ಗೋವಾದಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ 51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ (IFFI) ಕನ್ನಡದ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ತಮ್ಮ ಸಿನಿಮಾಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿರುವ ಸುದೀಪ್, ಗೋವಾದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮ್ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ಪಣಜಿಯಲ್ಲಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 24ರವರೆಗೆ ಈ ಫಿಲ್ಮ್ ಫೆಸ್ಟಿವಲ್ ನಡೆಯಲಿದ್ದು,ವಿವಿಧ ದೇಶಗಳ 224 ಸಿನಿಮಾಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಪ್ರತಿಬಾರಿಯೂ ನವೆಂಬರ್20-28ರವರೆಗೆ ಗೋವಾದಲ್ಲಿ ಈ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಈ ಬಾರಿ ಮುಂದೂಡಲಾಗಿತ್ತು.
2004ರಿಂದ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ (International Film Festival of India (IFFI) ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳ ಸಾಲಿಗೆ ಸೇರುತ್ತದೆ. ಹಾಗೇ ಏಷ್ಯಾದಲ್ಲೇ ಅತಿದೊಡ್ಡ ಸಿನಿ ಉತ್ಸವ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಬಾರಿ ವರ್ಚ್ಯುವಲ್ ಆಗಿ ವೀಕ್ಷಿಸುವ ಅವಕಾಶವನ್ನೂ ನೀಡಲಾಗಿದೆ. ಕೊರೊನಾ ವೈರಸ್ ಪ್ರಸರಣ ಇರುವ ಕಾರಣಕ್ಕೆ, ತುಂಬ ಜನ ಆಗಮಿಸಿದರೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ವರ್ಚ್ಯುವಲ್ ವ್ಯವಸ್ಥೆಯನ್ನೂ ಮಾಡಿದ್ದು, ವಿಶೇಷ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನೇತೃತ್ವದಲ್ಲಿ, ಗೋವಾ ಸರ್ಕಾರ ಮತ್ತು ಚಲನಚಿತ್ರ ಉತ್ಸವದ ನಿರ್ದೇಶನಾಲಯಗಳು ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸುತ್ತಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕೊವಿಡ್-19ಗೆ ಸಂಬಂಧಪಟ್ಟ ಎಲ್ಲ ನಿಯಮಗಳನ್ನೂ ಪಾಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಉತ್ಸವ ನಡೆಯುವ ಕ್ರೀಡಾಂಗಣದ ಹೊರ, ಒಳಭಾಗಗಳನ್ನು ಭರ್ಜರಿ ಶೃಂಗರಿಸಲಾಗಿದೆ.
Published On - 11:33 am, Sat, 16 January 21