ಅಜ್ಮೀರ್ ಹತ್ಯಾಕಾಂಡ: ನಾಲ್ವರನ್ನು ಕೊಂದು ಕಾರೊಳಗೆ ಹಾಕಿ ಸುಟ್ಟ ಪತ್ನಿ, ಮನೆಯಲ್ಲಿ ಎದೆ ಬಡಿದುಕೊಂಡು ಮೊಸಳೆ ಕಣ್ಣೀರು ಸುರಿಸಿದ ಹಂತಕಿ

ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ, ಕಾರಿಗೆ ಬೆಂಕಿ ಹಚ್ಚಿ ಅಪಘಾತವೆಂದು ಬಿಂಬಿಸುವ ನಾಟಕವಾಡಲಾಗಿತ್ತು. ಆದರೆ, ಈ ಕ್ರೂರ ಕೃತ್ಯದ ಹಿಂದಿನ ಮಾಸ್ಟರ್‌ಮೈಂಡ್ ಬೇರಾರೂ ಅಲ್ಲ, ಮೃತರ ಮೊದಲ ಪತ್ನಿ ಎಂಬುದು ಬಯಲಾಗಿದೆ. ಕೌಟುಂಬಿಕ ಕಲಹ ಮತ್ತು ಆಸ್ತಿ ವಿವಾದವೇ ಈ ಹತ್ಯಾಕಾಂಡಕ್ಕೆ ಕಾರಣ. ಸುಳ್ಳು ಸಾಕ್ಷ್ಯ ಸೃಷ್ಟಿಸಿದರೂ, ಪೊಲೀಸರು ಸತ್ಯವನ್ನು ಬಯಲಿಗೆಳೆದಿದ್ದಾರೆ.

ಅಜ್ಮೀರ್ ಹತ್ಯಾಕಾಂಡ: ನಾಲ್ವರನ್ನು ಕೊಂದು ಕಾರೊಳಗೆ ಹಾಕಿ ಸುಟ್ಟ ಪತ್ನಿ, ಮನೆಯಲ್ಲಿ ಎದೆ ಬಡಿದುಕೊಂಡು ಮೊಸಳೆ ಕಣ್ಣೀರು ಸುರಿಸಿದ ಹಂತಕಿ
ಮಹಿಳೆ
Image Credit source: India Today

Updated on: May 29, 2026 | 8:16 AM

ಅಜ್ಮೀರ್, ಮೇ 29: ರಾಜಸ್ಥಾನದ ಅಜ್ಮೀರ್​ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆದರೆ ಆ ಸಾವು ಸಹಜ ಸಾವಲ್ಲ ಕೊಲೆ(Murder) ಎಂಬುದು ಈಗ ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಶವಗಳಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಅಚ್ಚರಿಯೆಂದರೆ, ಈ ಇಡೀ ಹತ್ಯಾಕಾಂಡದ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಮೃತರ ಮನೆಯಲ್ಲೇ ಕಣ್ಣೀರಿಡುತ್ತಾ ಮೂರ್ಛೆ ಹೋದಂತೆ ನಟಿಸುತ್ತಿದ್ದ ಮೊದಲ ಪತ್ನಿ.

ಘಟನೆ ಏನು?

ಅಜ್ಮೀರ್ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶ್ರೀರಾಂಪುರ ಗ್ರಾಮದ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋ ಎಸ್‌ಯುವಿ (SUV) ಪತ್ತೆಯಾಗಿತ್ತು. ವಾಹನದೊಳಗೆ ಮೂರು ಮತ್ತು ಹತ್ತಿರದ ಹೊಲದಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಸುಟ್ಟ ಶವಗಳು ಸಿಕ್ಕಿದ್ದವು.

ರಾಮ್ ಸಿಂಗ್ ಚೌಧರಿ (ಮಾಜಿ ಸರಪಂಚ್)

ಪೂಸಿ ದೇವಿ (ರಾಮ್ ಸಿಂಗ್ ತಾಯಿ)

ಸೂರ್ಯಜ್ಞಾನ ದೇವಿ (ರಾಮ್ ಸಿಂಗ್ ಎರಡನೇ ಪತ್ನಿ)

ಮಹಿಮಾ ಚೌಧರಿ (ಚಿಕ್ಕಮ್ಮನ ಮಗಳು)

ಅಪಘಾತವಲ್ಲ, ಇದು ಬರ್ಬರ ಕೊಲೆ

ಆರಂಭದಲ್ಲಿ ಪೊಲೀಸರು ಇದನ್ನು ರಸ್ತೆ ಅಪಘಾತ ಎಂದು ಶಂಕಿಸಿದ್ದರು. ಆದರೆ ವಿಧಿವಿಜ್ಞಾನ ತಜ್ಞರು (FSL) ಮತ್ತು ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ದೇಹದ ಮೇಲಿದ್ದ ಗಾಯಗಳು ಇವು ಕೊಲೆ ಎಂಬುದನ್ನು ಖಚಿತಪಡಿಸಿದವು. ಕೊಲೆಗಾರರು ಮೊದಲು ಮನೆಯಲ್ಲೇ ನಾಲ್ವರನ್ನು ಹತ್ಯೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿಗೆ ತುಂಬಿಸಿ ಹೆದ್ದಾರಿಗೆ ತಂದು ಬೆಂಕಿ ಹಚ್ಚಿದ್ದರು.

ಮತ್ತಷ್ಟು ಓದಿ:
ಬಿಜೆಪಿ ಮುಖಂಡ ವೆಂಕಟೇಶ್ ಕೊಲೆ ಕೇಸ್​​ಗೆ ಬಿಗ್ ಟ್ವಿಸ್ಟ್: ಜೊತೆಗಿದ್ದಕೊಂಡೇ ಮುಹೂರ್ತ ಇಟ್ಟವರ ಬಂಧನ

ಕಣ್ಣೀರಿಡುತ್ತಾ ಪೊಲೀಸರನ್ನೇ ಹಾದಿ ತಪ್ಪಿಸಿದ ಪತ್ನಿ

ಪೊಲೀಸರು ತನಿಖೆಗಾಗಿ ರಾಮ್ ಸಿಂಗ್ ಮನೆಗೆ ಹೋದಾಗ, ಅವರ ಮೊದಲ ಪತ್ನಿ ಸುನೀತಾ ಗ್ರಾಮದ ಮಹಿಳೆಯರ ನಡುವೆ ಕುಳಿತು ಜೋರಾಗಿ ಅಳುತ್ತಾ, ಎದೆಗೆ ಹೊಡೆದುಕೊಳ್ಳುತ್ತಾ ತೀವ್ರ ದುಃಖದಲ್ಲಿರುವಂತೆ ನಟಿಸುತ್ತಿದ್ದಳು. ತಾಯಿಗೆ ಎದೆನೋವು ಬಂದಿದ್ದರಿಂದ ರಾಮ್ ಸಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರಿಗೆ ಸುಳ್ಳು ಕಥೆ ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಳು.

ಪಿತೂರಿ ಬಯಲಾಗಿದ್ದು ಹೇಗೆ?

ಅಜ್ಮೀರ್ ಎಸ್‌ಪಿ ಹರ್ಷವರ್ಧನ್ ಅಗರ್‌ವಾಲ್ ನೇತೃತ್ವದ ತಂಡಕ್ಕೆ ಕೌಟುಂಬಿಕ ಹಿನ್ನೆಲೆ ಕೆದಕಿದಾಗ ಅಸಲಿ ಸತ್ಯ ತಿಳಿಯಿತು. ರಾಮ್ ಸಿಂಗ್ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮದುವೆ ವಿಷಯವಾಗಿ ಮನೆಯಲ್ಲಿ ದೀರ್ಘಕಾಲದ ಆಸ್ತಿ ಮತ್ತು ಕೌಟುಂಬಿಕ ವಿವಾದವಿತ್ತು. ಬುಧವಾರ ತಡರಾತ್ರಿ ಮನೆಯಲ್ಲಿ ಭೀಕರ ಜಗಳ ನಡೆದಿದೆ. ಈ ವೇಳೆ ಮೊದಲ ಪತ್ನಿ ಸುನೀತಾ, ಆಕೆಯ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನು ಭೀಕರವಾಗಿ ಕತ್ತರಿಸಿ ಕೊಂದಿದ್ದಾರೆ.

ಗ್ರಾಮಸ್ಥರು ನೀಡಿದ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಆರೋಪಿ ಸುನೀತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಹಂತಕಿಯ ಈ ಕ್ರೂರ ನಾಟಕ ಇಡೀ ಗ್ರಾಮಸ್ಥರನ್ನು ಆಘಾತಕ್ಕೆ ದೂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us