ನವದೆಹಲಿ: ಭಾರತದ ಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇತ್ತೀಚೆಗೆ ಅಗ್ನಿಪಥ್ ಯೋಜನೆಯನ್ನು (Agnipath Scheme) ಪ್ರಾರಂಭಿಸಿದೆ. ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ದೇಶಾದ್ಯಂತ ಹಲವೆಡೆ ಭಾರೀ ಪ್ರತಿಭಟನೆಗಳು ನಡೆದು, ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಈ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್‌ಗಳನ್ನು (Agniveer) ನೇಮಕ ಮಾಡಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯಲ್ಲಿ ಅಗ್ನಿವೀರರ ಗರಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದೆ. ಅಗ್ನಿಪಥ್ ಯೋಜನೆಯ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿದ ರಕ್ಷಣಾ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶದ ಹಲವು ಭಾಗಗಳಲ್ಲಿ ಅಗ್ನಿಪಥಕ್ಕೆ ಸಂಬಂಧಿಸಿದ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ 46,000 ಸೈನಿಕರನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಯ ಪ್ರಾರಂಭದ ಪರಿಣಾಮವಾಗಿ, ಎಲ್ಲಾ ನೇಮಕಾತಿ ಅಥವಾ ಅಗ್ನಿವೀರರ ಪ್ರವೇಶದ ವಯಸ್ಸನ್ನು 17ರಿಂದ 21 ವರ್ಷಗಳು ಎಂದು ನಿಗದಿಪಡಿಸಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗರಿಷ್ಠ ವಯೋಮಿತಿಯನ್ನು 23 ವರ್ಷಗಳವರೆಗೆ ವಿಸ್ತರಿಸಲಾಗಿದೆ.
2022ರ ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಭಾರತದ 1.38 ಮಿಲಿಯನ್ ಬಲದ ಸಶಸ್ತ್ರ ಪಡೆಗಳಿಗೆ ನೇಮಕಾತಿಯ ಪರೀಕ್ಷೆಯನ್ನು ಸರ್ಕಾರ ಘೋಷಿಸಿದ ನಂತರ ಮಂಗಳವಾರ ಹಿಂಸಾಚಾರ ಭುಗಿಲೆದ್ದಿತ್ತು. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಗ್ನಿಪಥ್ ಯೋಜನೆಯ ಬಗ್ಗೆ ಸ್ಪಷ್ಟನೆಯನ್ನೂ ನೀಡಿತ್ತು.
ಏನಿದು ಅಗ್ನಿಪಥ್ ಯೋಜನೆ?:
ಭಾರತೀಯ ಸೇನೆಯ 3 ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ-ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿಯೇ ಈ ‘ಅಗ್ನಿಪಥ್’ ಯೋಜನೆ. ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೂನ್ 14ಕ್ಕೆ ಉದ್ಘಾಟನೆ ಮಾಡಿದ್ದರು. ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆಯಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ 46,000 ಸೈನಿಕರನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಅಗ್ನಿಪಥ್ ಅಥವಾ ಅಗ್ನಿಪತ್ ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಭಾರತೀಯ ಯುವಕರಿಗೆ ನೇಮಕಾತಿ ಯೋಜನೆಯಾಗಿದೆ. ಪ್ರವೇಶವನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ. ಈ 4 ವರ್ಷಗಳಲ್ಲಿ, ನೇಮಕಗೊಂಡವರಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಸಶಸ್ತ್ರ ಪಡೆಗಳಿಂದ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ಒಟ್ಟು 46 ಸಾವಿರ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇವರಲ್ಲಿ ಶೇ. 25ರಷ್ಟು ಖಾಯಂ ಆಯೋಗಕ್ಕಾಗಿ 15 ವರ್ಷಗಳ ಹೆಚ್ಚುವರಿ ಅವಧಿಗೆ ಉಳಿಸಿಕೊಳ್ಳಲಾಗುವುದು. ಉಳಿದವರಿಗೆ ನಿವೃತ್ತಿಗೆ ಅವಕಾಶ ನೀಡಿ ಅವರಿಗೆ ಸೇವಾ ನಿಧಿಯನ್ನು ನೀಡಲಾಗುತ್ತದೆ. ಅದರ ಮೊತ್ತ 11.71 ಲಕ್ಷ ರೂ.ಗಳಾಗಿರುತ್ತವೆ. ಈ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಸಶಸ್ತ್ರ ಪಡೆಗಳಲ್ಲಿ ನಿಯಮಿತ ಕೇಡರ್ ಆಗಿ ನೋಂದಣಿಗೆ ಆಯ್ಕೆಯಾದ ವ್ಯಕ್ತಿಗಳು ಕನಿಷ್ಠ 15 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬೇಕಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ