
ಅಹಮದಾಬಾದ್, ಜೂನ್ 13: ಗುಜರಾತ್ನ (Gujarat Plane Crash) ಅಹಮದಾಬಾದ್ನಲ್ಲಿ ನಿನ್ನೆ (ಜೂನ್ 12) ಏರ್ ಇಂಡಿಯಾ (Air India) ವಿಮಾನ ಪತನವಾಗಿತ್ತು. ಈ ವೇಳೆ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್ಗಳು, 10 ಸಿಬ್ಬಂದಿ ಕೂಡ ಇದ್ದರು. ಇವರಲ್ಲಿ ಓರ್ವ ಪ್ರಯಾಣಿಕ ಮಾತ್ರ ಅಪಘಾತದಿಂದ ಪಾರಾಗಿದ್ದಾರೆ. ಈ ವಿಮಾನ ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ, ಈ ಬಗ್ಗೆ ಪುರಾವೆಗಳನ್ನು ಒದಗಿಸಲು ಡಿವಿಆರ್ ಸಿಕ್ಕಿದೆ. ವಿಮಾನ ಅಪಘಾತ ನಡೆದ ಸ್ಥಳದ ಸುತ್ತಲಿನ ಅವಶೇಷಗಳಿಂದ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದು ಸಿಕ್ಕಿರುವುದರಿಂದ ಏರ್ ಇಂಡಿಯಾ ವಿಮಾನ ಅಪಘಾತ ಹೇಗೆ ನಡೆಯಿತು, ಯಾವ ಕಾರಣಕ್ಕೆ ನಡೆಯಿತು ಎಂಬುದರ ತನಿಖೆ ಚುರುಕುಗೊಳ್ಳಲಿದೆ.
ಅಹಮದಾಬಾದ್ನ ಎಟಿಎಸ್ ಅಧಿಕಾರಿಗಳು ಗುರುವಾರ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗಳಿಂದ ಡಿವಿಆರ್ ಅನ್ನು ಹೊರತೆಗೆದಿದ್ದಾರೆ. ಈ ಸಾಧನವು ಅಪಘಾತದ ತನಿಖೆಯನ್ನು ಬಹಳ ವೇಗಗೊಳಿಸುತ್ತದೆ. ಡಿವಿಆರ್ ಎಂದರೇನು? ಅಪಘಾತದ ಹಿಂದಿನ ನಿಜವಾದ ಕಾರಣವನ್ನು ಅದು ಹೇಗೆ ಬಹಿರಂಗಪಡಿಸುತ್ತದೆ? ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗಣಪತಿಯೇ ನನ್ನ ಕಾಪಾಡಿದ!; 10 ನಿಮಿಷ ತಡವಾಗಿ ಏರ್ಪೋರ್ಟ್ಗೆ ಬಂದಿದ್ದಕ್ಕೆ ಉಳಿಯಿತು ಯುವತಿಯ ಪ್ರಾಣ
ನಿನ್ನೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳಿಂದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಪಘಾತದ ಕಾರಣವನ್ನು ನಿರ್ಧರಿಸಲು ತನಿಖಾ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ನಂತರ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನದ ಅವಶೇಷಗಳು ಜಿಲ್ಲಾ ಆಸ್ಪತ್ರೆಯ ಬಳಿ ಪತ್ತೆಯಾಗಿವೆ. ಈ ದುರಂತದ ತನಿಖೆಯಲ್ಲಿ ಭಾಗಿಯಾಗಿರುವ ಎಟಿಎಸ್ ತಂಡದ ಅಧಿಕಾರಿಯೊಬ್ಬರು ವಿಮಾನದ ಅವಶೇಷಗಳಲ್ಲಿ ಡಿವಿಆರ್ ಅನ್ನು ಪತ್ತೆಹಚ್ಚಿದ್ದಾರೆ. ಇದು ಈ ಪ್ರಕರಣದ ತನಿಖೆಗೆ ಮಹತ್ವದ ಸಾಕ್ಷಿಗಳನ್ನು ಒದಗಿಸಲಿದೆ.
#WATCH | Gujarat ATS recovered a Digital Video Recorder (DVR) from the debris of the Air India plane that crashed yesterday in Ahmedabad.
An ATS personnel says, “It’s a DVR, which we have recovered from the debris. The FSL team will come here soon.” pic.twitter.com/zZg9L4kptY
— ANI (@ANI) June 13, 2025
ಅಹಮದಾಬಾದ್ ವಿಮಾನ ಅಪಘಾತದ ಪರಿಣಾಮವಾಗಿ ಒಟ್ಟು 297 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಜೊತೆಗೆ ವಿಮಾನ ಅಪಘಾತಕ್ಕೀಡಾದ ಹಾಸ್ಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ 56 ಜನರು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಘಟನೆಯ ತನಿಖೆ ನಡೆಸಲು ಉನ್ನತ ಮಟ್ಟದ ತಂಡವನ್ನು ರಚಿಸಲಾಗಿದೆ. ಇದಕ್ಕೂ ಮೊದಲು, ಈ ವಿಮಾನದ ಕಪ್ಪು ಪೆಟ್ಟಿಗೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ ಕತೆಯಿದು!
DVR ಎಂದರೇನು?:
ಇದೀಗ ಅವಶೇಷಗಳಲ್ಲಿ ಪತ್ತೆಯಾಗಿರುವ ಡಿವಿಆರ್ ಅಥವಾ ಡಿಜಿಟಲ್ ವಿಡಿಯೋ ರೆಕಾರ್ಡರ್ ಸಾಮಾನ್ಯವಾಗಿ ವಿಮಾನದಲ್ಲಿ ಇರಿಸಲಾಗುವ ಭದ್ರತಾ ಸಾಧನವಾಗಿದೆ. ಇದು ವಿಮಾನದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ದಾಖಲಿಸುತ್ತದೆ. ವಿಮಾನಯಾನದಲ್ಲಿ ಬಳಸಲಾಗುವ DVR ಅನ್ನು ಸವಾಲಿನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದು ದೀರ್ಘಕಾಲದವರೆಗೆ ವಿಡಿಯೋವನ್ನು ರೆಕಾರ್ಡ್ ಮಾಡುತ್ತದೆ. ವಿಮಾನ ಹಾರಾಟದ ಪರಿಶೀಲನೆಯ ನಂತರ ಈ ಡಿವಿಆರ್ನಿಂದ ಡೇಟಾವನ್ನು ಪಡೆಯಬಹುದು.
DVR ಹೇಗೆ ಕಾರ್ಯನಿರ್ವಹಿಸುತ್ತದೆ?:
DVR ಲೋಕಲ್ ಡೇಟಾ ಸಂಗ್ರಹಕ್ಕಾಗಿ ಹಾರ್ಡ್ ಡ್ರೈವ್ ಹೊಂದಿದ ಶೇಖರಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾಕ್‌ಪಿಟ್, ಪ್ರಯಾಣಿಕರ ಕ್ಯಾಬಿನ್, ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳು ಮತ್ತು ತುರ್ತು ನಿರ್ಗಮನಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸಂಗ್ರಹಿಸುತ್ತದೆ. ಹೀಗಾಗಿ, ಈ ಡಿವಿಆರ್ ಅನ್ನು ಪರಿಶೀಲಿಸಿದರೆ ನಿನ್ನೆ ಅಪಘಾತಕ್ಕೂ ಮುನ್ನ ವಿಮಾನದಲ್ಲಿ ಏನಾಯ್ತು? ಪೈಲಟ್ ಯಾವ ರೀತಿಯ ತಾಂತ್ರಿಕ ಸಮಸ್ಯೆ ಎದುರಿಸಿದರು? ಎಂಬುದರ ಮಾಹಿತಿ ಸಿಗುತ್ತದೆ. ವಿಮಾನ ಅಪಘಾತದ ಸಮಯದಲ್ಲಿನ ಕೊನೆಯ ಕ್ಷಣಗಳ ದೃಶ್ಯಗಳು ಇದರಲ್ಲಿ ಸಂಗ್ರಹವಾಗಿರುವ ಸಾಧ್ಯತೆಯಿದೆ. ಹೀಗಾಗಿ, ಇದು ಅಪಘಾತದ ನಿಖರ ಮಾಹಿತಿಯನ್ನು ತಿಳಿಸುವ ಮಹತ್ವದ ಸಾಕ್ಷಿಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ