ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ; ವಜಾ ಆದೇಶ ಹಿಂಪಡೆದ ಕಂಪನಿ

|

Updated on: May 09, 2024 | 8:53 PM

ಅನುಮತಿ ಕೇಳದೆ ರಜೆ ಹಾಕಿದ್ದರಿಂದ ಬುಧವಾರ ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 30 ಉದ್ಯೋಗಿಗಳನ್ನು ಸಾಮೂಹಿಕವಾಗಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಏರ್ ಇಂಡಿಯಾ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಇದೀಗ ಅವರ ಪ್ರತಿಭಟನೆಗೆ ಏರ್ ಇಂಡಿಯಾ ಸಂಸ್ಥೆ ಮಣಿದಿದೆ.

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ; ವಜಾ ಆದೇಶ ಹಿಂಪಡೆದ ಕಂಪನಿ
ಏರ್ ಇಂಡಿಯಾ
Follow us on

ನವದೆಹಲಿ: ಏರ್ ಇಂಡಿಯಾ (Air India) ವಿಮಾನ ಸಂಸ್ಥೆ ತನ್ನ 30 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಸಂಸ್ಥೆ ತನ್ನ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು. ಬೇರೆಯವರಿಗೂ ಇದು ಪಾಠವಾಗಬೇಕೆಂಬ ಕಾರಣಕ್ಕೆ 30 ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ವಜಾಗೊಂಡಿರುವ ಎಲ್ಲಾ ಕ್ಯಾಬಿನ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಪ್ಪಿಕೊಂಡಿದೆ.

ಇಂದು ಮಧ್ಯಾಹ್ನ 2 ಗಂಟೆಗೆ ಮುಖ್ಯ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಡಳಿತವು ಪ್ರತಿಭಟನಾ ನಿರತ ಸಿಬ್ಬಂದಿಯನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಬ್ಬಂದಿಯನ್ನು ವಜಾಗೊಳಿಸಿದ್ದರಿಂದ ಮಂಗಳವಾರ ರಾತ್ರಿಯಿಂದ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು. ಮುಂಚಿತ ಸೂಚನೆಯಿಲ್ಲದೆ ಸಾಮೂಹಿಕವಾಗಿ ಅನಾರೋಗ್ಯ ರಜೆಗೆ ತೆರಳಿದ ಕ್ಯಾಬಿನ್ ಸಿಬ್ಬಂದಿಯ ಸೇವೆಗಳನ್ನು ಕೊನೆಗೊಳಿಸುವುದಾಗಿ ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮವು ಬಂದಿದೆ.

ಇದನ್ನೂ ಓದಿ: ಹುಷಾರಿಲ್ಲವೆಂದು ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್

ಗುರುವಾರ ಸಂಜೆ 4 ಗಂಟೆಯೊಳಗೆ ಮತ್ತೆ ಕರ್ತವ್ಯಕ್ಕೆ ಸೇರಲು ಏರ್ ಇಂಡಿಯಾ ಸೂಚನೆ ನೀಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹಿರಿಯ ಸಿಬ್ಬಂದಿ ಅದೇ ಸಮಯದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಅನಾರೋಗ್ಯದ ರಜೆಗಳನ್ನು ತೆಗೆದುಕೊಂಡ ನಂತರ ಹಲವಾರು ವಿಮಾನಗಳು ವಿಳಂಬಗೊಂಡವು, ಇನ್ನು ಕೆಲವು ರದ್ದುಗೊಂಡವು. ಇದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.

ಇದನ್ನೂ ಓದಿ: ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು; ನಿಮ್ಮ ಫ್ಲೈಟ್ ರದ್ದಾಗಿದ್ದರೆ ಸಿಗುತ್ತೆ ರೀಫಂಡ್

ಏರ್‌ಲೈನ್ ನಂತರ ಪರಿಷ್ಕೃತ ಹಾರಾಟದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ತಮ್ಮ ವಿಮಾನವು ಅಡಚಣೆಯಿಂದ ಪ್ರಭಾವಿತವಾಗಿದೆಯೇ ಎಂದು ಪರಿಶೀಲಿಸಲು ಜನರ ಬಳಿ ಮನವಿ ಮಾಡಿತು. ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಕ್ಯಾಬಿನ್ ಸಿಬ್ಬಂದಿಯ ಕೊರತೆಯ ನಡುವೆ ಅದರ ದೈನಂದಿನ ನಿಗದಿತ ವಿಮಾನಗಳಲ್ಲಿ ಸುಮಾರು ಶೇ. 20ರಷ್ಟು ಪರಿಣಾಮ ಬೀರಿತು.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಯೂನಿಯನ್ ಮತ್ತು ಕಂಪನಿಯ ಆಡಳಿತ ಮಂಡಳಿ ನಡುವೆ ಗುರುವಾರ ಸಭೆ ಕರೆಯಲಾಗಿದ್ದು, ಎರಡೂ ಕಡೆಯವರು ಸಹಕರಿಸಲು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ