ಕರ್ನಾಟಕದ ಪ್ರಕರಣಗಳ ವಿಚಾರಣೆಗೆಂದೇ ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಬೇಕಾಗುತ್ತದೆ: ವ್ಯಂಗ್ಯ ಮಾಡಿದ ಸಿಜೆಐ ಎನ್​.ವಿ.ರಮಣ

S Chandramohan

| Edited By: Lakshmi Hegde

Updated on:Feb 17, 2022 | 10:55 AM

ಗಣಿಗಾರಿಕೆಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ವಾಸಿಸುವ ಜನರ, ಪ್ರದೇಶಗಳ ಅಭಿವೃದ್ಧಿಗೆ ಹಣವನ್ನು ಬಳಸಬೇಕಾಗಿರುವುದರಿಂದ ಪ್ರಕರಣವನ್ನು ತೀವ್ರ ತುರ್ತು ಎಂದು ಪರಿಗಣಿಸಿ ಅರ್ಜಿ ವಿಚಾರಣೆ ನಡೆಸಬೇಕೆಂದು ಕರ್ನಾಟಕ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.

ಕರ್ನಾಟಕದ ಪ್ರಕರಣಗಳ ವಿಚಾರಣೆಗೆಂದೇ ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಬೇಕಾಗುತ್ತದೆ: ವ್ಯಂಗ್ಯ ಮಾಡಿದ ಸಿಜೆಐ ಎನ್​.ವಿ.ರಮಣ
ಸಿಜೆಐ ಎನ್​ವಿ ರಮಣ

ಕರ್ನಾಟಕದಲ್ಲಿ ಸುಪ್ರೀಂಕೋರ್ಟ್ (Supreme Court)​ ಮೆಟ್ಟಿಲೇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಅಲ್ಲಿನ ಪ್ರಕರಣಗಳ ವಿಚಾರಣೆಗೆ ಸೀಮಿತವಾಗಿಯೇ ಸರ್ವೋಚ್ಛ ನ್ಯಾಯಾಲಯದಲ್ಲಿ ಒಂದು ಪ್ರತ್ಯೇಕ ಪೀಠ ಸ್ಥಾಪಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ (CJI N.V.Ramana) ನಿನ್ನೆ (ಫೆ.16) ವ್ಯಂಗ್ಯವಾಗಿ ಹೇಳಿದ್ದಾರೆ. ಕಳೆದ ವಾರ ಮತ್ತು ಈ ವಾರ ನಿರಂತರವಾಗಿ ಕರ್ನಾಟಕದ ಹಲವು ಪ್ರಕರಣಗಳನ್ನು ತುರ್ತು ವಿಚಾರಣೆ ಮಾಡುವಂತೆ ಕೋರಿ, ಸಿಜೆಐ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರಿಂದ ಎನ್.ವಿ.ರಮಣ ಹೀಗೆ ಹೇಳಿದ್ದಾರೆ.

ಕರ್ನಾಟಕದ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಅದಿರು ಗಣಿಗಾರಿಕೆಯಿಂದ ತೊಂದರೆಗೊಳಗಾದ ಪ್ರದೇಶಗಳ ಪುನಶ್ಚೇತನ, ಪುನರ್ ನಿರ್ಮಾಣಕ್ಕಾಗಿ 18 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಲು ಕರ್ನಾಟಕ ಸರ್ಕಾರವು ಈಗ ಸುಪ್ರೀಂಕೋರ್ಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಹಾಗೇ ಈ ಪ್ರಕರಣದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸಾಲಿಸಿಟರ್​ ಜನರಲ್​ ತುಷಾರ್ ಮೆಹ್ತಾ ಮನವಿ ಮಾಡಿದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಸಿಜೆಐ, ಈ ತುರ್ತು ವಿಚಾರಣೆ ಆಗಬೇಕಾದ ಪ್ರಕರಣಗಳ ಪಟ್ಟಿಯನ್ನು ನಾವು ಮಾಡುತ್ತೇವೆ. ಹೀಗೇ ಆದರೆ ಕರ್ನಾಟಕದ ವಿಷಯಗಳಿಗೆ ಮಾತ್ರ ಒಂದು ಪೀಠ ರಚಿಸಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಅಂದಹಾಗೇ, ಈಗ ಸಲ್ಲಿಕೆಯಾದ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಕರಣವು ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಹಾನಿಗೊಳಗಾದ ಜನರಿಗೆ ಪಾವತಿಸಬೇಕಾದ ಪರಿಹಾರಕ್ಕೆ ಸಂಬಂಧಿಸಿದೆ. ಗಣಿಗಾರಿಕೆ ಪರಿಣಾಮ ವಲಯಗಳ ಸಮಗ್ರ ಪರಿಸರ ಯೋಜನೆ (CEPMIZ) ಅಡಿಯಲ್ಲಿ ಮರುಸ್ಥಾಪನೆ ಯೋಜನೆಗಳ ಅನುಷ್ಠಾನಕ್ಕೆ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ಅನುಮತಿ ಕೋರಲಾಗಿತ್ತು. ಕೇಂದ್ರ ಉನ್ನತಾಧಿಕಾರ ಸಮಿತಿಯು 24,000 ಕೋಟಿ ರೂಪಾಯಿ ಮೊತ್ತದ CEPMIZ ಅನ್ನು ಶಿಫಾರಸು ಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈಗ ಸಂಗ್ರಹವಾಗಿರುವ ಮೊತ್ತ 18,722 ಕೋಟಿ ರೂಪಾಯಿಗೆ ತಲುಪಿದ್ದು, ಅದು ಈಗ ಮೇಲ್ವಿಚಾರಣಾ ಸಮಿತಿಯಲ್ಲಿ ಲಭ್ಯವಿದೆ ಎಂದೂ ಹೇಳಲಾಗಿದೆ.

ಗಣಿಗಾರಿಕೆಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ವಾಸಿಸುವ ಜನರ, ಪ್ರದೇಶಗಳ ಅಭಿವೃದ್ಧಿಗೆ ಹಣವನ್ನು ಬಳಸಬೇಕಾಗಿರುವುದರಿಂದ ಪ್ರಕರಣವನ್ನು ತೀವ್ರ ತುರ್ತು ಎಂದು ಪರಿಗಣಿಸಿ ಅರ್ಜಿ ವಿಚಾರಣೆ ನಡೆಸಬೇಕೆಂದು ಕರ್ನಾಟಕ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ. ಕರ್ನಾಟಕದ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಅದಿರು ಗಣಿಗಾರಿಕೆಯಿಂದ ಗಣಿ ಪ್ರದೇಶಗಳು ಹಾಳಾಗಿವೆ. ಅದಿರು ಗಣಿಗಾರಿಕೆಯಿಂದ ಈ ಪ್ರದೇಶದ ಜನರ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಹೀಗಾಗಿ ಗಣಿ ಕಂಪನಿಗಳಿಂದ ಗಣಿ ಪ್ರದೇಶದ ಅಭಿವೃದ್ದಿಗೆ ಜಿಲ್ಲಾ ಮಿನರಲ್ ಫಂಡ್ ಅನ್ನು ಸಂಗ್ರಹಿಸಲಾಗಿದೆ. ಈಗ ಇದರ ಮೊತ್ತವೇ 18 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಜಿಲ್ಲಾ ಮಿನರಲ್ ಫಂಡ್ ನಲ್ಲಿ ಹಣ ಇದೆ. ಆದರೇ, ಈ ಬೃಹತ್ ಮೊತ್ತದ ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶದ ಪುನಶ್ಚೇತನ ಹಾಗೂ ಅಭಿವೃದ್ದಿಗೆ ಬಳಸಲು ಸುಪ್ರೀಂಕೋರ್ಟ್ ನ ಅನುಮತಿ ಬೇಕಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರವು 18 ಸಾವಿರ ಕೋಟಿ ರೂಪಾಯಿ ಹಣದ ಬಳಕೆಗೆ ಸುಪ್ರೀಂಕೋರ್ಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.

ಈ ಅರ್ಜಿಯನ್ನೇ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಿಜೆಗೆ ಮನವಿ ಮಾಡಲಾಗಿತ್ತು. 18 ಸಾವಿರ ಕೋಟಿ ರೂಪಾಯಿ ಹಣವು ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಣಿ ಪ್ರದೇಶ, ಚಿತ್ರದುರ್ಗದ ಹೊಸದುರ್ಗ ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಗಣಿ ಪ್ರದೇಶಗಳ ಅಭಿವೃದ್ದಿಗೆ ಹಣ ಬಳಕೆ ಮಾಡಬೇಕಾಗಿದೆ.

ವರದಿ-  ಚಂದ್ರಮೋಹನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada