ಉತ್ತರಾಖಂಡದಲ್ಲಿ ಮತ್ತೆ ಭಾರೀ ಮೇಘಸ್ಫೋಟ: ಹತ್ತಾರು ಜನ ನಾಪತ್ತೆ, ನೂರಾರು ಮನೆಗಳಿಗೆ ಹಾನಿ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಶುಕ್ರವಾರ ರಾತ್ರಿ ಭೀಕರ ಮೇಘಸ್ಫೋಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಒಬ್ಬ ಯುವತಿ ಮೃತಪಟ್ಟಿದ್ದು, ಹಲವಾರು ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ರಸ್ತೆಗಳಿಗೆ ಹಾನಿಯಾಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ನೂರಾರು ಮನೆಗಳು ಹಾಗೂ ವಾಹನಗಳು ಹಾನಿಗೊಳಗಾಗಿವೆ.

ಡೆಹ್ರಾಡೂನ್, ಆಗಸ್ಟ್ 23: ಕೆಲವು ದಿನಗಳ ಹಿಂದಷ್ಟೇ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಾಖಂಡದಲ್ಲಿ (Uttarakhand) ಶುಕ್ರವಾರ ರಾತ್ರಿ ಮತ್ತೆ ಭಯಾನಕ ಮೇಘಸ್ಫೋಟ (Cloudburst) ಸಂಭವಿಸಿದೆ. ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ವಿನಾಶ ಸಂಭವಿಸಿದೆ. ಒಬ್ಬ ಯುವತಿ ಪ್ರವಾಹದಲ್ಲಿ ಕೊಚ್ಚಿಹೋಗಿ ಸಾವಿಗೀಡಾಗಿದ್ದು, ಹತ್ತಾರು ಜನ ಕಣ್ಮರೆಯಾಗಿದ್ದಾರೆ. ಎಸ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ. ಥರಾಲಿ ಹಾಗೂ ಹತ್ತಿರದ ಹಳ್ಳಿಗಳಲ್ಲಿಯೂ ಅನಾಹುತ ಸಂಭವಿಸಿದೆ.
ಉತ್ತರಾಖಂಡದಲ್ಲಿ ಶುಕ್ರವಾರ ಭಾರಿ ಮಳೆಯಾಗಿತ್ತು. ನಂತರ, ಸರಿಸುಮಾರು ಮಧ್ಯರಾತ್ರಿಯ ವೇಳೆಗೆ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ರಾಡಿಬಾಗ್ ಮತ್ತು ಚೆಪ್ಡಾನ್‌ನಲ್ಲಿ ಅನೇಕ ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಅನೇಕ ಅಂಗಡಿಗಳು ಹಾನಿಗೊಳಗಾಗಿವೆ. ಮಧ್ಯರಾತ್ರಿಯಲ್ಲಿ ಏಕಾಏಕಿ ಭಾರಿ ಪ್ರವಾಹ ಹಾಗೂ ಭೀಕರ ಸದ್ದು ಕೇಳಿ ಬೆಚ್ಚಿಬಿದ್ದ ಜನರು ಮನೆಗಳಿಂದ ಹೊರಬಂದಿದ್ದಾರೆ.
ಪ್ರವಾಹದ ಭೀಕರತೆ ಸಾರುವ ವಿಡಿಯೋ
VIDEO | Uttarakhand: Heavy rainfall since late evening has caused massive destruction in Chamoli district’s Tharali region. A cloudburst late Friday night buried several vehicles under debris in Radibagad and Chepado.
(Full video available on PTI Videos -… pic.twitter.com/NXF9bkcNmw
— Press Trust of India (@PTI_News) August 23, 2025
ಘಟನೆಯ ಬಗ್ಗೆ ಚಮೋಲಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ಶುಕ್ರವಾರ ರಾತ್ರಿ ಥಾಣಾ ಥರಾಲಿ ಪ್ರದೇಶದಲ್ಲಿ ಭಾರೀ ಮಳೆಯಾಗಿ ಜನಜೀವನದ ಮೇಲೆ ಪರಿಣಾಮ ಬೀರಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಥಾಣಾ ಥರಾಲಿ ಪೊಲೀಸರು ರಾತ್ರಿಯೇ ಕ್ಷಿಪ್ರವಾಗಿ ಜಾಗರೂಕರಾಗಿ ಸ್ಥಳೀಯ ಜನರನ್ನು ಎಚ್ಚರಿಸಿ ಅವರನ್ನು ಅವರ ಮನೆಗಳಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು’ ಎಂದು ಉಲ್ಲೇಖಿಸಿದ್ದಾರೆ.
ಉತ್ತರಾಖಂಡ ಪೊಲೀಸ್ ಮಾಹಿತಿ
🚨 थराली क्षेत्र से आपदा अपडेट 🚨
बीती रात्रि थाना थराली क्षेत्र में हुई अतिवृष्टि से जनजीवन प्रभावित हुआ। स्थिति की गंभीरता को देखते हुए थाना थराली पुलिस ने रात्रि में ही मुस्तैदी दिखाते हुए स्थानीय लोगो को सतर्क किया तथा घरों से निकालकर सुरक्षित स्थानों पर पहुँचाया। pic.twitter.com/5MaiBgTc5D
— Chamoli Police Uttarakhand (@chamolipolice) August 23, 2025
ಮೇಘ ಸ್ಫೋಟದಿಂದಾಗಿ ಜನರಲ್ಲಿ ಭೀತಿ ಉಂಟಾಗಿದೆ. ಕಟ್ಟಡಗಳ ಮತ್ತು ಇತರ ಅವಶೇಷಗಳಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ಥರಾಲಿ-ಗ್ವಾಲ್ಡಮ್ ರಸ್ತೆ ಮತ್ತು ಥರಾಲಿ-ಸಾಗ್ವಾರಾ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಿಂಗ್ಡೇರಾ ಬಳಿಯ ರಸ್ತೆಯಿಂದ ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ. ಗಡಿ ರಸ್ತೆಗಳ ಸಂಘಟನೆ (BRO) ಸಮರೋಪಾದಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ; ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳಿ ಹರಿದುಬಂತು ಭಾರೀ ಪ್ರವಾಹ
2 ವಾರಗಳ ಹಿಂದಷ್ಟೇ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರವಾಹ ಉಂಟಾಗಿತ್ತು. ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟು ನೂರಾರು ಮಂದಿ ನಾಪತ್ತೆಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




