AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣೆ ಮೇಲೆ ಮೂರನೇ ಕಣ್ಣು, ಬಾಲ ಥೇಟ್ ಜಟೆಯಂತೆ; ಇತ್ತೀಚೆಗೆ ಹುಟ್ಟಿದ ಆಕಳ ಕರುವನ್ನು ಪೂಜಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಜನ !

ಇದು ಜರ್ಸಿ ತಳಿಯ ಹಸುವಿಗೆ ಹುಟ್ಟಿದ ಕರುವಾಗಿದೆ. ನಾಲಿಗೆ ಉದ್ದವಾಗಿರುವುದರಿಂದ ಹಾಲು ಕುಡಿಯಲು ತುಂಬ ಕಷ್ಟಪಡುತ್ತಿದೆ. ಹೀಗಾಗಿ ನಾವೇ ಹಾಲು ಕುಡಿಸುತ್ತಿದ್ದೇವೆ ಎಂದು ಅದರ ಮಾಲೀಕ ಹೇಮಂತ್​ ತಿಳಿಸಿದ್ದಾರೆ.

ಹಣೆ ಮೇಲೆ ಮೂರನೇ ಕಣ್ಣು, ಬಾಲ ಥೇಟ್ ಜಟೆಯಂತೆ; ಇತ್ತೀಚೆಗೆ ಹುಟ್ಟಿದ ಆಕಳ ಕರುವನ್ನು ಪೂಜಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಜನ !
ಮೂರು ಕಣ್ಣುಗಳುಳ್ಳ ಕರು
TV9 Web
| Edited By: |

Updated on: Jan 19, 2022 | 4:14 PM

Share

ಛತ್ತೀಸ್​ಗಢ್​​ನ ರಾಜನಂದಗಾಂವ್​​ನ ನವಗಾಂವ್ ಲೋಧಿ ಎಂಬ ಹಳ್ಳಿಯಲ್ಲಿ ಜನಿಸಿದ ಆಕಳು ಕುರುವೊಂದನ್ನು ನೋಡಲು ಜನರು ಸಾಲುಗಟ್ಟಿ ಬರುತ್ತಿದ್ದಾರೆ. ಈ ಹಸು ಕರು ಇರುವ ರೈತರ ಮನೆಯೆದುರು ದಿನ ಬೆಳಗಾದರೆ ಕ್ಯೂ ಇರುತ್ತದೆ. ಬರುವವರು ಸುಮ್ಮನೆ ಬರುತ್ತಿಲ್ಲ, ಜತೆಗೆ ಕಾಯಿ, ಹೂವುಗಳನ್ನು ತರುತ್ತಿದ್ದಾರೆ ಎಂದು ವರದಿಯಾಗಿದೆ.  ಅಷ್ಟಕ್ಕೂ ಯಾಕೆ ಹೀಗೆ ಆಗುತ್ತಿದೆ ಎಂದರೆ, ಆ ಕರು ಮೂರು ಕಣ್ಣುಗಳನ್ನು ಹೊಂದಿದೆ. ಆರು ಕಾಲುಗಳ ಕುರಿಮರಿ, ಎರಡು ಮುಖದ ಹಸುವಿನ ಕರು ಹೀಗೆ ವಿಭಿನ್ನ ರೀತಿಯ ಮರಿ/ಕರುಗಳ ಜನನವಾದ ಬಗ್ಗೆ ಈಗಾಗಲೇ ಓದಿದ್ದೇವೆ. ಆದರೆ ಈಗ ಛತ್ತೀಸ್​ಗಢ್​​​ನಲ್ಲಿ ಹುಟ್ಟಿರುವ ಕರುವಿಗೆ ಮೂರು ಕಣ್ಣುಗಳಿದ್ದು, ನಾಲ್ಕು ಮೂಗಿನ ಹೊಳ್ಳೆಗಳಿವೆ. ಕರು ಹುಟ್ಟುತ್ತಿದ್ದಂತೆ ಅದನ್ನು ಹಳ್ಳಿಯ ಜನರು ದೇವರ ಅವತಾರವೆಂದೇ ಭಾವಿಸುತ್ತಿದ್ದಾರೆ. ಮೂರು ಕಣ್ಣುಗಳನ್ನು ಹೊಂದಿರುವ ಶಿವ, ತೆಂಗಿನ ಕಾಯಿಗಳನ್ನು ದೇವರೆಂದು ಪರಿಗಣಿಸಿ ಪೂಜಿಸುವಂತೆ ಇದೀಗ ಈ ಕರುವನ್ನೂ ಜನರು ಪೂಜೆ ಮಾಡುತ್ತಿದ್ದಾರೆ. ಅಂದಹಾಗೆ ಇದು ಹೆಣ್ಣು ಕರುವಾಗಿದ್ದು, ಹೇಮಂತ್​ ಚಾಂದೆಲ್​ ಎಂಬ ರೈತರು ಸಾಕಿದ್ದ ಹಸುವಿಗೆ ಜನಿಸಿದೆ. 

ಈ ಹೆಣ್ಣುಕರುವಿನ ಹಣೆಯ ಮೇಲೆ ಮೂರನೇ ಕಣ್ಣಿದೆ. ಮೂಗಿನಲ್ಲಿ ನಾಲ್ಕು ಹೊಳ್ಳೆಗಳು ಇರುವ ಜತೆ, ಕರುವಿನ ಬಾಲ ಥೇಟ್​ ಜಟೆಯಂತೆ ಇದೆ. ಹಾಗೇ, ನಾಲಿಗೆಯೂ ಕೂಡ, ಸಾಮಾನ್ಯ ಕರುವಿಗೆ ಇರುವುದಕ್ಕಿಂತ ಉದ್ದವಾಗಿಯೇ ಇದೆ. ಇಷ್ಟು ಅಸಹಜತೆ ಇಟ್ಟುಕೊಂಡು ಹುಟ್ಟಿದ್ದರೂ ಕರು ತುಂಬ ಆರೋಗ್ಯವಾಗಿದೆ ಎಂದು ಸ್ಥಳೀಯ ಪಶುವೈದ್ಯರು ತಿಳಿಸಿದ್ದಾರೆ ಎಂದು ಮಾಲೀಕ ಚಾಂದೇಲ್​ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇದು ಜರ್ಸಿ ತಳಿಯ ಹಸುವಿಗೆ ಹುಟ್ಟಿದ ಕರುವಾಗಿದೆ. ನಾಲಿಗೆ ಉದ್ದವಾಗಿರುವುದರಿಂದ ಹಾಲು ಕುಡಿಯಲು ತುಂಬ ಕಷ್ಟಪಡುತ್ತಿದೆ. ಹೀಗಾಗಿ ನಾವೇ ಹಾಲು ಕುಡಿಸುತ್ತಿದ್ದೇವೆ. ಇದರ ತಾಯಿ ಈ ಹಿಂದೆ ಮೂರು ಕರುವಿಗೆ ಜನ್ಮ ಕೊಟ್ಟಿತ್ತು. ಅವೆಲ್ಲವೂ ಸಹಜವಾಗಿಯೇ ಇವೆ.  ಆದರೆ ಈ ಕರು ಮಾತ್ರ ಹೀಗೆ ಹುಟ್ಟಿದೆ. ನಿಜಕ್ಕೂ ಅಚ್ಚರಿಯಾಗುತ್ತಿದೆ. ನಮ್ಮ ಮನೆಯಲ್ಲಿ ದೇವರು (ಶಿವ) ಅವತರಿಸಿದ್ದಾನೆ ಎಂದೇ ನಾವು ಭಾವಿಸಿಕೊಂಡಿದ್ದೇವೆ ಎಂದು ಚಾಂದೇಲ್​ ಹೇಳಿಕೊಂಡಿದ್ದಾರೆ. ಆದರೆ ಪಶುತಜ್ಞರು ಇದನ್ನೆಲ್ಲ ಅಲ್ಲಗಳೆದಿದ್ದಾರೆ. ಭ್ರೂಣ ಸರಿಯಾಗಿ ಬೆಳವಣಿಗೆ ಆಗದೆ ಇದ್ದಾಗ ಹೀಗೆಲ್ಲ ಸಮಸ್ಯೆ ಆಗುತ್ತದೆ ಹೊರತು, ಪವಾಡವಲ್ಲ. ನಿಜ ಹೇಳಬೇಕು ಎಂದರೆ ಹೀಗೆ ಹುಟ್ಟುವ ಕರುಗಳು ಈಗ ಆರೋಗ್ಯದಿಂದ ಇವೆ ಎನ್ನಿಸಿದರೂ, ಅವು ಆರೋಗ್ಯದಿಂದ ಬೆಳೆಯುವುದಿಲ್ಲ ಎಂದು ಖಾಸಗಿ ಪಶುವೈದ್ಯ ಕಮಲೇಶ್​ ಚೌಧರಿ ತಿಳಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಲ್ಯಾಬ್ ತಪ್ಪು ವರದಿ ನೀಡಿದ್ದರೆ ಲೈಸನ್ಸ್ ರದ್ದು ಮಾಡಲಾಗುತ್ತದೆ: ಆರೋಗ್ಯ ಸಚಿವ ಡಾ.ಸುಧಾಕರ್