ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಭೀಮಾವರಂ (ಆಂಧ್ರಪ್ರದೇಶ)ದಲ್ಲಿ ಅಲ್ಲೂರಿ ಸೀತಾರಾಮ ರಾಜು (Alluri Sitarama Raju) ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದವರು ಅಲ್ಲೂರಿ ಸೀತಾರಾಮ ರಾಜು. ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಮೋದಿಯವರು ಆಂಧ್ರ ಪ್ರದೇಶಕ್ಕೆ (Andhra pradesh) ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ಭಾರತೀಯ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ್ ಉಪಕ್ರಮವು ದೇಶದ ಸ್ವಾತಂತ್ರ್ಯಹೋರಾಗಾರರು ನೀಡಿರುವ ಕೊಡುಗೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ದಿನಾಚರಣೆ ಮತ್ತು ರಾಂಪಾ ದಂಗೆಯ 100ನೇ ವರ್ಷ ಈಗ ಆಚರಿಸಲಾಗುತ್ತಿದೆ. ಎರಡು ತೆಲುಗು ರಾಜ್ಯಗಳಲ್ಲಿ ಮನೆ ಮಾತಾಗಿರುವ ಅಲ್ಲೂರಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಅಲ್ಲೂರಿ ಸೀತಾರಾಮ ರಾಜು ಅವರ ಪರಿಚಯ
ಜುಲೈ 4, 1897 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಲ್ಲೂರಿ, ಬಾಲಕನಾಗಿದ್ದಾಗ ಬ್ರಿಟಿಷರ ಆಳ್ವಿಕೆಯಲ್ಲಿ ದೇಶವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ಕೇಳಿ ಮರುಕಪಟ್ಟಿದ್ದರು. ಬ್ರಿಟಿಷರ ವಿರುದ್ಧ ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ ರಾಂಪಾ ದಂಗೆಗೆ ಹೆಸರುವಾಸಿಯಾದ ಅಲ್ಲೂರಿ ಅವರನ್ನು , ಮಾನ್ಯಂ ವೀರುಡು (ಜಂಗಲ್ ವಾರಿಯರ್) ಎಂದೂ ಕರೆಯುತ್ತಾರೆ, ಅವರು ಸಾವಿರಾರು ಬಡ ಆದಿವಾಸಿಗಳನ್ನು ಒಟ್ಟುಗೂಡಿಸಿ ಅವರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಿದ್ದರು.
ಸ್ನೇಹಿತರೊಬ್ಬರು ಕಿಂಗ್ ಜಾರ್ಜ್ ಅವರ ಚಿತ್ರವಿರುವ ಬ್ಯಾಡ್ಜ್‌ಗಳನ್ನು ನೀಡಿದಾಗ ಅಲ್ಲೂರಿ ಅದನ್ನು ತಮ್ಮ ಅಂಗಿಯ ಮೇಲೆ ಧರಿಸಿ, ಇದು ದಾಸ್ಯವನ್ನು ತೋರಿಸುತ್ತದೆ. ವಿದೇಶಿ ಆಡಳಿತಗಾರನು ನಮ್ಮ ಜೀವನವನ್ನು ಪುಡಿಮಾಡುತ್ತಿದ್ದಾನೆ ಎಂಬುದನ್ನು ನಿಮ್ಮೆಲ್ಲರಿಗೂ ನೆನಪಿಸಲು ನಾನು ಅದನ್ನು ನನ್ನ ಹೃದಯದ ಬಳಿ ನನ್ನ ಅಂಗಿಯ ಮೇಲೆ ಪಿನ್ ಮಾಡಿದ್ದೇನೆ ಎಂದು ಹೇಳಿದ್ದರು.
ದೇಶದಾದ್ಯಂತ ಸುತ್ತಾಡಿ ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಬಿಲ್ಲು ಬಾಣದಂತ ಸಾಂಪ್ರದಾಯಿಕ ಆಯುಧಗಳನ್ನು ಬಳಸಿ ಅವರು ಕೆಲವು ಯುದ್ಧಗಳನ್ನು ಗೆದ್ದರು. ಕೆಲವು ಪೊಲೀಸ್ ಠಾಣೆಗಳ ಮೇಲೂ ದಾಳಿ ನಡೆಸಿದರು. ಕಾಡಿನ ಬಗ್ಗೆ ನಿಖರವಾದ ತಿಳುವಳಿಕೆ ಮತ್ತು ಕಾಡಿನ ಜನರ ಬೆಂಬಲದಿಂದ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಹೆಚ್ಚಿನ ಇತಿಹಾಸಗಾರರು ಅವರ ಕೊಡುಗೆ ಬಗ್ಗೆ ಉಲ್ಲೇಖಿಸಿಲ್ಲ. ಇತಿಹಾಸಕಾರರಾದ ಸುಮಿತ್ ಸರ್ಕಾರ್ ಅವರು ಮಾತ್ರ ಅಲ್ಲೂರಿ ಅವರನ್ನು ಬುಡಕಟ್ಟು ಜನಾಂಗದದ ನಾಯಕ ಎಂದು ಬಿಂಬಿಸಿದ್ದರು.ಉತ್ತರ ಗೋದಾವರಿಯ ರಾಂಪಾ ಪ್ರದೇಶದಲ್ಲಿನ ಬುಡಕಟ್ಟು ಜನಾಂಗದವರು ಬ್ರಿಟಿಷರ ವಿರುದ್ಧ 1922 ಆಗಸ್ಟ್- ಮೇ 1924ರಲ್ಲಿ ನಡೆಸಿದ ಗೆರಿಲ್ಲಾ ಯುದ್ಧವನ್ನು ಸೀತಾರಾಮ ರಾಜು ಅವರು ಮುನ್ನಡಿಸಿದ್ದರು ಎಂದು ಇತಿಹಾಸಕಾರ ಸುಮಿತ್ ಸರ್ಕಾರ್ ಮಾಡರ್ನ್ ಇಂಡಿಯಾ 1885-1947ರಲ್ಲಿ ದಾಖಲಿಸಿದ್ದಾರೆ.
Published On - 3:20 pm, Mon, 4 July 22