ದೆಹಲಿ: ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿರುವ ವಿಷಯ ತಜ್ಞರ ಸಮಿತಿಯ ಕ್ರಮವನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ (AIDAN), ಔಷಧ ನಿಯಂತ್ರಕರಿಗೆ ಮನವಿ ಮಾಡಿದೆ.
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ಗೆ, ವೈದ್ಯಕೀಯ ಪ್ರಯೋಗ ಹಂತದಲ್ಲಿ ಹಾಗೂ ರೂಪಾಂತರಿ ಕೊರೊನಾ ವೈರಾಣು ಹರಡುತ್ತಿರುವ ಸಂದರ್ಭದಲ್ಲಿ ವಿಷಯ ತಜ್ಞರ ಸಮಿತಿಯು ಅನುಮತಿ ನೀಡಿರುವುದು ಆಘಾತಕಾರಿ ಕ್ರಮವಾಗಿದೆ ಎಂದು ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ ಹೇಳಿದೆ.
ಲಸಿಕೆಯ ಪರಿಣಾಮ ಹಾಗೂ ಪ್ರಭಾವದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಲಸಿಕೆ ಪಡೆದ ವ್ಯಕ್ತಿಯ ನಿಯಂತ್ರಣದ ಕುರಿತಾಗಿಯೂ ವಿವರಗಳು ಇಲ್ಲ. ಕೊರೊನಾ ಲಸಿಕೆ ಪ್ರಯೋಗದ ಬಗ್ಗೆ ಪಾರದರ್ಶಕತೆ ಇಲ್ಲ. ಹೀಗಾಗಿ, ಸರಿಯಾಗಿ ಪರೀಕ್ಷೆಗೆ ಒಳಪಡದ ಕೊವಿಡ್-19 ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವ ಬಗ್ಗೆ DCGI ಮರುಪರಿಶೀಲನೆ ನಡೆಸಬೇಕು ಎಂದು AIDAN ಹೇಳಿದೆ. ಭಾರತ್ ಬಯೋಟೆಕ್ ಹಾಗೂ ICMRನ ಮೂರನೇ ಹಂತದ ಲಸಿಕೆ ಪ್ರಯೋಗದಿಂದ, ಲಸಿಕೆ ಪಡೆದ ವ್ಯಕ್ತಿಯಲ್ಲಿ ಲಸಿಕೆಯು ಉಂಟು ಮಾಡರುವ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದೂ AIDAN ತಿಳಿಸಿದೆ.
ಮೊದಲ ಮತ್ತು ಎರಡನೇ ಹಂತದ, 755 ಸ್ವಯಂಸೇವಕರ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗದ ಬಗ್ಗೆ ಮಾತ್ರ ಮಾಹಿತಿ ಲಭ್ಯವಿದೆ. ಮೂರನೇ ಹಂತದ ಲಸಿಕೆ ಪ್ರಯೋಗದ ಕುರಿತು ಮಾಹಿತಿಗಳು ಸಿಕ್ಕಿಲ್ಲ. ಲಸಿಕೆ ವಿಚಾರದಲ್ಲಿ ಪಾರದರ್ಶಕತೆ ಉಳಿಸಿಕೊಳ್ಳುವ ಉದ್ದೇಶದಿಂದ, ಯಾವ ಆಧಾರದ ಮೇಲೆ ಲಸಿಕೆಗೆ ಅನುಮತಿ ನೀಡಲಾಯಿತು ಎಂದು ವಿಷಯ ತಜ್ಞರ ಸಮಿತಿ ಕೂಡಲೇ ವಿಷಯ ಬಹಿರಂಗಪಡಿಸಬೇಕು ಎಂದು AIDAN ಆಗ್ರಹಿಸಿದೆ. ಯಾವ ವಿಚಾರಗಳನ್ನು ಆಧರಿಸಿ, ಪ್ರಯೋಗದ ಹಂತದಲ್ಲಿರುವ ಲಸಿಕೆಗೆ ಸಮಿತಿಯು ಅನುಮತಿ ನೀಡಿದೆ ಎಂದು ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ ಪ್ರಶ್ನೆ ಮಾಡಿದೆ.
ಮೂರನೇ ಹಂತದಲ್ಲಿ ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗವು ನವೆಂಬರ್ ಮಧ್ಯಭಾಗದಿಂದ ಆರಂಭವಾಗಿತ್ತು. ದೇಶದಾದ್ಯಂತ ಒಟ್ಟು 26,000 ಸ್ವಯಂಸೇವಕರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಲು ತೀರ್ಮಾನಿಸಲಾಗಿತ್ತು. ಇದು ಕೊವಿಡ್-19 ವಿರುದ್ಧ, ದೇಶದಲ್ಲಿ ನಡೆಯುತ್ತಿರುವ ಮೊದಲ ಹಾಗೂ ಏಕೈಕ ಮೂರನೇ ಹಂತದ ಲಸಿಕೆ ಪ್ರಯೋಗ ಎಂದು ಹೈದರಾಬಾದ್ ಮೂಲದ ಕಂಪೆನಿ ಹೇಳಿಕೊಂಡಿತ್ತು. ಇಷ್ಟು ದೊಡ್ಡಮಟ್ಟದಲ್ಲಿ ಮೂರನೇ ಹಂತದ ಲಸಿಕೆಯ ಪ್ರಯೋಗವು ಭಾರತದಲ್ಲಿ ಇದುವರೆಗೆ ನಡೆದಿಲ್ಲ ಎಂದೂ ಕಂಪೆನಿ ಹೇಳಿಕೆ ನೀಡಿತ್ತು.
ಕೊರೊನಾ ವಿರುದ್ಧ ಹೋರಾಟಕ್ಕೆ 2 ಲಸಿಕೆಗಳು ಸಿದ್ಧ; ಕೊವಿಶೀಲ್ಡ್, ಕೊವ್ಯಾಕ್ಸಿನ್ಗೆ DCGI ಅನುಮೋದನೆ