10 ರಾಜ್ಯಗಳು 27 ಪತ್ನಿಯರು; ಒಡಿಶಾ ವ್ಯಕ್ತಿಯ ವಂಚನೆ ಜಾಲ ಬಹುದೊಡ್ಡದು, ಮೋಸಹೋದವರೆಲ್ಲ ವಕೀಲರು, ವೈದ್ಯರು, ಶಿಕ್ಷಕಿಯರು !
ಮ್ಯಾಟ್ರಿಮೋನಿ ಸೈಟ್ನಲ್ಲಿ ತಾನೊಬ್ಬ ವೈದ್ಯ, ಲಾಯರ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ.
ಫೆಬ್ರವರಿ 13ರಂದು 66ವರ್ಷದ ವ್ಯಕ್ತಿಯೊಬ್ಬ ಭುವನೇಶ್ವರ್ದಲ್ಲಿ ಕಾರಿನಲ್ಲಿ ತೆರಳುತ್ತಿದ್ದ. ಏಕಾಏಕಿ ಅವರ ಕಾರನ್ನು ಒಡಿಶಾ ಪೊಲೀಸರ (Odisha Police) ವಿಶೇಷ ತಂಡವೊಂದು ಅಡ್ಡಗಟ್ಟಿತು. ಅಂದಹಾಗೇ, ಈ ವ್ಯಕ್ತಿಯನ್ನು ಪೊಲೀಸರು ಕಳೆದ 8 ತಿಂಗಳುಗಳಿಂದಲೂ ಹಿಂಬಾಲಿಸುತ್ತ, ಗಮನಿಸುತ್ತಿದ್ದರು. ಆತನ ಆನ್ಲೈನ್ ವ್ಯವಹಾರಗಳ ಮೇಲೆ ನಿಗಾ ಇಟ್ಟಿದ್ದರು. ಆತನ ವಾಹನ ಎಲ್ಲಿ ಹೋಗುತ್ತದೆ, ಏನು ಮಾಡುತ್ತದೆ ಎಂಬೆಲ್ಲದರ ಬಗ್ಗೆಯೂ ವಿಶೇಷ ಹೋಂವರ್ಕ್ ಮಾಡುತ್ತಲೇ ಇದ್ದರು.
ಈ ವ್ಯಕ್ತಿಯ ಹೆಸರು ಬಿಭು ಪ್ರಕಾಶ್ ಸ್ವೈನ್. ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದ ಇವನನ್ನು ಪೊಲೀಸರು ಅಡ್ಡಗಟ್ಟಿದ ಕೂಡಲೇ, ಪೇಲವವಾಗಿ ನಗುತ್ತ ಕೆಳಗೆ ಇಳಿದಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಅಂದಹಾಗೆ ನಾವಿಲ್ಲಿ ಹೇಳುತ್ತಿರುವುದು ಇನ್ಯಾರ ಬಗ್ಗೆಯೂ ಅಲ್ಲ, ಏಳು ರಾಜ್ಯಗಳಿಂದ 14 ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಗ್ಗೆ. ಕಳೆದ ವಾರ ಸುದ್ದಿ ಮಾಡಿದ್ದ ಈ ವ್ಯಕ್ತಿಯ ಬಗ್ಗೆ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ಬಿಭು ಪ್ರಕಾಶ್ ಮದುವೆಯಾಗಿದ್ದು 14 ಮಹಿಳೆಯರನ್ನಲ್ಲ, 27 ಮಹಿಳೆಯರನ್ನು ಎಂದು ಗೊತ್ತಾಗಿದೆ.
ಮ್ಯಾಟ್ರಿಮೋನಿ ಸೈಟ್ನಲ್ಲಿ ತಾನೊಬ್ಬ ವೈದ್ಯ, ಲಾಯರ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಈತ ನಂಬಿಸಿ, ಮೋಸ ಮಾಡುತ್ತಿದ್ದುದೂ ಕೂಡ ಅಂಥ ಉನ್ನತ ಸ್ಥಾನದಲ್ಲಿರುವ ವಿಚ್ಛೇದಿತ, ಅವಿವಾಹಿತ ಮಧ್ಯವಯಸ್ಕ ಮಹಿಳೆಯರಿಗೆ. ಅವರನ್ನು ಪರಿಚಯ ಮಾಡಿಕೊಳ್ಳುವುದು, ಮದುವೆಯಾಗುವುದು ನಂತರ ಅವರಲ್ಲಿದ್ದ ಹಣ , ಒಡವೆ ದೋಚಿ ಪರಾರಿಯಾಗುವುದು ಇವನ ಕೆಲಸವಾಗಿತ್ತು. 14ನೇ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ತನಿಖೆಯಲ್ಲಿ ಈತ ಮದುವೆಯಾಗಿದ್ದು 10 ರಾಜ್ಯಗಳ 27 ಮಹಿಳೆಯರನ್ನು ಎಂಬುದು ಸ್ಪಷ್ಟವಾಗಿದೆ. ಅದರೊಂದಿಗೆ ಕೇರಳದಲ್ಲಿ 2006ರಲ್ಲಿ 128 ನಕಲಿ ಕ್ರೆಡಿಟ್ ಕಾರ್ಡ್ಗಳ ಮೂಲಕ 13 ಬ್ಯಾಂಕ್ಗಳಿಗೆ ಸುಮಾರು 1 ಕೋಟಿ ರೂಪಾಯಿ ವಂಚಿಸಿದ್ದಾನೆ. ಅಷ್ಟೇ ಅಲ್ಲ, ಹೈದರಾಬಾದ್ನಲ್ಲಿ ಅನೇಕರಿಗೆ ಅವರ ಮಕ್ಕಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದಾನೆ ಎಂಬ ಸತ್ಯ ಬಯಲಿಗೆ ಬಂದಿದೆ.
ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಕಮಾಂಡಂಟ್ ಆಗಿದ್ದವರೂ ಕೂಡ ಈತನ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಛತ್ತೀಸ್ಗಢ್ನ ಚಾರ್ಟರ್ಡ್ ಅಕೌಂಟೆಂಟ್, ದೆಹಲಿಯ ಶಿಕ್ಷಕಿಯರು, ಅಸ್ಸಾಂನ ವೈದ್ಯೆ, ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್ನ ಇಬ್ಬರು ವಕೀಲೆಯರು, ಇಂಧೋರ್ನ ಸರ್ಕಾರಿ ಉದ್ಯೋಗಿ, ಕೇರಳಾ ಆಡಳಿತಾತ್ಮಕ ಸೇವಾಧಿಕಾರಿ..ಹೀಗೆ ಇಂಥ ಉನ್ನತ ಹುದ್ದೆಯಲ್ಲಿ ಇದ್ದವರೇ ಬಿಭು ಪ್ರಕಾಶ್ ಬಲೆಗೆ ಬಿದ್ದಿದ್ದಾರೆ. ಈತ ಬಂಧಿತನಾಗುತ್ತಿದ್ದಂತೆ ಒಬ್ಬೊಬ್ಬರೇ ತಮ್ಮ ಕತೆ ಹೇಳಿಕೊಳ್ಳುತ್ತಿದ್ದಾರೆ. ಮಹಿಳೆಯರ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತೀದ್ದ ವ್ಯಕ್ತಿಯೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಅಷ್ಟು ಸುಲಭವಾಗಿ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ! ಪತ್ರಕರ್ತರ ವಿರುದ್ಧದ ಸಾಹ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ
Published On - 6:28 pm, Tue, 22 February 22