ಮೇಘಸ್ಫೋಟದಿಂದ ಜಮ್ಮು ಕಾಶ್ಮೀರದ ದೋಡಾದಲ್ಲಿ 4 ಜನ ಸಾವು, ಮನೆಗಳಿಗೆ ಹಾನಿ

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮೇಘಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 4 ಜನರು ಮೃತಪಟ್ಟಿದ್ದಾರೆ. ಆಗಸ್ಟ್ 27ರವರೆಗೆ ಜಮ್ಮು ವಿಭಾಗದ ಎತ್ತರದ ಪ್ರದೇಶಗಳಲ್ಲಿ ಮತ್ತಷ್ಟು ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಾವಿ ನದಿ ಉಕ್ಕಿ ಹರಿಯುತ್ತಿದೆ. ಅನೇಕ ನದಿಗಳು ಮತ್ತು ಹೊಳೆಗಳಲ್ಲಿ ನೀರಿನ ಮಟ್ಟವು ಈಗಾಗಲೇ ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿದೆ.

ಮೇಘಸ್ಫೋಟದಿಂದ ಜಮ್ಮು ಕಾಶ್ಮೀರದ ದೋಡಾದಲ್ಲಿ 4 ಜನ ಸಾವು, ಮನೆಗಳಿಗೆ ಹಾನಿ
Kashmir Floods

Updated on: Aug 26, 2025 | 4:22 PM

ದೋಡಾ, ಆಗಸ್ಟ್ 26: ಜಮ್ಮುವಿನ ದೋಡಾ (Doda) ಜಿಲ್ಲೆಯಲ್ಲಿ ಇಂದು (ಮಂಗಳವಾರ) ಭಾರಿ ಮೇಘಸ್ಫೋಟ ಸಂಭವಿಸಿದೆ. ದೋಡಾ ಜಿಲ್ಲೆಯ ಕಹಾರ್ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ (Cloudburst)  ಉಂಟಾದ ದಿಢೀರ್ ಪ್ರವಾಹದಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಈ ಪ್ರವಾಹದಿಂದಾಗಿ ಚೆನಾಬ್ ನದಿ ಉಕ್ಕಿ ಹರಿಯುತ್ತಿದೆ. ಇದ್ದಕ್ಕಿದ್ದಂತೆ ಎಲ್ಲ ಕಡೆಗಳಿಂದ ಕೆಂಬಣ್ಣದ ನೀರು ರೌದ್ರಾವತಾರ ತಾಳಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಥುವಾ ಮತ್ತು ಕಿಶ್ತ್ವಾರ್‌ನಲ್ಲಿ ಇದೇ ರೀತಿಯ ವಿಪತ್ತು ಸಂಭವಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ನಂತರ ಈ ಘಟನೆ ಸಂಭವಿಸಿದೆ. ಪ್ರತಿಕೂಲ ಹವಾಮಾನದ ದೃಷ್ಟಿಯಿಂದ ಜಮ್ಮು ವಿಭಾಗದಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ.


ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ: 38ಕ್ಕೂ ಹೆಚ್ಚು ಮಂದಿ ದುರ್ಮರಣ; 200ಕ್ಕೂ ಹೆಚ್ಚು ಮಂದಿಗೆ ಗಾಯ

ಭೂಕುಸಿತಗಳು ಮತ್ತು ಗುಂಡಿನ ಕಲ್ಲುಗಳಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಹೊಳೆ ದಡದಿಂದ ಉಕ್ಕಿ ಹರಿದ ನಂತರ ದೋಡಾದಲ್ಲಿನ ಪ್ರಮುಖ ರಸ್ತೆ ಕೊಚ್ಚಿಹೋಗಿದೆ.


ಝೀಲಂ ನದಿಗೆ ಯಾವುದೇ ಪ್ರವಾಹ ಎಚ್ಚರಿಕೆ ನೀಡಲಾಗಿಲ್ಲವಾದರೂ, ನೀರಿನ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ. ಕಾಶ್ಮೀರದಲ್ಲಿ ಭಾರೀ ಮಳೆ ಕಂಡುಬಂದಿದೆ.


ಇದನ್ನೂ ಓದಿ: ಮಹಾರಾಷ್ಟ್ರ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ: ಬೆಳಗಾವಿ, ಬಾಗಲಕೋಟೆ, ಯಾದಗಿರಿಯಲ್ಲಿ ನೆರೆ ಹಾವಳಿ


ದೋಡಾ ನಗರದ ಬಳಿಯ ನದಿಗಳು ಅಪಾಯದ ಮಟ್ಟಕ್ಕಿಂತ ಮೇಲೆ ಹರಿಯುತ್ತಿರುವ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ 250 ಕಿ.ಮೀ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಥುವಾದಲ್ಲಿ ತಾರಾನಾ ನದಿ, ಉಜ್ ನದಿ, ಮಗ್ಗರ್ ಖಾದ್, ಸಹರ್ ಖಾದ್, ರಾವಿ ನದಿ ಮತ್ತು ಅವುಗಳ ಉಪನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:57 pm, Tue, 26 August 25