ಪಾಟ್ನಾದಲ್ಲಿ ಮನೆಯೊಳಗೆ ಅಕ್ಕ-ತಮ್ಮನ ಸುಟ್ಟ ಶವಗಳು ಪತ್ತೆ; ಕೊಲೆ ಎಂದು ಕುಟುಂಬದ ಆರೋಪ
ಪಾಟ್ನಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆಯೊಳಗೆ 15 ವರ್ಷದ ಅಕ್ಕ ಮತ್ತು 10 ವರ್ಷದ ತಮ್ಮ ಮೃತದೇಹಗಳು ಪತ್ತೆಯಾಗಿವೆ. ಈ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಯಾರೋ ಮೊದಲು ಅವರಿಬ್ಬರನ್ನು ಕೊಂದು ನಂತರ ತಮ್ಮ ಅಪರಾಧವನ್ನು ಮರೆಮಾಡಲು ಅವರ ದೇಹಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.

ಪಾಟ್ನಾ, ಜುಲೈ 31: ಬಿಹಾರದ ಪಾಟ್ನಾ (Patna) ಬಳಿಯ ಹಳ್ಳಿಯಲ್ಲಿ ಇಬ್ಬರು ಮಕ್ಕಳು ಅಂದರೆ ಒಂದು ಹುಡುಗಿ ಮತ್ತು ಒಂದು ಹುಡುಗನ ಸುಟ್ಟ ಶವಗಳು ಒಂದೇ ಕೋಣೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಯಾರೋ ಅವರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಯಾರೋ ಮಕ್ಕಳನ್ನು ಕೊಂದು ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಅಂಜಲಿ ಕುಮಾರಿ (15) ಮತ್ತು ಅಂಶುಲ್ ಕುಮಾರ್ (10) ಅವರ ಸುಟ್ಟ ಶವಗಳು ಕೋಣೆಯೊಳಗೆ ಪತ್ತೆಯಾಗಿವೆ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು.
“ಮನೆಯ ಬಳಿ ಮೂವರು ಪುರುಷರು ಕಾಣಿಸಿಕೊಂಡಿದ್ದರು. ನಂತರ 15 ಮತ್ತು 10 ವರ್ಷ ವಯಸ್ಸಿನ ನನ್ನ ಮಕ್ಕಳು ಕೋಣೆಯೊಳಗೆ ಸತ್ತಿರುವುದು ಕಂಡುಬಂದಿದೆ. ಅವರು ಸಾವನ್ನಪ್ಪಿದ ನಂತರ ಅವರನ್ನು ಸುಟ್ಟು ಹಾಕಲಾಗಿದೆ. ಅದು ಅಪಘಾತವಾಗಿದ್ದರೆ, ಹುಡುಗರು ತಮ್ಮ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದರು, ಬಾಗಿಲನ್ನು ಕೂಡ ತೆರೆಯಬಹುದಿತ್ತು. ಆದರೆ ಅವರ ಕಡೆಯಿಂದ ಅಂತಹ ಯಾವುದೇ ಪ್ರಯತ್ನ ಇರಲಿಲ್ಲ. ಇದು ಮೊದಲು ಯಾರೋ ಅವರನ್ನು ಕೊಂದು ನಂತರ ಅವರ ದೇಹಗಳನ್ನು ಸುಟ್ಟುಹಾಕಿದ್ದಾರೆ ಎಂದು ಸಾಬೀತುಪಡಿಸುತ್ತದೆ” ಎಂದು ಮೃತರ ತಂದೆ ಲಲ್ಲನ್ ಗುಪ್ತಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಅಪಘಾತ; ಡಿವೈಡರ್ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಲಲ್ಲನ್ ಗುಪ್ತಾ ಸ್ಥಳೀಯ ಚುನಾವಣಾ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಅವರ ಪತ್ನಿ AIIMS ಪಾಟ್ನಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಕೆಲಸದಿಂದ ಮನೆಗೆ ಹಿಂತಿರುಗಿದಾಗ ಈ ಭಯಾನಕ ದೃಶ್ಯವನ್ನು ನೋಡಿ ಕಿರುಚಲು ಪ್ರಾರಂಭಿಸಿದರು. ನಂತರ ಅವರು ತಮ್ಮ ಪತಿಗೆ ಘಟನೆ ಬಗ್ಗೆ ತಿಳಿಸಿದರು. ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಲು ಇಡೀ ಪ್ರದೇಶದಾದ್ಯಂತ ಹುಡುಕಾಡಿದರು.
ಸುಟ್ಟ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕ್ರಿಮಿನಲ್ ಕೋನವನ್ನು ಇನ್ನೂ ದೃಢಪಡಿಸಿಲ್ಲ. ಎಲ್ಲಾ ಸಂಭಾವ್ಯ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅವರ ಸಾವಿಗೆ ಕಾರಣ ಸ್ವಲ್ಪ ಸಮಯದ ನಂತರವೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




