ಮರ್ಯಾದಾ ಪುರುಷೋತ್ತಮ ರಾಮನ ನಗರಿ ಅಯೋಧ್ಯೆಯಲ್ಲಿ ಈಗ ಭೂಮಿ ಖರೀದಿ ಹಗರಣ ಬಾರಿ ಸದ್ದು ಮಾಡುತ್ತಿದೆ. ಅಯೋಧ್ಯೆಯಲ್ಲಿ ಮಂದಿರ-ಮಸೀದಿ ವಿವಾದ ಬಗೆಹರಿಯುತ್ತಿದ್ದಂತೆ, ಸ್ಥಳೀಯ ಬಿಜೆಪಿ ನಾಯಕರು, ಸ್ಥಳೀಯ ಪ್ರಭಾವಿ ಅಧಿಕಾರಿಗಳು ಬಾರಿ ಪ್ರಮಾಣದಲ್ಲಿ ಭೂಮಿ ಖರೀದಿಸಿದ್ದಾರೆ. ಇದು ಈಗ ಹಗರಣದ ಸ್ವರೂಪ ಪಡೆದಿದೆ. ಸಂಸತ್‌ನಲ್ಲೂ ಹಗರಣ ಪ್ರತಿಧ್ವನಿಸಿದೆ. ಈಗ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಈ ಭೂಮಿ ಖರೀದಿ ಬಗ್ಗೆ ಕಂದಾಯ ಇಲಾಖೆಯಿಂದ ತನಿಖೆಗೆ ಆದೇಶ ನೀಡಿದೆ.
ಅಯೋಧ್ಯೆಯಲ್ಲಿ ಶತಮಾನಗಳ ಕಾಲ ಮಂದಿರ-ಮಸೀದಿಯ ಭೂ ವಿವಾದ ಇತ್ತು. 2019ರ ಸೆಪ್ಟೆಂಬರ್ ನಲ್ಲಿ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪಿನಿಂದಾಗಿ ಅಯೋಧ್ಯೆಯ ಮಂದಿರ-ಮಸೀದಿ ಭೂ ವಿವಾದ ಬಗೆಹರಿದಿದೆ. ಆದರೇ, ಭೂ ವಿವಾದ ಬಗೆಹರಿಯುತ್ತಿದ್ದಂತೆ, ಅಯೋಧ್ಯೆಯು ಅಭಿವೃದ್ದಿಯಾಗುತ್ತೆ, ಅಯೋಧ್ಯೆಯ ಭೂಮಿಗೆ ಚಿನ್ನದ ಬೆಲೆ ಬರುತ್ತೆ ಎಂದು ಲೆಕ್ಕಾಚಾರ ಹಾಕಿದ ಸ್ಥಳೀಯ ಬಿಜೆಪಿ ನಾಯಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಬಾರಿ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ನೇರವಾಗಿ ತಮ್ಮ ಹೆಸರಿಗೆ ಇಲ್ಲವೇ ತಮ್ಮ ಸಂಬಂಧಿಗಳ ಹೆಸರಿನಲ್ಲಿ ಭೂಮಿ ಖರೀದಿಸಿದ್ದಾರೆ. ಇದು ಈಗ ಬಯಲಾಗಿದ್ದು, ಭೂ ಖರೀದಿಯ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅಯೋಧ್ಯೆಯಲ್ಲಿ ಬಾರಿ ಭೂ ಖರೀದಿಯ ಹಗರಣದ ಬಗ್ಗೆ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಆದರೇ, ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ವಿಷಯದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಈಗ ಅಯೋಧ್ಯೆಯ ರಾಮ ಮಂದಿರದ ಬಳಿ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಸಂಬಂಧಿಕರು ಭೂಮಿಯನ್ನು ಕಬಳಿಸಿದ್ದಾರೆ ಎಂಬ ವರದಿಗಳ ಕುರಿತು ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ಕಂದಾಯ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಪಿಟಿಐಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಹಿಂದುತ್ವವು ಧರ್ಮದ ಸೋಗಿನಲ್ಲಿ ದರೋಡೆ ಮಾಡುತ್ತಿದೆ” ಎಂದು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದರು. ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ‘ಹಿಂದುತ್ವ’ ಎಂಬ ಪದವನ್ನು ಬಳಸುತ್ತಿದ್ದಾರೆ. “ಹಿಂದೂ ಸತ್ಯದ ಮಾರ್ಗವನ್ನು ಅನುಸರಿಸುತ್ತದೆ, ಹಿಂದುತ್ವವು ಧರ್ಮದ ಸೋಗಿನಲ್ಲಿ ದರೋಡೆ ಮಾಡುತ್ತದೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಶಾಸಕರು, ಮೇಯರ್‌ಗಳು, ಆಯುಕ್ತರ ಸಂಬಂಧಿಕರು, ಎಸ್‌ಡಿಎಂ ಮತ್ತು ಡಿಐಜಿ ಭೂಮಿ ಖರೀದಿಸಿದ್ದಾರೆ ಎಂಬ ಸುದ್ದಿ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ವಿಷಯ ಪ್ರಸ್ತಾಪಿಸಲು ಯತ್ನಿಸಿದರಾದರೂ ಅವರು ಮಾತನಾಡಲು ನಿಲ್ಲುತ್ತಿದ್ದಂತೆಯೇ ಸದನವನ್ನು ಮುಂದೂಡಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಇದನ್ನು “ಭೂ ಹಗರಣ” ಎಂದು ಕರೆದಿದ್ದಾರೆ, “ಬಿಜೆಪಿಗೆ ಸಂಪರ್ಕ ಹೊಂದಿದ ಜನರು ಅಯೋಧ್ಯೆ ನಗರದೊಳಗೆ ಭೂಮಿಯನ್ನು ಬಹಿರಂಗವಾಗಿ ಲೂಟಿ ಮಾಡುತ್ತಿದ್ದಾರೆ” ಎಂದು ಹೇಳಿದರು. “ಗೌರವಾನ್ವಿತ ಮೋದಿಜಿ, ಈ ಬಹಿರಂಗ ಲೂಟಿಯ ಬಗ್ಗೆ ಯಾವಾಗ ಬಾಯಿ ತೆರೆಯುತ್ತೀರಿ?, ದೇಶದ ಜನರು ಮತ್ತು ರಾಮಭಕ್ತರು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ದೇಶದ್ರೋಹವಲ್ಲವೇ? ಇದು ದೇಶದ್ರೋಹಕ್ಕಿಂತ ಕಡಿಮೆಯೇ? ಅಯೋಧ್ಯೆಯಲ್ಲಿ ‘ಅಂಧೆರ್ ನಾಗ್ರಿ, ಚೌಪತ್ ರಾಜಾ’ ವ್ಯವಹಾರಗಳು” ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9.
ಇದನ್ನೂ ಓದಿ: Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
Published On - 1:01 pm, Thu, 23 December 21