
ನವದೆಹಲಿ: 1984ರ ನವೆಂಬರ್ 1ರಂದು ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ- ಮಗನ ಹತ್ಯೆಗೆ ಸಂಬಂಧಿಸಿದ 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ಇಂದು ರೌಸ್ ಅವೆನ್ಯೂ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣವನ್ನು ಫೆಬ್ರವರಿ 18ರಂದು ಶಿಕ್ಷೆಯ ಕುರಿತು ವಾದಗಳಿಗೆ ಪಟ್ಟಿ ಮಾಡಲಾಗಿದೆ. ಸಜ್ಜನ್ ಕುಮಾರ್ ಪ್ರಸ್ತುತ ದೆಹಲಿ ಕಂಟೋನ್ಮೆಂಟ್‌ನಲ್ಲಿ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪನ್ನು ಸಜ್ಜನ್ ಕುಮಾರ್ ಮುನ್ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಕೋಪಗೊಂಡ ಗುಂಪೊಂದು ದೂರುದಾರ ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ, ಅವರ ಪತಿ ಮತ್ತು ಮಗನನ್ನು ಕೊಲೆ ಮಾಡಿತ್ತು.
ಇದನ್ನೂ ಓದಿ: ದೆಹಲಿಗೆ ಭೇಟಿ ನೀಡುವ ಕರ್ನಾಟಕದ ಎಲ್ಲ ಕಾಂಗ್ರೆಸ್ ನಾಯಕರೊಂದಿಗೆ ಜಾಸ್ತಿ ಹೊತ್ತು ಮಾತಾಡುತ್ತೇನೆ: ಮಲ್ಲಿಕಾರ್ಜುನ ಖರ್ಗೆ
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಶಿಕ್ಷೆಯ ಆದೇಶವನ್ನು ಹೊರಡಿಸಿದರು. ತೀರ್ಪು ಪ್ರಕಟಿಸಲು ಸಜ್ಜನ್ ಕುಮಾರ್ ಅವರನ್ನು ತಿಹಾರ್ ಜೈಲಿನಿಂದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನವೆಂಬರ್ 1, 1984ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರ ಕೊಲೆ ಪ್ರಕರಣದಲ್ಲಿ ಸಜ್ಜನ್ ಅವರಿಗೆ ಶಿಕ್ಷೆ ನೀಡಲಾಯಿತು.
#WATCH | Delhi: Visuals of former Congress MP Sajjan Kumar after the Rouse Avenue court convicted him in a 1984 Anti-Sikh riots case linked with the killing of a father-son duo in the Saraswati Vihar area on November 1, 1984. The matter has been listed for arguments on sentence… pic.twitter.com/hj31rnZByX
— ANI (@ANI) February 12, 2025
1984ರಲ್ಲಿ ಏನಾಯಿತು?:
ಸಿಖ್ಖರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸಶಸ್ತ್ರ ಗುಂಪೊಂದು ಸಿಖ್ಖರ ವಿರುದ್ಧ ದೊಡ್ಡ ಪ್ರಮಾಣದ ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಮುಂದಾಯಿತು. ಗುಂಪೊಂದು ಜಸ್ವಂತ್ ಸಿಂಗ್ ಮತ್ತು ಅವರ ಮಗನನ್ನು ಕೊಂದು ಅವರ ಮನೆಯನ್ನು ಲೂಟಿ ಮಾಡಿತು. ನಂತರ ಅವರು ಮನೆಯನ್ನು ಸುಟ್ಟುಹಾಕಿದ್ದರು. ಸಜ್ಜನ್ ಕುಮಾರ್ ಅವರೇ ಈ ಗುಂಪಿನ ನೇತೃತ್ವ ವಹಿಸಿ, ಕೊಲೆಯ ಮುಂದಾಳತ್ವ ವಹಿಸಿದ್ದರು ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳು ಕೂಡ ಸಿಕ್ಕಿವೆ.
ಇದನ್ನೂ ಓದಿ: ವಿಮಾನದಲ್ಲಿ ಹಿಂದೂ, ಸಿಖ್ ಪ್ರಯಾಣಿಕರಿಗೆ ಹಲಾಲ್ ಊಟ ನೀಡುವುದಿಲ್ಲ; ಏರ್ ಇಂಡಿಯಾ ಘೋಷಣೆ
ಸಜ್ಜನ್ ಕುಮಾರ್ ಯಾರು?:
ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಮಾಜಿ ಸಂಸದರಾಗಿದ್ದು, 1984ರ ಸಿಖ್ ದಂಗೆ ಪ್ರಕರಣದಲ್ಲಿ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1977ರಲ್ಲಿ ದೆಹಲಿ ಮಹಾನಗರ ಪಾಲಿಕೆಗೆ ಮೊದಲು ಆಯ್ಕೆಯಾದ ಸಜ್ಜನ್ ಕುಮಾರ್ ಅದೇ ವರ್ಷ ದೆಹಲಿ ಕೌನ್ಸಿಲರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ದೆಹಲಿಯ ಸಕ್ರಿಯ ರಾಜಕಾರಣಿಯಾಗಿದ್ದ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಿಂದ ಗೆದ್ದರು.
1984ರ ನವೆಂಬರ್ 1ರಂದು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಗಿನ ಪ್ರಧಾನಿ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಿಖ್ ಸಮುದಾಯದ ಮೇಲೆ ದಾಳಿ ಮಾಡಲು ಸಜ್ಜನ್ ಕುಮಾರ್ ಜನರ ಗುಂಪನ್ನು ಪ್ರಚೋದಿಸಿದ್ದರು. ಅದಕ್ಕೂ ಒಂದು ದಿನ ಮೊದಲು ಇಂದಿರಾ ಗಾಂಧಿಯವರ ಮೇಲೆ ಸಿಖ್ ಅಂಗರಕ್ಷಕರು ಗುಂಡು ಹಾರಿಸಿ ಕೊಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ