನಾ ಆರ್ ಮಯ್ಯ, ಶ್ವೇತಾ ಶ್ರೀನಿವಾಸ್

ನಮ್ಮ ಈ ಶಕ್ತಿ ನೃತ್ಯನಾಟಕ ಶೃಂಖಲೆಯ ಉದ್ದೇಶವೇ,ಇಂತಹ ತಾತ್ವಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯನ್ನು ಸಮಕಾಲೀನ ದೃಷ್ಟಿಕೋನಗಳಲ್ಲಿ ಅರ್ಥೈಸಿ, ನಮ್ಮ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ರಂಜನೀಯವಾಗಿ ಪ್ರಸ್ತುತಪಡಿಸುವುದು. ಈ ಶೃಂಖಲೆಯ ಚೊಚ್ಚಲ ಪ್ರಸ್ತುತಿಯೇ ‘ಶಕ್ತಿ 1.0’. ಇದರಲ್ಲಿ ‘ಅರ್ಧನಾರೀಶ್ವರ’ ಸ್ತೋತ್ರದ ಮುಖಾಂತರ ಎರಡು ವಿರುದ್ಧ ಪ್ರಜ್ಞೆಗಳ ಸಂಯೋಗದ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ಬ್ರಹ್ಮಾಂಡದ ಸೃಷ್ಟಿಯಾಗಿದ್ದೇ ಎರಡು ವಿರುದ್ಧ ಶಕ್ತಿಗಳ ಸಂಘರ್ಷದಿಂದ. ಪ್ರಕೃತಿಯ ‘ವಿರುದ್ಧ ಚೈತನ್ಯ’ವೇ ‘ಪುರುಷ’. ಶಕ್ತಿಯ ‘ವಿರುದ್ಧ ಚೈತನ್ಯ’ವೇ ‘ಶಿವ’.

ಯಾವುದಾದರೂ ಹೊಸತೊಂದು ಹುಟ್ಟಬೇಕಾದರೆ ಎರಡು ವಿರುದ್ಧ ಸಂಗತಿಗಳ ಹೊಂದಾಣಿಕೆ ಮತ್ತು ಸಂವಹನದಿಂದ ಮಾತ್ರ ಸಾಧ್ಯ. ಈ ವಿಚಾರ ನಮ್ಮ ದೈನಂದಿನ ಬದುಕಿಗೂ ಅನ್ವಯಿಸುತ್ತದೆ. ಗಂಡುಹೆಣ್ಣಿನ ಪ್ರಾಕೃತಿಕ ಸಾಮರಸ್ಯ ಮತ್ತು ತಾತ್ವಿಕ ಸಂಯೋಗವೇ ‘ಅರ್ಧನಾರೀಶ್ವರ’ ಪರಿಕಲ್ಪನೆಯ ಸಂಕೇತ. ಇದು ಲಿಂಗಾತೀತ ಕಲ್ಪನೆ. ಈ ವಿಲೀನ ಪ್ರಕ್ರಿಯೆ, ಎರಡು ಅಂಶಗಳು ಚಲನೆಯಲ್ಲಿದ್ದಾಗ ಮಾತ್ರ ಸಾಧ್ಯ. ಈ ಚಲನೆ ವೃತ್ತಾಕಾರದ್ದು. ಯಾವತ್ತೂ ವೃತ್ತಾಕಾರದ ಚಲನೆಯಿದ್ದರೆ ಮಾತ್ರವೃತ್ತದ ಕೇಂದ್ರಬಿಂದುವಿನಲ್ಲಿ ಶಕ್ತಿಯ ಅಥವಾ ಚೈತನ್ಯದ ಉದ್ಭವವಾಗುತ್ತದೆ. ಈ ವೃತ್ತಾಕಾರದ ಚಲನೆ, ಬದುಕಿನಿಂದ ಕರ್ಮದೆಡೆಗೆ, ಕರ್ಮದಿಂದ ಮೋಕ್ಷದೆಡೆಗೆ, ಮೋಕ್ಷದಿಂದ ಪುನಃ ಬದುಕಿನೆಡೆಗೆ ಇರುತ್ತದೆ.

ಈ ಶಕ್ತಿ 1.0 ನೃತ್ಯನಾಟಕದಲ್ಲಿ ‘ಆತ್ಮಲಿಂಗ ಪ್ರಸಂಗ’ವೂ ಒಂದು. ಮಾನವನ ವ್ಯಾಮೋಹ, ದುರಾಸೆ ಮತ್ತು ಅಸಮಂಜಸ ಆಕಾಂಕ್ಷೆಗಳ ಕುರಿತಾದ ಅನೇಕ ಪ್ರಸಂಗಗಳನ್ನು, ಕಥಾನಕಗಳನ್ನು ನಮ್ಮ ಪುರಾಣಗಳನ್ನು, ಕಥಾನಕಗಳನ್ನು ನಮ್ಮ ಪುರಾಣಗಳಲ್ಲಿ ಆತ್ಮಲಿಂಗವೂ ಒಂದು. ಲಂಕಾಧಿಪತಿ ದಶಕಂಠನು, ತನ್ನ ತಾಯಿಯ ಆಕಾಂಕ್ಷೆಯನ್ನು ಪೂರೈಸಲಿಕ್ಕಾಗಿ ಶಿವನ ಆತ್ಮಲಿಂಗವನ್ನು ಪಡೆಯಲು ಮಾಡುವ ಹರಸಾಹಸವೇ ಈ ಕಥೆಯ ಭಾಗ.

ರಸಾನುಭವದೊಳಗೆ ಮೀಯುತ್ತಿರುವ ಪ್ರೇಕ್ಷಕ ಗಣ

ಈ ನೃತ್ಯನಾಟಕದ ಪಾತ್ರಗಳು, ಭೌತಿಕ ಗೊಂದಲಗಳಲ್ಲಿ ಸಿಲುಕಿದಾಗ, ಅವು ನಡೆದಾಡುವ ಹೊರಗಿನ ವೃತ್ತದ ಅಂಚು, ವೈಚಾರಿಕತೆಗೆ ಒಳಭಾಗ ಮತ್ತು ಅರಿವು ಮೂಡಿದಾಗ ಸಂಚರಿಸುವ ಒಳವೃತ್ತದ ಒಳಭಾಗ, ಈ ಸಂಯೋಜನೆ, ನಾವು ಮೊದಲೇ ಹೇಳಿದ ಹಾಗೆ, ದೇಹದಿಂದ ಮನಸ್ಸು, ಮನಸ್ಸಿನಿಂದ ಆತ್ಮದ ಕಡೆಗೆ ಇರುವ ಆಂತರಿಕ ಪಯಣವನ್ನು ಸ್ಥೂಲವಾಗಿ ಸೂಚಿಸುತ್ತದೆ.

ಇದಲ್ಲದೇ, ಸುತ್ತಲೂ ಕೂಡುವ ಪ್ರೇಕ್ಷಕರ ರಸಾನುಭವದ ಓಜಸ್ಸು, ವೃತ್ತದೊಳಗಿನ ಕಲಾವಿದರನ್ನು ಭಾವಪರವಶರನ್ನಾಗಿಸಿದರೆ, ಕಲಾವಿದರ ಸಾತ್ವಿಕ ಅಭಿನಯ, ಪ್ರೇಕ್ಷಕರನ್ನು ಮನಸೂರೆಗೊಳಿಸುತ್ತದೆ. ಈ ಮೂಲಕ
ರಂಗರಥದ ಈ ‘ಆಂತರಿಕ ಪಯಣ’ದ ವಿಶೇಷ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು.

*

ದಿನಾಂಕ : 28.11.2021
ಸಮಯ : ಸಂಜೆ 7
ಅವಧಿ : 60 ನಿಮಿಷ
ಸ್ಥಳ : ವ್ಯೋಮ, ಆರ್ಟ್ ಸ್ಪೇಸ್​ ಅಂಡ್ ಸ್ಟುಡಿಯೋ, 3ನೇ ಹಂತ, ಜೆಪಿ ನಗರ, ಬೆಂಗಳೂರು
ಟಿಕೆಟ್ : https://in.bookmyshow.com/
ಮಾಹಿತಿಗೆ :  9448386776

ಇದನ್ನೂ ಓದಿ : Art With Heart : ಆನ್​ಲೈನ್​ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ’

Published On - 10:35 am, Sat, 27 November 21