Style Mantra : ‘ಹಲಗೆ ತಗಲಾಕಿಕೊಂಡು’ ಓಡಾಡುವ ನನ್ನ ಗ್ರಾಹಕರೇ ಈ ಹೊಸ ಕೈಕಸುಬನ್ನು ಕಲಿಸಿದ್ದಾರೆ
Art and Taste : “ಜೈಲಲ್ಲಿ ಕೈದಿಗಳಿಗೆ ಸ್ಲೇಟು ಕೊಟ್ಟಹಾಗೆ ಕಾಣೋದಿಲ್ವಾ ಇಷ್ಟು ದೊಡ್ಡ ಪೆಂಡೆಂಟ್?” ಅಂತ ಛೇಡಿಸಿದೆ. ಅದಕ್ಕೆ ಆ ಹುಡುಗಿ, “ಇದು ಈಗಿನ ಟ್ರೆಂಡ್. ಯಾವ ಥರದ ಚಿತ್ರ ಇರುವ ಎಷ್ಟು ದೊಡ್ಡ ಪೆಂಡೆಂಟ್ ಹಾಕ್ಕೊಳ್ತೀವೋ ನಾವು ಅಷ್ಟರ ಮಟ್ಟಿಗೆ ಬುದ್ದಿವಂತರು. ಕಲೆಯ ‘ಟೇಸ್ಟ್’ ಇರೋರು ಅಂತ ಗುರುತಿಸಿಕೊಳ್ತೀವಿ” ಅಂದಳು.
Style Mantra : ಬಹುಮುಖಿ ಸಂಸ್ಕೃತಿಯಲ್ಲಿ ಹರಿಯುವ ಎಲ್ಲದಕ್ಕೂ ಸಹಜ ಸೌಂದರ್ಯವಿದೆ. ವಿಚಾರ, ಕಥನ ಮತ್ತು ಸಾಕಷ್ಟು ಸೂಕ್ಷ್ಮ ಸಂಗತಿಗಳಿಂದ ಕೂಡಿದ ಒಳನೋಟಗಳಿವೆ. ಹರಿವೆಂದ ಮೇಲೆ ಕೇಳಬೇಕೆ? ಅದೇನಿದ್ದರೂ ಒಳಸೆಲೆಯಿಂದಲೇ ಒಸರುವಂಥದ್ದು. ಒಸರುತ್ತಲೇ ತನ್ನ ಗಮ್ಯವನ್ನು ಸ್ಪರ್ಶಿಸುವಂಥದ್ದು. ಈ ಆಂತರ್ಯದ ಸ್ಪರ್ಶ ನಮ್ಮ ಹೊರಾವರಣವನ್ನು ಪ್ರಭಾವಿಸದೇ ಇರದು. ಹೀಗೆ ಪ್ರಭಾವಿಸಿದ್ದು ಪ್ರತಿಫಲನಗೊಳ್ಳದೇ ಇರದು. ಇದು ನಮ್ಮ ಊಟ, ನೋಟದಿಂದ ಹಿಡಿದು ನಾವು ಧರಿಸುವ ಒಂದೊಂದು ಉಡುಗೆ, ತೊಡುಗೆ, ಆಭರಣ, ಅಲಂಕಾರ, ಶೃಂಗಾರಕ್ಕೆ ಸಂಬಂಧಿಸಿದ ಸಾಧನ… ಹೀಗೆ ವೈಯಕ್ತಿಕದಿಂದ ಗೃಹಾಲಂಕಾರಗಳ ತನಕವೂ ಅನೇಕ ಅರ್ಥವಿನ್ಯಾಸಗಳಲ್ಲಿ ಲಯ ಸಾಧಿಸುತ್ತಾ ಹೋಗುತ್ತವೆ. ನಿಮ್ಮ ಆಯ್ಕೆ, ಅಭಿರುಚಿಯ ಮೂಲಕ ನೀವು ಈ ಅಂಕಣದಲ್ಲಿ ಪಾಲ್ಗೊಳ್ಳಬಹುದು. ಇಂದಿನಿಂದ ಶುರುವಾಗುವ ‘ಸ್ಟೈಲ್ ಮಂತ್ರ’ ಅಂಕಣಕ್ಕೆ ಕಳಿಸುವ ಬರಹಗಳ ಪದಮಿತಿ ಸುಮಾರು 400-500. ಜೊತೆಗೆ ಸಂಬಂಧಿಸಿದ ಮೂರು ನಾಲ್ಕು ಫೋಟೋ, ನಾಲ್ಕು ಸಾಲಿನ ಪರಿಚಯ ಮತ್ತು ಮೊಬೈಲ್ ನಂಬರ್ ಇರಲಿ. ಆರಂಭದಲ್ಲಿ ಅಂಕಣದ ಹೆಸರನ್ನು ಬರೆಯಲು ಮರೆಯದಿರಿ. ನೀವು ಬರೆದಾಗೆಲ್ಲ ಈ ಅಂಕಣ ಪ್ರಕಟವಾಗುತ್ತದೆ. ಮೇಲ್ : tv9kannadadigital@gmail.com
ಕವಿ, ಲೇಖಕಿ, ಕಲಾವಿದೆ ಚೇತನಾ ತೀರ್ಥಹಳ್ಳಿ ಅಧ್ಯಾತ್ಮದ ಬೆರಳು ಹಿಡಿದು ಹೊರಟಾಗ ಅಲಂಕಾರಕ್ಕೆ ಸಂಬಂಧಿಸಿದ ಅಭಿರುಚಿ ಹೇಗೆ ‘ಅರ್ಥ’ದೆಡೆಯೂ ದಾರಿ ತೋರುತ್ತಿದೆ ಎನ್ನುವುದನ್ನಿಲ್ಲಿ ಹಂಚಿಕೊಂಡಿದ್ದಾರೆ.
ನನಗೊಂದು ಸೂಫಿ ಪೆಂಡೆಂಟ್ ಬೇಕಿತ್ತು. ಎಲ್ಲಿ ಹುಡುಕಿದರೂ ವಿರ್ಲಿಂಗ್ ಸೂಫಿಯ ಒಂದೇ ಒಂದು ಒಳ್ಳೆ ಪೆಂಡೆಂಟ್ ಸಿಗಲಿಲ್ಲ. ಸಿಕ್ಕ ಕೆಲವು ವಿದೇಶಿ ಆನ್ ಲೈನ್ ಸ್ಟೋರುಗಳಲ್ಲಿದ್ದವು ಮತ್ತು ಡಾಲರ್ಗಟ್ಟಲೆ ಬೆಲೆಯವು. ಒಂದಿಬ್ಬರಲ್ಲಿ ವಿಚಾರಿಸಿ, ನಿರಾಶೆಗೊಂಡು ಕೊನೆಗೆ ಹೇಗೂ ಚಿತ್ರ ಬರೀಲಿಕ್ಕೆ ಬರತ್ತೆ, ಕ್ರಾಫ್ಟ್ ಮಾಡ್ಲಿಕ್ಕೂ ಬರತ್ತೆ, ನನಗೆ ನಾನೇ ಒಂದು ಪೆಂಡೆಂಟ್ ಮಾಡಿಕೊಂಡುಬಿಡುವಾ ಅನಿಸಿತು. ಅದರ ಪರಿಣಾಮವೇ ಈ ಸಾಲು ಸಾಲು ‘ಹ್ಯಾಂಡ್ ಮೇಡ್’ ಸರಗಳು ಮತ್ತು ವಾಲ್ ಹ್ಯಾಂಗಿಂಗ್ಗಳು. ಮೊದಲ ಸಲ ನನಗಾಗಿ ಸರ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಾಕಿದಾಗ “ನನಗೂ ಬೇಕು” ಅನ್ನುವ ಬೇಡಿಕೆ ಬಂತು. ಅದಕ್ಕೊಂದು ಬೆಲೆ ನಿಗದಿ ಮಾಡಿ ಸೇಲ್ ಮಾಡಿದ ಮೇಲೆ ಮತ್ತಷ್ಟು ಬೇಡಿಕೆ ಬರಲು ಶುರುವಾಯ್ತು. ಈಗ ಇದೊಂದು ಉಪಕಸುಬಾಗಿ ಸದ್ಯದ ಮಟ್ಟಿಗೆ ಮುಂದುವರಿದಿದೆ.
ನಾನು ಸರ, ವಾಲ್ ಹ್ಯಾಂಗಿಂಗ್, ಕೀ ಚೈನ್ ಮಾಡಲು ಬಳಸೋದು ಜ್ಯೂಟ್, ಚಿಕ್ಕಚಿಕ್ಕ ಕಾರ್ಡ್ ಬೋರ್ಡ್ ಹಲಗೆಗಳು ಮತ್ತು ಚಿತ್ರ ಬಿಡಿಸಲು ಮಾರ್ಕರ್ ಪೆನ್ ಹಾಗೂ ಫೆವಿಕ್ರಿಲ್ ಪೇಂಟ್. ಹಾಗೂ ಕೆಲವೊಮ್ಮೆ ಹೆಚ್ಚಿನ ಅಲಂಕಾರಕ್ಕೆ ಮರ ಅಥವಾ ದಾರದ ಮಣಿಗಳು. ಹಿಂಬದಿಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಸರ ಬಿಗಿಯಲು ‘ಹುಕ್’ ಆಗಲೀ, ‘ಡೋರಿ’ಯನ್ನಾಗಲೀ ಇಡೋದಿಲ್ಲ. ಸಾಧ್ಯವಾದಷ್ಟೂ ಮಿನಿಮಲ್ ಆಗಿ ಮಾಡಬೇಕು ಅನ್ನೋದು ಒಂದು ಉದ್ದೇಶವಾದರೆ, ಈ ವಸ್ತುಗಳನ್ನು ಕೊಳ್ಳುವವರು ಕೊಂಡಿದ್ದನ್ನು ಹೇಗೆ ಬೇಕಾದರೂ ಬಳಸುವ ಅವಕಾಶ ಇರಬೇಕು ಅನ್ನೋದು ಮತ್ತೊಂದು ಉದ್ದೇಶ. ಕುತ್ತಿಗೆಗೆ ಹಾಕಿಕೊಂಡು ಗಂಟು ಬಿಗಿದರೆ ಸರ, ಗಿಡ್ಡ ಚೈನಿಗೆ ಸಿಗಿಸಿದರೆ ಕೀ ಚೈನ್, ಕಾರಲ್ಲಿ ನೇತುಹಾಕಿದರೆ ಚಾರ್ಮ್ಸ್, ಟ್ರೈಪಾಡಿನ ಮೇಲೆ ಇಟ್ಟರೆ ಶೋ ಪೀಸ್, ಗೋಡೆಗೆ ನೇತು ಹಾಕಿದರೆ ಹ್ಯಾಂಗಿಂಗ್!
ಚೇತನಾ ಕವಿತೆ : Communal Clashes: ಕವಿತೆ ಅವಿತಿಲ್ಲ; ‘ಇದು ಇನ್ನೂ ಶುರುವಾತು, ದೇವರಿರುವ ಬೀದಿಗಳೆಲ್ಲ ಇನ್ನು ವಿಕೃತಿಯ ಕಪ್ಪೆಬಾವಿ!
ಹೌದು, ಗೋಡೆಗೂ ನೇತುಹಾಕಬಹುದಾದಷ್ಟು ದೊಡ್ಡ ಪೆಂಡೆಂಟಿನ ಸರಗಳಿವು. ನಾನು ಮೊದಲು ನನಗಾಗಿ ಮಾಡಿಕೊಂಡಿದ್ದು ಎರಡೂವರೆ ಇಂಚು ವ್ಯಾಸದ ರೌಂಡನೆಯ ಪೆಂಡೆಂಟ್. ನಂತರದಲ್ಲಿ ಹೊಸ ಕಾಲದ ಹುಡುಗಿಯರು “ಪೆಂಡೆಂಟ್ ಚೂರು ದೊಡ್ಡದಿರಲಿ” ಅಂದರು. ಒಬ್ಬರಂತೂ “4×4 ಚೌಕ ಪೆಂಡೆಂಟ್ ಮೇಲೆ ನೀವೇ ಬಿಡಿಸಿದ ಚಿತ್ರಹಾಕಿ ಸರ ಮಾಡಿಕೊಡ್ತೀರಾ?” ಕೇಳಿದರು! ಅವರಿಗೆ ನಾನು “ಜೈಲಲ್ಲಿ ಕೈದಿಗಳಿಗೆ ಸ್ಲೇಟು ಕೊಟ್ಟಹಾಗೆ ಕಾಣೋದಿಲ್ವಾ?” ಅಂತ ಛೇಡಿಸಿದೆ. ಅದಕ್ಕೆ ಆ ಹುಡುಗಿ ಜೋರಾಗಿ ನಗ್ತಾ, “ಇದು ಈಗಿನ ಟ್ರೆಂಡ್. ಯಾವ ಥರದ ಚಿತ್ರ ಇರುವ ಎಷ್ಟು ದೊಡ್ಡ ಪೆಂಡೆಂಟ್ ಹಾಕ್ಕೊಳ್ತೀವೋ ನಾವು ಅಷ್ಟರ ಮಟ್ಟಿಗೆ ಬುದ್ದಿವಂತರು. ಕಲೆಯ ‘ಟೇಸ್ಟ್’ ಇರೋರು ಅಂತ ಗುರುತಿಸಿಕೊಳ್ತೀವಿ” ಅಂದಳು. ನಾನೂ ಇದೊಂದು ಹೊಸ ಪ್ರಯೋಗ ಮಾಡೇಬಿಡೋಣ ಅಂತ ಮಾಡಿಕೊಟ್ಟೆ. ನೋಡಲಿಕ್ಕೆ ದೊಡ್ಡ ಅನಿಸಿದರೂ ಹಾಕಿಕೊಂಡವರು ಅದನ್ನು ಹೇಗೆ ‘ಕ್ಯಾರಿ’ ಮಾಡ್ತಾರೆ, ಯಾವ ಬಟ್ಟೆಯ ಮೇಲೆ ತೊಟ್ಟುಕೊಳ್ತಾರೆ ಅನ್ನೋದೂ ಮುಖ್ಯವೇ. ಆದರೂ ಈ ಹೊಸ ಪ್ರಯೋಗ (ನನ್ನಮಟ್ಟಿಗೆ ಹೊಸತು. ಇದು ಈಗಾಗಲೇ ಹಲವು ಪ್ರಸಿದ್ಧ ಬ್ರ್ಯಾಂಡ್ಗಳಲ್ಲಿ ಚಾಲ್ತಿಯಲ್ಲಿದೆ) ಒಂಥರಾ ಖುಷಿ ಕೊಟ್ಟಿದ್ದು ಹೌದು.
ಸದ್ಯದ ಬೇಡಿಕೆಯ ಪ್ರಕಾರ ದೊಡ್ಡ ಚೌಕ ಅಥವಾ ವೃತ್ತದ ಮೇಲೆ ಪೇಂಟಿಂಗ್, ಮಂಡಲ, ಅಥವಾ ಜೂಟ್ ವರ್ಕ್ ಮಾಡಿ ಪೆಂಡೆಂಟ್ ಮಾಡುವುದು; ಅದಕ್ಕೆ ಅತ್ಯಂತ ಸರಳವಾದ ‘ಸ್ಟ್ರಿಂಗ್’ ಜೋಡಿಸಿ ಕುತ್ತಿಗೆಗೆ ತೂಗುವಂತೆ ಮಾಡುವುದು ಹೆಚ್ಚು ಚಾಲ್ತಿಯಲ್ಲಿದೆ. ವೈಯಕ್ತಿಕವಾಗಿ ನನಗೆ ಬುದ್ಧ, ಝೆನ್, ಸೂಫಿ ಮತ್ತು ಮಂಡಲಗಳ ಮೇಲೆ ಆಕರ್ಷಣೆ ಇರುವುದರಿಂದ ಆ ಡಿಸೈನುಗಳನ್ನೇ ಹೆಚ್ಚು ಮಾಡ್ತಿದ್ದೇನೆ. ಅದರ ಜೊತೆಗೇ ಹೆಣ್ಣಿನ ದೇಹದ ಕುರಿತಾದ ಮಿಥ್ಗಳನ್ನ ಹೋಗಲಾಡಿಸಲು ‘ಡೇರ್ ಟು ವೇರ್’ ಸರಣಿ ಪೆಂಡೆಂಟ್ಗಳನ್ನು ಶುರು ಮಾಡ್ತಿದ್ದೇನೆ. ನಾವು ತೊಡುವ ಯಾವುದೇ ತೊಡುಗೆ ದೇಹದ ಸೌಂದರ್ಯ ಹೆಚ್ಚಿಸುವ ಜೊತೆಗೆ ನಮ್ಮ ಅಭಿರುಚಿಗೆ ಕನ್ನಡಿಯಾಗಿರಬೇಕು ಅನ್ನೋದು ನನ್ನ ಅನ್ನಿಸಿಕೆ. ಅದರ ಜೊತೆಗೇ ಏನಾದರೊಂದು ಉದ್ದೇಶವನ್ನೋ, ಚಿಂತನೆಯನ್ನೋ ಸಾರುವಂತಿದ್ದರೆ ಮತ್ತೂ ಚೆಂದ ಅನ್ನೋದು ನನ್ನ ನಂಬಿಕೆ. ಈ ನಿಟ್ಟಿನಲ್ಲಿ ‘ಡೇರ್ ಟು ವೇರ್’ ಒಂದು ಪ್ರಯೋಗವಾಗಲಿದೆ.
ಉಳಿದಂತೆ, ಈ ‘ಹಲಗೆ ತಗಲಾಕಿಕೊಂಡು’ ಓಡಾಡುವ ನನ್ನ ಕಸ್ಟಮರ್ಸ್, ನನಗೆ ಕಲಿಸಿರುವ ಈ ಹೊಸ ಕೈಕಸುಬು ತುಂಬಾ ಇಷ್ಟವಾಗಿದೆ!
ಆಸಕ್ತರು ಸಂಪರ್ಕಿಸಬಹುದು : 7829743661
ಇದನ್ನೂ ಓದಿ : Lockdown Stories : ಚಲನಾಮೃತ ; ‘ಮೇಣದಬತ್ತಿ ಉತ್ಪಾದನೆ ಮೌಢ್ಯ’ ಉತ್ತರ ಕಂಡುಕೊಳ್ಳುತ್ತ ಹೋದೆ
Published On - 1:20 pm, Sun, 1 May 22