
ಚೆನ್ನೈ, ನವೆಂಬರ್ 30: ಕಳೆದ ವಾರ ತೇಂಕಾಸಿಯಲ್ಲಿ ಬಸ್ ಅಪಘಾತ ಘಟನೆಯ ನೆನಪು ಮಾಸುವ ಮೊದಲೇ ತಮಿಳುನಾಡಿನಲ್ಲಿ ಮತ್ತೊಂದು ಭೀಕರ ಬಸ್ ಅಪಘಾತ ಘಟನೆ ಸಂಭವಿಸಿದೆ. ಶಿವಗಂಗಾ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಪಿಳ್ಳೈಯಾರ್ಪಟ್ಟಿ ಸಮೀಪದ ಕುಮ್ಮನಗುಡಿ ಎಂಬಲ್ಲಿ ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಈ ದುರ್ಘಟನೆಯಲ್ಲಿ 19 ಮಂದಿಗೆ ಗಾಯಗಳೂ ಆಗಿವೆ.
ಎರಡೂ ಕೂಡ ಸರ್ಕಾರಿ ಬಸ್ಸುಗಳೇ ಆಗಿದ್ದು, ಒಂದು ಬಸ್ಸು ತಿರುಪ್ಪೂರ್ನಿಂದ ಕಾರೈಕ್ಕುಡಿಯತ್ತ ಸಾಗುತ್ತಿತ್ತು. ಮತ್ತೊಂದು ಬಸ್ಸು ಕಾರೈಕ್ಕುಡಿಯಿಂದ ದಿಂಡಿಗಲ್, ಮದುರೈ ಕಡೆಗೆ ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಅಪಘಾತದ ತೀವ್ರತೆ ಬಹಳ ಭಯಾನಕವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿರುವ ಒಂದು ಚಿತ್ರದಲ್ಲಿ, ಒಂದು ಬಸ್ಸಿನ ಬಲಬದಿ ಬಹುತೇಕ ನಾಶವಾಗಿರುವುದು ಕಂಡುಬರುತ್ತದೆ. ಅಪಘಾತ ಸ್ಥಳದಲ್ಲಿ ಶವಗಳು ಸಾಲಾಗಿ ಬಿದ್ದಿರುವ ದೃಶ್ಯ ಕಾಣುತ್ತದೆ.
ಇದನ್ನೂ ಓದಿ: ದಾಂತೆವಾಡದಲ್ಲಿ 37 ನಕ್ಸರು ಶರಣು; ಹಿಂಸಾಮಾರ್ಗ ಬಿಟ್ಟು ಮುಖ್ಯವಾಹಿನಿಗೆ ಬಂದ ಮಾವೋವಾದಿಗಳು
ಒಂದು ಬಸ್ಸಿನ ಮುಂಬದಿಯ ವಿಂಡ್ಶೀಲ್ಡ್ ಕಿತ್ತು ಹೋಗಿ, ಮಹಿಳೆಯೊಬ್ಬಳು ಅದರಿಂದ ಹೊರಗೆ ಜಿಗಿಯುವ ದೃಶ್ಯವೂ ವಿಡಿಯೋದಲ್ಲಿ ಕಾಣುತ್ತದೆ. ಮತ್ತೊಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡು ಕೆಳಗೆ ಕುಳಿತಿದ್ದು, ಆಕೆಯ ಹಣೆಯ ಮೇಲೆ ರಕ್ತ ಸೋರುತ್ತಿರುವ ದೃಶ್ಯವೂ ಕಂಡು ಬಂದಿದೆ.
ಬಸ್ ಅಪಘಾತದ ದೃಶ್ಯ
ಅಪಘಾತವಾದ ಕೂಡಲೇ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಸಹಾಯವಾಗಿದ್ದಾರೆ. ತುರ್ತು ತಂಡಗಳೂ ಕೂಡ ಆಗಮಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಮಾಡಿದ್ದಾರೆ. ಎರಡು ಬಸ್ಸುಗಳಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಈ ಪೈಕಿ 19 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ 11ಕ್ಕಿಂತ ಹೆಚ್ಚಾಗುವ ಭೀತಿ ಇದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್ಐಆರ್
ಕಳೆದ ವಾರವಷ್ಟೇ ತಮಿಳುನಾಡಿನ ತೇಂಕಾಸಿ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಒಂದು ಬಸ್ಸಿನ ಚಾಲಕನ ಅಜಾಗರೂಕ ಚಾಲನೆಯು ಅಪಘಾತಕ್ಕೆ ಕಾರಣವಾಗಿತ್ತು. ಈಗ ಒಂದು ವಾರದ ಅಂತರದಲ್ಲೇ ಅಂಥದ್ದೇ ಅಪಘಾತವು ತಮಿಳುನಾಡಿನಲ್ಲಿ ಮರುಕಳಿಸಿದೆ. ಶಿವಗಂಗಾ ಜಿಲ್ಲೆಯಲ್ಲಿ ಸಂಭವಿಸಿದ ಈ ಅಪಘಾತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ