Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಬದಲು ದಿನಕರನ್ ಈಗ ಎಐಎಡಿಎಂಕೆ ನಾಯಕರ ಟಾರ್ಗೆಟ್; ಏನಿದು ಹೊಸ ಬೆಳವಣಿಗೆ?
ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಪಳನಿಸ್ವಾಮಿ, ಶಶಿಕಲಾ ಅವರೆದುರು ಸಾಷ್ಟಾಂಗವೆರಗಿದ್ದನ್ನು ಚಿತ್ರಿಸಿರುವ ವಿಡಿಯೊ ಕ್ಲಿಪ್ಪಿಂಗ್ ವೈರಲ್ ಆಗಿ, ಪಕ್ಷದೊಳಗಿನ ಗೊಂದಲಗಳನ್ನು ಬಹಿರಂಗಗೊಳಿಸಿತ್ತು.
ನಾಲ್ಕು ವರ್ಷಗಳ ಹಿಂದೆ ಬಾಸ್ ಆಗಿದ್ದ ಶಶಿಕಲಾ ನಟರಾಜನ್ರನ್ನು ಉಚ್ಚಾಟಿಸಿದ್ದ ಆಲ್ ಇಂಡಿಯ ಅಣ್ಣಾ ಡ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವು ಆಕೆ ಜೈಲಿನಿಂದ ಹೊರಬರುವ ಮುಂಚೆ ತೋರುತ್ತಿದ್ದ ಆಕ್ರಮಣಕಾರಿ ಮನೋಭಾವವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈಗ ಶಶಿಕಲಾ ಅಣ್ಣನ ಮಗ ಮತ್ತು ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷದ (ಎಎಂಎಂಕೆ) ಆಧ್ಯಕ್ಷ ಟಿಟಿವಿ ದಿನಕರನ್ ವಿರುದ್ಧ ಟೀಕೆಗಳನ್ನು ಚುರುಕುಗೊಳಿಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ 3 ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಎಐಡಿಎಂಕೆ ಪಕ್ಷವು ಶಶಿಕಲಾ ವಿರುದ್ಧ ತನ್ನ ನಿಲುವನ್ನು ಬದಲಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದರೂ ಆಕೆ ರಾಜ್ಯದ ರಾಜಕೀಯದಲ್ಲಿ ಇನ್ನೂ ಪ್ರಬಲರು ಮತ್ತು ಮತದಾರರ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲರು ಎಂಬ ಅಂಶವನ್ನು ಪಕ್ಷ ಮನಗಂಡಿದೆ.
ಹಿಂದೆ, ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತಸಖಿಯಾಗಿದ್ದ ಮತ್ತು ಆಗಿನ ತಮಿಳುನಾಡು ಸರ್ಕಾರದಲ್ಲಿ ತೆರೆಮರೆಯಲ್ಲಿದ್ದುಕೊಂಡೇ ಪ್ರಬಲ ನಾಯಕಿಯೆನಿಸಿಕೊಂಡಿದ್ದ ಶಶಿಕಲಾ ಅಕ್ರಮ ಆಸ್ತಿ ಪ್ರಕರಣವೊಂದರಲ್ಲಿ ಬೆಂಗಳೂರಿನ ಕೇಂದ್ರೀಯ ಜೈಲಿನಲ್ಲಿ ನಾಲ್ಕು ವರ್ಷ ಸೆರೆವಾಸ ಅನುಭವಿಸಿ ಕಳೆದ ವಾರವಷ್ಟೇ ಚೆನೈಗೆ ಹಿಂತಿರುಗಿದ್ದು, ಆಕೆಯ ಆಗಮನ ತಮಿಳುನಾಡು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಜೊತೆಗೆ ಆಕೆಯ ಎದುರಾಳಿಗಳನ್ನು ಕೂತಲ್ಲೇ ಬೆವರುವಂತೆ ಮಾಡಿದೆ.
ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳಷ್ಟು ಮೊದಲು ಜೈಲಿನಿಂದ ಬಿಡುಗಡೆ ಹೊಂದಿದ ಶಶಿಕಲಾಗೆ ತಮಿಳುನಾಡಿನ ಜೊತೆಗೆ ಬೆಂಗಳುರಿನಲ್ಲೂ ಅಭೂತಪೂರ್ವ ಸ್ವಾಗತ ದೊರಕಿತು. ಪಕ್ಷದ ವಿರೋಧದ ನಡುವೆಯೂ ಅಕೆ ಎಐಎಡಿಎಮ್ಕೆ ಪಕ್ಷದ ಧ್ವಜವನ್ನು ಹೊತ್ತ ಕಾರಿನಲ್ಲಿ ಬೆಂಗಳೂರಿನಿಂದ ಚೆನೈಯೆಡೆ ಪ್ರಯಾಣಿಸಿದರು.
ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು
ಶಶಿಕಲಾಗೆ ಪಳನಿಸ್ವಾಮಿ ಸಾಷ್ಟಾಂಗ ನಮಸ್ಕಾರ ಜಯಲಲಿತಾ ಸಾವಿನ ನಂತರ ತಮಿಳುನಾಡು ರಾಜಕೀಯದಲ್ಲಿ ಹಲವಾರು ಬದಲಾವಣೆಗಳಾದವು. ಮೊದಲು ಅವರ ಆಪ್ತ ಓ.ಪನ್ನೀರ್ಸೆಲ್ವಂ ರಾಜ್ಯದ ಮುಖ್ಯಮಂತ್ರಿಯಾದರು. ನಂತರ ಅವರನ್ನು ಪದಚ್ಯುತಗೊಳಿಸಿ ಶಶಿಕಲಾ ಆಪ್ತ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅದಾದ ಮೇಲೆ ಪಕ್ಷ ಒಡೆದು ಪನ್ನಿರ್ಸೆಲ್ವಂ ಮತ್ತು ಪಳನಿಸ್ವಾಮಿ ನೇತೃತ್ವದಲ್ಲಿ ಎರಡು ಬಣಗಳಾದವು. ಕೆಲವೇ ದಿನಗಳ ನಂತರ ಈ ಬಣಗಳು ಒಂದುಗೂಡಿ ತನ್ನ ಬೆಂಬಲಿಗರಿಂದ ಚಿನ್ನಮ್ಮ (ಚಿಕ್ಕಮ್ಮ) ಎಂದು ಕರೆಸಿಕೊಳ್ಳುವ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಿ ಆಕೆ ಮತ್ತು ಉಪ ಕಾರ್ಯದರ್ಶಿಯಾಗಿದ್ದ ಅಣ್ಣನ ಮಗ ದಿನಕರನ್ರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಆದರೆ, ಆಕೆಯನ್ನು ಉಚ್ಚಾಟಿಸಿದ ಕೆಲವೇ ತಿಂಗಳುಗಳ ನಂತರ ಮುಖ್ಯಮಂತ್ರಿಯಾಗಿದ್ದ ಪಳನಿಸ್ವಾಮಿ, ಶಶಿಕಲಾ ಅವರೆದಿರು ಸಾಷ್ಟಾಂಗವೆರಗಿದ್ದನ್ನು ಚಿತ್ರಿಸಿರುವ ವಿಡಿಯೊ ಕ್ಲಿಪ್ಪಿಂಗ್ ತಮಿಳುನಾಡಿನಲ್ಲಿ ವೈರಲ್ ಆಗಿ, ಪಕ್ಷದೊಳಗಿನ ಗೊಂದಲಗಳನ್ನು ಬಹಿರಂಗಗೊಳಿಸಿತು.
ಇಂಥ ಹಿನ್ನೆಲೆಯಲ್ಲಿ ಶಶಿಕಲಾ ಚೆನೈಗೆ ವಾಪಸ್ಸಾಗಿದ್ದು ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೂ ಸಂಭ್ರಮದ ವಿಷಯವಾಗಬೇಕಿತ್ತು, ಆದರೆ, ಚೆನೈಯಲ್ಲಿ ಅಂಥದ್ದೇನೂ ನಡೆಯಲಿಲ್ಲ. ಗುರುವಾರದಂದು ಮಾಧ್ಯಮದವರೊಂದಿಗೆ ಮಾತಾಡಿದ ತಮಿಳುನಾಡಿನ ಮೀನುಗಾರಿಕೆ ಸಚಿವ ಡಿ ಜಯಕುಮಾರ್, ‘ಹಾಗೇನೂ ಇಲ್ಲ, ನಾವು ಸಂಪೂರ್ಣವಾಗಿ ಆಕೆ ಕುಟುಂಬದ ವಿರುದ್ಧವಾಗಿದ್ದೇವೆ,’ ಅಂತ ಹೇಳಿದರು.
ಇತ್ತೀಚಿಗೆ, ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಧಿನಕರನ್ ಅವರ ವಿರುದ್ಧ ಹರಿಹಾಯ್ದಿದಿದ್ದರು.
‘ದಿನಕರನ್ ಹತ್ತು ವರ್ಷಗಳ ಕಾಲ ಪಕ್ಷದಲ್ಲಿರಲಿಲ್ಲ. ಅಮ್ಮಾ (ಜಯಲಲಿತಾ) ಬದುಕಿದ್ದಾಗ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಿದ್ದರು. ಯಾವುದೋ ಒತ್ತಡದಿಂದ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಈಗ ಅವರ ಪಕ್ಷದ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ. ಅವರನ್ನು ಎಐಎಡಿಎಮ್ಕೆಗೆ ಸೇರಿಸಿಕೊಳ್ಳವುದು ಸಾಧ್ಯವೇ ಇಲ್ಲ. ಅವರು ಬೇರೆ ಬೇರೆ ಅವತಾರ ಧರಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಎಐಎಡಿಎಂಕೆಯನ್ನು ದಿನಕರನ್ ಯಾವತ್ತೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಾರರು’ ಎಂದು ಹೇಳಿದ್ದರು.
ಇದನ್ನೂ ಓದಿ: Sasikala: ದ್ರಾವಿಡ ನಾಡಿನಲ್ಲಿ ಸಂಚಲನ ಸೃಷ್ಟಿಸಿದ ಚಿನ್ನಮ್ಮ; ಶಶಿಕಲಾ ಮುಂದಿನ ಪ್ಲ್ಯಾನ್ ಏನು?
ಏನಿದು ಹೊಸ ಆಟ ರಾಜ್ಯದ ಕಾನೂನು ಸಚಿವರಾಗಿರುವ ಸಿ.ವಿ.ಷಣ್ಮುಗಂ ಅವರು, ‘ದಿನಕರನ್ರಿಂದ ದೂರವಿರಿ ಎಂದು ನಾನು ಶಶಿಕಲಾ ಅವರನ್ನು ಎಚ್ಚರಿಸುತ್ತಿದ್ದೇನೆ’ ಅಂತ ಗುರವಾರದಂದು ಹೇಳಿದ್ದಾರೆ.
ಎಐಡಿಎಂಕೆ ಪಕ್ಷದ ನಾಯಕರು ಶಶಿಕಲಾ ವಿರುದ್ಧ ತಮ್ಮ ನಿಲುವನ್ನು ಬದಲಾಯಿಸಿರುವುದರ ಹಿಂದೆ ಮುಂಬರಲಿರುವ ಚುನಾವಣೆ ಬಗ್ಗೆ ಚಿಂತನೆಯಿದೆ ಎಂದು ತಮಿಳುನಾಡಿನ ರಾಜಕೀಯ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಐಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಖಭಂಗ ಅನುಭವಿಸಿತು. ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ಸಾರ್ವತ್ರಿಕ ಚುನಾವಣೆ ನಡೆದಿತ್ತು ಎನ್ನುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕು.
ಶಶಿಕಲಾ, ದಕ್ಷಿಣ ತಮಿಳುನಾಡಿನಲ್ಲಿ ಪ್ರಬಲವಾಗಿರುವ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬಹುದಾದ ದೇವರ್ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಶಶಿಕಲಾ ಜೈಲಿಗೆ ಹೋಗಿದ್ದು ಮತ್ತು ಗೌಂಡರ್ ಸಮುದಾಯವನ್ನು ಪ್ರತಿನಿಧಿಸುವ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದು ದೇವರ್ ಸಮುದಾಯಕ್ಕೆ ಭಾರಿ ಘಾಸಿಯನ್ನುಂಟು ಮಾಡಿತ್ತು. ಹಾಗಾಗಿ ಆಕೆ ವಾಪಸ್ಸು ಬಂದಿರುವುದು ದೇವರ್ ಸಮುದಾಯದಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.
2018ರಲ್ಲಿ ಅಸ್ತಿತ್ವಕ್ಕೆ ಬಂದ ಎಎಂಎಂಕೆ ಪಕ್ಷದ ಪದಾಧಿಕಾರಿಯಾಗಿರುವ ಡಾ ರಾಮ್ ಕಾರ್ತಿಕ್, ‘ಪನ್ನೀರ್ಸೆಲ್ವಂ ಮತ್ತು ಪಳನಿಸ್ವಾಮಿ ನಿಶ್ಚಿತವಾಗಿಯೂ ಚಿನ್ನಮ್ಮನಲ್ಲಿಗೆ ಬಂದು ಅವರ ಕಾಲಿಗೆರಲಿದ್ದಾರೆ’ ಅಂತ ಹೇಳಿದ್ದಾರೆ.
ಶಶಿಕಲಾ ಖುದ್ದು 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ, ದಿನಕರನ್ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಿನ್ನಮ್ಮನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಾಯಶಃ ತಯಾರಿರುವ ಪಳನಿಸ್ವಾಮಿ ಮತ್ತು ಕಂಪನಿ ದಿನಕರನ್ ಅವರನ್ನು ದೂರವಿಡಲು ಪ್ರಯತ್ನಿಸುತ್ತಿದೆ. ಅವರಿಗದು ಸಾಧ್ಯವಾಗಬಹುದೇ ಎನ್ನುವುದೇ ಕಾದು ನೋಡಬೇಕಿರುವ ಅಂಶ.