ಜನಪ್ರತಿನಿಧಿಗಳೇ ಎಚ್ಚರವಿರಲಿ : ನಾಲಗೆಯ ಹಿಡಿತ ತಪ್ಪಿದಲ್ಲಿ ಒಂದು ತಿಂಗಳ ವೇತನ, ಸರ್ಕಾರಿ ಸವಲತ್ತು ಕಡಿತಗೊಳಿಸಿ

|

Updated on: Dec 18, 2021 | 4:53 PM

Punishment : ‘ವಿಧಾನಸಭೆಯೆಂದರೆ ಕೇವಲ ಪುರುಷರಷ್ಟೇ ಇರುವ ಜಾಗವಲ್ಲ, ಅಲ್ಲಿ ಮಹಿಳಾ ಜನಪ್ರತಿಧಿಗಳು ಶಾಸಕಿಯರು, ಕರ್ತವ್ಯನಿರತ ಮಹಿಳಾ ಉದ್ಯೋಗಿಗಳೂ ಇರುತ್ತಾರೆ ಎನ್ನುವ ಪ್ರಜ್ಞೆ ಇಟ್ಟುಕೊಳ್ಳಬೇಕು. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ತರಹದ ಪದಬಳಕೆಗೆ ಶಿಕ್ಷೆ ವಿಧಿಸುವ ಕಾನೂನು ತರಬೇಕು.’ ಮಂಜುಳಾ ಗೋನಾಳು

ಜನಪ್ರತಿನಿಧಿಗಳೇ ಎಚ್ಚರವಿರಲಿ : ನಾಲಗೆಯ ಹಿಡಿತ ತಪ್ಪಿದಲ್ಲಿ ಒಂದು ತಿಂಗಳ ವೇತನ, ಸರ್ಕಾರಿ ಸವಲತ್ತು ಕಡಿತಗೊಳಿಸಿ
ಲೇಖಕಿ ಮಂಜುಳಾ ಗೋನಾಳ
Follow us on

Rape : ಗುರುವಾರ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಹಂಪಿಯಲ್ಲಿ ವಾಸಿಸುತ್ತಿರುವ ಲೇಖಕಿ ಮಂಜುಳಾ ಗೋನಾಳ ಅವರ ಪ್ರತಿಕ್ರಿಯೆ.

*

ವಿಧಾನಸಭೆ ಎಂಬುದು ಹಲವು ಜ್ಞಾನ ಮೀಮಾಂಸೆಗಳ ತಿಳಿವಳಿಕೆಯುಳ್ಳ ಜನಪ್ರತಿನಿಧಿಗಳು ಶಾಸಕರು, ಮುಖ್ಯಮಂತ್ರಿಗಳಿರುವ ಜಾಗ. ಅವರಿಗೆ ಸಂವಿಧಾನದ ಪ್ರಸ್ತಾವನೆಯಿಂದ ಸಂವಿಧಾನ ಕೊನೆಯ ವಿಧಿಯವರೆಗೂ ತಿಳಿದಿರುತ್ತದೆ ಎಂಬುದು ಜನರ ಆಶಯ. ಅಲ್ಲಿಯ ಶಾಸಕರಿಗೆ, ಸ್ಪೀಕರ್​ಗಳಿಗೆ ಉಭಯ ಪಕ್ಷದ ನಾಯಕರಿಗೆ ಲಿಂಗ ಸೂಕ್ಷ್ಮತೆ ಇದೆ ಸಾಮಾಜಿಕ ನ್ಯಾಯದ ಅರಿವಿದೆ ಎಂದುಕೊಂಡಿರುತ್ತೇವೆ. ಹಾಗಾಗಿ ಮತದಾನ ಮಾಡುವ ಮೂಲಕ ಚುನಾಯಿಸಿ ಆಯ್ಕೆ ಮಾಡಿ ಕಳುಹಿಸುತ್ತೇವೆ ಆದರೆ ಅವರು ನಡೆ-ನುಡಿ ಎರಡು ಮಾರಿಕೊಂಡು ನಿಲ್ಲುವ ಸ್ಥಿತಿಗೆ ಬಂದು ತಲುಪುತ್ತಾರೆ ಎಂಬುದಕ್ಕೆ ಕೆ.ಆರ್. ರಮೇಶ್ ಕುಮಾರ್ ಅವರ ಮಾತುಗಳೇ ಸಾಕ್ಷಿ.

ಅಂತಕಃರಣವುಳ್ಳ ಯಾವೊಬ್ಬ ಮನುಷ್ಯನೂ ತಮಾಷೆಗೂ ಹೆಣ್ಣುಮಕ್ಕಳ ಭಾವನೆಗಳಿಗೆ ಧಕ್ಕೆ ತರುವ ವಿಚಾರ ಮಾತನಾಡವುದಿಲ್ಲ, ಮಾನವೀಯ ಪ್ರಜ್ಞೆ ಮರೆತು ಜಗತ್ತೇ ಕೇಳುವಂತೆ ಅತ್ಯಾಚಾರವನ್ನು ಆನಂದಿಸಬೇಕು ಎಂದು ಹೇಳಿಕೆ ಕೊಡುವ ಶಾಸಕರಿಂದ ಜನರು ಏನನ್ನು ನೀರಿಕ್ಷಿಸಬೇಕು? ಇದು ಮೊದಲಲ್ಲ, ಹಿಂದೆ ಸಿ.ಟಿ. ರವಿಯವರು ‘ತಾಯ್ಗಂಡ’ ಎಂಬ ಪದಬಳಕೆ ಮಾಡಿದ್ದರು, ನಂತರ ಕೆಲವು ತಿಂಗಳ ಹಿಂದೆ ಮೈಸೂರು ಅತ್ಯಾಚಾರ ಪ್ರಕರಣದ ತನಿಖೆಯ ಕುರಿತು ಮಾತನಾಡುವಾಗ ಆಗಿನ ಗೃಹಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರು ಒಂದು ವಿವಾದಾತ್ಮಾಕ ಹೇಳಿಕೆ ಕೊಟ್ಟರು – ಅತ್ಯಾಚಾರ ಆಗಿದ್ದು ಮೈಸೂರಲ್ಲಿ, ಆದರೆ ಕಾಂಗ್ರೆಸ್​ನವರು ನನ್ನನ್ನು ಅತ್ಯಾಚಾರ ಮಾಡ್ತಿದ್ದಾರೆ’ ಎಂದು. ಇದಕ್ಕೆ ಪ್ರತಿಯಾಗಿ ಅತ್ಯಾಚಾರ ಮಾಡಿದ್ದು ಯಾರು? ವಿ. ಎಸ್. ಉಗ್ರಪ್ಪನಾ, ಎಚ್. ಎಮ್. ರೇವಣ್ಣನಾ, ಡಿ.ಕೆ. ಶಿವಕುಮಾರ್ ಅವರಾ ಅಥವಾ ಸಿದ್ಧರಾಮಯ್ಯ ಮಾಡಿದ್ದಾ ಎಂದು ಕಾಂಗ್ರೆಸ್ಸಿನ ನಾಯಕರು ಪ್ರತಿಕ್ರಿಯೆ ನೀಡಿದ್ದರು.

ಈ ಸಂದರ್ಭಗಳು ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕರಾದ ಕೆ. ಆರ್. ರಮೇಶ್ ಕುಮಾರ್ ಅವರ ಮಾತನ್ನು ಕೇಳಿಸಿಕೊಂಡಾಗ ಮತ್ತೆ ನೆನಪಾದವು. ಅಲ್ಲಿದ್ದ ಜನಪ್ರತಿನಿಧಿಗಳು, ಶಾಸಕರು, ಈ ಮೂಲಕ ಜನರಿಗೆ, ನೊಂದವರಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಕೊಡುತ್ತಿರುವ ಸಂದೇಶವಾದರೂ ಏನು? ಮಹಿಳಾ ಅಸ್ಮಿತೆಗೆ ಧಕ್ಕೆ ತರುವ, ಲಿಂಗ ಸೂಕ್ಷ್ಮತೆ ಅರಿವಿರದ ಜನರನ್ನು ಚುನಾಯಿಸಿ ಕಳುಹಿಸಿದರ ಪ್ರತಿಫಲ ಇವರ ಲಜ್ಜೆಗೇಡಿ  ಮಾತುಗಳನ್ನು ಅಸಹ್ಯವೆನಿಸುವ ಇವರ ವರ್ತನೆಗಳನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಪಕ್ಷಬೇಧ ಮರೆತು ಇಂತಹ ವಾತಾವರಣವನ್ನು ಸೃಷ್ಟಿಸಿದ ಶಾಸಕರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕು ವಿಧಾನಸಭೆಯೆಂದರೆ ಕೇವಲ ಪುರುಷರಷ್ಟೇ ಇರುವ ಜಾಗವಲ್ಲ, ಅಲ್ಲಿ ಮಹಿಳಾ ಜನಪ್ರತಿಧಿಗಳು ಶಾಸಕಿಯರು, ಕರ್ತವ್ಯನಿರತ ಮಹಿಳಾ ಉದ್ಯೋಗಿಗಳೂ ಇರುತ್ತಾರೆ ಎನ್ನುವ ಪ್ರಜ್ಞೆ ಇಟ್ಟುಕೊಳ್ಳಬೇಕು. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ತರಹದ ಪದಬಳಕೆಗೆ ಶಿಕ್ಷೆ ವಿಧಿಸುವ ಕಾನೂನು ತರಬೇಕು. ಒಂದು ತಿಂಗಳ ವೇತನ ಕಡಿತಗೊಳಿಸಬೇಕು. ಒಂದು ತಿಂಗಳು ಸರ್ಕಾರಿ ಸವಲತ್ತುಗಳನ್ನು ಕಡಿತಗೊಳಿಸಬೇಕು. ಇದಲ್ಲದೇ ಮೊದಲು ಶಾಸಕರಿಗೆ ಲಿಂಗ ಸೂಕ್ಷ್ಮತೆಯ ಪಾಠಗಳನ್ನು ಹೇಳಿಕೊಡುವ ಅಗತ್ಯವಿದೆ.

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ..ಹೆಣ್ಣುಮಗುವನ್ನು ಯಾರೋ ಒಂದಿಬ್ಬರು ಕಾಮುಕರು ನಿನ್ನೆ ದಿನ

Published On - 4:34 pm, Sat, 18 December 21