ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡಲು ಮುಂದಾದ ರಾಜಸ್ಥಾನದ ಮೂವರು ಮಂತ್ರಿಗಳು
Rajasthan Cabinet Reshuffle: ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್ ರಚನೆ ಮಾಡಲು ಸಿಎಂ ಅಶೋಕ್ ಗೆಹ್ಲೋಟ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ಪುನಾರಚನೆ ನಿರೀಕ್ಷಿಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ನಿರೀಕ್ಷಿತ ಸಂಪುಟ ಪುನಾರಚನೆಗೆ ಮುನ್ನ ಮೂವರು ಸಚಿವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಸ್ಥಾನವನ್ನು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ರಘು ಶರ್ಮಾ ಮತ್ತು ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಸ್ರಾ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಮ್ಮ ರಾಜಸ್ಥಾನ ಕ್ಯಾಬಿನೆಟ್‌ನ ಮೂವರು ಭರವಸೆಯ ಸಚಿವರು ಇಂದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ, ಸಚಿವ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಮಾಕೆನ್ ಹೇಳಿದ್ದಾರೆ.
ಸಚಿವರ ರಾಜಿನಾಮೆಯ ಕುರಿತಂತೆ ಪ್ರತಿಕ್ರಿಯಿಸಿರುವ ಮಾಕೆನ್, “ಕಾಂಗ್ರೆಸ್ ಪಕ್ಷವು ಅವರನ್ನು ಗೌರವಿಸುತ್ತದೆ. ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವ ಇಂತಹ ಭರವಸೆಯ ಜನರು ಇದ್ದಾರೆ ಎಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ. ಗೋವಿಂದ್ ಸಿಂಗ್ ದೋತಸ್ರಾ ಅವರು ಪ್ರಸ್ತುತ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿದ್ದರೆ, ರಘು ಶರ್ಮಾ ಅವರನ್ನು ಇತ್ತೀಚೆಗೆ ಗುಜರಾತ್‌ನ ಉಸ್ತುವಾರಿಯಾಗಿ ಮತ್ತು ಹರೀಶ್ ಚೌಧರಿ ಅವರನ್ನು ಪಂಜಾಬ್‌ಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಎರಡು ದಿನಗಳ ಹಿಂದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕ್ಯಾಬಿನೆಟ್ ಪುನರ್ರಚನೆ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದರು. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 21 ಮಂದಿ ಸಚಿವರಿದ್ದಾರೆ. ರಾಜಸ್ಥಾನದಲ್ಲಿ 200 ಶಾಸಕರಿದ್ದು, ಅದರ ಪ್ರಕಾರ ಸಚಿವ ಸಂಪುಟದಲ್ಲಿ ಗರಿಷ್ಠ 30 ಸದಸ್ಯರನ್ನು ಹೊಂದಬಹುದಾಗಿದೆ.
ಇದನ್ನೂ ಓದಿ:
ಬಿಜೆಪಿಯೊಂದಿಗೆ 110 ಪ್ರತಿಶತ ಮೈತ್ರಿ; ರೈತರೂ ನಮ್ಮೊಂದಿಗೆ ಇರಲಿದ್ದಾರೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿಕೆ