ಅಮೃತಸರ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್ ಸಂಚಾರ; ದೆಹಲಿಯತ್ತ ತಿರುಗಿದ 7 ವಿಮಾನಗಳು

ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಹಲವಾರು ಅನುಮಾನಾಸ್ಪದ ಡ್ರೋನ್‌ಗಳು ಹಾರಾಡಿದ ಹಿನ್ನೆಲೆಯಲ್ಲಿ 2 ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು 7 ವಿಮಾನಗಳನ್ನು ದೆಹಲಿಗೆ ಮಾರ್ಗ ಬದಲಾಯಿಸಲಾಗಿದೆ. ರನ್‌ವೇ ಪ್ರದೇಶದ ಸಮೀಪ ಡ್ರೋನ್ ಮಾದರಿಯ ವಸ್ತುಗಳು ಚಲಿಸುತ್ತಿರುವುದು ಭಾನುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕಂಡುಬಂದಿದೆ. ಇದರಿಂದ ತಕ್ಷಣ ಭದ್ರತಾ ತಪಾಸಣೆ ನಡೆಸಲಾಯಿತು. ಪಂಜಾಬ್ ಪೊಲೀಸ್ ಹಾಗೂ ಕೇಂದ್ರ ಭದ್ರತಾ ಸಂಸ್ಥೆಗಳನ್ನು ತಕ್ಷಣವೇ ಜಾಗರೂಕಗೊಳಿಸಲಾಯಿತು.

ಅಮೃತಸರ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್ ಸಂಚಾರ; ದೆಹಲಿಯತ್ತ ತಿರುಗಿದ 7 ವಿಮಾನಗಳು
ವಿಮಾನ

Updated on: Sep 07, 2026 | 8:00 PM

ನವದೆಹಲಿ, ಸೆಪ್ಟೆಂಬರ್ 7: ಪಂಜಾಬ್‌ನ ಅಮೃತಸರದಲ್ಲಿರುವ ಶ್ರೀ ಗುರು ರಾಮ್ ದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಯ್ದಿರಿಸಿದ ವಾಯುಪ್ರದೇಶದಲ್ಲಿ ಡ್ರೋನ್ ಸಂಚಾರ ನಡೆಸಿದ ಅನುಮಾನದ ಹಿನ್ನೆಲೆಯಲ್ಲಿ ಭದ್ರತಾ ಮುನ್ನೆಚ್ಚರಿಕೆಯಾಗಿ ಅಮೃತಸರಕ್ಕೆ ಆಗಮಿಸಬೇಕಿದ್ದ 7 ವಿಮಾನಗಳನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದೆ. ರಕ್ಷಣಾ ಹಾಗೂ ಭದ್ರತಾ ಸಂಸ್ಥೆಗಳು ತಕ್ಷಣವೇ ಎಚ್ಚೆತ್ತುಕೊಂಡು ಪರಿಶೀಲನೆ ನಡೆಸಿದ್ದರಿಂದ ವಿಮಾನ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಯಿತು.

ಒಂದೂವರೆ ಗಂಟೆ ವಿಮಾನ ಸಂಚಾರ ಸ್ಥಗಿತ:

ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಅನಿರುದ್ಧ್ ಕುಮಾರ್ ಮಾತನಾಡಿ, ಭಾನುವಾರ ರಾತ್ರಿ ವಿಮಾನ ನಿಲ್ದಾಣದ ಕಾರ್ಯಾಚರಣೆಯ ವಲಯದಲ್ಲಿ ಹಲವಾರು ಶಂಕಿತ ಡ್ರೋನ್‌ಗಳು ಹಾರಾಡುತ್ತಿದ್ದವು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ರನ್‌ವೇ ಪ್ರದೇಶಕ್ಕೆ ತೀರ ಸಮೀಪದಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿದ್ದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಎಲ್ಲಾ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ತಪ್ಪಿದ ಭಾರಿ ದುರಂತ: ಬೆಂಗಳೂರಿನಲ್ಲಿ ವರ್ಜಿನ್ ಅಟ್ಲಾಂಟಿಕ್ ವಿಮಾನ ತುರ್ತು ಭೂಸ್ಪರ್ಶ

ಮಾರ್ಗ ಬದಲಾದ ವಿಮಾನಗಳು:

ಮಲೇಷ್ಯಾ ಏರ್‌ಲೈನ್ಸ್, ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಗಳ ವಿಮಾನಗಳು ದೆಹಲಿಗೆ ಮಾರ್ಗ ಬದಲಾದ 7 ವಿಮಾನಗಳಲ್ಲಿ ಸೇರಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.


ಡ್ರೋನ್ ಪತ್ತೆ ಕಾರ್ಯಾಚರಣೆ:

ವಿಮಾನ ನಿಲ್ದಾಣದ ಸುತ್ತಮುತ್ತ ಅನುಮಾನಾಸ್ಪದವಾಗಿ ಡ್ರೋನ್ ರೀತಿಯ ವಸ್ತುವೊಂದು ಕಂಡುಬಂದ ತಕ್ಷಣವೇ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಭದ್ರತಾ ಸಿಬ್ಬಂದಿಗಳು ‘ರೆಡ್ ಅಲರ್ಟ್’ ಘೋಷಿಸಿ, ರನ್‌ವೇ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಇದನ್ನೂ ಓದಿ: ವಿಮಾನ ಹಾರುವಾಗ ಎಂಜಿನ್ ಆಯಿಲ್ ದಿಢೀರ್ ಕುಸಿತ; ಕೊಚ್ಚಿಗೆ ವಾಪಸ್ಸಾದ ಏರ್ ಇಂಡಿಯಾ ವಿಮಾನ; ತಪ್ಪಿದ ದೊಡ್ಡ ಅನಾಹುತ

ಪಂಜಾಬ್ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ ಅಧಿಕಾರಿಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಡಿಪ್ರದೇಶಕ್ಕೆ ಸಮೀಪವಿರುವ ಅಮೃತಸರದಲ್ಲಿ ಡ್ರೋನ್ ಚಟುವಟಿಕೆಗಳು ಗಂಭೀರ ಭದ್ರತಾ ಬೆದರಿಕೆಯಾಗಿರುವುದರಿಂದ ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us