Ahmedabad plane crash: ಲಕ್ಕಿ ನಂಬರೇ ಅನ್ಲಕ್ಕಿಯಾಯ್ತು! 1206 ಸಂಖ್ಯೆಯನ್ನೇ ನಂಬಿದ್ದ ವಿಜಯ್ ರೂಪಾನಿ
ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ದುರದೃಷ್ಟವಶಾತ್, ಅವರು ಅದೃಷ್ಟವೆಂದು ನಂಬಿದ್ದ ಸಂಖ್ಯೆ ಅವರ ಪ್ರಾಣಕ್ಕೇ ಎರವಾಗಿದೆ. 1206 ಸಂಖ್ಯೆಯನ್ನು ಅವರು ಅದೃಷ್ಟವೆಂದು ಭಾವಿಸಿದ್ದರು. ಅವರ ಮೊದಲ ಸ್ಕೂಟರ್ ಹಾಗೂ ಕಾರಿನ ನೋಂದಣಿ ಸಂಖ್ಯೆ ಕೂಡ 1206 ರಿಂದ ಆರಂಭವಾಗುವಂಥವಾಗಿದ್ದವು. ಆದರೆ ಅದೇ ಸಂಖ್ಯೆಯ ದಿನಾಂಕದಂದು (ಜೂನ್ 12, 2025) ಅವರು ನಿಧನರಾಗಿದ್ದಾರೆ.

ಅಹಮದಾಬಾದ್, ಜೂನ್ 13: ಅಹಮದಾಬಾದ್ ವಿಮಾನ ಪತನ (Ahmedabad plane crash) ದುರಂತ ಇಡೀ ದೇಶವನ್ನೇ ಆಘಾತಕ್ಕೊಳಗಾಗಿಸಿದೆ. ಈ ವಿಮಾನ ಅಪಘಾತದಲ್ಲಿ 265 ಜನ ಮೃತಪಟ್ಟಿದ್ದು, ಇದರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಕೂಡ ಸೇರಿದ್ದಾರೆ. ಅವರು ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್ಗೆ ತೆರಳುತ್ತಿದ್ದರು. ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲ, ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ!
ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು ಎಂದರೆ, ತಾವು ಖರೀದಿ ಮಾಡಿದ ಮೊದಲ ಸ್ಕೂಟರ್‌ನಿಂದ ಕಾರಿನವರೆಗೆ ಎಲ್ಲಾ ವಾಹನಗಳ ಸಂಖ್ಯೆ 1206 ರಿಂದಲೇ ಪ್ರಾರಂಭವಾಗುವಂತಿತ್ತು. ಆದರೆ ಅದೇ ಸಂಖ್ಯೆ ಅವರಿಗೆ ಅಶುಭಕರವಾಗಿ ಪರಿಣಮಿಸಿತು. 1206 (ದಿನಾಂಕ 12-6-25) ರಂದು ಅವರು ಪ್ರಾಣವನ್ನೇ ಕಳೆದುಕೊಂಡರು.
ರೂಪಾನಿ ಅವರ ಅದೃಷ್ಟ ಸಂಖ್ಯೆ 1206 ಅವರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ದುರದೃಷ್ಟಕರವೆಂಬುದು ಜೂನ್ 12, ಅಂದರೆ 12-06 ರಂದು ಸಾಬೀತಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ರೂಪಾನಿ ಅವರ ಸ್ಕೂಟರ್ ಮತ್ತು ಮೊದಲ ಕಾರು 1206 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಈ ಕಾರು ಮತ್ತು ಸ್ಕೂಟರ್ ಈಗಲೂ ಅವರ ಮನೆಯ ಪಾರ್ಕಿಂಗ್ ಜಾಗದಲ್ಲಿವೆ.
ಏರ್ ಇಂಡಿಯಾ ವಿಮಾನ ಪತನ: 265 ಮಂದಿ ಸಾವು
ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನವು ವೈದ್ಯಕೀಯ ಕಾಲೇಜು ಕ್ಯಾಂಪಸ್‌ಗೆ ಅಪ್ಪಳಿಸಿತು. ಈ ಅಪಘಾತದಲ್ಲಿ 265 ಜನರು ಸಾವನ್ನಪ್ಪಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಮೃತರಲ್ಲಿ ಸೇರಿದ್ದಾರೆ. ಬೋಯಿಂಗ್ 787 ಡ್ರೀಮ್‌ಲೈನರ್ (AI171) ನ ಸೀಟ್ 11A ನಲ್ಲಿ ಕುಳಿತಿದ್ದ ರಮೇಶ್ ಎಂಬ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆ.
ಇದನ್ನೂ ಓದಿ: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು
ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಏರ್ ಇಂಡಿಯಾ ಪ್ರಕಾರ, ವಿಮಾನದಲ್ಲಿದ್ದ 230 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ನಾಗರಿಕರಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








