ಗಂಗಾನದಿಯಲ್ಲಿ ಏಕಾಂಗಿಯಾಗಿ ಪವಿತ್ರ ಸ್ನಾನ ಮಾಡುವವರು ಹಿಂದುತ್ವವಾದಿ; ರಾಹುಲ್ ಗಾಂಧಿ ಹೊಸ ವ್ಯಾಖ್ಯಾನ
Rahul Gandhi In Amethi: ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯ ಲಲಿತ್ ಘಾಟ್ನಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ನಿನ್ನೆ ರಾಹುಲ್ ಗಾಂಧಿ (Congress Leader Rahul Gandhi) ತಮ್ಮ ಹಳೆಯ ಲೋಕಸಭಾ ಕ್ಷೇತ್ರ ಅಮೇಠಿಗೆ (Amethi) ಭೇಟಿ ನೀಡಿ, ಅಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ತೊಲಗಿಸಿ, ಹಣದುಬ್ಬರ ಇಳಿಸಿ ಎಂಬ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು, ಬಿಜೆಪಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರಕ್ಕೆ ಬಿಜೆಪಿ ಸರ್ಕಾರಗಳೇ ಕಾರಣ ಎಂದು ಆರೋಪಿಸಿರುವ ಅವರು, ಅನ್ಯಾಯದ ವಿರುದ್ಧ ಈಗ ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನಾನು 2004ರಲ್ಲಿ ರಾಜಕೀಯಕ್ಕೆ ಬಂದೆ. ನಾನು ಮೊದಲ ಸಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅಮೇಠಿಯಿಂದ. ಇಲ್ಲಿನ ಜನರು ನನಗೆ ರಾಜಕೀಯದ ಆಳಗಲವನ್ನು ಕಲಿಸಿದ್ದಾರೆ. ರಾಜಕೀಯದಲ್ಲಿ ದಾರಿಯನ್ನು ತೋರಿಸಿದ್ದಾರೆ. ಹಾಗಾಗಿ ಅಮೇಠಿಯ ಜನರಿಗೆ ನಾನು ಸದಾ ಕೃತಜ್ಞನಾಗಿ ಇರುತ್ತೇನೆ ಎಂದು ಹೇಳಿದ್ದಾರೆ. ಅಂದಹಾಗೆ, ಅಮೇಠಿ ಕ್ಷೇತ್ರ ನೆಹರೂ ಮತ್ತು ಗಾಂಧಿ ಕುಟುಂಬದ ಸ್ವಕ್ಷೇತ್ರದಂತೆ ಇತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ವಿರುದ್ಧ ಇಲ್ಲಿ ಸೋತಿದ್ದರು. ಅದಾದ ಬಳಿಕ ಇತ್ತ ಕಡೆ ಬಂದಿರಲಿಲ್ಲ. ಆದರೀಗ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು, ಬಿಜೆಪಿ ವಿರುದ್ಧ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಹಿಂದು V/S ಹಿಂದುತ್ವವಾದಿ ರಾಹುಲ್ ಗಾಂಧಿಯವರು ಹಿಂದು ಮತ್ತು ಹಿಂದುತ್ವವಾದಿ ಎಂಬುದರ ಸಂಬಂಧ ನೀಡಿದ್ದ ಹೇಳಿಕೆಯ ಬಗ್ಗೆ ಇಂದಿಗೂ ಕೂಡ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಸಕ್ರಿಯವಾಗಿರುವ ಹೊತ್ತಲ್ಲಿ, ರಾಹುಲ್ ಗಾಂಧಿ ಅಮೇಠಿಯಲ್ಲಿ ಮತ್ತೆ ಇದರ ಪ್ರಸ್ತಾಪ ಮಾಡಿದರು. ಹಿಂದು-ಹಿಂದುತ್ವವಾದಿ ಶಬ್ದಗಳನ್ನು ಬಳಸಿ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದರು. ಯಾರು ಸತ್ಯದ ಹಾದಿಯನ್ನು ತುಳಿಯಲು ಸ್ವಲ್ಪವೂ ಭಯ ಪಡುವುದಿಲ್ಲವೋ ಅವರು ಹಿಂದು. ಅಷ್ಟೇ ಅಲ್ಲ, ಯಾರು ತಮ್ಮ ಭಯವನ್ನು ಹಿಂಸಾಚಾರ, ದ್ವೇಷ, ಸಿಟ್ಟನ್ನಾಗಿ ಬದಲಿಸುವುದಿಲ್ಲವೋ ಅವರು ನಿಜವಾದ ಹಿಂದು. ಅದಕ್ಕೆ ಉದಾಹರಣೆ ಮಹಾತ್ಮ ಗಾಂಧಿ. ಆದರೆ ನಾಥೂರಾಮ್ ಗೋಡ್ಸೆ ಮತ್ತು ಆತನಂಥವರು ಹಿಂದುತ್ವವಾದಿ. ಸದಾ ಸತ್ಯವನ್ನೇ ಹೇಳುವ ಹಿಂದು (ಮಹಾತ್ಮ ಗಾಂಧಿ)ವನ್ನು ಕೊಂದ ಗೋಡ್ಸೆ ಒಬ್ಬ ಹಿಂದುತ್ವವಾದಿ. ಆತನೊಬ್ಬ ಹೇಡಿ. ಗೋಡ್ಸೆಗೆ ತನ್ನ ಭಯವನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯ ಲಲಿತ್ ಘಾಟ್ನಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರ ಬಗ್ಗೆ ವ್ಯಂಗ್ಯವಾಡಿದರು. ಒಬ್ಬ ಹಿಂದುತ್ವವಾದಿ ಗಂಗಾ ನದಿಯಲ್ಲಿ ಏಕಾಂಗಿಯಾಗಿ ಪವಿತ್ರ ಸ್ನಾನ ಮಾಡುತ್ತಾರೆ. ಅದೇ ಒಬ್ಬ ಹಿಂದು, ಕೋಟ್ಯಂತರ ಜನರೊಂದಿಗೆ ಸೇರಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾನೆ. ಪ್ರಧಾನಿ ನರೇಂದ್ರ ಮೋದಿ ತಾನೊಬ್ಬ ಹಿಂದು ಎಂದು ಹೇಳುತ್ತಾರೆ. ಆದರೆ ಸತ್ಯವನ್ನು ಅವರು ಯಾವಾಗ ರಕ್ಷಣೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
#WATCH | A ‘Hindutvavadi’ bathes alone in Ganga, while a Hindu bathes with crores of people…Narendra Modi says he is a Hindu, but when did he protect truth?…He asked people to bang thalis to get rid of COVID…Hindu or Hindutvadi?: Congress MP Rahul Gandhi in Amethi pic.twitter.com/S51O22YxF9
— ANI UP (@ANINewsUP) December 18, 2021
ಇದನ್ನೂ ಓದಿ: Realme GT 2 Pro: ಒಂದೇ ದಿನ ಬಾಕಿ: ಸೋಮವಾರ ಮಾರುಕಟ್ಟೆಗೆ ಅಪ್ಪಳಿಸಲಿದೆ ಬಹುನಿರೀಕ್ಷೆಯ ರಿಯಲ್ ಮಿ GT 2 ಸರಣಿ
Published On - 3:38 pm, Sun, 19 December 21