ಕೊವಿಡ್ 19 ಸೋಂಕಿತರ ಸೇವೆ ಮಾಡುತ್ತಿರುವ ಇಂಗ್ಲಿಷ್ ಶಿಕ್ಷಕ; ಬಡ ರೋಗಿಗಳಿಗೆ ಇವರ ಆಟೋವೇ ಆಂಬುಲೆನ್ಸ್
ಈ ಶಿಕ್ಷಕರ ಹೆಸರು ದತ್ತಾತ್ರೇಯ ಸಾವಂತ್. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ, ಗುಣಮುಖರಾದವರನ್ನು ಮನೆಗೆ ಕರೆದುಕೊಂಡು ಬರುವ, ಅಗತ್ಯ ಇರುವವರನ್ನು ಕೊವಿಡ್ 19 ಕೇಂದ್ರಗಳಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ.
ಮುಂಬೈ: ಕೊರೊನಾ ಎರಡನೇ ಅಲೆ ಭಾರತದಲ್ಲಿ ದಿನೇದಿನೆ ವಿನಾಶಕಾರಿಯಾಗಿ ಪರಿಣಮಿಸುತ್ತಿದೆ. ಸರ್ಕಾರಗಳ ಎಲ್ಲ ಹೋರಾಟದ ನಂತರವೂ ಸೋಂಕು ನಿಯಂತ್ರಣ ಕಬ್ಬಿಣದ ಕಡಲೆಯಾಗಿದೆ. ದೇಶಕ್ಕೆ ಇಂಥ ಸ್ಥಿತಿ ಬಂದಾಗ ಅದೆಷ್ಟೋ ಜನ ನಾಗರಿಕರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವ ಬದಲು ಸರ್ಕಾರದೊಂದಿಗೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಅವರಲ್ಲಿ ಮುಂಬೈನ ಈ ಶಿಕ್ಷಕರೂ ಒಬ್ಬರು. ಕೊರೊನಾ ರೋಗಿಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.
ಈ ಶಿಕ್ಷಕರ ಹೆಸರು ದತ್ತಾತ್ರೇಯ ಸಾವಂತ್. ಶಿಕ್ಷಕರಾಗಿದ್ದೂ ಸದ್ಯ ಶಾಲೆಗಳೆಲ್ಲ ರಜಾ ಇರುವ ಕಾರಣಕ್ಕೆ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ, ಗುಣಮುಖರಾದವರನ್ನು ಮನೆಗೆ ಕರೆದುಕೊಂಡು ಬರುವ, ಅಗತ್ಯ ಇರುವವರನ್ನು ಕೊವಿಡ್ 19 ಕೇಂದ್ರಗಳಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದು, ಇದೀಗ ಎಲ್ಲೆಡೆಯಿಂದ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ. ಕೊರೋನಾ ರೋಗಿಗಳಿಗೆ ಸಹಾಯ ಮಾಡುತ್ತಿರುವ ಇವರು ತಮಗೆ ಸೋಂಕು ತಗುಲದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನೂ ವಹಿಸಿದ್ದಾರೆ. ಪಿಪಿಇ ಕಿಟ್ಗಳನ್ನು ಧರಿಸಿಯೇ ಕೊವಿಡ್ 19 ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಹಾಗೇ ಒಂದು ರೋಗಿಯನ್ನು ಸಾಗಿಸಿ ಮುಗಿದ ಬಳಿಕ ಇಡೀ ಗಾಡಿಯನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ.
ನಾನು ಈ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ. ಈಗಂತೂ ದಿನೇದಿನೆ ಕೊರೊನಾ ರೋಗಿಗಳ ಸಂಖ್ಯೆ ಮಿತಿಮೀರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಡ ಜನರಿಗೆ ಆಂಬುಲೆನ್ಸ್ ಸಿಗುತ್ತಿಲ್ಲ. ಬೇರೆ ವಾಹನಗಳು ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಹಾಗಾಗಿ ನಾನು ಅಂಥವರಿಗೆ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ಹೇಳುತ್ತಾರೆ ಶಿಕ್ಷಕ ದತ್ತಾತ್ರೇಯ ಸಾವಂತ್. ನಾನು ಕೊವಿಡ್ ರೋಗಿಗಳನ್ನು ಅವರು ಹೇಳುವ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತೇನೆ. ಹಾಗೇ, ಗುಣಮುಖರಾದವರನ್ನು ವಾಪಸ್ ಅವರ ಮನೆಗೂ ಬಿಡುತ್ತೇನೆ. ಇದ್ಯಾವುದಕ್ಕೂ ಹಣ ತೆಗೆದುಕೊಳ್ಳುವುದಿಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತೇನೆ ಎಂದು ದತ್ತಾತ್ರೇಯ ಸಾವಂತ್ ತಿಳಿಸಿದ್ದಾರೆ.
ಸಾವಂತ್ ಅವರು ಮುಂಬೈನ ಘಟ್ಕೋಪಾರ್ ನಿವಾಸಿ. ವಿದ್ಯಾಮಂದಿರ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು. ಕೊವಿಡ್ 19 ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಇವರಿಗೆ ಹಣಕಾಸಿನ ನೆರವು ನೀಡಲು ಹಲವರು ಮುಂದೆ ಬಂದಿದ್ದಾರೆ. ಇವರ ರಿಕ್ಷಾಕ್ಕೆ ಬೇಕಾಗುವ ಇಂಧನದ ಚಾರ್ಜ್ನ್ನು ತಾವೇ ಭರಿಸುವುದಾಗಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ದಾವಣಗೆರೆ: ರಶೀದಿ ಕೇಳಿದ್ದಕ್ಕೆ ನಿವೃತ್ತ ಸೈನಿಕನಿಗೆ ಹಿಗ್ಗಾಮುಗ್ಗಾ ಥಳಿತ; ಪೊಲೀಸರ ವಿರುದ್ಧ ಸೈನಿಕನ ಆರೋಪ