ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದವನ ಹತ್ಯೆ ಮಾಡಿದ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​..

11 ವರ್ಷ ವಿಚಾರಣೆ ಮಾಡಿದ ನ್ಯಾಯಾಲಯ ಇಂದು ತೀರ್ಪು ನೀಡಿ, ಪ್ರವೀಣ್​ ಕುತ್ತಿಗೆಯ ಮೇಲೆ ಐದು ಬಾರಿ ಕೊಡಲಿಯಿಂದ ಹಲ್ಲೆಯಾಗಿದೆ. ಆದರೆ ಆತನ ಅತ್ಯಾಚಾರ ಪ್ರಯತ್ನವನ್ನು ತಡೆಯಲು ಇಷ್ಟೆಲ್ಲ ಬಾರಿ ಹೊಡೆಯುವ ಅಗತ್ಯವಿರಲಿಲ್ಲ ಎಂದು ಹೇಳಿದೆ.

ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದವನ ಹತ್ಯೆ ಮಾಡಿದ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​..
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Oct 18, 2021 | 4:09 PM

ಮೀರತ್​: ಮಗಳ ಮೇಲೆ ಅತ್ಯಾಚಾರವಾಗುತ್ತಿದ್ದುದನ್ನು ನೋಡಿ ಸುಮ್ಮನೆ ಇರಲಾಗದ ತಾಯಿ, ರೇಪ್​ ಮಾಡಲು ಬಂದವನನ್ನು ಕೊಂದಿದ್ದರು. ಆ 70 ವರ್ಷ ವಯಸ್ಸಿನ ತಾಯಿಗೆ ಈಗ ಉತ್ತರಪ್ರದೇಶದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಂದಹಾಗೆ ಈ ಘಟನೆ ನಡೆದದ್ದು 2010ರಲ್ಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಬುಲಂದ್‌ಶಹರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರ್ ಶುಕ್ಲಾ ಈ ತೀರ್ಪು ನೀಡಿದ್ದಾರೆ. 

ಈ ಆರೋಪಿ ಮಹಿಳೆ ಹೆಸರು ಕಸ್ತೂರಿ ದೇವಿ. 70 ವರ್ಷದ ವಿಧವೆ.  ಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರವೀಣ್​ ಕುಮಾರ್​​ ಎಂಬಾತನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದರು. ಈ ಘಟನೆ ನಡೆದದ್ದು 2010ರ ಜುಲೈ 31ರಂದಾಗಿತ್ತು. ಆಗ ಈ ಮಹಿಳೆಗೆ 59ವರ್ಷ. ಆಕೆಯ ಮಗಳಿಗೆ 20ವರ್ಷ. ಅಂದು ಆತನನ್ನು ಕೊಲೆ ಮಾಡಿದ್ದ ಕಸ್ತೂರಿ ದೇವಿ ಕೂಡಲೇ  ಬುಲಂದ್‌ಶಹರ್‌ ಠಾಣೆಗೆ ಬಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಘಟನೆಯನ್ನು ವಿವರಿಸಿದ್ದರು.

2010ರ ಜುಲೈ 31ರಂದು ಮಧ್ಯರಾತ್ರಿ ಪ್ರವೀಣ್​ ಮಹಿಳೆಯ ಮನೆಗೆ ನುಗ್ಗಿದ್ದ. ಅವರ ಪುತ್ರಿಯನ್ನು ಹಿಡಿದು ಎಳೆದುಕೊಂಡು ಬಂದ ಈತ ರೇಪ್​ ಮಾಡಲು ಯತ್ನಿಸಿದ್ದ. ಅಲ್ಲಿಯೇ ಇದ್ದ ಕಸ್ತೂರಿ ದೇವಿ ಅದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳದೆ ಕೊಡಲಿಯಿಂದ ಪ್ರವೀಣ್​ ಮೇಲೆ ಹಲ್ಲೆ ಮಾಡಿದ್ದರು. ಆತ ಮೃತಪಟ್ಟಿದ್ದ.  ಹತ್ಯೆ ಮಾಡಿ ಠಾಣೆಗೆ ಬಂದ ಮಹಿಳೆಯನ್ನು ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದ್ದರು. ಹಾಗೇ, ಪ್ರವೀಣ್​ ಪೋಸ್ಟ್​ಮಾರ್ಟಮ್​ ವರದಿಯನ್ನೂ ನ್ಯಾಯಾಲಯ ಪರಿಶೀಲನೆ ಮಾಡಿದೆ. ಅದರಲ್ಲಿ, ಆತನ ಕುತ್ತಿಗೆಯ ಮೇಲೆ ಆದ  ಐದು ಮಾರಣಾಂತಿಕ ಗಾಯಗಳಿಂದಾಗಿ ಆತ ಸತ್ತಿದ್ದಾನೆ ಎಂದು ಉಲ್ಲೇಖವಾಗಿದೆ.

11 ವರ್ಷ ವಿಚಾರಣೆ ಮಾಡಿದ ನ್ಯಾಯಾಲಯ ಇಂದು ತೀರ್ಪು ನೀಡಿ, ಪ್ರವೀಣ್​ ಕುತ್ತಿಗೆಯ ಮೇಲೆ ಐದು ಬಾರಿ ಕೊಡಲಿಯಿಂದ ಹಲ್ಲೆಯಾಗಿದೆ. ಆದರೆ ಆತನ ಅತ್ಯಾಚಾರ ಪ್ರಯತ್ನವನ್ನು ತಡೆಯಲು ಇಷ್ಟೆಲ್ಲ ಬಾರಿ ಹೊಡೆಯುವ ಅಗತ್ಯವಿರಲಿಲ್ಲ. ಅಷ್ಟೇ ಅಲ್ಲದೆ ಆತ ಸಾಯುತ್ತಿದ್ದಂತೆ ಮೃತದೇಹವನ್ನು ಮನೆಯಿಂದ ಹೊರತಂದು ಸಹಾಯಕ್ಕಾಗಿ ಅರಚಿದ್ದಾರೆ. ಹಾಗಾಗಿ ಇಲ್ಲಿ ಕೂಡ ಅನುಮಾನ ಕಾಡುತ್ತದೆ. ಪೂರ್ವ ಯೋಜಿತ ಪಿತೂರಿಯೇನೋ ಅನ್ನಿಸುತ್ತದೆ ಎಂದು ಹೇಳಿದೆ. ಹಾಗೇ, ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.  ಅಂದಹಾಗೆ, ಮಹಿಳೆ ಪ್ರವೀಣ್​ ಎಂಬಾತನನ್ನು ಹತ್ಯೆ ಮಾಡಿದ್ದನ್ನು ಆಕೆಯ ಮಗಳು ಮತ್ತು ಮಗ ಇಬ್ಬರೂ ಕಣ್ಣಾರೆ ನೋಡಿದ್ದಾರೆ.

ಇದನ್ನೂ ಓದಿ: Murder: ಉತ್ತರ ಪ್ರದೇಶದಲ್ಲಿ ಕೋರ್ಟ್​ ಒಳಗೇ ವಕೀಲನಿಗೆ ಗುಂಡು ಹಾರಿಸಿ ಬರ್ಬರ ಹತ್ಯೆ

T20 World Cup: ಪಾಕ್ ತಂಡವನ್ನು ಮಣಿಸುವುದರಲ್ಲಿ ಪಿಎಚ್​ಡಿ ಪಡೆದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

Published On - 4:07 pm, Mon, 18 October 21