ದೃಷ್ಟಿಹೀನ ಶಿಕ್ಷಕ ಪಾಠ ಮಾಡುತ್ತಿದ್ದರೆ, ಅವರೆದುರು ನೃತ್ಯ ಮಾಡಿದ ವಿದ್ಯಾರ್ಥಿಗಳು; ಮೂವರಿಗೆ ಗೇಟ್ಪಾಸ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿದ ಬಳಿಕವೇ ಇದು ನಮ್ಮ ಅರಿವಿಗೆ ಬಂತು ಎಂದುರಾಸಿಪುರಂ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ದೃಷ್ಟಿ ಹೀನ ಶಿಕ್ಷಕನ ಎದುರು ತರಗತಿ ಕೋಣೆಯಲ್ಲಿ ನೃತ್ಯ ಮಾಡಿದ ಮೂವರು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕಳಿಸಲಾಗಿದೆ. ಆ ಮೂವರಿಗೂ ವರ್ಗಾವಣೆ ಸರ್ಟಿಫಿಕೆಟ್ ನೀಡಲಾಗಿದ್ದು, ಬೇರೆ ಯಾವುದಾದರೂ ಶಾಲೆ ಸೇರಬಹುದು ಎಂದೂ ಹೇಳಲಾಗಿದೆ. ಈ ಘಟನೆ ನಡೆದದ್ದು ತಮಿಳುನಾಡಿನ ರಾಸಿಪುರಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ. ಕಣ್ಣು ಕಾಣದ ಶಿಕ್ಷಕನ ಎದುರು ಕುಣಿದು, ತಮಾಷೆ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ.
ಶಿಕ್ಷಕನ ಹೆಸರು ಪನ್ನೀರ್. ಇವರು ಇತಿಹಾಸ ವಿಷಯ ಕಲಿಸುವ ಶಿಕ್ಷಕರಾಗಿದ್ದಾರೆ. ಆದರೆ ಇವರಿಗೆ ಕಣ್ಣು ಕಾಣಿಸುವುದಿಲ್ಲ. ರಾಸಿಪುರಂನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವ ಇವರು ಎಂದಿನಂತೆ ಪಾಠ ಕಲಿಸುತ್ತಿದ್ದರೆ, ಮೂವರು ವಿದ್ಯಾರ್ಥಿಗಳು ಅಲ್ಲಿಯೇ ನೃತ್ಯ ಮಾಡಿದ್ದಾರೆ. ಇನ್ಯಾರೋ ಅದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಿಕ್ಕಾಪಟೆ ವೈರಲ್ ಆಗಿದೆ. ದೃಷ್ಟಿಹೀನರಾಗಿರುವ ಶಿಕ್ಷಕ ತನ್ನ ಎದುರು ವಿದ್ಯಾರ್ಥಿಗಳು ಕುಣಿಯುತ್ತಿದ್ದಾರೆ ಎಂಬುದನ್ನು ಅರಿಯದೆ ಪಾಠ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕ್ರಮ ಕೈಗೊಂಡ ಶಾಲೆ ಇನ್ನು ಘಟನೆ ಗಮನಕ್ಕೆ ಬರುತ್ತಿದ್ದಂತೆ ಶಾಲೆ ಕ್ರಮ ಕೈಗೊಂಡಿದೆ. ನೃತ್ಯ ಮಾಡಿದ ಮೂವರೂ ವಿದ್ಯಾರ್ಥಿಗಳಿಗೆ ಶಾಲೆಯಿಂದ ಗೇಟ್ಪಾಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿದ ಬಳಿಕವೇ ಇದು ನಮ್ಮ ಅರಿವಿಗೆ ಬಂತು ಎಂದು ಹೇಳಿರುವ ರಾಸಿಪುರಂ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಬಾಲಸುಬ್ರಹ್ಮಣ್ಯಂ, ನಿಜಕ್ಕೂ ವಿಡಿಯೋ ನೋಡಿ ಶಾಕ್ ಆಗಿದೆ. ವಿದ್ಯಾರ್ಥಿಗಳಿಂದ ಇಂಥ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ಡ್ಯಾನ್ಸ್ ಮಾಡಿದ ಮೂವರಿಗೂ ವರ್ಗಾವಣೆ ಪತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Hangal Bypoll 2021: ಬಿಜೆಪಿಯಿಂದ ಉದಾಸಿ ಪತ್ನಿಗೆ ಟಿಕೆಟ್? ಕಾಂಗ್ರೆಸ್ ಟಿಕೆಟ್ ನನಗೆ ಬೇಕು ಎಂದ ಮನೋಹರ್ ತಹಶೀಲ್ದಾರ್
ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ವಾಕಿಟಾಕಿ ಕಳವು
Published On - 4:54 pm, Sun, 3 October 21